ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಸೇವೆಗೆ ಐಡಿಯಾ ಆದ್ಯತೆ

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

‘ಜಿಯೊ ಪ್ರವೇಶವು ಮೊಬೈಲ್ ಸೇವಾದಾತ ಸಂಸ್ಥೆಗಳ ನಿದ್ದೆಗೆಡಿಸಿದೆ. ಸದ್ಯ, 4ಜಿ ವಿಭಾಗದಲ್ಲಿ ಪೈಪೋಟಿ ಇರಬಹುದು. ಆದರೆ ಭವಿಷ್ಯದಲ್ಲಿ ಎಲ್ಲಾ ರೀತಿಯಲ್ಲಿಯೂ ಆರೋಗ್ಯಕರ ಸ್ಪರ್ಧೆ ಎದುರಾಗಲಿದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇದು ಉದ್ಯಮದ ಬೆಳವಣಿಗೆಗೂ ಒಳ್ಳೆಯದು’ ಎನ್ನುವುದು ಐಡಿಯಾ ಸೆಲ್ಯುಲರ್ ಸಂಸ್ಥೆಯ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜತ್ ಮುಖರ್ಜಿ ಅವರ ಅಭಿಪ್ರಾಯವಾಗಿದೆ.

‘ದೇಶದಲ್ಲಿರುವ ಮೊಬೈಲ್ ಸೇವಾ  ಸಂಸ್ಥೆಗಳಲ್ಲಿ ಐಡಿಯಾ ಸೆಲ್ಯುಲರ್ ಲಿ. ಮೂರನೇ ಸ್ಥಾನ ಪಡೆದುಕೊಂಡಿದೆ. 2ಜಿ, 3ಜಿ ಮತ್ತು 4ಜಿ ವಿಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದೆ. ಈ ದೃಷ್ಟಿಯಿಂದ ನೋಡಿದರೆ ಜಿಯೊದಿಂದ ಸದ್ಯ, ದೊಡ್ಡಮಟ್ಟಿನ ಪೈಪೋಟಿ ಅಥವಾ ಸ್ಪರ್ಧೆ ಎದುರಿಸುತ್ತಿದ್ದೇವೆ ಎಂದು ಅನಿಸುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

‘ಉದ್ಯಮದಲ್ಲಿ ಇರುವ ಬೇರೆ ಸಂಸ್ಥೆಗಳಿಗೆ ಹೋಲಿಸಿದರೆ, ಕಳೆದ 10 ವರ್ಷಗಳಿಂದ ಸಂಸ್ಥೆಯು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ರೆವಿನ್ಯೂ ಮಾರುಕಟ್ಟೆಯಲ್ಲಿ ಶೇ 20 ರಷ್ಟು ಷೇರುಪಾಲು ಹೊಂದಿದ್ದೇವೆ.

‘ಇತ್ತೀಚಿನ ತರಂಗಾಂತರ ಹರಾಜಿನಲ್ಲಿ ಹೆಚ್ಚುವರಿಯಾಗಿ 350 ಮೆಗಾಹರ್ಟ್ಸ್ ಖರೀದಿ ಮಾಡಿದ್ದೇವೆ. ಇದಕ್ಕಾಗಿ ₹ 13,000 ಕೋಟಿ ಹೂಡಿಕೆ ಮಾಡಿದ್ದೇವೆ. ಇದರಿಂದ ದೇಶದಲ್ಲಿ ವೈರ್ ಲೆಸ್ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಯಾಗಿ ಹೊರಹೊಮ್ಮಿದ್ದೇವೆ’ ಎಂದು ಹೇಳುತ್ತಾರೆ.

ಏರ್‌ಟೆಲ್ ಜತೆ ನಿಕಟ ಸ್ಪರ್ಧೆ
‘ಈಗಾಗಲೇ ಹೇಳಿರುವಂತೆ ಐಡಿಯಾ ಭಾರತದಲ್ಲಿ ಮೂರನೇ ಸ್ಥಾನದಲ್ಲಿದೆ. ಏರ್‌ಟೆಲ್‌, ವೊಡಾಫೋನ್ ಮೊದಲೆರಡು ಸ್ಥಾನದಲ್ಲಿವೆ. ಗ್ರಾಹಕರನ್ನು ಹೊಂದಿರುವ ದೃಷ್ಟಿಯಿಂದ ಏರ್‌ಟೆಲ್‌ ಜತೆ ನಿಕಟ ಸ್ಪರ್ಧೆ ಹೊಂದಿದ್ದೇವೆ. ದೇಶದಲ್ಲಿ ಏರ್‌ಟೆಲ್ 22 ವೃತ್ತಗಳನ್ನು ಹೊಂದಿದೆ. ಐಡಿಯಾ8 ಸರ್ಕಲ್‌ಗಳಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಕೇರಳದಲ್ಲಿ 39ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದೇವೆ. ಇದು ಬೆರೆಲ್ಲಾ ಕಂಪೆನಿಗಳಿಗಿಂತಲೂ ಹೆಚ್ಚಿನದ್ದಾಗಿದೆ. ಮಹಾರಾಷ್ಟ್ರದಲ್ಲಿ ಶೇ 37 ರಷ್ಟು ಷೇರು ಹೊಂದಿದ್ದೇವೆ. ಐಡಿಯಾ ಹೊಂದಿರುವ ಒಟ್ಟು ಗ್ರಾಹಕರಲ್ಲಿ ಗ್ರಾಮೀಣ ಭಾಗದಲ್ಲಿ ಶೇಕಡಾವಾರು ಪ್ರಮಾಣ ಶೇ 55ರಷ್ಟಿದೆ’ ಎಂದು ಹೇಳುತ್ತಾರೆ.

ದುಪ್ಪಟ್ಟು ಪ್ರಗತಿ
‘ಐಡಿಯಾ ಸಂಸ್ಥೆಯು ಉದ್ಯಮಕ್ಕಿಂತಲೂ ಎರಡು ಪಟ್ಟು ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. 2015–2016ರಲ್ಲಿ ಉದ್ಯಮದ ಒಟ್ಟು ವರಮಾನ ₹9,849 ಕೋಟಿಗಳಷ್ಟಿತ್ತು. ಇದರಲ್ಲಿ ಐಡಿಯಾದ ವರಮಾನ ₹4,335 ಕೋಟಿಗಳಷ್ಟಿದೆ. ಅಂದರೆ ಉದ್ಯಮಕ್ಕೆ ಶೇ 44ರಷ್ಟು ಕೊಡುಗೆ ನೀಡಿದ್ದೇವೆ’ ಎಂದು  ಮುಖರ್ಜಿ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಐಡಿಯಾ
ಕರ್ನಾಟಕದಲ್ಲಿ ಐಡಿಯಾ ಎರಡನೇ ಸ್ಥಾನದಲ್ಲಿದೆ. ಏರ್‌ಟೆಲ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಎಲ್ಲಾ ವಿಭಾಗಗಳಲ್ಲಿಯೂ (2ಜಿ,3ಜಿ,4ಜಿ) ಇರುವುದರಿಂದ ಸೇವೆ ವಿಸ್ತರಣೆಗೆ ಅನುಕೂಲವಾಗಿದೆ. ಸದ್ಯ 94 ಲಕ್ಷ ಗ್ರಾಹಕರನ್ನು ಹೊಂದಿದ್ದು, ಶೀಘ್ರವೇ 1 ಕೋಟಿ ಗ್ರಾಹಕರನ್ನು ತಲುಪಲಿದ್ದೇವೆ’ ಎಂದು ಐಡಿಯಾ ಸೆಲ್ಯುಲರ್‌ನ ಕರ್ನಾಟಕದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಶಿವ ಗಣಪತಿ ಅವರು ಹೇಳುತ್ತಾರೆ.
‘ಸ್ಪೈಸ್ ಸ್ವಾಧೀನಪಡಿಸಿಕೊಂಡ ನಂತರ ಮೂರುಪಟ್ಟು ಪ್ರಗತಿ ಸಾಧಿಸಿದ್ದೇವೆ.  ರಾಜ್ಯದ ಶೇ 90ರಷ್ಟು ಜನಸಂಖ್ಯೆಯನ್ನು ತಲುಪಿದ್ದೇವೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದೇವೆ. ಪ್ರತಿ ವರ್ಷ  ಮಾರುಕಟ್ಟೆ ವಿಸ್ತರಣೆಗಾಗಿ ₹4000 ಕೋಟಿ ಹೂಡಿಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

4ಜಿ ವಿಸ್ತರಣೆಗೆ ಒತ್ತು
‘4ಜಿ’ ಸೇವೆ ಆರಂಭಿಸಿದ ಒಂದು ವರ್ಷದೊಳಗೆ ರಾಜ್ಯದ ಶೇ 36.9 ರಷ್ಟು ಜನಸಂಖ್ಯೆಯನ್ನು ತಲುಪಿದ್ದೇವೆ. ಕರ್ನಾಟಕದಲ್ಲಿ ಒಟ್ಟು 4,121 4ಜಿ ಸೈಟ್‌ಗಳನ್ನು ಹೊಂದಿದ್ದು ಅದರಲ್ಲಿ 2,400 ಬೆಂಗಳೂರಿನಲ್ಲಿಯೇ ಇವೆ. ಮುಂದಿನ ದಿನಗಳಲ್ಲಿ ‘4ಜಿ’ ಸೇವೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಗಣಪತಿ ತಿಳಿಸಿದರು.

ಸದ್ಯ, ರಾಜ್ಯದ 30 ಜಿಲ್ಲೆಗಳು, 1,579 ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸಂಪರ್ಕ ಕಲ್ಪಿಸಿದ್ದು, 2017ರ ಮಾರ್ಚ್‌ ವೇಳೆಗೆ 4ಜಿ ವ್ಯಾಪ್ತಿಯನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಿದೆ.

ಕರೆಕಡಿತ; ಸಂಪೂರ್ಣ ನಿವಾರಣೆ ಸಾಧ್ಯವಿಲ್ಲ
‘ಸಂಪೂರ್ಣವಾಗಿ ಕರೆಕಡಿತವೇ ಇಲ್ಲದಂತೆ ಮಾಡಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ತಗ್ಗಿಸಲು ಖಂಡಿತಾ ಸಾಧ್ಯವಿದೆ.
‘ಟವರ್‌ಗಳನ್ನು ಅಳವಡಿಸಲು ಸ್ಥಳದ ಅಭಾವ ಎದುರಾಗಿರುವುದೇ ಕರೆ ಕಡಿತ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಸ್ಥಳ ಇರುವ ಕಡೆಗಳಲ್ಲಿ ಇಎಂಎಫ್ ರೇಡಿಯೇಷನ್ ಭೀತಿಯಿಂದ ಜನರು ಟವರ್ ಅಳವಡಿಸಲು ಬಿಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ, ಅರಣ್ಯ ಪ್ರದೇಶ, ಕೃಷಿ ಭೂಮಿಯಿಂದ ಟವರ್‌ಗಳ ಅಳವಡಿಕೆ ಮತ್ತು ಆಪ್ಟಿಕಲ್ ಕೇಬಲ್ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಅತಿ ಹೆಚ್ಚು ಕರೆಕಡಿತ ಆಗುತ್ತಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಟವರ್ ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ‘ಗ್ರಾಹಕ ಸೇವಾ ಕೇಂದ್ರಗಳಿಗೆ ಬರುವ ಕರೆಯ ಮೂಲಕ ಕರೆ ಕಡಿತ ಸಮಸ್ಯೆ ನಿವಾರಿಸುವ ಕೆಲಸ ನಡೆಯುತ್ತಿದೆ. ಆದರೆ ಸಾರ್ವಜನಿಕವಾಗಿ ಪ್ರಚಾರ ನಡೆಸುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

ಐಡಿಯಾ ಪೇಮೆಂಟ್ಸ್ ಬ್ಯಾಂಕ್
ಪೇಮೆಂಟ್ಸ್‌ ಬ್ಯಾಂಕ್‌ ಸ್ಥಾಪನೆಗೆ ಆರ್‌ಬಿಐನಿಂದ ಔಪಚಾರಿಕ ಒಪ್ಪಿಗೆ ಪಡೆದಿದ್ದೇವೆ. 2017ರ ಮಾರ್ಚ್‌ ಒಳಗಾಗಿ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT