ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹಾರಿಸಿದರೂ ಜಪ್ಪೆನ್ನುತ್ತಿಲ್ಲ !

ಎರಡು ದಿನಗಳಾದರೂ ಆನೇಕಲ್ ಬಳಿ ಇನ್ನೂ ಬೀಡುಬಿಟ್ಟ ಕಾಡಾನೆಗಳು
Last Updated 3 ಜನವರಿ 2017, 19:43 IST
ಅಕ್ಷರ ಗಾತ್ರ

ಆನೇಕಲ್‌: ಆಹಾರ ಹುಡುಕುತ್ತಾ ಕಾಡಿನಿಂದ ಬಂದು ಆನೇಕಲ್ ಸಮೀಪ ಬೀಡುಬಿಟ್ಟಿರುವ ಎರಡು ಕಾಡಾನೆಗಳು ಎರಡು ದಿನ ಕಳೆದರೂ ನೀಲಗಿರಿ ತೋಪಿನಿಂದ ಹೊರಬರದೇ ಬೀಡುಬಿಟ್ಟಿರುವುದು ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.

ಭಾನುವಾರ ರಾತ್ರಿ ಹಿಂಡಿನಿಂದ ಬೇರೆಯಾಗಿ ಬಂದ ಒಂದು ಸಲಗ ಸೇರಿದಂತೆ ಎರಡು ಆನೆಗಳು ತಮಿಳುನಾಡಿನ ಕೊಮಾರನಹಳ್ಳಿಯಲ್ಲಿ ಬೀಡುಬಿಟ್ಟಿದ್ದವು. ಸೋಮವಾರ ರಾತ್ರಿ ಕೊಮಾರನಹಳ್ಳಿಯಲ್ಲಿ ಇದ್ದ ಆನೆಗಳು ಆನೇಕಲ್‌ ಸಮೀಪದ ಸಬ್‌ಮಂಗಲ, ಬಿದರಗೆರೆ, ಚನ್ನೇನಅಗ್ರಹಾರ, ಗುಡ್ಡನಹಳ್ಳಿ ಗ್ರಾಮಗಳಿಗೆ ಸೇರಿದ ನೀಲಗಿರಿ ತೋಪುಗಳಲ್ಲಿ ಅತ್ತಿಂದಿತ್ತ ಓಡಾಡುತ್ತಾ ಇಡೀ ದಿನ ಕಳೆದವು. ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ, ಬಂದೂಕಿನಿಂದ ಗುಂಡು ಹಾರಿಸಿ ಆನೆಗಳನ್ನು ಕಾಡಿನತ್ತ ಓಡಿಸಲು ಹರಸಾಹಸ ಮಾಡಿದರು. ಆದರೆ ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಜಮಾಯಿಸಿದ್ದರಿಂದ ತೋಪಿನಿಂದ ಹೊರಬರುವ ಆನೆಗಳು ಜನಜಂಗುಳಿಯನ್ನು ನೋಡುತ್ತಿದ್ದಂತೆ ಮರಳಿ ನೀಲಗಿರಿ ತೋಪು ಸೇರುತ್ತಿದ್ದವು.

ಆನೇಕಲ್‌ಗೆ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಬಿದರಗೆರೆಯ ಬಳಿ ನೀಲಗಿರಿ ತೋಪೊಂದರಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಓಡಿಸಲು ಬೆಳಿಗ್ಗೆ 7ರ ವೇಳೆಗೆ ಅರಣ್ಯ ಇಲಾಖೆಯ 45ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ತಂಡಗಳನ್ನು ಮಾಡಿಕೊಂಡು ಕಾರ್ಯಾಚರಣೆ ಪ್ರಾರಂಭಿಸಿದರು.

ಬಿದರಗೆರೆಯಿಂದ ಸಾಗಿದ ಆನೆಗಳು ಸಬ್‌ಮಂಗಲದ ಬಳಿ ಮುನಿರೆಡ್ಡಿ ಅವರ ಗ್ರೀನ್‌ಹೌಸ್ ಸಮೀಪದ ನೀಲಗಿರಿ ತೋಪಿನಲ್ಲಿ ಬಂದು ಸೇರಿದವು. ಗುಡ್ಡನಹಳ್ಳಿಯ ಕಡೆಯಿಂದ ಜನರು ತೋಪಿನ ಬಳಿ ಬಂದು ಜಮಾಯಿಸಿದ್ದರು. ಬಿದರಗೆರೆಯಿಂದ ಓಡಿಸುತ್ತಾ ಬಂದಾಗ ಜನರನ್ನು ಕಂಡ ಆನೆಗಳು ಮರಳಿ ನೀಲಗಿರಿ ತೋಪು ಸೇರಿದವು. ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿದಾಗ ಮರಳಿ ಬಿದರಗೆರೆ ಸೇರಿದವು. ಬೆಳಗಿನಿಂದ ಮಧ್ಯಾಹ್ನ ಮೂರು ಗಂಟೆಯಾದರೂ  ಅತ್ತಿಂದಿತ್ತ ಓಡಾಡುವುದೇ ನಡೆದಿತ್ತು.

ಸಂಜೆ 5ರ ಸುಮಾರಿಗೆ ಇನ್ನೇನು ಆನೆಗಳು ನೀಲಗಿರಿ ತೋಪಿನಿಂದ ಹೊರಬಂದವು ಎಂಬ ವೇಳೆಗೆ ಮತ್ತೆ ಮೊಂಡಾಟ ತೋರಿದ ಆನೆಗಳು ಚನ್ನೇನಅಗ್ರಹಾರದತ್ತ ಸಾಗಿದವು.

ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಆನೆಗಳನ್ನು ಹಿಂಬಾಲಿಸಿ ಸಾಗಿದರು. ಆನೆಗಳನ್ನು ಗೆರಟಿಗನಬೆಲೆ ಗೇಟ್‌ ಬಳಿ ರಸ್ತೆ ದಾಟಿಸಬೇಕು ಎಂದು ಯೋಜನೆ ರೂಪಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಎಂಬಿಐ ಇಟ್ಟಿಗೆ ಕಾರ್ಖಾನೆಯ ಬಳಿ ರಸ್ತೆ ದಾಟಿಸಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಅರಣ್ಯ ಇಲಾಖೆಯ ಯೋಜನೆಯನ್ನು ತಲೆಕೆಳಗಾಗಿಸಿದ ಆನೆಗಳು ಮತ್ತೆ ಹಿಂತಿರುಗಿ ರೈಲ್ವೇ ಹಳಿ ದಾಟಿ ಚನ್ನೇನಅಗ್ರಹಾರದ ಕೆರೆಯಲ್ಲಿ ಠಿಕಾಣಿ ಹೂಡಿದವು.

ಎರಡು ದಿನಗಳಿಂದ ಆನೇಕಲ್ ಸುತ್ತಮುತ್ತಲ ಗ್ರಾಮಗಳಾದ ಮುತ್ತಕಟ್ಟಿ, ಬಿದರಗೆರೆ, ಗೆರಟಿಗನಬೆಲೆ, ಗುಡ್ಡನಹಳ್ಳಿ, ಚನ್ನೇನಅಗ್ರಹಾರ, ಸಬ್‌ಮಂಗಲ, ತಮಿಳುನಾಡಿನ ಕೊಮಾರನಹಳ್ಳಿ ಗ್ರಾಮಗಳಿಗೆ ಸೇರಿದ ನೀಲಗಿರಿ ತೋಪುಗಳಲ್ಲಿ ಆನೆಗಳು ಸಂಚಾರ ನಡೆಸಿದ್ದರೂ    ಬೆಳೆಗೆ ಹಾನಿ ಮಾಡಿಲ್ಲ ಎಂದು ವಲಯ ಅರಣ್ಯಾಧಿಕಾರಿ ಅರುಣ್‌ ತಿಳಿಸಿದರು.

ಜನಗಳದ್ದೇ ಸಮಸ್ಯೆ
ಆನೇಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಆನೆಗಳನ್ನು ಓಡಿಸುವುದರ ಜೊತೆಗೆಜನರನ್ನು ಚದುರಿಸುವುದೂ ಸವಾಲಾಯಿತು.

ಜನಜಂಗುಳಿಯಿಂದಾಗಿ ಅರಣ್ಯ ಇಲಾಖೆಯ ಪ್ರಯತ್ನ ಯಶಸ್ವಿಯಾಗದೇ ಆನೆಗಳು ಬಿದರಗೆರೆಯಿಂದ ರಾತ್ರಿ 7ರ ವೇಳೆಗೆ ಚನ್ನೇನಅಗ್ರಹಾರದ ರೈಲು ಹಳಿಗಳನ್ನು ದಾಟಿ ಚನ್ನೇನಅಗ್ರಹಾರ ಕೆರೆಯಲ್ಲಿ ಬೀಡುಬಿಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT