ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಮೊಂಡುತನಕ್ಕೆ ಸುಪ್ರೀಂ ಕೋರ್ಟ್‌ ‘ಬ್ರಹ್ಮಾಸ್ತ್ರ’

ಸಂಪಾದಕೀಯ
Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ
ಭಾರತದಲ್ಲಿ ಕ್ರಿಕೆಟ್‌ ಆಡಳಿತದ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸರಿಯಾದ ದಿಕ್ಕಿನಲ್ಲಿಯೇ ಹೆಜ್ಜೆ ಹಾಕುತ್ತಿದೆ. ಲೋಧಾ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹಿಂದೇಟು ಹಾಕಿದ್ದನ್ನು ಮನಗಂಡ ಸುಪ್ರೀಂ ಕೋರ್ಟ್‌, ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ಆ ಸ್ಥಾನಗಳಿಂದ ಕಿತ್ತು ಹಾಕಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐ ತಾನು ನಡೆದದ್ದೇ ದಾರಿ ಎಂಬಂತಿದೆ.
 
ಸರ್ಕಾರದಿಂದ ನಯಾಪೈಸೆ ಪಡೆಯುತ್ತಿಲ್ಲವಾದ ಕಾರಣ  ಈ ದೇಶದ ನಿಯಮಗಳು ತನಗೆ ಅನ್ವಯಿಸುವುದಿಲ್ಲ ಎಂಬಂತೆ ಬಿಸಿಸಿಐ ನಡೆದುಕೊಂಡಿತ್ತು. ತಾನು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ ಎಂದೂ ಎಂಟು ತಿಂಗಳ ಹಿಂದೆ  ನ್ಯಾಯಾಲಯದಲ್ಲಿ ಬಿಸಿಸಿಐ ವಾದ ಮಂಡಿಸಿತ್ತು. ಆಗ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಐಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಸೇರಿದಂತೆ ಹತ್ತು ಹಲವು ಹಗರಣಗಳಿಂದಾಗಿ ಈ ದೇಶದಲ್ಲಿ ಕ್ರಿಕೆಟ್‌ ಪಂದ್ಯಗಳು ಜನರ ವಿಶ್ವಾಸ ಕಳೆದುಕೊಳ್ಳುವಂತಹ ಸ್ಥಿತಿ ತಲುಪಿತ್ತು. ಆಗ ಈ ಕ್ರೀಡೆಯ ಆಡಳಿತ ವ್ಯವಸ್ಥೆಯನ್ನು ಶುದ್ಧೀಕರಿಸುವ ಉದ್ದೇಶದಿಂದ  ಆರ್‌.ಎಂ.ಲೋಧಾ ನೇತೃತ್ವದಲ್ಲಿ ಸಮಿತಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಿತ್ತು. ಪಾರದರ್ಶಕ ಆಡಳಿತ, ದಕ್ಷತೆ, ಉತ್ತರದಾಯಿತ್ವ ತರುವಲ್ಲಿ ಬಿಸಿಸಿಐ ನಿಯಮಗಳು ವೈಫಲ್ಯ ಕಂಡಿವೆ ಎಂದು ಆ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು. ಆಡಳಿತದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಆ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿತ್ತು. ಆಗ ಸುಪ್ರೀಂ ಕೋರ್ಟ್‌ ಬಹುತೇಕ ಶಿಫಾರಸುಗಳನ್ನು ಒಪ್ಪಿಕೊಂಡು ಅವುಗಳನ್ನು ಅನುಷ್ಠಾನಗೊಳಿಸುವಂತೆ ಬಿಸಿಸಿಐಗೆ ಆದೇಶಿಸಿತ್ತು.  
 
ಕ್ರಿಕೆಟ್‌ ಆಡಳಿತದಲ್ಲಿ ಒಂಬತ್ತು ವರ್ಷ ಇದ್ದವರು  ಮತ್ತೆ ಪದಾಧಿಕಾರಿಯಾಗುವಂತಿಲ್ಲ, ಒಂದು ರಾಜ್ಯಕ್ಕೆ ಒಂದೇ ಮತದ ಹಕ್ಕು, ಎಪ್ಪತ್ತು ವರ್ಷ ವಯಸ್ಸು ಮೀರಿದವರು ಪದಾಧಿಕಾರಿಗಳಾಗುವಂತಿಲ್ಲ ಎಂಬುದೂ ಸೇರಿದಂತೆ  ಹಲವು  ಶಿಫಾರಸುಗಳನ್ನು ಜಾರಿಗೆ ತರಲು ಬಿಸಿಸಿಐ ಹಿಂದೇಟು ಹಾಕಿತು. ಲೋಧಾ ಸಮಿತಿಯ ಜತೆಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರನ್ನು ಕಾನೂನು ಸಲಹೆಗಾರರನ್ನಾಗಿ ಬಿಸಿಸಿಐ ನೇಮಕ ಮಾಡಿಕೊಂಡಿತು. ಕಟ್ಜು ಅವರಂತೂ ಬಿಸಿಸಿಐಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪು  ಸರಿಯೇ ಇಲ್ಲ ಎಂದರು. ಅವರ ಸಲಹೆಯಂತೆ  ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನೂ ಕೋರ್ಟ್‌ಗೆ ಬಿಸಿಸಿಐ ಸಲ್ಲಿಸಿತು. ಕೋರ್ಟ್‌ ಸಾಕಷ್ಟು ತಾಳ್ಮೆಯಿಂದ ನಡೆದುಕೊಂಡಿತು. ಬಿಸಿಸಿಐಗೆ ಕಾಲಾವಕಾಶ ನೀಡಿತು. ಇದೀಗ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಕಿತ್ತು ಹಾಕುವ ಮೂಲಕ ‘ಬ್ರಹ್ಮಾಸ್ತ್ರ’ವನ್ನೇ ಪ್ರಯೋಗಿಸಿದೆ.
 
ಬಿಸಿಸಿಐ ಆಡಳಿತ ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿದ್ದಾಗ ಅದನ್ನು ಶುದ್ಧೀಕರಿಸಲು ಕೋರ್ಟ್‌ ತೆಗೆದುಕೊಂಡ ನಿಲುವು ಇತರ ಕ್ರೀಡಾ ಸಂಸ್ಥೆಗಳಿಗೂ ಒಂದು ಪಾಠ. ಲೋಧಾ ಸಮಿತಿಯ ವರದಿಯ ಶಿಫಾರಸುಗಳು ಪೂರ್ಣವಾಗಿ ಜಾರಿಗೊಂಡರೆ ಈ ದೇಶದಲ್ಲಿ ಕ್ರಿಕೆಟ್‌  ಹೊಸ ಆಯಾಮ ಪಡೆದುಕೊಳ್ಳುವುದು  ಖಚಿತ. ಆದರೆ ಬಿಸಿಸಿಐಯ ಪಟ್ಟಭದ್ರ ಹಿತಾಸಕ್ತಿಗಳಿಗೆ ಇದು ಇಷ್ಟವಾಗುತ್ತಿಲ್ಲ.
 
‘ಎಲ್ಲಾ ಶಿಫಾರಸುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಮೊಂಡುತನವನ್ನು ಬಿಸಿಸಿಐ ಪ್ರದರ್ಶಿಸುತ್ತಲೇ ಬಂದಿದೆ. ಈ ನಡುವೆ ಕ್ರಿಕೆಟ್‌ ಮಂಡಳಿಯ ಹಣಕಾಸಿನ ಚಟುವಟಿಕೆಯ ಮೇಲೆ ಸುಪ್ರೀಂ ಕೋರ್ಟ್‌ ಕಡಿವಾಣ ಹಾಕಿತು. ಮರುಪರಿಶೀಲನಾ ಅರ್ಜಿಯೂ ವಜಾಗೊಂಡಿತು. ನ್ಯಾಯಾಂಗ ನಿಂದನೆಗಾಗಿ ಜೈಲಿಗೆ ಕಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಕೋರ್ಟ್‌ ನೀಡಿತು. ಇದಾವುದಕ್ಕೂ ಬಿಸಿಸಿಐ ಬಗ್ಗಲಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ನೇತೃತ್ವದ ಪೀಠ ಅನುರಾಗ್‌ ಠಾಕೂರ್‌, ಅಜಯ್‌ ಶಿರ್ಕೆ ಅವರನ್ನೇ ಕಿತ್ತು ಹಾಕಿದೆ. ವ್ಯಕ್ತಿ ಅಥವಾ ಸಂಸ್ಥೆ ಎಷ್ಟೇ ಪ್ರಭಾವಿಯಾದರೂ ಈ ದೇಶದ ಕಾನೂನು ಎಲ್ಲರಿಗಿಂತ ಶಕ್ತಿಶಾಲಿ ಎಂಬುದನ್ನು ಈ ಆದೇಶ ಸಾಬೀತು ಪಡಿಸಿದೆ. ಲೋಧಾ ಸಮಿತಿಯ ಶಿಫಾರಸುಗಳು ಬಿಸಿಸಿಐ ವ್ಯಾಪ್ತಿಗೆ ಒಳಪಡುವ ಎಲ್ಲಾ ರಾಜ್ಯ ಸಂಸ್ಥೆಗಳಿಗೂ ಅನ್ವಯಿಸುತ್ತವೆ. ಈ ಆದೇಶ ಹೊರ ಬಿದ್ದ ತಕ್ಷಣ ಆಂಧ್ರಪ್ರದೇಶ ಕ್ರಿಕೆಟ್‌ ಸಂಸ್ಥೆಯು ಹೇಳಿಕೆಯೊಂದನ್ನು ನೀಡಿ ‘ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರಲು ಬದ್ಧ’ ಎಂದಿದೆ.
 
ಮುಂದಿನ ದಿನಗಳಲ್ಲಿ ಬಿಸಿಸಿಐ ಮತ್ತು ಎಲ್ಲಾ ರಾಜ್ಯ ಸಂಸ್ಥೆಗಳೂ ಆಂಧ್ರಪ್ರದೇಶ ಕ್ರಿಕೆಟ್‌ ಸಂಸ್ಥೆಯ ಹಾದಿಯಲ್ಲೇ ನಡೆಯಲಿರುವುದು ಸ್ಪಷ್ಟ. ಇಬ್ಬರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಬಿಸಿಸಿಐಗೆ ಹೊಸ ಪದಾಧಿಕಾರಿಗಳ ನೇಮಕ ನಡೆಯಲಿದೆ. ಶುದ್ಧೀಕರಣ ಪ್ರಕ್ರಿಯೆಯ ನಂತರ ಈ ದೇಶದಲ್ಲಿ ಕ್ರಿಕೆಟ್‌ ಆಡಳಿತ ಸಂಪೂರ್ಣ ಸುಧಾರಣೆಯಾಗಲಿದೆ ಎಂಬ ಆಶಯವನ್ನು ಈ ದೇಶದ ಕ್ರಿಕೆಟ್‌ ಪ್ರೇಮಿಗಳೆಲ್ಲರೂ  ಇರಿಸಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಇಷ್ಟಕ್ಕೇ ನಿಲ್ಲಬಾರದು. ಈ ದೇಶದ ಇತರ ಕ್ರೀಡೆಗಳ ಆಡಳಿತ ಸಂಸ್ಥೆಗಳೂ ಸ್ವಯಂ ಪ್ರೇರಣೆಯಿಂದ ಈ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಅದು ನಡೆಯದಿದ್ದರೆ ಸುಪ್ರೀಂ ಕೋರ್ಟ್‌ ಅತ್ತಲೂ ಗಮನಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT