ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ₹10 ಸಾವಿರ ಕೋಟಿ ಕಾಯ್ದಿರಿಸಿ

ಬೀದರ್‌: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಆಗ್ರಹ
Last Updated 5 ಜನವರಿ 2017, 8:59 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರ ವಾರ್ಷಿಕ 1.36 ಲಕ್ಷ ಕೋಟಿ ಮೊತ್ತದ ಬಜೆಟ್‌ ಹೊಂದಿದೆ. ಆದರೆ ದಲಿತರಿಗಾಗಿ ಕನಿಷ್ಠ ಶೇ10ರಷ್ಟು ಹಣವನ್ನೂ ಕಾಯ್ದಿರಿಸಿಲ್ಲ. ಪ್ರಸಕ್ತ ಬಜೆಟ್‌ನಲ್ಲಿ ದಲಿತರಿಗಾಗಿ ಕನಿಷ್ಠ  ₹10 ಸಾವಿರ ಕೋಟಿ ಕಾಯ್ದಿರಿಸಬೇಕು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ರಾಜ್ಯ ಮಟ್ಟದ ಸಮಾವೇಶ ಪ್ರಯುಕ್ತ ನಗರದ ಶಿವನಗರ ಉತ್ತರದಲ್ಲಿರುವ ಲಕ್ಷ್ಮಿ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ದಲಿತರು ವಾಸವಾಗಿರುವ ಸ್ಥಳದಲ್ಲಿ ಪ್ರಾಣಿಗಳೂ ವಾಸ ಮಾಡುವಂಥ ಸ್ಥಿತಿ ಇಲ್ಲ. ಮತ ರಾಜಕೀಯದಿಂದ ಹಿಂದುಳಿದವರು ಹಾಗೂ ದಲಿತರು ಇಂದಿಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಹಿಂದುಳಿದವರು ಹಾಗೂ ದಲಿತರ ಅಭಿವೃದ್ಧಿ ಆಗಿಲ್ಲ. ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಪಕ್ಷವು ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿಲ್ಲ. ಬ್ರಿಗೇಡ್‌ ಬಡವರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 35 ಮಠಗಳಿಗೆ 96 ಕೋಟಿ ರೂಪಾಯಿ ನೀಡಿದೆ. ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠಕ್ಕೆ ₹5 ಕೋಟಿ ನೀಡಿದೆ. ಆ ಮಠ ವಸತಿ ನಿಲಯ ನಿರ್ಮಾಣ ಸೇರಿದಂತೆ ಶೈಕ್ಷಣಿಕ ಕಾರ್ಯಗಳಿಗೆ ಹಣ ಬಳಸಿಕೊಂಡಿದೆ ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜಕೀಯ ಪಕ್ಷ ಅಲ್ಲ. ದುರುದ್ದೇಶದಿಂದ ರಾಯಣ್ಣ  ಬ್ರಿಗೇಡ್‌ ಆರಂಭಿಸಿಲ್ಲ.  ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಹಿಂದುಳಿದವರು ಹಾಗೂ ದಲಿತರಲ್ಲಿ ಜಾಗೃತಿ ಮೂಡಿಸಲು ರಾಯಣ್ಣ ಬ್ರಿಗೇಡ್‌ ಅನ್ನು ಹುಟ್ಟು ಹಾಕಲಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಧ್ಯೆ ಯಾವ ಗೊಂದಲವೂ ಇಲ್ಲ. ಎರಡು ಸಂಧಾನ ಸಭೆಗಳು ನಡೆದಿವೆ. ಇನ್ನೂ ಗೊಂದಲ ಇದ್ದರೂ ಪರಸ್ಪರ ಸಮಾಲೋಚಿಸಿ ಬಗೆಹರಿಸಿಕೊಳ್ಳುತ್ತೇವೆ. ಈಗಾಗಲೇ ಪಕ್ಷದ ವರಿಷ್ಠರು ತೀರ್ಮಾನ ಕೊಟ್ಟಿದ್ದಾರೆ ಎಂದು ಹೇಳಿದರು.

ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆದರೆ ಚುನಾವಣೆ ಪೂರ್ವದಲ್ಲಿ ಹಿಂದುಳಿದವರು ಹಾಗೂ ದಲಿತರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ರಾಯಣ್ಣ  ಬ್ರಿಗೇಡ್‌ ಆರಂಭಿಸಲು ಮುಂದಾದಾಗ ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ವೀರಪ್ಪ ಮೊಯಿಲಿ, ಬಿ.ಎಸ್‌. ಯಡಿಯೂರಪ್ಪ ಅವರೂ ಟೀಕಿಸಿದರು. ಆದರೆ ಇಂದು ಎಲ್ಲರೂ ಮೌನವಾಗಿದ್ದಾರೆ ಎಂದರು.

ದೇಶದಲ್ಲಿ ಸುಧೀರ್ಘ ಆಡಳಿತ ನಡೆಸಿದ ಪಕ್ಷ ಜಾತಿ ಹೆಸರಲ್ಲಿ ರಾಜಕೀಯ ಮಾಡಿದೆ. ಅಂಬೇಡ್ಕರ್‌ ದಲಿತರಿಗೆ, ಬಸವಣ್ಣ ಲಿಂಗಾಯತರಿಗೆ, ವಾಲ್ಮೀಕಿಯನ್ನು ಬೇಡರಿಗೆ ಸೀಮಿತಗೊಳಿಸಿದೆ. ದಲಿತರ ಸ್ವಾಭಿಮಾನ ಜಾಗೃತಗೊಳಿಸುವ ದಿಸೆಯಲ್ಲಿ ಬ್ರಿಗೇಡ್‌ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಜಾತಿಗಳು ಇರಬೇಕು. ನಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಕುಟುಂಬ ಕಾರ್ಯಗಳಿಗೆ ಸೀಮಿತವಾಗಬೇಕು. ಧರ್ಮದ ವಿಷಯ ಬಂದಾಗ ಜಾತಿಯನ್ನು ಬದಿಗೆ ಸರಿಸಬೇಕು. ದೇಶಕ್ಕೆ ಗಂಡಾಂತರ ಬಂದಾಗ ಧರ್ಮವನ್ನೂ ಪಕ್ಕಕ್ಕೆ ಸರಿಸಬೇಕು ಎಂದು ಹೇಳಿದರು. ಮಾಜಿ ಶಾಸಕ ರಮೇಶ ಪಾಂಡೆ,  ಪದ್ಮಾಕರ ಪಾಟೀಲ, ಬಸವರಾಜ ಪವಾರ, ರಾಜಶೇಖರ ನಾಗಮೂರ್ತಿ, ಶಿವರಾಜ ಕುದರೆ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT