ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಹೇಗೆ ಅಕ್ರಮ?

ವಾಚಕರ ವಾಣಿ
Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ
‘ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಮತ ಯಾಚನೆ ಮಾಡುವುದು ಅಕ್ರಮ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ (ಪ್ರ.ವಾ., ಜ. 3).
 
ನಮ್ಮ ಸಂವಿಧಾನದ ಪ್ರಕಾರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪರಸ್ಪರ ಪೂರಕವಾಗಿರಬೇಕೇ ವಿನಾ ಯಾವುದೇ ಅಂಗವೂ ಸರ್ವತಂತ್ರ ಸ್ವತಂತ್ರವಾಗಿ ಸಾರ್ವಭೌಮನಂತೆ ವರ್ತಿಸುವಂತಿಲ್ಲ. ಇದು ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿತ ಪಾಠ. ಆದರೆ, ಇಂದು ಏನಾಗಿದೆ? ಯಾವುದೇ ಆದೇಶಹೊರಡಿಸುವ ಮೊದಲು ಶಾಸಕಾಂಗ, ಕಾರ್ಯಾಂಗಗಳನ್ನೊಳಗೊಂಡ ಸರ್ಕಾರದೊಂದಿಗೆ ಸುಪ್ರೀಂ ಕೋರ್ಟ್‌ ಸಮಾಲೋಚನೆ ನಡೆಸುತ್ತದೆಯೇ? ಹಾಗೆ ಮಾಡಿದ್ದರೆ ಇಂತಹ ಅಸಹಜ ಆದೇಶಗಳು ಹೊರಬರುತ್ತಿರಲಿಲ್ಲ! 
 
ಈಗಿನ ತೀರ್ಪು ನ್ಯಾಯವಾಗಿದೆ ಎಂದೇ ಭಾವಿಸೋಣ. ಆಗ, ಸರ್ಕಾರಿ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡುವ ಕಾರ್ಯವೈಖರಿಯೂ ಅಕ್ರಮವಲ್ಲವೇ? ಮುಂಬಾಗಿಲಿನಿಂದ ಪ್ರವೇಶಿಸಿದರೆ ಅಕ್ರಮವಾಗುತ್ತದೆ, ಆದರೆ ಹಿಂಬಾಗಿಲಿನಿಂದ ಬರುವುದು ಸಕ್ರಮ ಎಂದರೆ ಯಾವ ನ್ಯಾಯ? 
 
‘ಭಾಷಾ ತಳಹದಿಯ ಮೇಲೆ ಮತಯಾಚನೆಯೂ ಅಕ್ರಮ’ ಎಂದು  ಕೋರ್ಟ್‌ ಹೇಳಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ಕೈದು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದ್ದ ನಮ್ಮ ದೇಶವನ್ನು ಭಾಷೆಗಳ ಆಧಾರದ ಮೇಲೆ ಹತ್ತು ಹಲವು ಭಾಷಾವಾರು ರಾಜ್ಯಗಳನ್ನಾಗಿ ತುಂಡು ತುಂಡು ಮಾಡಲಾಯಿತು. ಆಯಾ ಭಾಷೆಯ ಜನ ತಮ್ಮದೇ ಆದ ನಾಡಿನಲ್ಲಿ (ರಾಷ್ಟ್ರದ ಏಕತೆಗೆ ಭಂಗ ಬಾರದಂತೆ) ತಮ್ಮ ಇಷ್ಟದಂತೆ ಜೀವಿಸಬಹುದು ಎಂದು ಭಾವಿಸಿದ್ದ ಕನಸು ನನಸಾಯಿತೇ?
 
ಭಾಷಾವಾರು ರಾಜ್ಯಗಳಲ್ಲಿ ಆಯಾ ಭಾಷಿಕರು ಮಾತ್ರ ವಾಸಿಸುವಂತಾಯಿತೇ? ಖಂಡಿತ ಇಲ್ಲ. ಯಾವುದೇ ಭಾಷಿಕರು ಯಾವುದೇ ಭಾಷಾವಾರು ರಾಜ್ಯದಲ್ಲಿ ಜೀವಿಸಲು ಸರ್ವತಂತ್ರ ಸ್ವತಂತ್ರರಾಗಿದ್ದಾರೆ (ಬಹುಶಃ ಈ ಕಾರಣದಿಂದಲೇ  ಕರ್ನಾಟಕದರಾಜಧಾನಿಯಲ್ಲಿ ಕನ್ನಡಿಗರಿಗಿಂತ ಕನ್ನಡೇತರರೇ ಹೇರಳವಾಗಿದ್ದಾರೆ!) ಹೀಗಿರುವಾಗ, ಭಾಷಾವಾರು ರಾಜ್ಯಗಳ ನಿರ್ಮಾಣ ಎಷ್ಟು  ಸಮಂಜಸ?  ಯಾವುದೋ ಒಂದು ಕಾರಣ ಮುಂದೆ ಮಾಡಿ, ‘ಭಾಷಾವಾರು ರಾಜ್ಯಗಳ ನಿರ್ಮಾಣ ಸರಿ’ ಎನ್ನುವುದಾದರೆ, ಭಾಷೆ ಆಧಾರದ ಮೇಲೆ ಮತ ಯಾಚನೆ ಅಕ್ರಮ ಹೇಗಾಗುತ್ತದೆ? 
-ಉಡುಪಿ ಅನಂತೇಶ ರಾವ್, ಬೆಂಗಳೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT