ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯ

ಕರ್ನಾಟಕ ರೈತ ಸಂಘದಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಫೆ. 2 ರಿಂದ ರೈತ ರಥಯಾತ್ರೆ
Last Updated 5 ಜನವರಿ 2017, 7:28 IST
ಅಕ್ಷರ ಗಾತ್ರ

ಚಿಂತಾಮಣಿ: ‘ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು. ಜನರಲ್ಲಿ ಹೋರಾಟದ ಕುರಿತು ಜಾಗೃತಿ ಮೂಡಿಸಲು ಫೆಬ್ರವರಿ 2 ರಿಂದ ರೈತ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೆ.ವಿ.ರಘುನಾಥರೆಡ್ಡಿ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಶಾಶ್ವತ ನೀರಾವರಿ ಹೋರಾಟದ ಕುರಿತು ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದು ರೀತಿ ಮಾತನಾಡುವುದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮತ್ತೊಂದು ರೀತಿ ಮಾತನಾಡುವ ಮೂಲಕ ಅನುಕೂಲಸಿಂಧು ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜನರಲ್ಲಿ ಹೋರಾಟದ ಕುರಿತು ಅರಿವು ಮೂಡಿಸಿ ಮನೆಗೊಬ್ಬ ವ್ಯಕ್ತಿ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಲು ರೈತ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 2 ರಂದು ಮುಂಗಾನಹಳ್ಳಿ ಹೋಬಳಿಯ ಕಡದನಮರಿ ಗ್ರಾಮ ಪಂಚಾಯಿತಿಯಿಂದ ರಥಯಾತ್ರೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ತಾಲ್ಲೂಕಿನ ದರಖಾಸ್ತು ಸಮಿತಿ ಹಲವಾರು ಬಾರಿ ಸಭೆ ಸೇರಿದ್ದರೂ ಇದುವರೆಗೂ ಒಂದು ಸಾಗುವಳಿ ಚೀಟಿ ನೀಡಿಲ್ಲ. ಪೋಡಿ ಆಂದೋಲನದ  ಅರ್ಜಿಗಳು ಬಾಕಿ ಇವೆ.2011 ರಿಂದಲೂ ರೈತರು ತಮ್ಮ ಜಮೀನುಗಳನ್ನು ಹದ್ದುಬಸ್ತು ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಬರಗಾಲ ಘೋಷಣೆಯಾಗಿರುವುದರಿಂದ ಶೀಘ್ರವಾಗಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ರೈತರು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಪಡೆದಿರುವ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಇತ್ತೀಚೆಗೆ ತಾಲ್ಲೂಕಿಗೆ ಬರಪರಿಹಾರ ಅಧ್ಯಯನಕ್ಕಾಗಿ ಭೇಟಿ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ ಮತ್ತು ಡಿ.ಟಿ.ಜಯಚಂದ್ರ ಅವರಿಗೂ ಮನವಿ ನೀಡಿದ್ದೇವೆ. ಶಾಶ್ವತ ನೀರಾವರಿ ಮತ್ತು ಸಾಲಮನ್ನಾ ಹೊರತುಪಡಿಸಿ ಉಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು. ಎನ್‌.ವೆಂಕಟರೆಡ್ಡಿ, ನಾರಾಯಣಸ್ವಾಮಿ, ಬಿ.ಜಿ.ಶ್ರೀರಾಮರೆಡ್ಡಿ, ಚೆನ್ನಕೇಶವರೆಡ್ಡಿ, ರವಿಕುಮಾರ್‌, ಶ್ರೀರಾಮಪ್ಪ, ದೇವರಾಜ್‌, ತಿಮ್ಮರಾಯಪ್ಪ, ಗಂಗುಲಪ್ಪ, ಕೆ.ವಿ.ರಾಮಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT