ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

438 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚುವ ಆತಂಕ

32 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು ಪೂರೈಕೆ, ₨ 17 ಕೋಟಿ ಕ್ರಿಯಾ ಯೋಜನೆ
Last Updated 5 ಜನವರಿ 2017, 8:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಳಿಗಾಲ ಮುಗಿಯುವ ಮುನ್ನವೇ ಜಿಲ್ಲೆಯ ಮೂರು ತಾಲ್ಲೂಕುಗಳ 32 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಮುಂದಿನ ದಿನಗಳಲ್ಲಿ 438 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಅಧಿಕವಾಗುವ ಆತಂಕವಿದೆ.

ವಾಣಿವಿಲಾಸ ಸಾಗರ ಮತ್ತು ಶಾಂತಿಸಾಗರ ನೀರು ಪೂರೈಕೆಯಾಗುವ ಚಿತ್ರದುರ್ಗ ನಗರದ ವಿವಿಧ ಬಡಾವಣೆಗಳಲ್ಲೂ ನೀರಿನ ಸಮಸ್ಯೆ ಹೆಚ್ಚುತ್ತಿದೆ. ತಾಲ್ಲೂಕಿನ ಡಿ.ಎಸ್.ಹಳ್ಳಿ, ಸಿದ್ದವ್ವನದುರ್ಗ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೊಸ ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ.

32 ಗ್ರಾಮಗಳಿಗೆ ಟ್ಯಾಂಕರ್ ನೀರು: ಚಳ್ಳಕೆರೆಯ 7, ಚಿತ್ರದುರ್ಗದ 9 ಮತ್ತು ಮೊಳಕಾಲ್ಮುರು ತಾಲ್ಲೂಕುಗಳ 16 ಹಳ್ಳಿಗಳು ಸೇರಿ ಒಟ್ಟು 32 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಜಿಲ್ಲಾ ಪಂಚಾಯ್ತಿಯಿಂದ ಇಷ್ಟೂ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿನಿತ್ಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ 77, ಚಳ್ಳಕೆರೆ ತಾಲ್ಲೂಕಿನಲ್ಲಿ 21, ಚಿತ್ರದುರ್ಗ ತಾಲ್ಲೂಕಿನಲ್ಲಿ 53 ಟ್ರಿಪ್‌ಗಳಷ್ಟು ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳ್, ಸಿದ್ದವ್ವನದುರ್ಗ, ಹಿರೇಗುಂಟನೂರು, ಸೊಂಡೆಕೊಳ, ಡಿ.ಎಸ್‌.ಹಳ್ಳಿ, ಬೆಳಗಟ್ಟ, ಹಾಯಕಲ್, ತೋಪುರಮಾಳಿಗೆ, ಕಲ್ಲಹಳ್ಳಿ, ಕಾಸವರಹಟ್ಟಿ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಂತರ್ಜಲ ಬರಿದಾಗಿದೆ. ಹೊಸ ಕೊಳವೆಬಾವಿಗಳನ್ನು ಕೊರೆದರೂ ನೀರು ಲಭ್ಯವಾಗುತ್ತಿಲ್ಲ.

ಹೊಸದುರ್ಗ ತಾಲ್ಲೂಕಿನ ಅರಳಿಹಳ್ಳಿ, ನಾಗೇನಹಳ್ಳಿ, ದೇವಪುರ, ಮಾವಿನಗಟ್ಟೆ, ಜಂತಿಕೊಳಲು ಸೇರಿದಂತೆ ಹದಿನೈದಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ‘ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ, ಕೂನಿಕೆರೆ, ಲಕ್ಕವ್ವನಹಳ್ಳಿ ಭಾಗದಲ್ಲಿ 900 ಅಡಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ’ ಎಂದು ಹುಚ್ಚವ್ವನಹಳ್ಳಿ ರಂಗಸ್ವಾಮಿ ಹೇಳುತ್ತಾರೆ.

ಹೊಸದುರ್ಗದಲ್ಲಿ ಸಮಸ್ಯೆ ಉಲ್ಬಣ ಸಾಧ್ಯತೆ: ಮುಂದಿನ ದಿನಗಳಲ್ಲಿ ಹೊಸದುರ್ಗ ಭಾಗದ 152 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.ಚಿತ್ರದುರ್ಗ ತಾಲ್ಲೂಕಿನಲ್ಲೂ 140 ಹಳ್ಳಿಗಳಲ್ಲಿ ಇಷ್ಟೇ ಪ್ರಮಾಣದ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿರುವ ಕುಡಿಯುವ ನೀರನ ಸಮಸ್ಯೆ ಪರಿಹರಿಸುವ ಸಲುವಾಗಿ ₹ 17 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವು ದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಹೊಸ ಕೊಳವೆ ಬಾವಿ ಕೊರೆಸಲು ₹ 3 ಕೋಟಿ, ಹಳೆ ಕೊಳವೆಬಾವಿ ಪುನರುಜ್ಜೀವನಕ್ಕಾಗಿ
₹ 5 ಕೋಟಿ, ಹೊಸ ಕೊಳವೆಬಾವಿ  ವಿದ್ಯುದೀಕರಣಕ್ಕಾಗಿ ₹ 47 ಲಕ್ಷ ಹಣಕ್ಕೆ ಬೇಡಿಕೆ ಸಲ್ಲಿಸಿರುವುದಾಗಿ ಜಿಲ್ಲಾ ಪಂಚಾಯ್ತಿ ಮೂಲಗಳು ತಿಳಿಸಿವೆ.

ಹೊಸ ಕೊಳವೆಬಾವಿ ಪರಿಹಾರವಲ್ಲ: ಕುಡಿಯುವ ನೀರಿನ ಸಮಸ್ಯೆಗೆ ಕೊಳವೆಬಾವಿ ಪರಿಹಾರ ಎಂದು ಸರ್ಕಾರ ಮತ್ತು ಸಾರ್ವಜನಿಕರು ನಂಬಿದ್ದಾರೆ. ಅಷ್ಟೇ ವಿಶ್ವಾಸದಿಂದ ಜಲಮೂಲ ಪತ್ತೆ ಮಾಡಿ ಕೊಳವೆಬಾವಿ ಕೊರೆಸಬೇಕು ಎಂಬುದು ಜಲತಜ್ಞ ಎನ್‌.ದೇವರಾಜರೆಡ್ಡಿ ಅವರ ಸಲಹೆ. ಸಿಕ್ಕಸಿಕ್ಕಿದ ಕಡೆ ಕೊಳವೆಬಾವಿ ಕೊರೆಸಿ ಹಣ ಕಳೆದುಕೊಳ್ಳುವುದಕ್ಕಿಂತ, ನೀರಿನ ಸಮಸ್ಯೆಗಳಿರುವ ಹಳ್ಳಿಗಳನ್ನು ಕ್ಲಸ್ಟರ್‌ ರೀತಿ ಗುರುತಿಸಬೇಕು. ಪ್ರತಿಯೊಂದು ತಾಲ್ಲೂಕಿನಲ್ಲೂ ನೀರಿನ ಸೆಲೆ ಇರುವ ಸ್ಥಳಗಳಿರುತ್ತವೆ.

ಅಂಥವನ್ನು ಗುರುತಿಸಿ, ಅಲ್ಲಿ ಕೊಳವೆಬಾವಿ ಕೊರೆಸಿ, ಅದರಿಂದ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಟ್ಯಾಂಕರ್‌ ಇಲ್ಲವೇ ಕೊಳವೆ ಮೂಲಕವೇ ಪೂರೈಸಬೇಕು. ಇದನ್ನು ಬಿಟ್ಟು ಅಂತರ್ಜಲ ಕೊರತೆಯಿರುವ ಹಳ್ಳಿಗಳಲ್ಲಿ ಕೊಳವೆಬಾವಿ ಕೊರೆಸವುದು ವ್ಯರ್ಥ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಚಿತ್ರದುರ್ಗದಂತಹ ಬಂಡೆಗಳಿಂದ ಆವೃತವಾದ ಪ್ರದೇಶದಲ್ಲಿ ಕೊಳವೆಬಾವಿಗಳಿಗೆ ಹೈಡ್ರೋಫ್ರಾಕ್ಚರಿಂಗ್ ಎನ್ನುವುದು ಅಸಾಧ್ಯವಾದ ಕೆಲಸ. ಇದು ಕೇವಲ ಹಣ ವ್ಯರ್ಥಮಾಡುವ ಯೋಜನೆ. ಇದಕ್ಕಿಂತ ಇರುವ ಕೊಳವೆಬಾವಿಗಳಲ್ಲಿ ನೀರು ಹೆಚ್ಚಿಸುವ ಯೋಜನೆಗಳಿಗೆ ಹಣ ವಿನಿಯೋಗಿಸು ವುದು ಉತ್ತಮ ಎಂದು ದೇವರಾಜರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT