ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಕ್ಕೆ 37 ಅಕ್ರಮ ಪಂಪ್‌ಸೆಟ್‌

ಪಟ್ಟಣ ಪಂಚಾಯ್ತಿಯಿಂದ ಪ್ರಕರಣ ದಾಖಲು, ನೀರಿನ ಕೊರತೆ ಆತಂಕ
Last Updated 5 ಜನವರಿ 2017, 8:24 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ನೀರಿನ ಜೀವನಾಡಿಗಳಲ್ಲಿ ಅತಿ ಮುಖ್ಯವಾಗಿರುವ ರಂಗಯ್ಯನದುರ್ಗ ಜಲಾಶಯ ಹಿನ್ನೀರಿಗೆ ನೆರೆಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕೆಲ ಗ್ರಾಮಗಳ ರೈತರು ಒಟ್ಟು 37 ಕಡೆ ಅಕ್ರಮವಾಗಿ ಪಂಪ್‌ಸೆಟ್‌ ಅಳವಡಿಸಿಕೊಂಡಿರುವುದು ಬುಧವಾರ ಖಚಿತಗೊಂಡಿದೆ.

ಜಲಾಶಯದ ಹಿನ್ನೀರಿಗೆ ಹೊಂದಿ ಕೊಂಡಿರುವ ಗ್ರಾಮಗಳಾದ ಮಾರಮ್ಮನ ಹಳ್ಳಿ, ಹುರಡಿಹಳ್ಳಿ ಹಾಗೂ ನುಂಕನಹಳ್ಳಿ ಗ್ರಾಮಕ್ಕೆ  ಕೆಲ ರೈತರು ತಮ್ಮ ಜಮೀನುಗಳಿಗೆ ಅಕ್ರಮವಾಗಿ ನೀರು ಹಾಯಿಸಿ, ಜೋಳ, ತರಕಾರಿ ಬೆಳೆಯಲು ಸಿದ್ಧತೆ ನಡೆಸಿದ್ದಾರೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ.

ಮಂಗಳವಾರ ಜಲಾಶಯದ ಸಿಬ್ಬಂದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಅಕ್ರಮ ಪಂಪ್‌ಸೆಟ್‌ಗಳನ್ನು ಬಳಸುತ್ತಿರುವುದು ತಿಳಿಯಿತು. ಈ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಲಾಗಿತ್ತು.

ವರದಿಯಂತೆ ಮಾರಮ್ಮಹಳ್ಳಿಯಲ್ಲಿ ಓಬಯ್ಯ, ನಿಂಗಯ್ಯ, ಮಲ್ಲಯ್ಯ, ಬಸಣ್ಣ, ಬೋರಣ್ಣ, ಕೃಷ್ಣಪ್ಪ, ಮಾರಣ್ಣ, ಪಾಲಯ್ಯ, ಕುಬೇಂದ್ರ, ಹನುಮಂತಪ್ಪ ಸೇರಿದಂತೆ 18 ಮಂದಿ, ನುಂಕನ ಹಳ್ಳಿಯಲ್ಲಿ ಪೆದ್ದಣ್ಣ, ಹನುಮಂತ, ಬೊಮ್ಮಣ್ಣ, ಪಾಲೇಶಿ ಎಂಬುವರು, ಹುರಡಿಹಳ್ಳಿಯಲ್ಲಿ ಪಾಲಯ್ಯ, ಭೀಮಯ್ಯ, ನಾಗೇಂದ್ರ, ಮಲ್ಲಿಕಾರ್ಜುನ, ಯರಿಸ್ವಾಮಿ, ವೀರಪ್ಪ, ಬಸವರಾಜ್‌, ಭೀಮಯ್ಯ ಸೇರಿದಂತೆ 15 ರೈತರು ಜಲಾಶಯ ನೀರನ್ನು ಅಕ್ರಮ ವಾಗಿ ಬಳಸಿಕೊಳ್ಳುತ್ತಿದ್ದಾರೆ. ಒಟ್ಟು 37 ರೈತರು ಅಕ್ರಮವಾಗಿ ಪಂಪ್‌ಸೆಟ್‌ ಬಳಸುತ್ತಿರುವುದು ಗೊತ್ತಾಗಿದೆ ಎಂದು ಮುಖ್ಯಾಧಿಕಾರಿ ವಾಸೀಂ ತಿಳಿಸಿದರು.

ಸಿಬ್ಬಂದಿ ಭೇಟಿ ನೀಡಿದ ವೇಳೆ ಕೆಲ ರೈತರು ಪಂಪ್‌ಸೆಟ್‌ ತೆರವು ಮಾಡುವುದಾಗಿ ಹೇಳಿದ್ದಾರೆ. ಆದರೆ, ಜಲಾಶಯದಲ್ಲಿ ನೀರಿನ ಮಟ್ಟ ತೀವ್ರ ಕುಸಿತವಾಗುತ್ತಿದ್ದು, ಇದೇ ನೀರನ್ನು ಮಳೆಗಾಲದವರೆಗೆ  ಕುಡಿಯುವ ನೀರಿ ಗಾಗಿ ಬಳಕೆ ಮಾಡಬೇಕಾದ ಅನಿವಾ ರ್ಯವಿದೆ. ಆದ್ದರಿಂದ ಪಂಪ್‌ಸೆಟ್‌ ಗಳನ್ನು ತುರ್ತು ತೆರವು ಮಾಡಿಸಬೇಕಿದೆ. ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಬುಧವಾರ ಈ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್‌ ರಾಮಕೃಷ್ಣಪ್ಪ ಮಾತನಾಡಿ, ‘ರಂಗಯ್ಯನದುರ್ಗ ಜಲಾಶಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಹಿನ್ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ನಾಳೆಯೇ ಸ್ಥಳ ಪರಿಶೀಲನೆಗೆ ಸಿಬ್ಬಂದಿಯನ್ನು ಕಳುಹಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಕೊಟ್ರೇಶ್‌ ಮಾತನಾಡಿ, ‘ಜಲಾಶಯದ ನೀರಿನ ಅಕ್ರಮ ಬಳಕೆ ಬಗ್ಗೆ ಜಿಲ್ಲಾಧಿಕಾರಿಗೆ ವಿವರ ವರದಿ ಸಲ್ಲಿಸಲಾಗಿದೆ. ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು. ಒಟ್ಟಿನಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಎದುರಿಸುತ್ತಿರುವ ಕಸಬಾ ಹೋಬಳಿ ರೈತರಿಗೆ ಇದರಿಂದ ತೀವ್ರ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT