ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.15ರಿಂದ ಆಮರಣಾಂತ ಸತ್ಯಾಗ್ರಹ

ಜ.30ರೊಳಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರೌಢ ಶಾಲಾ ಸಹ ಶಿಕ್ಷಕರ ಒತ್ತಾಯ
Last Updated 5 ಜನವರಿ 2017, 7:24 IST
ಅಕ್ಷರ ಗಾತ್ರ

ಕೋಲಾರ: ‘ಪ್ರೌಢಶಾಲಾ ಸಹ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಂಗಳೂರಿನಲ್ಲಿ ಫೆ.15ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ’ ಎಂದು ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಮ್ಮೇಳನ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರೌಢ ಶಾಲಾ ಸಹ ಶಿಕ್ಷಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಜ.30ರೊಳಗೆ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸುತ್ತೇವೆ ಎಂದರು.

ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ ಅವರು ಸಹ ಶಿಕ್ಷಕರಿಗೆ ತತ್ಸಮಾನ ವೃಂದಕ್ಕೆ ವಿಶೇಷ ವಾರ್ಷಿಕ ಬಡ್ತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ವಿಷಯವಾರು ಶಿಕ್ಷಕರಿಗೆ ಮಾತ್ರ ಬಡ್ತಿ ನೀಡಲಾಗಿದೆ. ಉಳಿದಂತೆ ದೈಹಿಕ ಶಿಕ್ಷಕರು, ಚಿತ್ರಕಲೆ ಶಿಕ್ಷಕರು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ತಾಂತ್ರಿಕ ಸಹಾಯಕರಿಗೆ ಬಡ್ತಿ ನೀಡಿಲ್ಲ ಎಂದು ದೂರಿದರು.

ಸಹ ಶಿಕ್ಷಕರ ಬೇಡಿಕೆಗಳ ಬಗ್ಗೆ ಚರ್ಚಿಸಲು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಜ.30ರಂದು ಬೃಹತ್‌ ಸಮಾವೇಶ ನಡೆಸಲಾಗುತ್ತಿದೆ. ಆ ಸಮಾವೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ವಿಧಾನ ಪರಿಷತ್‌ ಸದಸ್ಯರು ಭಾಗವಹಿಸಲಿದ್ದಾರೆ. ಸಚಿವರು ಈ ಸಮಾವೇಶದಲ್ಲೇ ಸಹ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು.

ಸ್ನಾತಕೋತ್ತರ ಪದವಿ ಪಡೆದಿರುವ ಎಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪಿಯುಸಿ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಬೇಕು. ಅನುದಾನಿತ ಪ್ರೌಢ ಶಾಲೆಗಳ ಸಹ ಶಿಕ್ಷಕರಿಗೂ ಕಾಲ್ಪನಿಕ ಬಡ್ತಿ ನೀಡಬೇಕು. ವಿಭಾಗ ಮಟ್ಟದಲ್ಲಿ ವರ್ಗಾವಣೆ ಪಡೆಯಲು ಅವಕಾಶ ಕೊಡಬೇಕು ಮತ್ತು ಎಲ್ಲಾ ಸಹ ಶಿಕ್ಷಕರಿಗೂ ಆರೋಗ್ಯ ಸೇವೆ ಕಲ್ಪಿಸಿ ಕೊಡಬೇಕು. 2008ರ ನಂತರ ನೇಮಕಗೊಂಡಿರುವ ಸಹ ಶಿಕ್ಷಕರಿಗೂ ತಿಂಗಳಿಗೆ ₹ 400 ವಿಶೇಷ ಭತ್ಯೆ ನೀಡಬೇಕು. ಜತೆಗೆ ಆರಂಭಿಕ ಮೂಲ ವೇತನವನ್ನು ₹ 17,650ರಿಂದ ₹ 19 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಅಮೂಲಾಗ್ರ ಬದಲಾವಣೆ: ಸಮಾಜವು ಶಿಕ್ಷಕ ಸಮುದಾಯದ ಮೇಲೆ ಹೆಚ್ಚು ಭರವಸೆ ಇಟ್ಟಿದೆ. ಈಗಿನ ಮಕ್ಕಳು ಶಿಕ್ಷಕರನ್ನೇ ಪ್ರಶ್ನೆ ಮಾಡುವ ಪರಿಸ್ಥಿತಿ ಇದೆ. ಹೀಗಾಗಿ ಶಿಕ್ಷಕರು ಜಾಗೃತರಾಗಿ ಹೆಚ್ಚು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಜತೆಗೆ ಶಿಕ್ಷಕರ ದೃಷ್ಟಿಕೋನ ಬದಲಾಗಬೇಕು. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ಇಡೀ ದೇಶದಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿಯಾಗಬೇಕು ಎಂದು ಸಲಹೆ ನೀಡಿದರು.

ಕೇವಲ ಶಿಕ್ಷಕರಿಂದ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಸಾಧ್ಯವಿಲ್ಲ. ಇದರಲ್ಲಿ ಪೋಷಕರು, ಸಮಾಜ ಹಾಗೂ ಸರ್ಕಾರದ ಪಾತ್ರವೂ ಇದೆ. ಮಕ್ಕಳಿಗೆ ಹೋಂವರ್ಕ್‌ ಕೊಡುವ ಅಧಿಕಾರವನ್ನೇ ಸರ್ಕಾರ ಕಸಿದುಕೊಂಡಿದೆ. ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಫಲಿತಾಂಶ ಸುಧಾರಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರ ಪ್ರಾಣಿ, ಪಕ್ಷಿ, ಜನಗಣತಿ, ಚುನಾವಣಾ ಕಾರ್ಯ ಸೇರಿದಂತೆ ಸಾಕಷ್ಟು ಕೆಲಸಗಳನ್ನು ಶಿಕ್ಷಕರ ಮೇಲೆ ಹೇರಿದೆ. ಇದರಿಂದ ಶಿಕ್ಷಕರಿಗೆ ಕಾರ್ಯ ಒತ್ತಡ ಹೆಚ್ಚಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಶಿಕ್ಷಕರ ಕಾರ್ಯ ಒತ್ತಡ ಕಡಿಮೆ ಮಾಡಬೇಕು. ಜತೆಗೆ ಶಿಕ್ಷಕರು ಉತ್ತಮ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಂತಹ ವಾತಾವರಣ ಸೃಷ್ಟಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT