ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಬೆಳೆ; ಅರ್ಧದಷ್ಟು ನಷ್ಟ

ಸಮೀಕ್ಷೆ ಬಹುತೇಕ ಪೂರ್ಣ: ವರದಿ ಸಲ್ಲಿಕೆ ಶೀಘ್ರ
Last Updated 5 ಜನವರಿ 2017, 10:49 IST
ಅಕ್ಷರ ಗಾತ್ರ

ಬಳ್ಳಾರಿ: ಮುಂಗಾರು ಹಂಗಾಮಿನ ಬೆಳೆ ನಷ್ಟದ ಜೊತೆಗೆ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲೂ ರೈತರು ಬೆಳೆ ನಷ್ಟ ಹೊಂದಿದ್ದಾರೆ. ಈ ಸಂಬಂಧ ಕೃಷಿ ಇಲಾಖೆಯು ಡಿ. 15ರಿಂದ ನಡೆಸಿದ್ದ ಬೆಳೆ ನಷ್ಟ ಸಮೀಕ್ಷೆಯು ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆಯಾಗಲಿದೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಕೋಗಳಿ ಹೋಬಳಿ, ಕೊಟ್ಟೂರು ಹೋಬಳಿಯ ಕೆಲ ಭಾಗ, ಕೂಡ್ಲಿಗಿನ ಖಾನಾಹೊಸಳ್ಳಿ, ಹಡಗಲಿ ತಾಲ್ಲೂಕಿನ ಇಟಿಗಿ, ಹಿರೇಹಡಗಲಿ ಮತ್ತು ಹಡಗಲಿ ಹೋಬಳಿ, ಬಳ್ಳಾರಿ ಮತ್ತು ಸಿರುಗುಪ್ಪ ತಾಲ್ಲೂಕಿನ ಎಲ್ಲ ಹೋಬಳಿಗಳು, ಸಂಡೂರು ತಾಲ್ಲೂಕಿನ ತೋರಣಗಲ್ಲು, ಹೊಸ ಪೇಟೆ ತಾಲ್ಲೂಕಿನ ಕಮಲಾಪುರ ಮತ್ತು ಕಂಪ್ಲಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹಿಂಗಾರಿನಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಮಳೆ ಕೊರತೆಯಿಂದಾಗಿ ಈ ಪ್ರದೇಶಗಳಲ್ಲಿ ಬಹುತೇಕ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿವೆ.

ಈ ಪ್ರದೇಶಗಳಲ್ಲಿ ಬಹುತೇಕ ರೈತರು ಕಡಲೆ, ಬಿಳಿ ಜೋಳ, ಸೂರ್ಯಕಾಂತಿ ಮತ್ತು ಹುರುಳಿಯನ್ನು ಬಿತ್ತನೆ ಮಾಡಿದ್ದರು. ಆದರೆ ಬೆಳೆ ನಿರೀಕ್ಷೆಯಂತೆ ಕೈಗೆಟುಕಿಲ್ಲ. ಶೇ 50ರಷ್ಟು ಬೆಳೆ ಸಂಪೂರ್ಣ ನಷ್ಟವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಒಂದೆರಡು ದಿನದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಮೂಲಗಳು ಹೇಳಿವೆ.

ಪರಿಹಾರ ಒದಗಿಸಲು ಶಿಫಾರಸ್ಸು: ಈ ಪ್ರದೇಶಗಳಲ್ಲಿ ಸುಮಾರು 8ರಿಂದ 10 ಸಾವಿರ ರೈತರು ನಷ್ಟ ಹೊಂದಿರುವ ಸಾಧ್ಯತೆ ಇದೆ. ಅವರೆಲ್ಲರಿಗೂ ಬೆಳೆ ನಷ್ಟ ಪರಿಹಾರ ಒದಗಿಸುವಂತೆ ಶಿಫಾಸು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಂಟು  ಎಕರೆಗೆ  ಎಂಟು  ಕ್ವಿಂಟಲ್  ಹತ್ತಿ!
ಜಿಲ್ಲೆಯ ಕೊನೆಯ ಗ್ರಾಮ ಕರೂರಿನ ನಾಗಪ್ಪ ಅವರ ಜಮೀನಿನಲ್ಲಿ ಬುಧವಾರ ಎರಡನೇ ಹಂತದ ಹತ್ತಿ ಕಟಾವು ವೇಳೆ ಜಮೀನು ಬೆಳೆ ಇಲ್ಲದೆ ಸೊರಗಿದ್ದು ಕಂಡು ಬಂತು. 8 ಎಕರೆ ಪ್ರದೇಶದಲ್ಲಿ ಅವರು ಬಿತ್ತನೆ ಮಾಡಿದ್ದರು.

‘ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಲ್‌ ಹತ್ತಿ ದೊರಕಬೇಕಿತ್ತು. ಆದರೆ ಮಳೆ ಕೊರತೆಯಿಂದ ಹಾಗಾಗಲಿಲ್ಲ. ನವೆಂಬರಿನಲ್ಲಿ ಮೊದಲ ಹಂತದ ಕಟಾವು ನಡೆದ ವೇಳೆ ಪ್ರತಿ ಎಕರೆಗೆ 2ರಿಂದ 3 ಕ್ವಿಂಟಲ್‌ ಮಾತ್ರ ದೊರಕಿತ್ತು. ಈಗ ಎರಡನೇ ಹಂತದ ಕಟಾವು ವೇಳೆ ಪ್ರತಿ ಎಕರೆಗೆ ಒಂದು ಕ್ವಿಂಟಲ್‌ ಹತ್ತಿಯೂ ದೊರಕಿಲ್ಲ’ ಎಂದು ಅವರ ಮಗ ವೀರೇಶ ತಿಳಿಸಿದರು.

ನಿಲ್ಲದ ಮೇವು  ಸಾಗಣೆ: ಜಿಲ್ಲೆಯ ರೈತರು ಭತ್ತದ ಮೇವನ್ನು ಹೊರರಾಜ್ಯಗಳಿಗೆ ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿರುವ ನಡುವೆಯೇ, ಹಲವೆಡೆ ಲೋಡುಗಟ್ಟಳೆ ಮೇವು ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಸಾಗಣೆಯಾಗುತ್ತಿದೆ. ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದ ಮೇವು, ಆ ಗ್ರಾಮಕ್ಕೆ ಸಮೀಪದಲ್ಲೇ ಇರುವ ಕರ್ನೂಲು ಜಿಲ್ಲೆಯ  ಹೊಳಗೊಂದಿ ಮಂಡಲದ ಮಾರ್ಲಮಡಿಕೆ ಗ್ರಾಮಕ್ಕೆ ಸಾಗಣೆಯಾಗುತ್ತಿದೆ.

ಬುಧವಾರ ಈ ಗ್ರಾಮಕ್ಕೆ ‘ಪ್ರಜಾವಾಣಿ’ ಭೇಟಿ ನೀಡಿದ್ದ ವೇಳೆ, ಆಂಧ್ರದ ಹಲವು ರೈತರು ಮೇವನ್ನು ಸಂಗ್ರಹಿಸಿ ವಾಹನಗಳಲ್ಲಿ ಸಾಗಿಸಿದ್ದು ಕಂಡುಬಂತು. ಆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮಗೂ ಮೇವಿನ ಕೊರತೆ ಇದೆ. ನಮ್ಮ ಸಂಬಂಧಿಕರಿಂದ ಮೇವನ್ನು ಪಡೆದು ಸಾಗಿಸುತ್ತಿದ್ದೇವೆ. ಬೇರೆ ದಾರಿ ಇಲ್ಲವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT