ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲೆಬ್ಬಿಸುವ ಯತ್ನಕ್ಕೆ ವಿರೋಧ

ವಿವಿಧ ಹಳ್ಳಿಗಳ ಜನರಿಂದ ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆ
Last Updated 5 ಜನವರಿ 2017, 10:59 IST
ಅಕ್ಷರ ಗಾತ್ರ

ರಾಮನಗರ: ಭೂ ಮಂಜೂರಾತಿ ಜಮೀನನ್ನು ಭೂಮಾಫಿಯಾ ನಡೆಸುವವರಿಗೆ ಅನುಕೂಲ ಮಾಡಿಕೊಡಲು ಅರಣ್ಯ ಇಲಾಖೆ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಸಿಡಿದೇವರಹಳ್ಳಿ, ರಾಮಚಂದ್ರರಾಯನದೊಡ್ಡಿ, ಚಿಕ್ಕಮರಳವಾಡಿ ಬೋಸ್ಲೆದೊಡ್ಡಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಂಗಳವಾರ ದೂರು ಸಲ್ಲಿಸಿದರು.

ಭೂರಹಿತರಿಗೆ ಸಿಡಿದೇವರಹಳ್ಳಿ ಗ್ರಾಮದ ಸರ್ವೆ ನಂ. 104ರಲ್ಲಿ 418 ಎಕರೆ ಗೋಮಾಳದ ಭೂಮಿಯನ್ನು 1970 ರಿಂದ 1990ರವರೆಗೆ ನೂರಾರು ರೈತರಿಗೆ ಸರ್ಕಾರ ಭೂಮಂಜೂರಾತಿ ನೀಡಿದೆ. ಇದರಂತೆ ರೈತರಿಗೆ ಭೂಮಂಜೂರಾತಿ ಪತ್ರ ವಿತರಣೆ ಮಾಡಿ, ಪಹಣಿ, ಮ್ಯುಟೇಶನ್, ನಕ್ಷೆ ತಯಾರಿ ಮಾಡಿ ಭೂಮಿ ನೀಡಲಾಗಿತ್ತು ಎಂದರು.

ರೈತರು ಕಾಲಕಾಲಕ್ಕೆ ಕಂದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದು, ಭೂಮಂಜೂರಾತಿ ಶುಲ್ಕವನ್ನು ಸಹ ಸರ್ಕಾರಕ್ಕೆ ಪಾವತಿಸುತ್ತಾ ಬಂದಿದ್ದರೂ ರೈತರನ್ನು ಕಳೆದ 4-5 ದಿನಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶ ಎಂದು ಒಕ್ಕಲೆಬ್ಬಿಸಲು ಬಂದಿದ್ದಾರೆ ಎಂದು ಆರೋಪಿಸಿದರು. ರೈತರು ಕೊಳವೆ ಬಾವಿ ಕೊರೆಸಿ ವಿವಿಧ ಹಣಕಾಸು ಸಂಸ್ಥೆ, ಬ್ಯಾಂಕುಗಳಿಂದ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ವಿವಿಧ ರೀತಿಯಲ್ಲಿ ಭೂ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಕನಕಪುರ ತಾಲ್ಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಭೂಮಾಫಿಯಾಗೆ ಅನುಕೂಲ ಮಾಡಿಕೊಡಲು ನಾವು ಉಳುಮೆ ಮಾಡುತ್ತಿರುವ ಜಮೀನು `ದುರ್ಗದ ಕಲ್ಲು’ ಅರಣ್ಯ ಪ್ರದೇಶಕ್ಕೆ ಸೇರಿರುತ್ತದೆ ಎಂಬುದಾಗಿ ಹೇಳುತ್ತಾ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಾವು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ. ಸರ್ಕಾರ ಮಂಜೂರು ಮಾಡಿ ನಕ್ಷೆಯಲ್ಲಿ ತೋರಿಸಿರುವಂತಹ ಜಾಗದಲ್ಲಿಯೇ ಉಳುಮೆ ಮಾಡುತ್ತಿರುತ್ತೇವೆ.

ನಮಗೆ ನೀಡಿರುವ ಜಮೀನಿನಲ್ಲಿ ರೇಷ್ಮೆ, ತೆಂಗು, ಮಾವು, ತರಕಾರಿ, ಹಣ್ಣು, ಆಹಾರ ಧಾನ್ಯ ಬೆಳೆಯುತ್ತಿದ್ದೇವೆ. ಕಂದಾಯ, ಅರಣ್ಯ ಇಲಾಖೆ ಜಂಟಿ ಸಹಯೋಗದೊಂದಿಗೆ ಅಳತೆ ಮಾಡಿಸಿ ವಾಸ್ತವ ಸತ್ಯಾಸತ್ಯತೆಯನ್ನು ಮನಗಾಣಬೇಕು. ರೈತರ ಬಳಿ ಇರುವ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಸೂಕ್ತ ನಿರ್ಧಾರಕ್ಕೆ ಬರಬೇಕು. ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು’ ಎಂದು ಒತ್ತಾಯಿಸಿದರು.

ಜೆಸಿಬಿಗಳನ್ನು ರೈತರ ಜಮೀನಿಗೆ ತಂದು ಕಾಲುವೆ ನಿರ್ಮಾಣ ಹಾಗೂ ತಂತಿಬೇಲಿ ಹಾಕಿ ಅಭಿವೃದ್ಧಿ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನು ಖಂಡಿಸಿ ನಾಲ್ಕೈದು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಕೂಡಲೇ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸದಿದ್ದರೆ ನಿರಂತರ ಧರಣಿ, ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ಗ್ರಾಮಸ್ಥರಾದ ವರದೇಗೌಡ ಕೃಷ್ಣ, ಶಶಿ, ವೆಂಕಟಮ್ಮ, ರಾಮಕೃಷ್ಣ, ಮಹಾಲಿಂಗಯ್ಯ, ರಾಮಕೃಷ್ಣಯ್ಯ, ಡಿ.ಕೆ.ರಾಜು, ಕೃಷ್ಣಪ್ಪ, ಚಂದ್ರು, ರಾಮಾನಾಯಕ್, ಸಿದ್ದಮ್ಮ, ಸಿದ್ದರಾಜು, ಸುನೀಲ್, ಶಿವಮ್ಮ, ಲಕ್ಷ್ಮಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT