ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

55 ಮದ್ಯದಂಗಡಿ ಮೇಲೆ ತೂಗುಗತ್ತಿ!

ಹೆದ್ದಾರಿಯಿಂದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಸುಪ್ರೀಂಕೋರ್ಟ್ ತಡೆ
Last Updated 5 ಜನವರಿ 2017, 10:16 IST
ಅಕ್ಷರ ಗಾತ್ರ

ವಿಜಯಪುರ: ಸುಪ್ರೀಂಕೋರ್ಟ್‌ನ ತೀರ್ಪು ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೆ, ಜಿಲ್ಲೆಯ ವ್ಯಾಪ್ತಿಯಲ್ಲಿ 163 ಮದ್ಯ ದಂಗಡಿ ಸ್ಥಳಾಂತರ ಗೊಳ್ಳಲೇಬೇಕು. ಒಂದು ವೇಳೆ ಪಟ್ಟಣ, ನಗರ ಪ್ರದೇಶ ಹೊರತುಪಡಿಸಿ ಸರ್ವೋಚ್ಛ ನ್ಯಾಯಾಲಯದ ತೀರ್ಪು ಪಾಲನೆಗೊಂಡರೆ 55 ಮದ್ಯ ಮಾರಾಟ ಅಂಗಡಿ ಬೇರೆಡೆ ಸ್ಥಳಾಂತರಗೊಳ್ಳಬೇಕಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 193 ಪರವಾನಗಿ ಹೊಂದಿದ ವಿವಿಧ ಪ್ರಕಾರದ ಮದ್ಯದಂಗಡಿ, ಮಾರಾಟ ಕೇಂದ್ರಗಳಿದ್ದು, ಇವುಗಳಲ್ಲಿ 55 ಪರವಾನಗಿ ಹೊಂದಿದ ಅಂಗಡಿ, ಕೇಂದ್ರಗಳ ಮೇಲೆ ತೂಗು ಕತ್ತಿ ತೂಗುತ್ತಿದೆ. ಪಟ್ಟಣ, ನಗರ ಪ್ರದೇಶದ ವ್ಯಾಪ್ತಿಯ ಪರವಾನಗಿ ಹೊಂದಿದ ಅಂಗಡಿ ಸೇರ್ಪಡೆಗೊಂಡರೆ, ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಿಸಿದ ಬಳಿಕ ಕೇಂದ್ರ ಕಚೇರಿ ಸೂಚನೆಯೊಂದನ್ನು ರವಾನಿಸಿದೆ. ಅದರಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಯಿಂದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿ, ಬಾರ್‌ ಅಂಡ್‌ ರೆಸ್ಟೋರೆಂಟ್‌ ಸೇರಿದಂತೆ ಎಲ್ಲವನ್ನೂ ಸರ್ವೇ ನಡೆಸಿದ ಸಂದರ್ಭ 163 ಅಂಗಡಿ ಗುರುತಿಸಲ್ಪಟ್ಟವು.

ಅದೇ ರೀತಿ ಪಟ್ಟಣ, ನಗರ ಪ್ರದೇಶ ಹೊರತುಪಡಿಸಿ ಸರ್ವೇ ನಡೆಸಿದಾಗ 55 ಮದ್ಯದಂಗಡಿ ಈ ವ್ಯಾಪ್ತಿಗೆ ಬರಲಿವೆ ಎಂಬ ಮಾಹಿತಿಯನ್ನು ಈಗಾಗಲೇ ಕೇಂದ್ರ ಕಚೇರಿಗೆ ನೀಡಿದ್ದೇವೆ. ಇನ್ನೂ ಅಂತಿಮ ಸೂಚನೆ ಬಂದಿಲ್ಲ. ಮಾರ್ಚ್‌ ಅಂತ್ಯದವರೆಗೂ ಸಮಯವಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ವೆಂಕಟೇಶ ಪದಕಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿನ ಮೂವತ್ತು ಮದ್ಯದಂಗಡಿಗೆ ಸುಪ್ರೀಂಕೋರ್ಟ್‌ನ ತೀರ್ಪಿನಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ. ಇವುಗಳಲ್ಲಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಇರುವಂತಹವು. ಇನ್ನೂ ನಗರ, ಪಟ್ಟಣ ಪ್ರದೇಶದಲ್ಲಿ ರಿಯಾಯಿತಿ ದೊರೆತರೆ 108 ಅಂಗಡಿ ಸಮಸ್ಯೆಯ ಸುಳಿಯಿಂದ ಪಾರಾಗಲಿವೆ. ಒಟ್ಟು 138 ಅಂಗಡಿಗಳು ಯಾವುದೇ ಅಡ್ಡಿಯಿಲ್ಲದೆ ವಹಿವಾಟು ನಡೆಸಬಹುದು.

ಹೆದ್ದಾರಿಯಿಂದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಇರಬಾರದು ಎಂಬ ಆದೇಶ ಕಟ್ಟುನಿಟ್ಟಿನಿಂದ ಜಾರಿಗೊಂಡರೆ 55 ಮದ್ಯದಂಗಡಿಗಳ ಸ್ಥಳಾಂತರ ಅನಿವಾರ್ಯ. ಒಂದು ವೇಳೆ ನಗರ, ಪಟ್ಟಣ ಪ್ರದೇಶವೂ ಇದರಲ್ಲಿ ಸೇರಿಕೊಂಡರೆ 163 ಮದ್ಯ ಮಾರಾಟ ಕೇಂದ್ರಗಳನ್ನು ಸ್ಥಳಾಂತರಿಸಲೇಬೇಕು ಎಂದು ಅವರು ಹೇಳಿದರು.

ಮೇಲ್ಮನವಿ ಸಲ್ಲಿಕೆ: ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದ ತೀರ್ಪು ಹೆದ್ದಾರಿ ಹಾದು ಹೋಗುವ ಪಟ್ಟಣ, ನಗರ ಪ್ರದೇಶದಲ್ಲಿ ಮದ್ಯದಂಗಡಿ ಹೊಂದಿರುವ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಪ್ರಶ್ನಿಸಿ ಸರ್ಕಾರದ ಹಂತದಲ್ಲೇ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಬಾರ್‌ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುಪ್ರೀಂಕೋರ್ಟ್‌ ತೀರ್ಪಿನನ್ವಯ ಬಹುತೇಕರು ತಮ್ಮ ಉದ್ಯಮದ ನೆಲೆ ಕಳೆದುಕೊಳ್ಳಲಿದ್ದಾರೆ. ಪ್ರಸ್ತುತ ವಹಿವಾಟಿನ ಸೂಕ್ತ ಸ್ಥಳ ತೆರೆದು ಹೊಸ ಜಾಗಕ್ಕೆ ತೆರಳಬೇಕು.ಮತ್ತೆ ಅಲ್ಲಿ ಉದ್ಯಮ ಅಭಿವೃದ್ಧಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಇದರಿಂದ ಬಾರ್‌ ಕೆಲಸಗಾರರ ಕುಟುಂಬವೂ ಸಮಸ್ಯೆ ಸುಳಿಯಲ್ಲಿ ಸಿಲುಕುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಸಿಎಲ್‌–7 (ಲಾಡ್ಜ್‌ಗಳಲ್ಲೇ ಮದ್ಯ ಮಾರಾಟದ ಕೌಂಟರ್‌) ಲೈಸೆನ್ಸ್‌ ಹೊಂದಿದ ಲಾಡ್ಜ್‌ಗಳಿವೆ. ಸುಪ್ರೀಂಕೋರ್ಟ್‌ ಸೂಚನೆ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೇ ಇವರೆಲ್ಲ ಮತ್ತೆ ಲಾಭದ ಉದ್ಯಮವಾಗಿರುವ ಮದ್ಯ ಮಾರಾಟಕ್ಕಾಗಿಯೇ ಕೋಟಿ ಕೋಟಿ ವ್ಯಯಿಸಿ, ಹೆದ್ದಾರಿಯಿಂದ ಒಂದು ಕಿ.ಮೀ. ಅಂತರದಲ್ಲಿ ನೂತನವಾಗಿ ಲಾಡ್ಜ್‌ ಕಟ್ಟಿಕೊಳ್ಳಲು ಸಾಧ್ಯವೇ ಎಂಬುದು ಮತ್ತೊಬ್ಬ ಮಾಲೀಕರ ಪ್ರಶ್ನೆ.

ಇನ್ನೂ 70ರ ಆಸುಪಾಸು ಬಾರ್ ಅಂಡ್‌ ರೆಸ್ಟೋರೆಂಟ್‌ಗಳಿವೆ. ಇಲ್ಲಿ ಮದ್ಯದ ಜತೆಗೆ ಊಟಕ್ಕೂ ಬಾರಿ ಬೇಡಿಕೆ. ಎರಡೂ ಲಾಭದಾಯಕ ಉದ್ಯಮ. ಇದೀಗಿನ ತೀರ್ಪಿನಿಂದ ಇವರೂ ಸಹ ಸ್ಥಳಾಂತರಗೊಳ್ಳಬೇಕಿದೆ. ಇದು ಉದ್ಯಮದ ಮೇಲೆ ತೀವ್ರ ಹೊಡೆತ ನೀಡಲಿದೆ. ಜತೆಗೆ ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕುಟುಂಬಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲಿಚ್ಚಿಸದ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲೀಕರೊಬ್ಬರು.

ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಗೊಂಡ ಬೆನ್ನಿಗೆ ಅಬಕಾರಿ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಯ ನೈಜತೆ ವಿವರಿಸಿದ್ದೇವೆ. ನಮ್ಮ ಕಡೆಯಿಂದ ಸಾಧ್ಯವಾದಷ್ಟು ಪ್ರಯತ್ನ ನಾವು ನಡೆಸುತ್ತೇವೆ. ನೀವೂ ಸಹ ಕಾನೂನು ಹೋರಾಟ ನಡೆಸಲು ಮುಂದಾಗಿ ಎಂದು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT