ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಏಕೆ?

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

ಕೆಲವು ದಶಕಗಳಿಂದೀಚೆಗೆ ವಿಶ್ವದಾದ್ಯಂತ ಕಂಪೆನಿಗಳು ವೈವಿಧ್ಯಮಯ ಬಹುಸಂಸ್ಕೃತಿಯ ಸಂಸ್ಥೆಗಳಾಗಿ ಬೆಳವಣಿಗೆ ಕಂಡಿವೆ. ಇಂತಹ ಕಂಪೆನಿಗಳಲ್ಲಿ ಪುರುಷರಂತೆ ಮಹಿಳೆಯರೂ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಈ ಬದಲಾವಣೆಯು ಎಲ್ಲರಿಗೂ ಸಮಾನವಾದ ಅವಕಾಶವನ್ನು ಪಾರದರ್ಶಕವಾಗಿ ಒದಗಿಸುವ ಅಗತ್ಯವನ್ನೂ ಸೃಷ್ಟಿಸಿದೆ.  ಪುರುಷ ಮತ್ತು ಮಹಿಳಾ ಸಿಬ್ಬಂದಿ ನಡುವಣ ವೇತನ ತಾರತಮ್ಯ ಅತ್ಯಂತ ತುರ್ತಾಗಿ ನಿಭಾಯಿಸಬೇಕಾಗಿದೆ.

ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ತಾರತಮ್ಯ, ವೇತನ ನೀಡಿಕೆಯಲ್ಲಿ ಅಂತರ, ಉದ್ಯೋಗಕ್ಕೆ ಮಹಿಳೆಯರನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಮೊದಲಾದ ಸಂಗತಿಗಳು ಒಂದೆರಡು ದೇಶಕ್ಕೆ ಸೀಮಿತವಾದ ಸಂಗತಿಯಲ್ಲ. ಅದೊಂದು ಜಾಗತಿಕ ವಿದ್ಯಮಾನವಾಗಿದೆ.

2015ರ ಜಾಗತಿಕ ಲಿಂಗ ಅನುಪಾತ ಅಂತರ ವರದಿಯ ಪ್ರಕಾರ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ 145 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಸಿಕ್ಕಿದ್ದು 129ನೇ ಸ್ಥಾನ. ಈ ವೇತನದ ಆಧಾರದಲ್ಲೇ ಹೇಳುವುದಾದರೆ ಪುರುಷರು ಮಾಡಿದ ಕೆಲಸಕ್ಕೆ ಹೋಲಿಸಿದರೆ ಮಹಿಳೆಯರು ಮಾಡಿದ್ದು ಶೇ 51ರಷ್ಟು ಕೆಲಸ ಮಾತ್ರ! 2005–2014ರ ಅವಧಿಯಲ್ಲಿ ಮಹಿಳಾ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ಪ್ರಮಾಣ ಶೇ 10ರಷ್ಟು ಕುಸಿದಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ವರದಿ ತಿಳಿಸಿದೆ.

ಭಾರತದಲ್ಲಿ ಲಿಂಗ ತಾರತಮ್ಯ ಎಂಬುದು ತಳಮಟ್ಟದಲ್ಲೇ ಅಧಿಕ ಇರುವುದು ಸರ್ವವೇದ್ಯ.  ಬಾಬಾಜಾಬ್‌ ಕಂಪೆನಿಯಲ್ಲಿ ದಾಖಲಾದ ಅಂಕಿಅಂಶಗಳನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ,  ಎರಡು ವರ್ಷಗಳಲ್ಲಿ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದನ್ನು ಎದುರು ನೋಡುವವರ ಪ್ರಮಾಣದಲ್ಲಿ ಶೇ 87.67ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಪುರುಷ ವೃತ್ತಿಪರರಿಗಾಗಿ ಹುಡುಕಾಟ ನಡೆಸುವವರ ಪ್ರಮಾಣ ಶೇ 42.38ರಷ್ಟು ಮಾತ್ರ ಹೆಚ್ಚಳವಾಗಿದೆ. ಈ ಹೆಚ್ಚಳ ದಾಖಲಾಗಿರುವುದು ಮಹಿಳೆಯರೇ ಬಾಹುಳ್ಯ ಹೊಂದಿದ್ದ ಮನೆಗೆಲಸ, ಅಡುಗೆ, ಬ್ಯುಟಿಷಿಯನ್‌ ಕ್ಷೇತ್ರಗಳಲ್ಲೇ. ಡೇಟಾ ಎಂಟ್ರಿ, ಮಾರಾಟ ಕ್ಷೇತ್ರದಲ್ಲೂ ಈ ಉದ್ಯೋಗ ಪ್ರಮಾಣ ಅಧಿಕವಾಗಿದೆ. ಬೇಡಿಕೆಯಲ್ಲಿ ಇಷ್ಟು ಹೆಚ್ಚಳವಾಗಿದ್ದರೂ ವೇತನದಲ್ಲಿ ಮಾತ್ರ ಇನ್ನೂ ಸಮಾನತೆ ಬಂದಿಲ್ಲ. ಸಮಾನ ವೃತ್ತಿ ಮತ್ತು ಹುದ್ದೆಯನ್ನು ಹೊಂದಿದ್ದರೂ ಅನೇಕ ಉದ್ದಿಮೆಗಳಲ್ಲಿ ಮಹಿಳೆಯರು ಇಂದಿಗೂ ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಕಡಿಮೆ ವೇತನವನ್ನೇ ಪಡೆಯುತ್ತಿದ್ದಾರೆ.

ಈಚಿನ ದಿನಗಳಲ್ಲಿ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ.  ಒಂದೇ ವರ್ಷದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸಂಬಂಧಿಸಿದ ಉದ್ಯೋಗದಲ್ಲಿ ನಾಲ್ಕು ಪಟ್ಟು ಅಧಿಕ ಉದ್ಯೋಗ ಅವಕಾಶ ಇರುವುದನ್ನು ಉದ್ಯೋಗದಾತರು ಪ್ರಕಟಿಸಿದ್ದರು. ಹೀಗೆ ಉದ್ಯೋಗಕ್ಕೆ ಕರೆದ ಮಹಿಳೆಯರಿಗೆ ನೀಡುವ ವೇತನ ಮಾತ್ರ ಪುರುಷರಿಗಿಂತ ಸರಾಸರಿ ಶೇ 15.43ರಷ್ಟು ಕಡಿಮೆ. ಉದಾಹರಣೆಗೆ, ಹೊರಗುತ್ತಿಗೆ (ಬಿಪಿಒ) ಉದ್ಯಮದಲ್ಲಿ ಸರಾಸರಿ ಪ್ರವೇಶ ಹಂತದ ವೇತನ ಮಹಿಳೆಯರಿಗೆ ₹ 11,664 ಇದ್ದರೆ, ಪುರುಷರಿಗೆ ₹ 13,792 ಇದೆ.
ಈಚಿನ ದಿನಗಳಲ್ಲಿ ಹೆಚ್ಚಿನ ಸಂಸ್ಥೆಗಳು ಲಿಂಗ ವೈವಿಧ್ಯತೆ  ತೋರಿಸಿಕೊಳ್ಳುತ್ತಿವೆ. ಹೆಚ್ಚು ಹೆಚ್ಚು ಮಹಿಳೆಯರನ್ನು, ಮಕ್ಕಳನ್ನು ಹೆತ್ತ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿವೆ. ಜಾಗತಿಕ ಮಟ್ಟದ ಸ್ಪರ್ಧೆಯೇ ಇದಕ್ಕೆ ಕಾರಣ. ನೀತಿ ನಿರ್ಧಾರದಲ್ಲಿ ಸುಧಾರಣೆ, ಸಂಶೋಧನೆಗೆ ಪ್ರೋತ್ಸಾಹ ಸಹಿತ ಹಲವು ಕಾರಣಗಳಿಂದಾಗಿ ಇಂದು ಮಹಿಳೆಯರು ನಿರ್ದೇಶಕರು, ಸಿಇಒ ಹಂತದಲ್ಲೂ ಮಿಂಚುತ್ತಿದ್ದಾರೆ. ವ್ಯಕ್ತಿಯ ಪ್ರತಿಭೆ ಅಥವಾ ಸಾಮರ್ಥ್ಯವು ಸ್ತ್ರಿ – ಪುರುಷ ಎಂಬ ವ್ಯತ್ಯಾಸ ಅವಲಂಬಿಸಿರುವುದಿಲ್ಲ. ಇಡೀ ಜಗತ್ತೇ ಅದನ್ನು ಸಾರಿ ಸಾರಿ ಹೇಳುತ್ತಲೇ ಇದೆ. ಹೀಗಿರುವಾಗ ಕಂಪೆನಿಗಳಲ್ಲಿ ಎಲ್ಲ ಕೆಲಸಗಾರರಿಗೂ ಸಮಾನ ವೇತನ ನೀಡುವುದು ಅಗತ್ಯವಾಗುತ್ತದೆ. ಒಂದು ವೇಳೆ ಇಂತಹ ತಾರತಮ್ಯ ನಡೆಯುತ್ತಿದೆ ಎಂದಾದರೆ ಸಂಸ್ಥೆಯೊಂದರ ಮಾನವ ಸಂಪನ್ಮೂಲ ವಿಭಾಗದೊಳಗೇ ಇಂತಹ ತಾರತಮ್ಯ ಧೋರಣೆ ಅವಿತುಕೊಂಡಿದೆ ಎಂದೇ ಭಾವಿಸಬೇಕಾಗುತ್ತದೆ.

ಸಮಾನ ವೇತನ ನೀಡಿಕೆಯು ಕಂಪೆನಿಗಳ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿರಬೇಕು. ಇದರಿಂದ ಪುರುಷ ಮತ್ತು ಮಹಿಳಾ ಉದ್ಯೋಗಿಗಳಲ್ಲಿ ಸಮಾನತೆ ಮೂಡುವುದರ ಜತೆಗೆ ಉತ್ತಮ ವ್ಯವಹಾರ ಪ್ರಜ್ಞೆಯೂ ಮೂಡುವಂತಾಗುತ್ತದೆ. ಸಮಾನ ವೇತನದಿಂದ ಮಹಿಳೆಯರ ನಾಯಕತ್ವಕ್ಕೂ ಉತ್ತೇಜನ ಕೊಟ್ಟಂತಾಗುತ್ತದೆ. ಇದರಿಂದ ಉತ್ತಮ ಪ್ರತಿಭೆಗಳು ಕಂಪೆನಿಯಲ್ಲೇ ಉಳಿಯುವುದು ಸಾಧ್ಯವಾಗುತ್ತದೆ, ಕೆಲಸದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಹೆಚ್ಚುವಂತಾಗುತ್ತದೆ. ಹೊರನೋಟದಲ್ಲೂ ಕಂಪೆನಿಯ ವರ್ಚಸ್ಸು ಹೆಚ್ಚುತ್ತದೆ.

ವೇತನವನ್ನು ಬಹಿರಂಗಪಡಿಸುವಲ್ಲಿ ಪಾರದರ್ಶಕತೆ ಸಾಧಿಸುವ ಮೂಲಕ ಕಂಪೆನಿಗಳು ಈ ಲಿಂಗತಾರತಮ್ಯವನ್ನು ಹೋಗಲಾಡಿಸುವುದು ಸಾಧ್ಯವಿದೆ. ವೇತನ, ಬಡ್ತಿಯಂತಹ ವಿಚಾರಗಳಲ್ಲಿ ವಸ್ತುನಿಷ್ಠವಾದಂತಹ ಗುರಿಗಳನ್ನು ಇಡುವುದು, ಉನ್ನತ ಹುದ್ದೆಗೆ ಹೋಗುವ ನಿಟ್ಟಿನಲ್ಲಿ ಮಹಿಳೆಯರಿಗೆ ಇರುವ ಅಡ್ಡಿಗಳ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಕಂಪೆನಿಗಳು ಲಿಂಗ ಸಮಾನತೆ ತರಬಹುದು.
ಆರೋಗ್ಯಕರ ಗುರಿ ನಿಗದಿ ಮಾಡುವುದು,  ಕೆಲಸದ ಆಧಾರದ ಮೇಲೆ ಪ್ರೋತ್ಸಾಹಧನ ನೀಡುವುದು ಸಹಿತ ವಿವಿಧ ವಿಧಾನಗಳ ಮೂಲಕ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆ  ತರುವುದು ಸಾಧ್ಯವಿದೆ.

ಮಹಿಳೆಯರ ಆರ್ಥಿಕ ಶಕ್ತಿಯ ಸಾಮರ್ಥ್ಯದ ಕೀಲಿಯನ್ನು ತೆರೆಯುವುದರಿಂದ ಆಗುವ ಪ್ರಗತಿ ಅಗಾಧವಾದುದು. ಉದ್ಯೋಗದಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವುದು, ಅವರ ಪ್ರತಿಭೆ ಬಳಸಿಕೊಳ್ಳುವುದು ಹಾಗೂ ಅವರಿಗೆ ಸಮಾನ ವೇತನ ನೀಡುವುದು ಇಂದು ಅನಿವಾರ್ಯ ಎಂಬಂತಹ ವಾತಾವರಣ ಮೂಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ.

(‘ಬಾಬಾಜಾಬ್‌ಡಾಟ್‌ಕಾಂ’ ನ ಸಹ ಸಂಸ್ಥಾಪಕರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT