ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಹೋಬಳಿಗಳಲ್ಲೂ ಗೋಶಾಲೆಗೆ ಚಿಂತನೆ

ಸುತ್ತಮುತ್ತಲ ಗ್ರಾಮಗಳ 100 ಕ್ಕೂ ಹೆಚ್ಚು ಜಾನುವಾರು ನಿರ್ವಹಣೆ
Last Updated 5 ಜನವರಿ 2017, 10:57 IST
ಅಕ್ಷರ ಗಾತ್ರ

ಕನಕಪುರ:  ತಾಲ್ಲೂಕಿನ ಮರಳವಾಡಿ ಹೋಬಳಿ ವ್ಯಾಪ್ತಿಯ ಜಾನುವಾರುಗಳಿಗಾಗಿ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ತೆರೆದಿರುವ ಗೋ ಶಾಲೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವರದರಾಜು ಕುಮಾರ್‌ ತಿಳಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ತಾಲ್ಲೂಕಿನ 6 ಹೋಬಳಿಗಳಲ್ಲೂ ಗೋ–ಶಾಲೆ ತೆರೆಯಲು ಚಿಂತನೆ ನಡೆಸಲಾಗಿದ್ದು ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಗೋ–ಶಾಲೆಯ ಜಾಗವನ್ನು ಗುರುತಿಸಲಾಗಿದೆ.

ಉತ್ತಮ ಸ್ಥಳಾವಕಾಶ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ನಿರ್ವಹಣೆ ಇರುವ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಮರಳವಾಡಿ ಹೋಬಳಿಯಲ್ಲಿ ರಾವತನಹಳ್ಳ ಕೆರೆ ಬಳಿ ಪ್ರಾರಂಭಿಕವಾಗಿ ಗೋ–ಶಾಲೆ ತೆರೆಯಲಾಗಿದೆ.

10 ದಿನಗಳಿಂದ ನಿರ್ವಹಣೆ ಮಾಡುತ್ತಿದ್ದು ಹೋಬಳಿ ವ್ಯಾಪ್ತಿಯ ಸಮೀಪದ ಗ್ರಾಮಗಳಿಂದ 100 ಕ್ಕೂ ಹೆಚ್ಚು ಜಾನುವಾರುಗಳನ್ನು ರೈತರು ಪ್ರತಿದಿನ ತಂದು ಬಿಡುತ್ತಿದ್ದಾರೆ.ಹೆಚ್ಚಾಗಿ ನಾಟಿ ಹಸುಗಳನ್ನು ಬಿಡುತ್ತಿದ್ದು ಹಾಲು ಕರೆಯದ ಹಾಗೂ ಪಡ್ಡೆಯಾದ ಸೀಮೆಹಸುಗಳನ್ನು  ಬಿಡುತ್ತಿದ್ದಾರೆ. ಸದ್ಯಕ್ಕೆ ಒಣಹುಲ್ಲು ಮತ್ತು ಮಿನರಲ್‌ ಮಿಕ್ಸರ್‌ ನೀಡುತ್ತಿದ್ದೇವೆ. ಬೆಳಿಗ್ಗೆ ಬಂದು ಸಂಜೆ ವೇಳೆಗೆ ಜಾನುವಾರು ತೆಗೆದುಕೊಂಡು ಹೋಗುತ್ತಿದ್ದಾರೆ.

  ರಾತ್ರಿ ವೇಳೆಯಲ್ಲಿ ರಕ್ಷಣೆಯಿಲ್ಲದ ಕಾರಣ ಹಗಲಿನ ವೇಳೆ ಮಾತ್ರ ಅವಕಾಶ ಕಲ್ಪಿಸಲಾಗಿದೆ, ಗೋ–ಶಾಲೆಯಲ್ಲಿ ಇಬ್ಬರು ಪಶುವೈದ್ಯರು, ಇಬ್ಬರು ಪಶು ಇನ್‌ಸ್ಪೆಕ್ಟರ್‌ ಇರುತ್ತಾರೆ. ಜಾನುವಾರನ್ನು ದೂರದ ಊರಿನಿಂದ ನಡೆಸಿಕೊಂಡ ಬರುವಾಗ ಅವುಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಜ್ವರ ಕಾಣಿಸಿಕೊಳ್ಳಬಹುದು ಅಥವಾ ಭೇದಿಯಾಗಬಹುದು. ಇಂತಹ ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಲಿದ್ದಾರೆ.

ಪಶುಪಾಲನಾ ಇಲಾಖೆ ನಡೆಸುತ್ತಿರುವ ಗೋ–ಶಾಲೆಗೆ ಬೆಂಗಳೂರು ಡೈರಿ ಸಹಕಾರ ನೀಡಿ ಬೆಂಬಲಿಸಿದೆ. ಬರಗಾಲದ ಕಾರಣ ರೈತರು ನೀಡುವ ಹಾಲಿಗೆ ₹2 ಹೆಚ್ಚಳ, ಪಶು ಆಹಾರದ ಮೂಟೆಗೆ ₹150ರಷ್ಟು ಕಡಿಮೆ, ಮುಸುಕಿನ ಬಿತ್ತನೆ ಜೋಳಕ್ಕೆ ಶೇಕಡ 50 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದು ಬಮೂಲ್‌ನ ವ್ಯವಸ್ಥಾಪಕ ಡಾ. ಜಗದೀಶ್‌ ತಿಳಿಸಿದರು.

‘ಬೇಸಿಗೆ ಮುಗಿಯುವವರೆಗೂ ರೈತರಿಗೆ ಬೆಂಬಲವಾಗಿ ಇರುತ್ತೇವೆ, ಎಲ್ಲಿ ನೀರಿನ ತೊಟ್ಟಿ ಅವಶ್ಯಕತೆಯಿದೆಯೋ ಅಲ್ಲಿ ರಾಸುಗಳ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ತೊಟ್ಟಿ ನಿರ್ಮಾಣ ಮಾಡುವಂತೆ ಡೇರಿಗಳಿಗೆ ಸೂಚನೆ ನೀಡಿದ್ದೇವೆ. ರಾಮನಗರ ಜಿಲ್ಲೆಯಲ್ಲಿ ಒಟ್ಟು 50 ಸಾವಿರ ಹಾಲು ಉತ್ಪಾದಕ ರೈತರಿದ್ದಾರೆ. ಎಲ್ಲರಿಗೂ ಬೇಸಿಗೆ ನಿರ್ವಹಣೆಗೆ ಬೆಂಗಳೂರು ಡೇರಿ ಸಹಕರಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT