ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

140 ಗಿಗಾವಾಟ್‌ ಸೌರಶಕ್ತಿ ಉತ್ಪಾದನೆ ಗುರಿ

ಸೌರಶಕ್ತಿ, ಪವನ ವಿದ್ಯುತ್‌ ಉತ್ಪಾದನೆ ಮತ್ತು ಬಳಕೆಗೆ ಇರುವ ಸಮಸ್ಯೆ ಹಾಗೂ ಸವಾಲು ಕುರಿತ ಕಾರ್ಯಾಗಾರ
Last Updated 5 ಜನವರಿ 2017, 7:27 IST
ಅಕ್ಷರ ಗಾತ್ರ

ತುಮಕೂರು: ದೇಶದಲ್ಲಿ 2022ರ ವೇಳೆಗೆ ಸೌರವಿದ್ಯುತ್ ಉತ್ಪಾದನೆ ಪ್ರಮಾಣವನ್ನು 120 ರಿಂದ 140 ಗಿಗಾ ವಾಟ್‌, ಪವನ ವಿದ್ಯುತ್‌ ಅನ್ನು 100 ಗಿಗಾ ವಾಟ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು  ಬೆಂಗಳೂರಿನ ವಿಜ್ಞಾನ ಅಧ್ಯಯನ ಕೇಂದ್ರ ಸಂಶೋಧನಾ ವಿಭಾಗ ಸಂಯೋಜಕ ಡಾ. ಜೈ ಆಸುಂಡಿ ತಿಳಿಸಿದರು.

ನಗರದ ಸಿದ್ದಗಂಗಾ ತಾಂತ್ರಿಕ ಕಾಲೇಜಿನಲ್ಲಿ (ಎಸ್‌ಐಟಿ) ಬುಧವಾರ ತಾಂತ್ರಿಕ ಶಿಕ್ಷಣದ ಗುಣಮಟ್ಟ ಅಭಿವೃದ್ದಿ ಯೋಜನೆ ಮತ್ತು ಕ್ರೆಡಲ್ ಸಹಯೋಗದಲ್ಲಿ ನಡೆದ ‘ಸೌರಶಕ್ತಿ ಮತ್ತು ಗಾಳಿಯಿಂದ ವಿದ್ಯುತ್ ಉತ್ಪಾದನೆ ಮತ್ತು ಬಳಕೆಗೆ ಇರುವ ಸಮಸ್ಯೆ ಮತ್ತು ಸವಾಲು’ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಒಟ್ಟಾರೆ 304 ಗಿಗಾ ಮೆಗಾವಾಟ್ ವಿದ್ಯುತ್ ಬಳಕೆಯಾಗುತ್ತಿದೆ. ತುಮಕೂರಿನ ಪಾವಗಡ ಸೇರಿ  ದೇಶದ ಆರು ಕಡೆಗಳಲ್ಲಿ ಸೋಲಾರ್ ಪಾರ್ಕ್‌ ನಿರ್ಮಿಸಲಾಗುತ್ತಿದೆ ಎಂದರು.

ಸ್ವಾಭಾವಿಕ ಇಂಧನ ಮೂಲಗಳು ಕಡಿಮೆಯಾಗುತ್ತಿರುವ ಕಾರಣ ಸೌರವಿದ್ಯುತ್‌ ಅನಿವಾರ್ಯವಾಗಿದೆ. ಗಾಳಿಯಿಂದಲೂ ವಿದ್ಯುತ್ ಉತ್ಪಾದನೆ ವ್ಯಾಪಕಗೊಳಿಸಬೇಕಾಗಿದೆ ಎಂದರು.

2030ರ ವೇಳೆಗೆ ಸೌರಶಕ್ತಿ ವಿದ್ಯುತ್ ಪ್ರಮಾಣವನ್ನು ಒಟ್ಟಾರೆ ಬಳಕೆಯ ಶೇ 40ಕ್ಕೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ 250-300 ಗಿಗಾ ವಾಟ್ ಸೌರವಿದ್ಯುತ್ ಉತ್ಪಾದನೆ ಆಲೋಚನೆ ಇದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತದ (ಕ್ರೆಡಲ್) ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಬಲರಾಮ್ ಮಾತನಾಡಿ, ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಪಡೆದ ರಾಜ್ಯ ಕರ್ನಾಟಕ. ಪ್ರಪಂಚದ ಅತಿ ಉದ್ದದ ವಿದ್ಯುತ್ ಲೈನ್ ಶಿವನ ಸಮುದ್ರದಿಂದ ಕೆಜಿಎಫ್‌ ವರೆಗೆ ಇದೆ. ಇಷ್ಟೆಲ್ಲಾ ಪ್ರಥಮಗಳು ಇದ್ದರೂ ರಾಜ್ಯದಲ್ಲಿ ಇಂದಿಗೂ ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ. ಬೇಡಿಕೆ, ಉತ್ಪಾದನೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಶೇ 40ರಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು.

ಪಾವಗಡದಲ್ಲಿ ನಿರ್ಮಿಸುತ್ತಿರುವ ಏಷ್ಯಾದ ಅತಿ ದೊಡ್ಡ ಸೌರಶಕ್ತಿ ಘಟಕದಲ್ಲಿ 2017 ಏಪ್ರಿಲ್ ವೇಳೆಗೆ 600 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಜತೆಗೆ ಮನೆಗಳ ಮೇಲೆ ರೂಫ್‌ಟಾಪ್‌ ವಿದ್ಯುತ್ ಉತ್ಪಾದನೆಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಮಾತನಾಡಿ, ವಿದ್ಯುತ್ ಸಮಸ್ಯೆಗೆ ಸೂರ್ಯನೇ ಪರಿಹಾರವಾಗಿದೆ. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ರೂಫ್‌ಟಾಪ್‌ ಸೌರಶಕ್ತಿ ಉತ್ಪಾದನೆಗೆ ಸೂಚಿಸಿದೆ. ಅದರಂತೆ ಎಸ್‌ಐಟಿಯಲ್ಲಿ 500 ಕಿಲೋವಾಟ್‌ ಸೌರ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಶಿವಕುಮಾರಯ್ಯ, ಸಂಪನ್ಮೂಲ ವ್ಯಕ್ತಿ ಡಾ.ನಾಗಣ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT