ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚುನಾವಣೆಗಳು ಮೋದಿ ಏಳು ಬೀಳಿನ ಕೈಮರ

ಸುದ್ದಿ ವಿಶ್ಲೇಷಣೆ
Last Updated 5 ಜನವರಿ 2017, 12:58 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದಿನ ನೆರಳಲ್ಲಿ ನಡೆಯಲಿರುವ ಪಂಚರಾಜ್ಯಗಳ ಚುನಾವಣೆಗಳು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಮತ್ತಷ್ಟು ಒರೆಗೆ ಹಚ್ಚಲಿವೆ. ಹಾಲಿ ಉತ್ತರಪ್ರದೇಶದ ಸತ್ವಪರೀಕ್ಷೆಯ ನಂತರ ಇದೇ ವರ್ಷದ ಎರಡನೆಯ ಭಾಗದಲ್ಲಿ ಗುಜರಾತಿನ ಅಗ್ನಿಪರೀಕ್ಷೆ ಕೂಡ ಕಾದಿದೆ. ಮೋದಿಯವರ ಸರ್ಕಾರ ಮುಂಬರುವ ಮೇನಲ್ಲಿ ಮೂರನೇ ವರ್ಷಕ್ಕೆ ಕಾಲಿರಿಸಲಿದೆ. ಹೀಗಾಗಿ 2017 ಬಿಜೆಪಿ ಮತ್ತು ಮೋದಿ ಪಾಲಿಗೆ ‘ಮಾಡು ಇಲ್ಲವೇ ಮಡಿ’ ವರ್ಷವಾಗಿ ಪರಿಣಮಿಸಲಿದೆ.

ರಾಷ್ಟ್ರಮಟ್ಟದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿರುವ ಉತ್ತರಪ್ರದೇಶದ ಚುನಾವಣೆಗಳು ಸುರುಳಿ ಬಿಚ್ಚಿ ಹೊರಚೆಲ್ಲುವ ಫಲಿತಾಂಶಗಳನ್ನು ರಾಜಕೀಯ ವೀಕ್ಷಕರು ಕಣ್ಣಲ್ಲಿ ಕಣ್ಣಿಟ್ಟು ಕಾದು ನೋಡಲಿದ್ದಾರೆ. ತಮ್ಮ ಮಾತಿನ ಮೋಡಿಯಿಂದ ಜನಸಮೂಹಗಳನ್ನು ತಲೆದೂಗುವಂತೆ ಮಾಡತೊಡಗಿರುವ ಪ್ರಧಾನಿಯವರ ವರ್ಚಸ್ಸು ಇನ್ನಷ್ಟು ಹೊಳೆಯಲಿದೆಯೇ ಅಥವಾ ಇಳಿಜಾರಿನ ಹಾದಿ ಹಿಡಿಯುತ್ತದೆಯೇ ಎಂಬ ಅಂಶಕ್ಕೆ ಈ ಚುನಾವಣೆಗಳು ಹೆಚ್ಚು ಕಡಿಮೆ ಕೈಮರ ಆಗಲಿವೆ. 

ಈ ಫಲಿತಾಂಶ ರಾಷ್ಟ್ರ­ರಾಜ­ಕಾರಣವನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿ­ಸುವುದು ನಿಶ್ಚಿತ. ಈ ಚುನಾ­ವಣೆಗಳ ಫಲಿತಾಂಶಗಳು 2019ರ ಲೋಕಸಭಾ ಚುನಾವಣೆಗಳಲ್ಲಿ ರಾಜಕೀಯ ಶಕ್ತಿಗಳ ಮರು ಧ್ರುವೀಕರಣಕ್ಕೆ ಚಾಲನೆ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಮಾಯಾವತಿ ಅವರು 2007ರಲ್ಲಿ ಕಟ್ಟಿ ನಿಲ್ಲಿಸಿದ್ದ ಬ್ರಾಹ್ಮಣ-ದಲಿತ ಮಳೆಬಿಲ್ಲು ಮೈತ್ರಿಕೂಟ 2012ರಲ್ಲಿ ಮುರಿದು ಬಿದ್ದಿತ್ತು. ಆದರೆ ಬಹುಜನಸಮಾಜ ಪಾಟಿ೯ಯ ಮೂಲ ದಲಿತ ಮತಭಂಡಾರ ಮುಕ್ಕಾಗದೆ ಮಾಯಾ ಅವರ ಹಿಂದೆ ಘನವಾಗಿ ನಿಂತಿರುವುದನ್ನು ಫಲಿತಾಂಶಗಳು ನಿಚ್ಚಳವಾಗಿ ಸಾರಿದ್ದವು.  ಅಪ್ಪ ಮುಲಾಯಂ- ಮಗ ಅಖಿಲೇಶ್ ಯಾದವ್ ಜೋಡಿಯ ಗೆಲುವು ಕಣ್ಣು ಕುಕ್ಕಿತ್ತು. ನಿರೀಕ್ಷೆ ಮೀರಿದ ನಿಚ್ಚಳ ಜನಾದೇಶ ಸಮಾಜವಾದಿ ಪಾರ್ಟಿಗೆ ದಕ್ಕಿತ್ತು. ಬಿಜೆಪಿ ಮೂರನೆಯ ಸ್ಥಾನಕ್ಕೆ ತೃಪ್ತವಾಗಬೇಕಿತ್ತು.

ಆನಂತರ ಗಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಾದೇಶಿಕ ರಾಜಕಾರಣದ ಗಡಿ ದಾಟಿ ರಾಷ್ಟ್ರ ರಾಜಕಾರಣದ ದಿಡ್ಡಿ ಬಾಗಿಲುಗಳನ್ನು ಒಡೆದು ನುಗ್ಗಿ ಅಧಿಕಾರ ಹಿಡಿದು ಎದುರಾಳಿಗಳನ್ನು ದಂಗು ಬಡಿಸಿದ್ದ ಅಸಾಧಾರಣ ವಿದ್ಯಮಾನ ಜರುಗಿದೆ. ಈ ಬೆಳವಣಿಗೆಯಲ್ಲಿ ಉತ್ತರಪ್ರದೇಶದ ಪಾಲು ಬಹುದೊಡ್ಡದು. 80 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 71ನ್ನು ಗೆದ್ದು ಶೇ 81ರಷ್ಟು ಮತಗಳನ್ನು ಗಳಿಸಿತ್ತು. 

ತುರ್ತುಪರಿಸ್ಥಿತಿಯ ನಂತರ 1977ರಲ್ಲಿ ಜನತಾ ಪಾರ್ಟಿಗೆ ಇಂತಹ ಘನವಾದ ಗೆಲುವು ದಕ್ಕಿತ್ತು. ಆನಂತರದ ಮಹತ್ಸಾಧನೆ ಬಿಜೆಪಿಯದೇ. 71 ಲೋಕಸಭಾ ಸ್ಥಾನಗಳ ಗೆಲುವನ್ನು ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಿ ನೋಡಿದರೆ ಸಿಗುವ ಲೆಕ್ಕ 328. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 328ನ್ನು ಬಿಜೆಪಿ 2014ರಲ್ಲಿ ಗೆದ್ದುಕೊಂಡಿತ್ತು.

ಹಾಗೆಯೇ ಮೋದಿ ಅಲೆಯನ್ನು ಹಿಮ್ಮೆಟ್ಟಿಸಿ ಗೆದ್ದ ಪ್ರಾದೇಶಿಕ ತಲೆ­ಯಾಳುಗಳು ನಿತೀಶ್ ಕುಮಾರ್, ಲಾಲೂಪ್ರಸಾದ್ ಯಾದವ್, ಜಯ­ಲಲಿತಾ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್. ಜಯಲಲಿತಾ ಮತ್ತು ಮಮತಾ ಆಡಳಿತ ವಿರೋಧಿ ಅಲೆ ಎದುರಿಸಿ ಈಜಿ ದಡ ಸೇರಿದ್ದು ಕಡಿಮೆ ಸಾಧನೆಯೇನೂ ಅಲ್ಲ. ಅಸ್ಸಾಂ ಗೆಲುವು, ಕೇರಳದಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡ ಗಣನೀಯ ಸಾಧನೆ, ಪಶ್ಚಿಮ ಬಂಗಾಳದಲ್ಲಿ ತನ್ನ ಹಳೆಯ ಸಾಧನೆಯನ್ನು ಉಳಿಸಿಕೊಳ್ಳುವಲ್ಲೇ ಹೈರಾಣಾಗಿದ್ದ ಬಿಜೆಪಿಗೆ 2017ರ ಈ ಸುತ್ತು ಎಂತಹ ಅನಿರೀಕ್ಷಿತ ಸಿಹಿ- ಕಹಿಗಳನ್ನು ನೀಡೀತು ಎಂಬುದನ್ನು ಕಾದು ನೋಡಬೇಕಿದೆ.

ಹಿಂದುತ್ವದ ಹೆಸರಿನಲ್ಲಿ ಧ್ರುವೀಕರಣ ನಡೆಸಿ, ದಲಿತರು, ಹಿಂದುಳಿದವರು ಹಾಗೂ ಮೇಲ್ಜಾತಿಗಳನ್ನು ತನ್ನ ಪರವಾಗಿ ಒಟ್ಟುಗೂಡಿಸಿ, ಅಭಿವೃದ್ಧಿಯ ಮಂತ್ರವನ್ನೂ ಜಪಿಸುವ ಸಿದ್ಧಸೂತ್ರ ಬಿಜೆಪಿಯದ್ದು. ಈ ಬಾರಿಯೂ ಈ ಪಕ್ಷವನ್ನು ಇಂತಹುದೇ ಚರಿತ್ರಾರ್ಹ ಗೆಲುವಿನತ್ತ ನಡೆಸುತ್ತದೆಯೇ ಎಂಬುದು ಸದ್ಯದಲ್ಲೇ ವೇದ್ಯವಾಗಲಿದೆ.

2015ರಲ್ಲಿ ಬಿಹಾರ ಮತ್ತು ದೆಹಲಿಯಲ್ಲಿ ಸೋಲಿನ ಮುಖಭಂಗ ಎದುರಿಸಿದ ನಂತರ 2016ರಲ್ಲಿ ಅಸ್ಸಾಂ ಗೆಲುವು, ಕೇರಳದ ಮತಗಳಿಕೆ ಪ್ರಮಾಣದಿಂದಾಗಿ ಮುದುಡಿದ್ದ ಕಮಲ ಮತ್ತೆ ಕಳೆಗಟ್ಟಿತ್ತು. ಆದರೆ ತನ್ನ ಹೆಮ್ಮೆಯ ಭುಜಕೀರ್ತಿಯಂತಿರುವ ಗುಜರಾತಿನಲ್ಲಿ ಪಂಚಾಯಿತಿ ಚುನಾವಣೆಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಬೇಕಾಗಿ ಬಂದಿತು. 31 ಜಿಲ್ಲಾ ಪಂಚಾಯಿತಿಗಳಲ್ಲಿ ಗೆದ್ದದ್ದು ಎಂಟು ಮಾತ್ರ.

ಕಳೆದ ಸಲ ಪಂಜಾಬಿನಲ್ಲಿ ಆಡಳಿತ ವಿರೋಧಿ ಅಲೆಯನ್ನು ಯಶಸ್ವಿಯಾಗಿ ಮೆಟ್ಟಿನಿಂತಿದ್ದ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ ಈ ಬಾರಿ ಹೊಸ ಪಕ್ಷ ಆಮ್ ಆದ್ಮಿ ಪಾರ್ಟಿಯಿಂದ ಪ್ರಬಲ ಸವಾಲು ಎದುರಿಸಿದೆ. ಕೃಷಿ ಬಿಕ್ಕಟ್ಟು, ಮಾದಕದ್ರವ್ಯ ವ್ಯಸನದ ತಾಂಡವ ಮತ್ತು ಭ್ರಷ್ಟಾಚಾರದ ಆಪಾದನೆಗಳು ಈ ಸರ್ಕಾರವನ್ನು ಸುತ್ತುವರೆದಿವೆ. ವರ್ಷದೊಪ್ಪತ್ತಿನಿಂದ ಪಂಜಾಬಿನಲ್ಲಿ ಗಟ್ಟಿಯಾಗಿ ಹೆಜ್ಜೆ ಊರಿರುವ ಆಮ್ ಆದ್ಮಿ ಪಾರ್ಟಿಗೆ ತಡವಾಗಿ ಚಿಗಿತುಕೊಂಡಿರುವ ಕಾಂಗ್ರೆಸ್ ತುಸುಮಟ್ಟಿಗೆ ಚಿಂತೆಉಂಟು ಮಾಡಿರುವುದು ಹೌದು.

ಉತ್ತರಾಖಂಡದಲ್ಲಿ ಕಾಂಗ್ರೆಸ್ ಬಿಜೆಪಿ ಸಮಬಲದ ಹೋರಾಟ ನಡೆಸಿದ ಅಧಿಕಾರದ ತೂಗುಯ್ಯಾಲೆ ಅಂತ್ಯ­ಗೊಂಡಿದೆ. ಕೂದಲೆಳೆಯ ಅಂತರದಿಂದ ಅಧಿಕಾರ ಹಿಡಿದು ಅದನ್ನು ಕಳೆದು­ಕೊಂಡು ಪುನಃ ನ್ಯಾಯಾಲಯದ ನೆರವಿನಿಂದ ಪ್ರತಿಷ್ಠಾಪಿತಗೊಂಡ ಕಾಂಗ್ರೆಸ್ ಮತ್ತೆ ಸರ್ಕಾರ ಸ್ಥಾಪಿಸುವುದು ಅನುಮಾನ.

ಗಣಿ ಹಗರಣಗಳಿಂದ ಗೋವಾದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮನೋಹರ ಪರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದಾರಿ ಮಾಡಿತ್ತು. ಪರಿಕ್ಕರ್ ಕೇಂದ್ರ ಸಚಿವರಾದ ನಂತರ ಆಡಳಿತ ಶಿಥಿಲಗೊಂಡು ಅವೇ ಗಣಿ ಹಗರಣಗಳು ಪಾರ್ಸೇಕರ್ ಸರ್ಕಾರಕ್ಕೆ ಉರುಳಾಗಿವೆ. ಇಲ್ಲಿಯೂ ಆಮ್ ಆದ್ಮಿ ಪಾರ್ಟಿ ಬಲಿಷ್ಠ ಸಂಘಟನೆ ಕಟ್ಟಿ ಸೆಡ್ಡು ಹೊಡೆದಿದೆ.

ಮಣಿಪುರದಲ್ಲಿ ಸತತ ಮೂರು ಅವಧಿ ಆಡಳಿತ ನಡೆಸಿದೆ ಐಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ. ಅಸ್ಸಾಂ ಗೆಲುವಿನ ನಂತರ ಈಶಾನ್ಯ ಭಾರತದಲ್ಲಿ ತಲೆಯೆತ್ತಿರುವ ಬಿಜೆಪಿ ಮಣಿಪುರವನ್ನು ವಶಪಡಿಸಿಕೊಳ್ಳುವ ತಂತ್ರಗಳನ್ನು ಹೆಣೆದು ಸಿದ್ಧಗೊಳಿಸಿದೆ. ಈ ನಡುವೆ ಸೇನಾ ಅಧಿಕಾರಗಳ ದುರುಪಯೋಗವನ್ನು ವಿರೋಧಿಸಿ ಉಪವಾಸ ಆಂದೋಲನದ ದಾಖಲೆ ಸ್ಥಾಪಿಸಿರುವ ಇರೋಮ್‌ ಶರ್ಮಿಳಾ ಚುನಾವಣೆಯ ದಾರಿ ತುಳಿದಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT