ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಸ್‌ಪೆಕ್ಟರ್‌ ನಟನಾ ಪ್ರೀತಿ...

Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

ಗಿರೀಶ್‌ ಅರಕಲಗೂಡು ಎಂದಾಕ್ಷಣ ನೆನಪಿಗೆ ಬರುವುದು ಶುದ್ಧ ಕನ್ನಡ ಮಾತು. ಅರಳು ಹುರಿದಂತೆ ಮಾತನಾಡುವ ಗಿರೀಶ್‌, ಆ ಮಾತಿನ ಮೂಲಕವೇ ಗುರುತಿಸಿಕೊಂಡವರು. ಟಿ.ವಿ ನಿರೂಪಕ, ಡಬ್ಬಿಂಗ್ ಕಲಾವಿದ, ನಟನೆ ಹೀಗೆ ಬಹುಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬೆಟ್ಟದಳ್ಳಿಯ ಗಿರೀಶ್ ಅವರದ್ದು ಮೂಲತಃ ರೈತ ಕುಟುಂಬ.

ಹಳ್ಳಿ ಮಣ್ಣಿನೊಂದಿಗೆ ಆಡುತ್ತಲೇ ನಟನೆಯ ಕನಸನ್ನೂ ಚಿಗುರಿಸಿಕೊಂಡವರು ಅವರು. ತಮ್ಮ ಕಲೆ, ಬಾಲ್ಯ, ಕನಸುಗಳನ್ನು ಕಾಮನಬಿಲ್ಲುವಿನೊಂದಿಗೆ ಅವರು ಹಂಚಿಕೊಂಡಿದ್ದು ಹೀಗೆ... ನಮ್ಮದು ರೈತ ಕುಟುಂಬ. ನಮ್ಮ ತಂದೆಗೆ ನಾವು ಎಂಟು ಜನ ಮಕ್ಕಳು. ನಾನು ಕೊನೆಯವನು. ಪಿಯುಸಿವರೆಗೂ ಸರ್ಕಾರಿ ಶಾಲೆ, ಕಾಲೇಜುಗಳಲ್ಲೇ ಓದಿದೆ.

ನಮ್ಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆ ಬರೆದವರು 56 ಮಕ್ಕಳು. ಅದರಲ್ಲಿ ಪಾಸಾದವರು 6 ಮಂದಿ ಮಾತ್ರ. ಅದರಲ್ಲಿ ನಾನೂ ಒಬ್ಬ. ಪಾಸಾದವರಲ್ಲಿ ಐವರು ಹುಡುಗರು ನಗರದವರು. ನಾನು ಒಬ್ಬನೇ ಹಳ್ಳಿ ಹುಡುಗ.

ಚಿಕ್ಕವನಿದ್ದಾಗಲೇ ನಟನಾಗುವ ಕನಸು ನನ್ನಲ್ಲಿ ಇತ್ತು. ಆದರೆ ತಿರುಕನ ಕನಸು ಎಂದು ಎಲ್ಲರೂ ನಕ್ಕುಬಿಡುವ ಭಯವೂ ಒಳಗೊಳಗೇ ಇತ್ತು. ಪಿಯುಸಿ ಓದುವಾಗ ಅಪ್ಪ ತೀರಿಕೊಂಡರು. ನನಗೆ ವಿಜ್ಞಾನ ವಿಭಾಗಕ್ಕೆ ಸೇರುವ ಹುಚ್ಚು ಇತ್ತು. ಆದರೆ ಅಪ್ಪ ದುಡ್ಡಿಲ್ಲ ಎಂದು ಕಲಾ ವಿಭಾಗಕ್ಕೆ ಹಾಕಿದರು. ನಾನು ಹೇಗಾದರೂ ವಿಜ್ಞಾನ ವಿಭಾಗಕ್ಕೆ ಸೇರಲೇಬೇಕು ಎಂದು ಶುಲ್ಕ ವಿಚಾರಿಸಲು ಹೋದೆ. 

ಅಲ್ಲಿ ₹135 ಹೆಚ್ಚು ಕಟ್ಟಬೇಕು ಅಂದರು. ಅಪ್ಪ ಅಷ್ಟು ದುಡ್ಡು ಇಲ್ಲ ಎಂದುಬಿಟ್ಟರು. ಅಪ್ಪ ಅಂದಿನ ಕಾಲದವರು. ಅವರಿಗೆ ಆ ದಿನಗಳ ಅಗತ್ಯತೆಯಂತೆ ಹೆಚ್ಚೆಚ್ಚು ರಾಗಿ, ಗೋಧಿ ಬೆಳೆಯಬೇಕು. ಅಕ್ಕಪಕ್ಕದವರಿಗಿಂತ ಹೆಚ್ಚು ಬೆಳೆಯುವ ಹುಮ್ಮಸ್ಸು ಅವರಿಗೆ. ಸಮಯ ಉಳಿದರೆ ಓದಬೇಕು ಅನ್ನುತ್ತಿದ್ದರು.
ನಮ್ಮ ಮನೆಯಲ್ಲಿ 40 ಹಸುಗಳು, 8 ಜೆರ್ಸಿ ಆಕಳು. 4 ಎಮ್ಮೆ. ಬೆಳಿಗ್ಗೆ ಎದ್ದು ಸೆಗಣಿ ಬಾಚಿ ಆಮೇಲೆ ಶಾಲೆಗೆ ಹೋಗಬೇಕು. ಸಂಜೆ 5 ಗಂಟೆಗೆ ಸೀದಾ ಕೊಟ್ಟಿಗೆಗೆ ಹೋಗಬೇಕಿತ್ತು.

ಮೈಸೂರಿನ ಕಾಲೇಜೊಂದರಲ್ಲಿ ಬಿ.ಕಾಂ ಪದವಿಗೆ ಸೇರಿಕೊಂಡೆ. ಮಠದಲ್ಲಿದ್ದುಕೊಂಡು ಓದಿದೆ. ಯಾವುದರಲ್ಲೂ ಹಿಂದೆ ಉಳಿಯಬಾರದು ಎಂದು ಟೈಪಿಂಗ್‌ ತರಗತಿಗೂ ಸೇರಿದೆ. ಎಂಸಿಎ ಮಾಡೋ ಆಸೆ ಇತ್ತು. ಆದರೆ ಆಗಲಿಲ್ಲ.  ಎಂ.ಕಾಂಗೆ ಸೀಟ್ ಸಿಕ್ಕಿತು. ಅದಕ್ಕೆ ಸೇರಿಕೊಂಡೆ. ಐದಾರು ವರ್ಷ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಟ್ಯೂಷನ್‌ ಮಾಡಿ ಹೇಗೋ ಜೀವನ ಸಾಗಿಸಿದೆ.

ಇಲ್ಲೇ ಇದ್ದರೆ ಹೀಗೇ ಇದ್ದುಬಿಡುತ್ತೇನೆ. ಏನಾದರೂ ಸಾಧಿಸಬೇಕು ಎಂದು ಕನಸು ಕಾಣುತ್ತಿದ್ದೆ. ಸಮಾಜಸೇವೆ ಮಾಡುವ ಆಸೆ ಇತ್ತು. ನನ್ನ ಸ್ನೇಹಿತರು ಬುದ್ಧಿ ಹೇಳಿದರು. ಯಾವುದಾದರೂ ಉನ್ನತ ಹುದ್ದೆಯಲ್ಲಿದ್ದರೆ ಸೇವೆ ಮಾಡಬಹುದು, ಇಲ್ಲದಿದ್ದರೆ ಸಾಧ್ಯ ಇಲ್ಲ ಎಂದರು. ಆಗ ಕೆಎಎಸ್‌ ಮಾಡುವ ಕನಸು ಕಟ್ಟಿದೆ.

ಬೆಂಗಳೂರಿಗೆ ಬಂದು ಕೋಚಿಂಗ್‌ ಸೆಂಟರ್‌ ಸೇರಿಕೊಂಡೆ. ಅಲ್ಲಿ ಸಣ್ಣ ಕೊಠಡಿಯಲ್ಲಿ ಎಂಟು ಜನರು ಇದ್ದರು. ನಾನು ಹೊರಗಡೆ ಮಲಗುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸ ಮಾಡಿಕೊಂಡು ಓದಿದೆ. ಕೆಎಎಸ್‌ ಸಂದರ್ಶನಕ್ಕೆ ಆಹ್ವಾನ ಬಂತು. ಆದರೆ ಏನೂ ಆಗಲಿಲ್ಲ. ಕೆಪಿಎಸ್‌ಸಿಯಲ್ಲಿ ಸಹಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಸೆಲೆಕ್ಷನ್‌ ಆಯಿತು.

ಅರಕಲಗೂಡಿನಲ್ಲಿ ಉಪನ್ಯಾಸಕನಾಗಿದ್ದ ಸಂದರ್ಭದಲ್ಲೇ ಮೊದಲ ಬಾರಿಗೆ ‘ಕುಂಕುಮ ಭಾಗ್ಯ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಮೂಲಕ ಕಿರುತೆರೆಗೆ ಬಂದೆ. ಒಂದು ಕಂಪೆನಿಯಲ್ಲಿ ಸೆಕ್ರೆಟರಿ ಆಗಿ ಪಾತ್ರ ನಿರ್ವಹಿಸಬೇಕಿತ್ತು. ಮೊದಲ ನಟನೆ ಖುಷಿ ಕೊಟ್ಟಿತು. ಆ ನಂತರ ‘ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಅಲ್ಲಿ ವರದಿಗಾರನ ಪಾತ್ರ ನಿರ್ವಹಿಸಿದೆ. ನಿಜಜೀವನದಲ್ಲಿ ವೈದ್ಯನಾಗಲಿಲ್ಲ. ಆದರೆ ‘ವಾತ್ಸಲ್ಯ’ ಧಾರಾವಾಹಿಯಲ್ಲಿ ಡಾಕ್ಟರ್‌ ಪಾತ್ರ ನಿರ್ವಹಿಸಿದ ಸಂಭ್ರಮವೂ ನನ್ನದಾಯಿತು. ಉದಯ ಟಿ.ವಿ.ಯಲ್ಲಿ ಬರುತ್ತಿದ್ದ ‘ಕಾದಂಬರಿ’ಯಲ್ಲಿಯೂ ಒಂದು ಚಿಕ್ಕ ಪಾತ್ರ ಮಾಡಿದೆ.

‘ಪಾಪ ಪಾಂಡು’, ‘ಸಾತು ಪಾತು’ದಲ್ಲೂ ಅಭಿನಯಿಸಿದೆ. ಈ ನಡುವೆ ನನಗೆ ವಿ.ಮನೋಹರ್‌ ಅವರ ಪರಿಚಯ ಆಯಿತು. ಅಭಿನಯಕ್ಕಿಂತ ಧ್ವನಿಯ ಮೇಲೆ ಕೆಲಸ ಮಾಡಿ ಎಂದು ಸಲಹೆ ನೀಡಿದರು. ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಂದರು. ಅವರು ನಿಜವಾಗಿ ನನ್ನ ಜೀವನದ ದಿಕ್ಕು ಬದಲಿಸಿದರು.

ಸಮಯ ಸಿಕ್ಕಾಗ ಸಾಕ್ಷ್ಯಚಿತ್ರಗಳಿಗೆ ಧ್ವನಿ ಕೊಡಲು ಪ್ರಾರಂಭಿಸಿದೆ. ಅಭಿನಯ ಕಡಿಮೆ ಮಾಡಿದೆ. ಸಕಲೇಶಪುರದಲ್ಲಿ ಇನ್ಸ್‌ಪೆಕ್ಟರ್ ಕೆಲಸದಲ್ಲಿ ಬ್ಯುಸಿ ಆದೆ. ಮೂರು ವರ್ಷ ಅಲ್ಲಿ ಕೆಲಸ ಮಾಡಿದೆ. ಬಳಿಕ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡೆ. ಎಂ.ಫಿಲ್ ಮಾಡುವ ಆಸೆ ಇತ್ತು. ಇಲ್ಲಿ ಬಂದ ಮೇಲೆ ಅದನ್ನೂ ಮುಂದುವರಿಸಿದೆ. ಸಿನಿಮಾ, ಧಾರಾವಾಹಿಗಳಲ್ಲಿಯೂ ಅವಕಾಶ ಇತ್ತು. ಆದರೆ ಇಲಾಖೆಯ ಕೆಲಸಗಳ ಮಧ್ಯೆ ಅಭಿನಯಕ್ಕೆ ಸಮಯ ಸಿಗಲಿಲ್ಲ. ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಒಬ್ಬರು ಚಂದನ ಟಿ.ವಿ ಲೋಗೊವನ್ನು ಡಿಪಿಯಲ್ಲಿ ಹಾಕಿಕೊಂಡಿದ್ದರು. ಅವರ  ಪರಿಚಯ ಆಯಿತು. ಅವರನ್ನು ವಿಚಾರಿಸಿದಾಗ ಚಂದನದಲ್ಲಿ ಆಡಿಷನ್ ಇರುವ ಬಗ್ಗೆ ಹೇಳಿದರು.

ಚಂದನ ವಾಹಿನಿಯಲ್ಲಿ ಪ್ರಕಾಶ್‌ ಅವರು ಕಾರ್ಯಕ್ರಮ ನಿರ್ವಾಹಕರಾಗಿದ್ದರು. ಅವರು ಮೊದಲು ನನಗೆ ಅವಕಾಶ ಕೊಟ್ಟರು. ನನ್ನ ಧ್ವನಿ ಕೇಳಿ ಖುಷಿಪಟ್ಟರು. ನಾನು ಸಣ್ಣವನಿದ್ದಾಗ ವೇದಿಕೆ ಮೇಲೆ ಹೋಗೋದಕ್ಕೇ ಭಯ ಪಡುತ್ತಿದ್ದೆ. ನನ್ನದು ದೊಡ್ಡ ಧ್ವನಿ ಅದಕ್ಕೆ ಎಲ್ಲರೂ ನಗಬಹುದು ಎಂದು ಅಂಜುತ್ತಿದ್ದೆ. ದೂರದಲ್ಲಿದ್ದ ಯಾರನ್ನಾದರೂ ಕರೆಯಬೇಕಾದರೆ ನೇರವಾಗಿ ನಾನು ಅವರ ಹೆಸರನ್ನು ಕೂಗುತ್ತಿರಲಿಲ್ಲ. ಪಕ್ಕದವರಿಗೆ ಹೇಳಿ ಕರೆಯುತ್ತಿದ್ದೆ. ಹೀಗಿದ್ದವನು ನಿರೂಪಕನಾಗಿದ್ದು ಕನಸೇ ಸರಿ.

ಇಷ್ಟೆಲ್ಲಾ ಆದರೂ ನನ್ನ ಬಗ್ಗೆ ನನಗೆ ನಂಬಿಕೆ ಇರಲಿಲ್ಲ. ಬೇರೆ ಬೇರೆ ಧ್ವನಿ ಮಾಡಿ ಸ್ನೇಹಿತರಿಗೆ ಕಳಿಸಿದೆ. ಅವರು ಚೆನ್ನಾಗಿದೆ ಎಂದು ಹೊಗಳಿದ ಮೇಲೆ ಧೈರ್ಯ ಬಂತು. ನಾನೂ ನಿರೂಪಕ ಆಗಬಹುದು ಎಂದು ನಂಬಿದೆ. 2014ರ ನವೆಂಬರ್‌ನಲ್ಲಿ ದೂರದರ್ಶನದಲ್ಲಿ ಮೊದಲ ಎಪಿಸೋಡ್‌ ಮಾಡಿದೆ.
‘ಬೆಳಗು’ ನಾನು ಮೊದಲು ಟಿ.ವಿ ಪರದೆ ಮೇಲೆ ಕಾಣಿಸಿಕೊಂಡ ಕಾರ್ಯಕ್ರಮ.

ಮೂರನೇ ಎಪಿಸೋಡ್‌ಗೆ ನನಗೆ ಲೈವ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. ಸಾಮಾನ್ಯವಾಗಿ ಇಲ್ಲಿ ಯಾರಿಗೂ ಆರಂಭದಲ್ಲೇ ನೇರ ಕಾರ್ಯಕ್ರಮ ಕೊಡುವುದಿಲ್ಲ. ಕಲಿಯುವವರೆಗೂ ಒಂದು ವರ್ಷ ರೆಕಾರ್ಡಿಂಗ್ ಕಾರ್ಯಕ್ರಮಗಳನ್ನು ಮಾಡಬೇಕು. ಆದರೆ ನನಗೆ ಮೂರನೇ ಕಂತಿಗೆ ‘ಹಲೋ ಗೆಳೆಯರೆ ನೇರ ಫೋನ್‌ ಇನ್‌ ಕಾರ್ಯಕ್ರಮ’ವನ್ನು ಕೊಟ್ಟರು. ಇದು ನನ್ನ ಅದೃಷ್ಟವೇ ಸರಿ.

ಎರಡು ವರ್ಷದಲ್ಲಿ 90 ಕಾರ್ಯಕ್ರಮಗಳನ್ನು ಮಾಡಿದ್ದೇನಿ. ಆದರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಯುವದರ್ಶನ, ಬೆಳಗು, ಜೀವನ ದರ್ಶನ, ಹಲೋ ಗೆಳೆಯರೆ ನೇರ ಫೋನ್‌ ಇನ್‌ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಸಿನಿಮಾ ತಾರೆಗಳು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಸಂಗೀತ ಕ್ಷೇತ್ರದ ಗಣ್ಯರನ್ನು ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿದೆ ಎಂಬ ತೃಪ್ತಿಯಿದೆ.

ತಿಂಗಳಿಗೆ 6 ರಿಂದ 7 ಕಾರ್ಯಕ್ರಮಗಳನ್ನು ಮಾಡಬಹುದು.  ಬೆಳಿಗ್ಗೆ 8 ಗಂಟೆಗೆ ಲೈವ್‌ ಇದ್ದರೆ, ಅದನ್ನು ಮುಗಿಸಿ ಕಚೇರಿ ಕೆಲಸ ಮಾಡುತ್ತೇನೆ. ಸಹಕಾರಿ ಸಪ್ತಾಹ, ಪುಸ್ತಕ ಬಿಡುಗಡೆ, ಬೇರೆ ಬೇರೆ ಕಾರ್ಯಕ್ರಮಗಳಲ್ಲೂ ನಿರೂಪಣೆ ಮಾಡುತ್ತೇನೆ. ನಮ್ಮ ಇಲಾಖೆಯಲ್ಲೂ ಉತ್ತಮ ಕೆಲಸಗಾರ ಎಂದು ಗುರುತಿಸಿಕೊಂಡಿರುವುದರಿಂದ ಆ ಕಡೆ ಹೆಚ್ಚು ಗಮನ ಕೊಡಲೇಬೇಕು.

ಹೆಸರಿಡದ ಎರಡು ಹಾರರ್ ಸಿನಿಮಾದಲ್ಲಿ ಡಬ್ಬಿಂಗ್ ಮಾಡಿದೀನಿ. ವಿ. ನಾಗೇಂದ್ರ ಪ್ರಸಾದ್‌ ಅವರ ಸಿನಿಮಾದಲ್ಲಿ ಸಣ್ಣ ಪಾತ್ರ ಕೂಡ ಮಾಡುತ್ತಿದ್ದೇನೆ. ಆರಂಭದಲ್ಲಿ ಸಂಗೀತ ಕ್ಷೇತ್ರದ ಗಣ್ಯರನ್ನು ಸಂದರ್ಶನ ಮಾಡುವಾಗ ಒಳ್ಳೆಯ ಪ್ರಶ್ನೆಗಳನ್ನು ಕೇಳಲು ಆಗುತ್ತಿರಲಿಲ್ಲ. ಅದಕ್ಕೆ ಸಂಗೀತ ತರಗತಿಗೂ ಸೇರಿಕೊಂಡೆ. ಇದರಿಂದ ಜ್ಞಾನದ ಜತೆಗೆ ಏಕಾಗ್ರತೆಯೂ ಹೆಚ್ಚಿತು. ಮನೆಯಲ್ಲಿ ಸರಿಗಮಪ ಹೇಳೋದೆ ಒಂಥರಾ ಖುಷಿ ಕೊಡುತ್ತದೆ. ಕೆಎಎಸ್‌ ಮಾಡಿ ಸಮಾಜ ಸೇವೆ ಮಾಡುವುದೇ ನನ್ನ ಜೀವನದ ಬಹುಮುಖ್ಯ ಗುರಿ.ಹಲವು ಕ್ಷೇತ್ರಗಳ ಬಗ್ಗೆ ತಿಳಿದುಕೊಂಡು ಒಳ್ಳೆಯ ನಿರೂಪಕನಾಗಬೇಕು ಎಂಬ ಹಂಬಲ ಇಟ್ಟುಕೊಂಡಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT