ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ಬ್ಯಾನ್‌ ಆದ್ವೂ; ನಮ್ಗೂ ಕೆಲಸವಿಲ್ದಂಗಾಯ್ತು

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

‘ದೀಪಾವಳಿ ಪಾಡ್ಯದ ಬಳಿಕ ದುಡಿಮೆಗಾಗಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಹಳ್ಳಿಗಳಿಗೆ ಮೂರು ತಾಂಡಾ ಮಂದಿ ಒಟ್ಟಿಗೆ ಹೋಗಿದ್ವಿ. 20 ಮಂದಿಯ ತಂಡ ಗುತ್ತಿಗೆ ಹಿಡಿದು 35 ಅಡಿ ಆಳದ ಬಾವಿ ತೋಡಿದೆವು. ಈ ಕೆಲ್ಸ ಮುಗ್ಸೋ ಹೊತ್ತಿಗೆ ಇನ್ನೊಂದು ಬಾವಿ ತೋಡೋ ಗುತ್ತಿಗೆ ಬಂತು. ನಾವೆಲ್ಲ ಅಲ್ಲಿಗೆ ಹೋಗಿ ಗುಡಿಸಲು ಹಾಕ್ಕೊಂಡು ಕೆಲ್ಸ ಆರಂಭಿಸೋ ಹೊತ್ತಿಗೆ ಕೆಲಸ ನಿಂತೋಯ್ತು. ವಿಧಿಯಿಲ್ಲದೆ ತಾಂಡಾಗೆ ಫೋನ್‌ ಹಚ್ಚಿ ಗಾಡಿ ತರ್ಸಕೊಂಡು ಮರಳಿ ಬಂದೆವು...’ ಎಂದು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕು ಸವನಾಳ, ಉಪ್ಪಲದಿನ್ನಿ, ಕರಿಹಳ್ಳ ತಾಂಡಾದ ಗುರುಬಾಯಿ ನಾಯ್ಕ್‌, ಮಹಾದೇವಿ ರಾಠೋಡ, ಪರಶುರಾಮ ಮೇತ್ರಿ, ಕಾಶೀನಾಥ ಲಮಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲುವೆ ಕಾಮಗಾರಿ, ಬಾವಿ ತೋಡೋ ಕೆಲ್ಸ, ರಸ್ತೆ ಕೆಲ್ಸ ಸೇರಿದಂತೆ ಎಲ್ಲ ಕೆಲ್ಸ ಮಾಡಲು ನಮ್ಮ ತಾಂಡಾದ ಮುಖ್ಯಸ್ಥನ ಬಳಿ ಮುಂಗಡ ರೊಕ್ಕ ಪಡೆದಿದ್ದೆವು. ಆ ರೊಕ್ಕದಲ್ಲಿ ಮನೆಯ ಎಲ್ಲ ಸಮಸ್ಯೆ ಪರಿಹರಿಸಿಕೊಂಡು, ಕೊಂಚ ದಾರಿ ಖರ್ಚಿಗೆ ತಗೊಂಡು, ಜೋಳ, ಗೋಧಿ, ಇನ್ನಿತರೆ ಮಸಾಲೆ ಸಾಮಾನು ಕಟ್ಕೊಂಡು ಪಾಡ್ಯ ಮುಗಿತ್ತಿದ್ದಂತೆ ಅವನ ಹಿಂದೆ ರತ್ನಾಗಿರಿ ಜಿಲ್ಲೆಯ ಹಳ್ಳಿಗಳಿಗೆ ಹೋದ್ವಿ.

‘ಆರಂಭದಲ್ಲಿ ಎಲ್ಲವೂ ಛಲೋ ಇತ್ತು. ಕೆಲ್ಸಾನು ಮಾಡಕ್ಕತ್ತಿದ್ವಿ. ಹೆಣ್ಣಾಳು ದಿನಕ್ಕೆ ₹ 400 ಗಳಿಸಿದರೆ, ಗಂಡಾಳು ₹ 500–550 ದುಡಿತಿದ್ದ. ಒಂದ್‌ ಜೋಡಿ ವಾರಕ್ಕೆ ಕನಿಷ್ಠ ಐದಾರು ಸಾವಿರ ಗಳಿಸ್ತಿದ್ವಿ. ಮುಂಗಡ ರೊಕ್ಕ ಮುರ್ಕೊಂಡು ಇಲ್ಲಿಂದ ಕರೆದೊಯ್ದ ತಾಂಡಾ ಮುಖ್ಯಸ್ಥ ವಾರಕ್ಕೊಮ್ಮೆ ಸಂತೆ ಖರ್ಚಿಗೆ ₹ 500 ಕೊಡುತ್ತಿದ್ದ.

‘ಒಂದೆರೆಡು ವಾರ ಎಲ್ಲ ಛಲೋ ಇತ್ರೀ. ಅಷ್ಟರೊಳಗೆ ನೋಟು ಬ್ಯಾನ್‌ ಆದ್ವು. ಆರಂಭದಲ್ಲಿ ನಮ್ಗೆನೂ ತ್ರಾಸ್‌ ಆಗಲಿಲ್ಲ. ನಾವು ಮುಂಚೆನೇ ರೊಕ್ಕ ಮುಂಗಡ ಪಡೆದಿದ್ರಿಂದ ಕೂಲಿ ಪಡೆಯದೆ ಕೆಲ್ಸ ಮಾಡ್ತಿದ್ದೀವಿ. ವಾರ ಕಳೆದಂತೆ ಎಲ್ಲ ಕುಟುಂಬಕ್ಕೂ ಸಂತಿ ರೊಕ್ಕ ಕೊಡಲು ಮಾಲೀಕರಿಗೆ ಆಗಲಿಲ್ಲ.

‘ನಾವು ಕೊಂಡೊಯ್ದಿದ್ದ ದಿನಸಿ, ಕಿರಾಣಿ ಖಾಲಿ ಆಗ್ತಾ ಬಂತು. ಕೆಲ್ಸ ರಗಡ್‌ ಇದ್ರೂ, ಕೂಲಿ ಮಾತ್ರ ಸಿಗಂಗಿರಲಿಲ್ಲ. ನಾಲ್ಕೈದು ದಿನ ಕಾದೆವು. ಬೇರೆಡೆ ಕೆಲ್ಸಕ್ಕೆ ಅಲೆದವು. ಯಾರೊಬ್ಬರೂ ಕೂಲಿ ಕೊಟ್ಟು ಕೆಲ್ಸ ಮಾಡ್ಸಲು ಮುಂದಾಗಲಿಲ್ಲ.

ದಿನ ಕಳದ್ರೆ ಮಕ್ಕಳು ಸೇರಿದಂತೆ ನಾವೂ ಉಪವಾಸ ಸಾಯ್ಬೇಕಿತ್ತು. ವಿಧಿಯಿಲ್ಲದೆ ಊರಲ್ಲಿದ್ದ ಕಾಕಾನ ಮಕ್ಕಳಿಗೆ ಫೋನ್‌ ಹಚ್ಚಿ, ಇಲ್ಲಿಂದಲೇ ಗಾಡಿ ಕರ್ಸಕೊಂಡು, ದಾರಿ ಖರ್ಚಿಗೆ ಸಾಲ ತಗೊಂಡು ಬಂದೆವು...’ ಎಂದು ಗುರುಬಾಯಿ ನಾಯ್ಕ್‌  ಹೇಳುತ್ತಾರೆ.

ಹೆಚ್ಚು ಕೂಲಿಗಾಗಿ...
‘ನಮ್ಮಲ್ಲೂ ಕೆಲ್ಸ ಸಿಗುತ್ತೆ. ಆದ್ರೆ ಇಲ್ಲಿ ಅಲ್ಲಿನಷ್ಟು ಕೂಲಿ ಸಿಗಲ್ಲ. ಆದ್ದರಿಂದಲೇ ಪ್ರತಿ ವರ್ಷ ಪಾಡ್ಯ ಮುಗಿತ್ತಿದ್ದಂತೆ ನಾವು ದುಡಿಯೋಕೆ ಹೋಗ್ತೀವಿ. ಜೂನ್‌ ಸಾತ್ ಆಸುಪಾಸು ಇಲ್ಲಿನ ಬಿತ್ತನೆ ಕೆಲ್ಸಕ್ಕೆ ಮರಳ್ತೇವೆ. ಆಗ ಅಲ್ಲೂ ಕೆಲ್ಸ ಕಡಿಮೆ ಇರುತ್ತೆ.

ಇದು ನಮ್ಗ ಪ್ರತಿ ವರ್ಷವೂ ತಪ್ಪದ ಪಾಳಿ. ಒಮ್ಮೆ ಮಹಾರಾಷ್ಟ್ರಕ್ಕೆ ಹೋದ್ರೇ, ಮತ್ತೊಮ್ಮೆ ಗೋವಾಗೆ ಹೋಗ್ತೀವಿ. ಗುಳೆ ಹೋಗಕ್ಕ ಮುಂಚೆ ಯಾವ ಭಾಗಕ್ಕ ಹೋಗ್ತೀವಿ, ಆ ಭಾಗದ ಮಾಲೀಕರಿಂದ ನಮ್ಮ ತಾಂಡಾ ಮುಖ್ಯಸ್ಥನ ಮೂಲಕ ಮುಂಗಡ ರೊಕ್ಕ ಪಡಿತೀವಿ’ ಎಂದು ಪ್ರತಿ ವರ್ಷ ಗುಳೆ ಹೋಗುವ ಕೂಲಿ ಕಾರ್ಮಿಕ ರಾಮು ಲಮಾಣಿ ತಿಳಿಸಿದರು.

‘ಒಂದೊಂದು ಕುಟುಂಬ ತಲಾ ₹ 25ರಿಂದ 50 ಸಾವಿರ ಮುಂಗಡ ಪಡೆದು, ತಮ್ಮ ಅವಶ್ಯಕತೆ ಪೂರೈಸಿಕೊಳ್ಳುತ್ತವೆ. ನಂತರ ಏಳೆಂಟು ತಿಂಗಳವರೆಗೆ ಮುಖ್ಯಸ್ಥ ಕರೆದೊಯ್ದ ಸ್ಥಳಕ್ಕೆ ಹೋಗಿ ವಿರಮಿಸದೆ, ಗುತ್ತಿಗೆ ಪಡೆದು ಅಹೋರಾತ್ರಿ ದುಡಿಯುತ್ತವೆ. ಅಲ್ಲಿನ ಎಲ್ಲ ಖರ್ಚು, ಮುಂಗಡ ರೊಕ್ಕದ ಸಾಲ ಎಲ್ಲವನ್ನೂ ತೀರಿಸಿ, ಕನಿಷ್ಠ ₹ 50 ಸಾವಿರಕ್ಕೂ ಅಧಿಕ ದುಡ್ಕೊಂಡು ತಾಂಡಾಗಳಿಗೆ ಮರಳ್ತಿದ್ದೆವು.

ಆದರೆ ಈ ಬಾರಿ ನಾವ್‌ ಪಡೆದ ಮುಂಗಡ ಸಾಲಾನೇ ತೀರಿಸಲು ಆಗಿಲ್ಲ. ಅಲ್ಲಿನ ಮಾಲೀಕರಿಗೆ ನಮ್ಮ ಮುಖಾದ್ದಮ್‌ (ಮುಖ್ಯಸ್ಥ) ಮೂಲಕ ಮಾತು ನೀಡಿದ್ದೇವೆ.

ಕೆಲ್ಸ ಇದ್ರೂ ಕೈ ಖರ್ಚಿಗೆ  ರೊಕ್ಕ ಸಿಗದಿದ್ದರಿಂದ ಅನಿವಾರ್ಯವಾಗಿ ಊರಿಗೆ ಹೋಗ್ತೇವೆ. ಮುಂದಿನ ಪಾಡ್ಯದ ಬಳಿಕ ಮತ್ತೆ ಬಂದು ನಿಮ್ಮ ಸಾಲ ತೀರಿಸ್ತೀವಿ ಎಂದಿದ್ದಕ್ಕೆ ಮಾಲಕನೂ ಒಪ್ಪವ್ನೆ. ಅವನ ಸಮ್ಮತಿ ದೊರೆತ ಬಳಿಕ ಮರಳಿದೆವು’ ಎಂದು ನೋಟು ರದ್ದತಿಯಿಂದ ತಮ್ಮ ಗುಂಪು ತಾಂಡಾಕ್ಕೆ ಮರಳಿದ್ದನ್ನು ಲಮಾಣಿ ‘ಪ್ರಜಾವಾಣಿ’ಗೆ ವಿವರಿಸಿದರು.

ಊರಲ್ಲೂ ಕೆಲ್ಸ ಸಿಗ್ತೀಲ್ಲ...
‘ನೋಟು ಬ್ಯಾನ್‌ ಆಗಿದ್ದು ನಮ್ಗ ಭಾರಿ ಬ್ಯಾನೇ ತಂದೈತಿ. ಗುಳೆ ಹೋದ್ರೂ ಈ ಬಾರಿ ಏನೂ ಗಿಟ್ಟಲಿಲ್ಲ. ತಾಂಡಾಗೆ ಬಂದು ಸುತ್ತಮುತ್ತಲ ಊರಲ್ಲಿ ಕೆಲ್ಸ ಹುಡುಕಿದರೂ ಸಿಗ್ತಿಲ್ಲ. ಇದಕ್ಕಿಂತಲೂ ಹೆಚ್ಚಾಗಿ ನಮ್ಗ ರೇಷನ್‌ ಸಿಗದಿರುವುದು ತ್ರಾಸಾಗೈತ್ರೀ’ ಎಂದು ಮಹಾದೇವಿ ರಾಠೋಡ ಅಳಲು ತೋಡಿಕೊಂಡರು.

‘ನಾವು ಅತ್ತ ಹೋದ ಮ್ಯಾಲೆ ಇತ್ತ ಕೂಪನ್ ಕೊಟ್ಟವ್ರೀ. ನಮ್ಗ ಸಿಕ್ಕಿಲ್ಲ. ಘಾಸ್ಲೇಟ್‌ (ಸೀಮೆಎಣ್ಣೆ) ಅಷ್ಟೇ ಸಿಕ್ಕಿದ್ದು. ಹೆಂಗ ದಿನ ಕಳಿಬೇಕು ಎಂಬೋದ ಗೊತ್ತಾಗದಂಗ್‌ ಆಗೇದ್ರಿ’ ಎಂದು ಗುಳೆಯಿಂದ ಮರಳಿ ಬಸವನಬಾಗೇವಾಡಿ ಸಮೀಪದ ಮಣ್ಣೂರ ಕ್ರಾಸ್‌ ಬಳಿಯ ಇಟ್ಟಂಗಿ ಭಟ್ಟಿಯಲ್ಲಿ ಭಾನುವಾರ ಕೆಲಸ ಮಾಡುತ್ತಿದ್ದ ರಾಠೋಡ ಅಸಹಾಯಕರಾಗಿ ತಲೆ ಮೇಲೆ ಕೈಹೊತ್ತು ಕೂತರು.

‘ನಾವ್‌ ಇದೀಗ ಎಲ್ಲ ಕೆಲಸಕ್ಕೂ ಸಿದ್ಧ. ಆದ್ರೆ ನಮ್ಗ ನಿತ್ಯ ಕೂಲಿನೇ ದೊರಕದಾಗೈತ್ರೀ. ಹೆಣ್ಣಾಳಿಗೆ ₹ 200, ಗಂಡಾಳಿಗೆ ₹ 300 ಕೊಡ್ತಾರೀ. ಆದ್ರ ದಿನ ಕೆಲ್ಸ ಎಲ್ಲೂ ಸಿಗ್ತಿಲ್ಲಾರಿ. ಕೆಲ್ಸ ಹುಡುಕಾಡದೆ ಒಂದು ಕೆಲಸವಾಗೈತ್ರೀ...’ ಎಂದು ಗುಳೆಯಿಂದ ಮರಳಿರುವ ಪರಶುರಾಮ ಮೇತ್ರಿ ಹೇಳಿದರು.

ಅಲೆದಾಟ...
‘ತಾಂಡಾಗ ಮರಳಿದರೂ ಹೆಚ್ಚು ಕೂಲಿ ಸಿಗುವ ದುಡಿಮೆ ಸಿಗಲ್ಲ ಎಂದು ಹಳ್ಳಿಗಳಿಂದ ಮರಳಿ ರತ್ನಾಗಿರಿ ನಗರದಲ್ಲಿ ಕೆಲ್ಸಕ್ಕಾಗಿ ಅಲೆದಾಡಿದೆವು. ಯಾವ ಕೆಲ್ಸಾನೂ ಸಿಗಲಿಲ್ಲ. ನಮ್ಮಂಗೆ ದುಡಿಲಿಕ್ಕೆ ಅಲ್ಲಿಗೆ ಬಂದಿದ್ದ ಬಹುತೇಕರು ಕೆಲ್ಸ, ಕಾಸು ದೊರೆಯದಿದ್ದರಿಂದ ಊರಿಂದ ಗಾಡಿ ತರ್ಸಕ್ಕೊಂಡು ಕೆಲಸ ಅರಸಿ ಮುಂಬೈ, ಪುಣೆ, ಗೋವಾ ಕಡೆ ಹೋದರು. ಹೆಚ್ಚಿನವರು ಕಲಬುರ್ಗಿ, ಯಾದಗಿರಿ, ವಿಜಯಪುರ ಜಿಲ್ಲೆಯ ವಿವಿಧ ತಾಂಡದವರಿದ್ದರು’ ಎಂದು 20 ದಿನಗಳ ಹಿಂದೆ ಗುಳೆಯಿಂದ ಮರಳಿದ ಕಾಶೀನಾಥ ಲಮಾಣಿ ಹೇಳುತ್ತಾರೆ.

* ನೋಟ್ ಬ್ಯಾನ್‌ನಿಂದ ಭವಿಷ್ಯಕ್ಕೆ ಕತ್ತಲು ಕವಿದಂಗಾಗಿದೆ. ಗುಳೆ ಹೋದ್ರೂ ಜೀವ್ನ ಸಾಗ್ಸಕೆ ಕನಿಷ್ಠ ರೊಕ್ಕವೂ ಸಿಗದಂಗಾದ್ವು. ಇಲ್ಗೆ ಬಂದ್ರೇ ರೇಷನ್ ಅಕ್ಕಿನೇ ಸಿಕ್ತಿಲ್ಲ. ಏನ್ ಮಾಡ್ಬೇಕ್ ತೋಚ್ತಿಲ್ಲ
–ರಾಮು ಲಮಾಣಿ, ಗುಳೆಯಿಂದ ಮರಳಿದ ತಾಂಡಾ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT