ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿನ ಬೆನ್ನಿಗೆ ಬಿದ್ದ ‘ವೀರಾಭಿಮಾನಿಗಳು’!

ಸಂಗತ
Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ
ಪದವಿ ಕಲಿಯುತ್ತಿದ್ದಾಗ ಶಕೀಲಾ ಎಂಬ ಹೆಸರಿನ ಸಹಪಾಠಿ ಒಬ್ಬಳಿದ್ದಳು. ಹಾಜರಿ ಪುಸ್ತಕ ಹಿಡಿದು ಉಪನ್ಯಾಸಕರು ಅವಳ ಹೆಸರು ಕೂಗಿದಾಗಲೆಲ್ಲ ಹುಡುಗರು ಕುಳಿತ ದಿಕ್ಕಿನಿಂದ ವಿಚಿತ್ರ ಧ್ವನಿಗಳು ಹೊರಡುತ್ತಿದ್ದವು. ಅವು ಕೇಳಲು ಅಹಿತಕರವಾಗಿಯೂ, ಕುಹಕವಾಗಿಯೂ ಇರುತ್ತಿದ್ದವು. ಶಕೀಲಾ ಹೆಸರಿಗೆ ಗಂಟುಬಿದ್ದ ಹುಡುಗರ ಕೀಟಲೆ ಯಾವ ಮಟ್ಟ ತಲುಪಿತೆಂದರೆ, ಸಹಪಾಠಿ ಶಕೀಲಾ ಎಲ್ಲೇ ಹೋಗಲಿ ಆ ಧ್ವನಿಗಳು ಹಿಂಬಾಲಿಸುತ್ತಿದ್ದವು. ಪೋಲಿ ಚಿತ್ರಗಳಲ್ಲಿ ಅಭಿನಯಿಸಿದ ನಟಿಯ ಹೆಸರು ಶಕೀಲಾ ಎನ್ನುವ ಸಂಗತಿಯ ಆಚೆಗೆ ಶಕೀಲಾ ಎನ್ನುವುದೂ ಒಂದು ಚಂದದ ಹೆಸರು ಮತ್ತು ಆ ಹೆಸರನ್ನು ಹೊಂದಿರುವವಳು ನಮ್ಮ ಸಹಪಾಠಿ, ಆಕೆಗೂ ಒಂದು ವ್ಯಕ್ತಿತ್ವ ಇದೆ ಎಂಬ ವಿಚಾರವನ್ನೇ ನಮ್ಮ ಕ್ಲಾಸಿನ ಹುಡುಗರು ಮರೆತಿದ್ದರು.
 
ಈ ಹೆಸರಿನ ವಿಷಯ ಪದವಿಯ ಇತರ ತರಗತಿಗಳ ಹುಡುಗರ ಕಿವಿಗೂ ಬಿದ್ದು ಕೀಟಲೆಯ ವ್ಯಾಪ್ತಿ ದೊಡ್ಡದಾಯಿತು. ಆ ಹುಡುಗಿ ಕಾಲೇಜು ಕಾರಿಡಾರ್, ಗ್ರಂಥಾಲಯ ಎಲ್ಲೇ ಹೋದರೂ ‘ಅಲ್ಲಿಪ್ಪುದ್ ಶಕೀಲಾ ಅಂಬ್ರು ಮಾರ್ರೆ’ ‘ಯೇ ಇಲ್ ಕಾಣ್‌ ಶಕೀಲಾ ಬತ್ತಿದ್ಲ್’ ಎನ್ನುವ ಕುಹಕದ ಮಾತುಗಳು ಹೆಚ್ಚಾದವು. ಲವಲವಿಕೆಯಿಂದ ಇದ್ದ ಹುಡುಗಿ ಶಕೀಲಾ ಕೀಳರಿಮೆಯಿಂದ ತಲೆ ತಗ್ಗಿಸಿಕೊಂಡೇ ಓಡಾಡುವಂತಾಯಿತು. ತೋಚಿದಂತೆ ಇತರರ ಹೆಸರನ್ನು ಗ್ರಹಿಸುವ ಮನಸ್ಥಿತಿಯಿಂದಾಗಿ ಸಹಪಾಠಿ ಶಕೀಲಾ ಇಡೀ ಕಾಲೇಜು ಜೀವನವನ್ನು ಅಳುಕು, ಅಂಜಿಕೆ, ಅವಮಾನದಿಂದಲೇ ಕಳೆಯಬೇಕಾಯಿತು.
 
ಆ ಹೆಸರು, ಅದನ್ನು ಇಟ್ಟುಕೊಂಡ ಆ ವ್ಯಕ್ತಿತ್ವ ಮತ್ತು ಹೆಸರಿಟ್ಟ ಪೋಷಕರ ತಪ್ಪಾದರೂ ಏನಿದೆ? ‘ಶಕೀಲಾ’ ಎಂದರೆ ಪೋಲಿ ಸಿನಿಮಾದ ನಟಿಯ ಹೆಸರಷ್ಟೆ ಎಂದು ತಿಳಿದುಕೊಂಡ ಮನಸ್ಥಿತಿಯನ್ನು ಬದಲಾಯಿಸುವುದೆಂತು? ನಾವು ಕಂಡುಕೊಂಡ ಗ್ರಹಿಕೆಯಷ್ಟೇ ಸತ್ಯ ಎನ್ನುವ ಭ್ರಮೆಯಿಂದ ಹೊರಬರುವುದು ಯಾವಾಗ?
ಬಾಲಿವುಡ್‌ನ ತಾರಾ ದಂಪತಿ ಕರೀನಾ ಕಪೂರ್‌ ಖಾನ್‌ ಮತ್ತು ಸೈಫ್ ಅಲಿ ಖಾನ್‌ಗೆ ಜನಿಸಿರುವ ಗಂಡು ಮಗುವಿಗೆ ತೈಮೂರ್ ಎನ್ನುವ ಹೆಸರು ಇಟ್ಟಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಮಗುವಿನ ಹೆಸರಿನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ತಾರಾ ದಂಪತಿ ಹಾಗೂ ನವಜಾತ ಶಿಶುವನ್ನು ವಿವೇಕ ಮರೆತು ಅವಹೇಳನಕಾರಿ ಮಾತುಗಳಿಂದ ಟೀಕಿಸಲಾಗಿದೆ. ನಮ್ಮ ದೇಶಪ್ರೇಮ ಈಗಷ್ಟೇ ಹುಟ್ಟಿದ ಮಗುವಿನ ಹೆಸರಿನ ಹಿಂದೆ ಬಿದ್ದಿರುವುದೇಕೆ ಎಂದು ಪ್ರಶ್ನಿಸಿಕೊಳ್ಳಬೇಕಾದ ಜರೂರಿದೆ.
 
ತೈಮೂರ್ ಎನ್ನುವ ಹೆಸರಿನವನೊಬ್ಬ ಶತಮಾನಗಳ ಹಿಂದೆ ಭಾರತದ ಮೇಲೆ ದಂಡಯಾತ್ರೆ ನಡೆಸಿದ; ರಕ್ತಪಾತ ನಡೆಸಿದ ಎನ್ನುವುದೇ ಈ ಆಕ್ಷೇಪಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಘಟನೆಗೂ ತೈಮೂರ್ ಹೆಸರಿಗೂ ಸಂಬಂಧ ಕಲ್ಪಿಸಿ, ಈಗಷ್ಟೇ ಹುಟ್ಟಿದ ಮಗುವಿನ ಸಾವನ್ನು ಬಯಸುವ ಮಟ್ಟಿಗೆ ಕೆಲವರು ದುಷ್ಟರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. 
 
ಹೆಸರಿನ ಕಾರಣಕ್ಕಾಗಿ ತೈಮೂರ್ ಎಂಬ ರಾಜನ ವ್ಯಕ್ತಿತ್ವವನ್ನು ನವಜಾತ ಶಿಶುವಿಗೆ ಆರೋಪಿಸುವುದು ಸರಿಯೇ? ಸಚ್ಚಾರಿತ್ರ್ಯ ಹೊಂದಿರುವ ಮಹನೀಯರ ಹೆಸರನ್ನೇ ಸಾಮಾನ್ಯವಾಗಿ ಮಕ್ಕಳಿಗೆ ಇಡಲಾಗುತ್ತದೆ. ಹಾಗೆಂದ ಮಾತ್ರಕ್ಕೆ ರಾಮ, ಕೃಷ್ಣ, ಕಬೀರ, ವಿವೇಕಾನಂದ, ಮಹಮ್ಮದ್, ಮಹಾವೀರ ಎಂದು ಸಂತರ ಹೆಸರು ಇಟ್ಟುಕೊಂಡವರೆಲ್ಲ ಸಜ್ಜನರಾಗಲು ಸಾಧ್ಯವೇ? 
 
ಹೆಸರಿನಿಂದ ಸಜ್ಜನಿಕೆಯಾಗಲಿ, ದುಷ್ಟತನವಾಗಲಿ ಬರುತ್ತದೆಯೇ? ನಾಮ ಮತ್ತು ಉಪನಾಮಗಳು ಕುಟುಂಬದ ಬಳುವಳಿಗಳು. ಅವುಗಳ ಬಗ್ಗೆ ಹೆಸರಿಟ್ಟುಕೊಂಡವರಿಗೆ ತಕರಾರಿರಬೇಕೇ ಹೊರತು ಕೂಗುವವರಿಗಲ್ಲ. 
 
ಆರಾಧನೆಗೆ ಒಳಪಡುವ ರಾಜ ಮಹಾರಾಜರು ಒಂದಲ್ಲ ಒಂದು ಯುದ್ಧ ಮಾಡಿ, ನೂರಾರು ಜನರ ಮಾರಣಹೋಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದವರೇ. ಹಾಗೆಂದ ಮಾತ್ರಕ್ಕೆ ಈ ಹೆಸರಿನಲ್ಲಿರುವ ಮಕ್ಕಳೆಲ್ಲ ದುಷ್ಟರಾಗುತ್ತಾರೆ ಎಂದು ಊಹಿಸುವುದು ಸಮಂಜಸವಲ್ಲ.
 
ಹೆಸರಿನಿಂದ ಆರಂಭವಾಗುವ ವ್ಯಕ್ತಿಯ ಅಸ್ಮಿತೆಯೆಂಬ ಹೃದಯ ಬಡಿತಕ್ಕೆ ತನ್ನದೇ ಮಿಡಿತವಿರುತ್ತದೆ. ಪ್ರತಿ ಹೆಸರಿನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಅಪ್ಪ, ಅಮ್ಮ, ಅಜ್ಜಿ, ಅಜ್ಜಂದಿರು, ನೆಂಟರಿಷ್ಟರ ಬಳಗದಲ್ಲಿ ಸಾಕಷ್ಟು ಚರ್ಚೆಯಾಗಿ, ಹುಟ್ಟಿದ ಮಗುವಿಗೆ ಚಂದದ ಹೆಸರೊಂದು ನಾಮಕರಣದ ದಿನದಂದು ನಿಗದಿಯಾಗುತ್ತದೆ. ಹೆಸರು ಇಟ್ಟುಕೊಂಡವರ ಅಸ್ತಿತ್ವ ಅದನ್ನು ಕೂಗುವವರ ದನಿಯಲ್ಲಿ ಸ್ಥಾಯಿಯಾಗಿ ಉಳಿಯುತ್ತದೆ. ಆದರೆ, ಹೀಗೆ ಕೂಗುವವರ  ಅಭಿರುಚಿಗೆ ಅನುಸಾರವಾಗಿ ಮಕ್ಕಳಿಗೆ ಹೆಸರನ್ನು ಇಡಲಾಗುತ್ತದೆಯೇ?
 
ಪೋಷಕರು ತಮ್ಮ ಅಭಿರುಚಿಯ ಅನುಸಾರ ಮಕ್ಕಳಿಗೆ ಚಂದದ ಹೆಸರನ್ನು ಇಡುತ್ತಾರೆ. ತಾರಾ ದಂಪತಿಯಾಗಲಿ, ಬಡ ದಂಪತಿಯಾಗಲಿ ಮಕ್ಕಳ ಹೆಸರಿಡುವ ಪ್ರಕ್ರಿಯೆಯ ಹಿಂದೆ ವಿವೇಚನೆ, ವಿಚಾರವಂತಿಕೆ ಕೆಲಸ ಮಾಡಿರುತ್ತದೆ. ನಮ್ಮ ದೇಶಪ್ರೇಮ ಇದನ್ನೆಲ್ಲ ಗಮನಿಸದೇ ಇರುವಷ್ಟು ಕುರುಡಾಗಬಾರದು.
 
ಕಂಡವರ ಮನೆ ಮಕ್ಕಳ ಹೆಸರು ಬದಲಾವಣೆಗೆ ಆಗ್ರಹಿಸಲು ದೇಶಪ್ರೇಮ ನೆಪವಾಗಬಾರದು. ನಮ್ಮ ಮನೆಯ ಮಕ್ಕಳಿಗೆ ಜಾತಿ–ಧರ್ಮದ ಹಂಗಿಲ್ಲದೆ ಇತರರ ಅಭಿರುಚಿಯನ್ನು, ವಿಚಾರಧಾರೆಯನ್ನು ಗೌರವಿಸುವುದು ಹೇಗೆ ಎಂದು ಹೇಳಿಕೊಡುವ ಪ್ರಕ್ರಿಯೆಯಿಂದಲೇ ದೇಶಪ್ರೇಮ ಆರಂಭವಾಗುತ್ತದೆ. ಭಿನ್ನ ಸಿದ್ಧಾಂತ, ಭಿನ್ನ ವಿಚಾರ ಹೊಂದಿರುವವರು ಶತ್ರುಗಳಲ್ಲ. ‘ಲೋಕೋ ಭಿನ್ನ ರುಚಿಃ’ ಎಂಬ ಅಂಶವನ್ನು ಮನೆಯಿಂದಲೇ ಮನದಟ್ಟು ಮಾಡಿಸುವುದೇ ನಿಜವಾದ ದೇಶಪ್ರೇಮ.
 
ದೇಶಪ್ರೇಮವೆನ್ನುವುದು ರಕ್ತದಿಂದ ಬರುವುದಲ್ಲ. ಅದನ್ನು ರೂಢಿಸಿಕೊಳ್ಳಲು ತಾಳ್ಮೆಯ ತಂತು ಅಗತ್ಯ. ದೇಶಪ್ರೇಮ ಹಾಗೂ ಆದರ್ಶಗಳು 
ಅಳವಡಿಸಿಕೊಳ್ಳುತ್ತಾ ಹೋಗುವಂಥವೇ ಹೊರತು ರಕ್ತದಲ್ಲಿಯೇ ಇರುವಂತಹದ್ದಲ್ಲ. ಕ್ಷುಲ್ಲಕ ಸಂಗತಿಗಳಿಗಾಗಿ ದ್ವೇಷ ಹರಡುವವರು ದೇಶವನ್ನು ಪ್ರೀತಿಸಲಾರರು ಎಂದೇ ಹೇಳಬೇಕಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT