ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಸಂಕ್ರಮಣದ ನಿರೀಕ್ಷೆಯಲ್ಲಿ ಸೂರ್ಯ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಹೆಸರಿನಲ್ಲೇ ಯಶಸ್ಸು ಇದ್ದರೂ ಒಂದು ಗೆಲುವಿಗಾಗಿ ಎದುರು ನೋಡುತ್ತಿರುವ ನಟ ಯಶಸ್ ಸೂರ್ಯ. ನಾಯಕ ನಟನಾಗಿ ಅಭಿನಯಕ್ಕೆ ಮೆಚ್ಚುಗೆ ಪಡೆದಿದ್ದರೂ ಸಿನಿಮಾ ಮಾತ್ರ ನೋಡುಗರಿಗೆ ತಲುಪಲಿಲ್ಲ. ಅವರೀಗ ‘ಸೈಕೋ ಶಂಕ್ರ’ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ತೆರೆಕಂಡ ‘ಓ ಗುಲಾಬಿ’ ಯಶಸ್‌ ನಟನೆಯ ಮೊದಲ ಚಿತ್ರ. ಅದಕ್ಕೂ ಮುನ್ನ ಮಾಡೆಲಿಂಗ್ ಮಾಡುತ್ತಿದ್ದ ಅವರು ‘ಮಿಸ್ಟರ್ ಕರ್ನಾಟಕ’ ಆದವರು. ಮಾಡೆಲಿಂಗ್ ಮೂಲಕ ಚಿತ್ರರಂಗದ ಬಂಧ ಬೆಳೆಯಿತು. ತುಳು ಚಿತ್ರ ‘ಬದಿ’ಯಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು.

ಕನ್ನಡದಲ್ಲಿ ನಾಯಕನಾಗಿ ಪರಿಚಯವಾಗಿದ್ದು ‘ಯುಗ ಯುಗಗಳೇ ಸಾಗಲಿ’ ಮೂಲಕ. ಅದರ ಬೆನ್ನಿಗೆ ‘ಶಿಶಿರ’ ತೆರೆಕಂಡಿತು. ಆದರೆ, ಯಾವುದೂ ಯಶಸ್‌ಗೆ ಮೆಟ್ಟಿಲಾಗಿ ಪರಿಣಮಿಸಲಿಲ್ಲ. ‘ಏಳು ವರ್ಷಗಳ ಹಿಂದೆ ತೆರೆಕಂಡಿದ್ದ ‘ಶಿಶಿರ’ ಹಾರರ್ ಟ್ರೆಂಡ್ ಜೋರಾಗಿರುವ ಈಗ ಬಂದಿದ್ದರೆ ಬ್ಲಾಕ್ ಬಸ್ಟರ್ ಆಗುತ್ತಿತ್ತು’ ಎಂದು ಯಶಸ್ ನಂಬುತ್ತಾರೆ.

ಎರಡು ಚಿತ್ರಗಳ ನಂತರ, ನಟನೆಯಲ್ಲಿ ತಾನು ಇನ್ನೂ ಪಳಗಬೇಕು ಎಂದು ಕಂಡುಕೊಂಡ ಯಶಸ್ ರಂಗಭೂಮಿಯತ್ತ ಮುಖ ಮಾಡಿದರು. ‘ಸೂರ್‍ಯ ಕಲಾವಿದರು’ ತಂಡ ಸೇರಿದ ಅವರು ಮೊದಲ ಆರು ತಿಂಗಳು ಮಾಡಿದ್ದು ನಾಟಕ ನೋಡುವ ಕೆಲಸವನ್ನಷ್ಟೇ. ನಂತರ ಚಿಕ್ಕ ಪಾತ್ರಗಳಿಂದ ಆರಂಭಿಸಿ ಮುಖ್ಯ ಪಾತ್ರದವರೆಗೆ ಒಂದೂವರೆ ವರ್ಷ ನಾಟಕಗಳಲ್ಲಿ ಅಭಿನಯಿಸಿ ಮತ್ತೆ ಚಿತ್ರರಂಗಕ್ಕೆ ವಾಪಸಾದರು. ರಂಗಭೂಮಿ ತುಂಬುವ ಧೈರ್ಯ, ಹುಮ್ಮಸ್ಸನ್ನು ಚೆನ್ನಾಗಿ ಬಳಸಿಕೊಂಡರೆ ಸಿನಿಮಾಗಳಲ್ಲಿ ನಟಿಸುವ ವಿಶ್ವಾಸ ಇಮ್ಮಡಿಯಾಗುತ್ತದೆ ಎಂಬುದು ಅವರು ಕಂಡುಕೊಂಡ ಸತ್ಯ.

ಪೋಷಕ ಪಾತ್ರಗಳಲ್ಲಿ ನಟಿಸುತ್ತಲೇ ದೊಡ್ಡ ಮಟ್ಟದಲ್ಲಿ ಕನ್ನಡದ ಪ್ರೇಕ್ಷಕನ ಎದುರು ಮತ್ತೊಮ್ಮೆ ಬರುವ ತಯಾರಿ ಯಶಸ್ ನಡೆಸಿದ್ದರು. ಮಾಸ್ ಇಮೇಜ್‌ನಲ್ಲಿ ಪರಿಚಯವಾಗಲು ಗಡ್ಡ, ಕೂದಲು ಬಿಟ್ಟು, ಸಿಕ್ಸ್ ಪ್ಯಾಕ್ ಮಾಡಿಕೊಂಡು ಹೊಸ ಗೆಟಪ್‌ನಲ್ಲಿ ತಯಾರಾಗಿದ್ದರು. ಆ ಚಿತ್ರಕ್ಕೆ ಹೆಚ್ಚಿನ ಸಮಯ ನೀಡುವ ನಿಟ್ಟಿನಲ್ಲಿ ಬೇರೆ ಯಾವ ಚಿತ್ರವನ್ನೂ ಅವರು ಒಪ್ಪಿಕೊಂಡಿರಲಿಲ್ಲ. ಅರುಣ್ ಎಂಬ ಹೊಸ ನಿರ್ದೇಶಕರು ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಸಿದ್ಧತೆ ನಡೆಸಿದ್ದರು. ಆದರೆ ನಿರ್ಮಾಪಕರಿಗೆ ತೊಂದರೆ ಎದುರಾದ ಕಾರಣ ಆ ಸಿನಿಮಾ ಸೆಟ್ಟೇರಲಿಲ್ಲ.

ನಾಯಕನಾಗಿ ನಟಿಸುವ ಉತ್ಸಾವಿದ್ದರೂ ಪೋಷಕ ಪಾತ್ರಗಳಲ್ಲೇ ಅಭಿನಯಿಸುವ ಮಿತಿ ಅವರದ್ದಾಗಿದೆ. ‘ಪರಮಶಿವ’ದಲ್ಲಿ ಪೋಷಕ ನಟನಾಗಿದ್ದರೂ ರವಿಚಂದ್ರನ್ ಜೊತೆ ತೆರೆ ಹಂಚಿಕೊಂಡ ಯಶಸ್‌ಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಸಮಾಧಾನವಿದೆ. ಅವರ ಪೋಷಕ ಪಾತ್ರಧಾರಿಯ ಪಟ್ಟಿಯಲ್ಲಿ ‘ಸೈನೈಡ್’, ‘ಚಿಂಗಾರಿ’, ‘ಮೈಲಾರಿ’, ‘ಸಂಗಮ’, ‘ಶ್ರಾವಣಿ ಸುಬ್ರಮಣ್ಯ’ ಚಿತ್ರಗಳೂ ಇವೆ. ತನ್ನ ಲವರ್ ಬಾಯ್ ಇಮೇಜ್‌ನಿಂದ ಹೊರಬರಲೆಂದೇ ಯಶಸ್ ‘ಶ್ರಾವಣಿ ಸುಬ್ರಮಣ್ಯ’ದಲ್ಲಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡರು. ‘ಚಿಂಗಾರಿ’ಯಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ ನಂತರ, ಅಂಥದ್ದೇ ಪಾತ್ರಗಳು ಹುಡುಕಿಕೊಂಡು ಬಂದವು.

ಒಮ್ಮೆ ನಾಯಕ ನಟನಾಗಿ ನಟಿಸಿದ ನಂತರ ಮತ್ತೆ ಪೋಷಕ ಪಾತ್ರದಲ್ಲಿ ನಟಿಸುವ ಮನಸ್ಥಿತಿಯನ್ನು ಯಶಸ್ ಸಾವಧಾನದಿಂದಲೇ ನಿಭಾಯಿಸಿದ್ದಾರೆ. ಒಳ್ಳೆಯ ಪಾತ್ರಗಳು ಸಿಕ್ಕಾಗ ತಿರಸ್ಕರಿಸದ ಯಶಸ್, ಹೆಸರಾಂತ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶವನ್ನು ತಪ್ಪಿಸಿಕೊಳ್ಳಲೂ ಸಿದ್ಧರಿಲ್ಲ.

ರವಿಚಂದ್ರನ್, ಗಣೇಶ್, ದರ್ಶನ್, ಶಿವರಾಜಕುಮಾರ್ ಅವರೊಂದಿಗಿನ ಒಡನಾಟ ಯಶಸ್‌ಗೆ ಅವಕಾಶಗಳನ್ನು ತಂದುಕೊಟ್ಟಿವೆ. ಅದೇ ಕಾರಣಕ್ಕೆ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾದಲ್ಲಿ ಯಶಸ್ ಕಾಣಿಸಿಕೊಳ್ಳುತ್ತಿರುವುದು. ಲಕ್ಕಿ ಶಂಕರ್ ನಿರ್ದೇಶನದ ‘ಜಿಲೇಬಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.

‘ನಾಯಕನಾಗಿಯೂ ಒಂದು ಪಾತ್ರವನ್ನೇ ನಿರ್ವಹಿಸುತ್ತೇವೆ. ಪೋಷಕ ಕಲಾವಿದನಾಗಿಯೂ ಒಂದು ಪಾತ್ರವನ್ನೇ ನಿರ್ವಹಿಸುತ್ತೇವೆ. ಇಲ್ಲಿ ನಾಯಕನೆಂಬ ಹಣೆಪಟ್ಟಿ ಮಾತ್ರ ಇರುವುದಿಲ್ಲ’ ಎನ್ನುತ್ತಾರೆ.

ಚಿತ್ರರಂಗ ತನ್ನನ್ನು ಗುರ್ತಿಸಿಲ್ಲ ಎಂಬ ಬೇಸರವಿದ್ದರೂ, ‘ಯಶಸ್ಸಿನ ಅದೃಷ್ಟ ಸಿಕ್ಕಿಲ್ಲ. ಅಭಿನಯಿಸಿದ ಸಿನಿಮಾಗಳು ಪ್ರೇಕ್ಷಕರಿಗೆ ತಲುಪಲಿಲ್ಲ. ಪ್ರೇಕ್ಷಕನಿಗೆ ಇಷ್ಟವಾಗುವಂತಹ ಸಿನಿಮಾ ಸಿಗಲು ಇನ್ನಷ್ಟು ಕಾಯಬೇಕು’ ಎಂದು ತಮ್ಮನ್ನು ಸಮಾಧಾನ ಮಾಡಿಕೊಳ್ಳುತ್ತಾರೆ.

‘ಸೈಕೋ ಶಂಕ್ರ’ ಚಿತ್ರದಲ್ಲಿ ಮಾಸ್ ಎಲಿಮೆಂಟ್ ಇರುವ ಲವರ್ ಬಾಯ್ ಪಾತ್ರಕ್ಕೆ ಯಶಸ್ ಬಣ್ಣಹಚ್ಚಿದ್ದಾರೆ. ‘ಟಕೀಲಾ’ ಸಿನಿಮಾ ಮಾಡುತ್ತಿದ್ದಾಗ ಆ ಚಿತ್ರತಂಡದ ಸದಸ್ಯರಾಗಿದ್ದ ಪ್ರಸನ್ನ ಎಂಬುವವರಿಂದ ಯಶಸ್‌ಗೆ ‘ಸೈಕೋ ಶಂಕ್ರ’ ತಂಡದ ಪರಿಚಯವಾಯಿತು. ‘ಟಕೀಲಾ ಅರ್ಧಕ್ಕೇ ನಿಂತಿದೆ. ಸೈಕೋ ಶಂಕ್ರ ಕೈ ಹಿಡಿಯುವ ಭರವಸೆ ಇದೆ’ ಎನ್ನುವ ಅವರು ಮತ್ತೆ ನಾಯಕನಾಗಿ ಪರಿಚಯವಾಗುವ ಸಿದ್ಧತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT