ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರಕ್ಕೆ ಹಕ್ಕಿಪಿಕ್ಕಿ ಜನಾಂಗದವರ ಅಲೆದಾಟ

ತಾಲ್ಲೂಕು ಕಚೇರಿ ಮುಂದೆ ಬೀಡುಬಿಟ್ಟ ಕುಟುಂಬಗಳು
Last Updated 5 ಜನವರಿ 2017, 10:58 IST
ಅಕ್ಷರ ಗಾತ್ರ

ಕನಕಪುರ: ತಮ್ಮ ಕುಟುಂಬಕ್ಕೂ ಸರ್ಕಾರದಿಂದ ಸಾಗುವಳಿ ಮಂಜೂರಾತಿ ನೀಡಿ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿ ಹಕ್ಕಿಪಿಕ್ಕಿ (ಅಲೆಮಾರಿ) ಜನಾಂಗದ ಕುಟುಂಬಗಳು ನಿರಂತರವಾಗಿ ತಾಲ್ಲೂಕು ಕಚೇರಿ ಮುಂಭಾಗ ಬೀಡು ಬಿಟ್ಟಿದ್ದಾರೆ. 

ತಾಲ್ಲೂಕಿನ ಗಡಿ ಭಾಗವಾದ ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ ಜಂಗಲ್‌ ಲಾಡ್ಜ್‌ ಬಳಿಯ ರಾಗಿಹಳ್ಳಿಯಲ್ಲಿ ಈ ಕುಟುಂಬಗಳು ನೆಲೆಸಿವೆ. ಸರ್ಕಾರದ ಹಿಂದಿನ ಗಣತಿ ಪ್ರಕಾರ 121 ಕುಟುಂಬಗಳು ನೆಲೆಸಿದ್ದು 1962ರಲ್ಲಿ ಇಲ್ಲಿನ ಎಲ್ಲಾ ಕುಟುಂಬಗಳಿಗೆ 350 ಎಕರೆ ಭೂಮಿಯನ್ನು ಸರ್ಕಾರ ಮಂಜೂರಾತಿ ಮಾಡಿತ್ತು. ಮಂಜೂರಾಗಿದ್ದ ಭೂಮಿ ಅರಣ್ಯ ಪ್ರದೇಶದ ಅಧೀನದಲ್ಲಿದ್ದುದರಿಂದ ಈ ಕುಟುಂಬಗಳಿಗೆ ಸಿಕ್ಕಿರಲಿಲ್ಲ.

ನಂತರದ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಒಡಂಬಡಿಕೆಯಂತೆ ಅಷ್ಟು ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ಅರಣ್ಯ ಇಲಾಖೆ ಬಿಟ್ಟುಕೊಟ್ಟಿದೆ. ಬಳಿಕ ಸರ್ಕಾರವು ಸಾಗುವಳಿದಾರರಿಗೆ ಮಂಜೂರಾತಿ ಹಕ್ಕುಪತ್ರ ವಿತರಣೆಗೆ ಮುಂದಾದಾಗ 83 ಕುಟುಂಬಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡು ಗೊಂದಲ ಶುರುವಾಗಿದೆ.

‘ತಂದೆ, ತಾತನ ಕಾಲದಲ್ಲಿ ಇಲ್ಲೇ ಇದ್ದೆವು, ನಂತರದ ದಿನಗಳಲ್ಲಿ ಹೊರಗಡೆ ಹೋಗಿದ್ದೇವೆ. ನಮ್ಮ ಕುಟುಂಬಕ್ಕೂ ಇಲ್ಲಿ ಸಾಗುವಳಿ ಭೂಮಿ ಬರಬೇಕೆಂದು ಒತ್ತಾಯ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಎಲ್ಲಾ ಕುಟುಂಬಗಳ ಹಿನ್ನೆಲೆಯನ್ನು ಪತ್ತೆಹಚ್ಚಿ ಅವರ ದಾಖಲೆಗಳನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವು ಉಪ ವಿಭಾಗಾಧಿಕಾರಿಗೆ ಜವಾಬ್ದಾರಿ ನೀಡಿದೆ ಎಂದು ಜನಾಂಗದವರೊಬ್ಬರು ತಿಳಿಸಿದರು.


ತಾಲ್ಲೂಕು ಕಚೇರಿಯಲ್ಲಿ ಪ್ರತಿದಿನ ಕುಟುಂಬಗಳಿಂದ ಹೇಳಿಕೆ ಪಡೆದು ದಾಖಲಿಕರಿಸಬೇಕಿರುವುದರಿಂದ ರಾಗಿಹಳ್ಳಿಯಲ್ಲಿ ನೆಲೆಸಿದ್ದ ಅಷ್ಟು ಕುಟುಂಬಗಳು ಕುಟುಂಬ ಸಮೇತರಾಗಿ ಕನಕಪುರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಾಸ್ತವ್ಯ ಹೂಡಿವೆ.

ರಾಗಿಹಳ್ಳಿ ಪ್ರದೇಶವು ಬೆಂಗಳೂರಿಗೆ ತೀರ ಹತ್ತಿರದಲ್ಲಿರುವುದರಿಂದ ಭೂಮಿ ಬೆಲೆಯು ಅತ್ಯಂತ ದುಬಾರಿಯಾಗಿದ್ದು ಅರ್ಹ ಫಲಾನುಭವಿಗಳನ್ನು ಬಿಟ್ಟು ಮತ್ಯಾರಿಗೋ ಅವಕಾಶ ಆಗಬಾರದು ಎಂಬ ಕಾರಣದಿಂದ ಅರ್ಜಿ ಹಾಕಿರುವ ಎಲ್ಲಾ ಕುಟುಂಬಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿರುವುದಾಗಿ ತಹಶೀಲ್ದಾರ್‌  ಆರ್‌.ಯೋಗಾನಂದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT