ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯ ಪ್ರಭಾವಳಿಯಲ್ಲಿ ‘ಶ್ರದ್ಧಾ’ ಭಕ್ತಿ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಮುಖದಲ್ಲಿ ಸಡಗರ ಎದ್ದುಕಾಣುತ್ತಿತ್ತು. ಕಣ್ಣುಗಳು ಆಕಾಶದ ನಕ್ಷತ್ರಗಳಿಂದ ಪ್ರಭೆಯನ್ನು ಎರವಲು ಪಡೆದ ಹಾಗೆ ಹೊಳೆಯುತ್ತಿದ್ದವು. ಮುಂಗುರುಳು ಹಿಂದೆ ಸರಿಸಿದಷ್ಟೂ ಮತ್ತೆ ಮತ್ತೆ ಸುತ್ತಿ ಸುಳಿದು ಸತಾಯಿಸುತ್ತಿದ್ದವು. ಕಿವಿಯಲ್ಲಿ ಉದ್ದದ ಓಲೆ ಅವರ ಮನದೊಳಗಿನ ಸಂಭ್ರಮಕ್ಕೆ ಸಾಥ್‌ ನೀಡುವ ಹಾಗೆ ಹದವಾಗಿ ನರ್ತಿಸುತ್ತಿದ್ದವು.

‘2016....’ ತುಸು ಹೊತ್ತು ತಡೆದು ಒಮ್ಮೆ ಕೆನ್ನೆಯುಬ್ಬಿಸಿ ಉಸಿರು ಬಿಟ್ಟು ‘ಒಂಥರಾ ಡ್ರೀಂ ಇಯರ್‌ ಅಂಥಾರಲ್ಲಾ, ಈ ವರ್ಷ ನನ್ನ ಪಾಲಿಗೆ ಹಾಗಾಗಿದೆ’ ಎಂದು ವಾಕ್ಯ ಪೂರ್ಣಗೊಳಿಸಿದರು ಶ್ರದ್ಧಾ ಶ್ರೀನಾಥ್‌. ನಂತರ ಗಾಳಿಗೆ ಓಲಾಟಕ್ಕೆ ಮರದೆಲೆಗಳಿಂದ ಒಮ್ಮೆಲೇ ಹನಿಗಳು ಉದುರಿದಂತೆ ನಕ್ಕು ತಮ್ಮನ್ನು ತಾವೇ ಸಂತೈಸಿಕೊಂಡರು.

ಹೌದು, ಶ್ರದ್ಧಾ ಪಾಲಿಗೆ ಇದು ಅದೃಷ್ಟದ ವರ್ಷವೇ. ಪವನ್‌ ಕುಮಾರ್‌ ನಿರ್ದೇಶನದ ‘ಯೂ ಟರ್ನ್‌’ ಸಿನಿಮಾದ ಮೂಲಕ ಅವರ ಬಣ್ಣದ ಬದುಕಿನ ಪ್ರಯಾಣವೂ ಉನ್ನತಿಯ ದಾರಿಗೆ ತಿರುವಿಕೊಂಡಿದೆ.

‘ಯೂ ಟರ್ನ್‌’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಾಗ ಅವರ ಬಳಿ ಯಾವ ಅವಕಾಶವೂ ಇರಲಿಲ್ಲ. ಆದ್ದರಿಂದ ‘ಆಯ್ಕೆ’ಯ ಪ್ರಶ್ನೆ ಬರಲಿಲ್ಲ. ಹಾಗೆಂದು ‘ಯಾವುದಾದರೂ ಸರಿ, ಸಿನಿಮಾ ಸಿಕ್ಕರೆ ಸಾಕು’ ಎಂಬ ಮನಸ್ಥಿತಿ ಅವರದಾಗಿರಲಿಲ್ಲ. ಆದರೆ ಪವನ್‌ ಕುಮಾರ್‌ ಅವರಂಥ ಪ್ರತಿಭಾವಂತ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಿರಾಕರಿಸಲು ಹೇಗೆ ಸಾಧ್ಯ?

‘‘ಯೂ ಟರ್ನ್‌’ ನನ್ನ ಡ್ರೀಂ ಡೆಬ್ಯೂ’ ಎಂದೇ ಅವರು ಕರೆದುಕೊಳ್ಳುತ್ತಾರೆ. ಯೂ ಟರ್ನ್‌ ನಂತರ ಶ್ರದ್ಧಾ ಅಂಗಳದಲ್ಲಿ ಅವಕಾಶಗಳ ಸರಮಾಲೆಯೇ ಸೃಷ್ಟಿಗೊಂಡಿದೆ. ಆದರೆ ಮೊದಲೇ ಹೇಳಿದಂತೆ ಅವರು ಸಾಕಷ್ಟು ಚ್ಯೂಸಿ. ಅಲ್ಲದೆ ಮೊದಲ ಸಿನಿಮಾದಲ್ಲಿ ಗಳಿಸಿಕೊಂಡ ಹೆಸರು, ನಿರೀಕ್ಷೆಯನ್ನು ಕಳೆದುಕೊಳ್ಳಬಾರದು ಎಂಬ ಎಚ್ಚರವೂ ಅವರಿಗಿದೆ.

ಶ್ರದ್ಧಾ ಅವರು ಒಂದು ಸಿನಿಮಾ ಒಪ್ಪಿಕೊಳ್ಳಬೇಕಾದರೆ ಸ್ಕ್ರಿಪ್ಟ್‌ ಅನ್ನು ಕೂಲಂಕಶವಾಗಿ ಗಮನಿಸುತ್ತಾರೆ. ಹಾಗೆಯೇ ನಿರ್ದೇಶಕರು ಯಾರು, ಸಹನಟರು ಯಾರು ಎನ್ನುವುದೂ ಅವರಿಗೆ ಅಷ್ಟೇ ಮುಖ್ಯ.

ಸದ್ಯಕ್ಕೆ ಅವರು ಅಭಿನಯಿಸಿರುವ ‘ಆಪರೇಷನ್‌ ಅಲವೇಲಮ್ಮ’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿಯೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖುಷಿ ಅವರದು.

ಪ್ರದೀಪ್‌ ವರ್ಮ ನಿರ್ದೇಶನದ ‘ಉರ್ವೀ’ ಎಂಬ ಮಹಿಳಾಪ್ರಧಾನ ಸಿನಿಮಾದಲ್ಲಿ ಶ್ರುತಿ ಹರಿಹರನ್‌ ಮತ್ತು ಶ್ವೇತಾ ಪಂಡಿತ್‌ ಅವರ ಜತೆ ನಟಿಸಿದ್ದಾರೆ. ಈ ಸಿನಿಮಾದ ಕುರಿತು ಅವರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

‘ಉರ್ವೀ’ ಸಿನಿಮಾದ ಪೋಸ್ಟರ್‌ ನೋಡಿದವರೆಲ್ಲ ಇದು ಹಿಂದಿಯ ‘ಪಿಂಕ್‌’ ಥರದ ಕಥೆಯೇ ಎಂದು ಕೇಳುತ್ತಿದ್ದಾರಂತೆ. ಆದರೆ ಅದನ್ನು ಸ್ಪಷ್ಟವಾಗಿ ನಿರಾಕರಿಸುವ ಶ್ರದ್ಧಾ ‘ಪಿಂಕ್‌ ಮತ್ತು ಉರ್ವೀಯಲ್ಲಿ ಎರಡು ಸಾಮಾನ್ಯ ಸಂಗತಿಗಳಿವೆ. ಒಂದು ಎರಡೂ ಸಿನಿಮಾದಲ್ಲಿ ಮೂರು ನಾಯಕಿಯರು ಮತ್ತೊಂದು ಎರಡೂ ಚಿತ್ರದಲ್ಲಿ ಒಂದು ಸಾಮಾಜಿಕ ಸಂದೇಶವಿದೆ. ಅಷ್ಟೆ’ ಎನ್ನುತ್ತಾರೆ.

ತೆಲುಗಿನ ‘ಪೆಳ್ಳಿ ಚೂಪ್ಲು’ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ. ತಮಿಳಿನಲ್ಲಿಯೂ ಶ್ರದ್ಧಾಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಈಗಾಗಲೇ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಮಹಿಳಾ ಪ್ರಧಾನ ಪಾತ್ರಗಳೇ ಹೆಚ್ಚು ಸಿಗುತ್ತಿವೆಯಲ್ಲವೇ ಎಂಬ ಪ್ರಶ್ನೆಗೆ ಮುಖಾಮುಖಿಯಾಗುತ್ತ ಶ್ರದ್ಧಾ ಅವರ ಮಾತು ಕನ್ನಡ ಚಿತ್ರರಂಗದಲ್ಲಿ ನಾಯಕಿಯರನ್ನು ನೋಡುವ ಕ್ರಮದ ಕುರಿತು ಹೊರಳಿಕೊಂಡಿತು.

ನಾಯಕಿ ಎಂದರೆ ಸುಂದರವಾಗಿ ಕಾಣಿಸಿಕೊಳ್ಳಬೇಕು. ಒಂದಿಷ್ಟು ನೃತ್ಯ ಮಾಡಬೇಕು. ಗ್ಲ್ಯಾಮರ್‌ ಇರಬೇಕು ಎಂಬ ಸೀಮಿತ ದೃಷ್ಟಿಕೋನದಿಂದಲೇ ನೋಡುವುದರ ಬಗ್ಗೆ ಅವರಿಗ ಬೇಸರವಿದೆ.

ಉರ್ವೀ ಚಿತ್ರದ ಪೋಸ್ಟರ್‌ ನೋಡಿದ ಹಲವರು ಶ್ರದ್ಧಾ ಅವರಲ್ಲಿ ‘ಓ.. ಈ ಸಿನಿಮಾ ಮಾಡುತ್ತಿದ್ದೀರಾ? ನಾಯಕ ಯಾರು?’ ಎಂದು ಕೇಳುತ್ತಾರಂತೆ. ಅಂಥವರಿಗೆ ಶ್ರದ್ಧಾ ‘ನಾಯಕ ಯಾಕೆ ಅಷ್ಟು ಮುಖ್ಯ?’ ಎಂದು ಪ್ರಶ್ನಿಸಿರುವುದಷ್ಟೇ ಅಲ್ಲ, ‘ನಾಯಕ ಬೇಕು ನಿಜ. ಆದರೆ ನಮ್ಮ ಈ ಸಿನಿಮಾಗೆ ನಾಯಕ ಇಲ್ಲ. ಏನಿವಾಗ? ಸಿನಿಮಾ ನೋಡಿ, ಎಷ್ಟು ವಿಭಿನ್ನವಾಗಿದೆ ತಿಳಿಯುತ್ತದೆ’ ಎಂದು ಖಾರವಾಗಿಯೇ ಉತ್ತರಿಸಿ ಕಳಿಸಿದ್ದಿದೆ.

‘ಯೂ ಟರ್ನ್‌’ ಸಿನಿಮಾ ಹಾಗೂ ‘ಉರ್ವೀ’ ಟ್ರೈಲರ್‌ಗಳಿಗೆ ಜನರು ಸ್ಪಂದಿಸಿರುವ ರೀತಿ ಅವರ ವಿಶ್ವಾಸವನ್ನು ಹೆಚ್ಚಿಸಿದೆ. ‘ಜನರು ಇಂಥ ಸಿನಿಮಾಗಳಿಗಾಗಿ ಕಾದಿದ್ದರು ಎನಿಸುತ್ತದೆ’ ಎನ್ನುತ್ತಾರೆ.

‘ಮಹಿಳಾ ಕೇಂದ್ರಿತ ಸಿನಿಮಾಗಳಿಗೂ ಒಂದು ನೋಡುಗ ವರ್ಗ ಇದೆ. ಆ ವರ್ಗವನ್ನು ತಲುಪಿದರೆ ಖಂಡಿತವಾಗಿಯೂ ಮಹಿಳಾಪ್ರಧಾನ ಸಿನಿಮಾಗಳೂ ಹಿರೋಯಿಸಂ ಸಿನಿಮಾಗಳಿಗೆ ಸರಿಸಮಾನವಾಗಿ ನಿಲ್ಲುತ್ತವೆ’ ಎಂದು ಖಚಿತವಾಗಿ ಹೇಳುತ್ತಾರೆ ಶ್ರದ್ಧಾ. ‘ಅಂಥ ಸಿನಿಮಾಗಳನ್ನು ಮಾಡಲು ಮುಂದೆ ಬರುವವರನ್ನು ಪ್ರೋತ್ಸಾಹಿಸಬೇಕು’ ಎಂಬ ಕಳಕಳಿಯೂ ಅವರಿಗಿದೆ. ಇದು ಹೊಸ ಬಗೆಯ ಬದಲಾವಣೆಯ ಮುನ್ಸೂಚನೆ ಎಂಬುದು ಅವರ ಅಭಿಪ್ರಾಯ.

ಕೇವಲ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯಷ್ಟೇ ನಟಿಸುತ್ತೇನೆ ಎಂದೇನೂ ಶ್ರದ್ಧಾ ಪ್ರತಿಜ್ಞೆ ಮಾಡಿಲ್ಲ. ‘ಮಹಿಳಾ ಪ್ರಧಾನ ಸಿನಿಮಾ ಸಿಕ್ಕರೆ ಒಳ್ಳೆಯದು. ಅದರ ಮೂಲಕ ಒಂದು ಸಾಮಾಜಿಕ ಸಂದೇಶ ನೀಡಲು ಸಾಧ್ಯವಾದರೆ ಇನ್ನೂ ಒಳ್ಳೆಯದು. ಯಾಕೆಂದರೆ ಸಿನಿಮಾ ಒಂದು ಪ್ರಬಲ ಮಾಧ್ಯಮ’ ಎನ್ನುವ ಅವರಿಗೆ, ನಟಿಯರ ಸುತ್ತ ಹೆಣೆದುಕೊಂಡಿರು ಮಿಥ್‌ಗಳ ಕುರಿತು ಅಸಮಾಧಾನವಿದೆ.

‘ಇಲ್ಲಿಯವರೆಗೂ ನಾಯಕಿ ಎಂದರೆ ಹೀಗೆ ಇರಬೇಕು ಎಂಬ ನಿಯಮಗಳನ್ನು ಇರಿಸಿಕೊಳ್ಳಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಆ ಸಿದ್ಧಮಾದರಿಯನ್ನು ಮುರಿದಾಗಲೂ ಜನರು ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ನಾನೇ ಉತ್ತಮ ನಿದರ್ಶನ’ ಎನ್ನುವ ಅವರಿಗೆ, ಇನ್ನು ಮುಂದೆ ‘ರೂಪಕ್ಕಿಂತ ಪ್ರತಿಭೆಗೆ ಹೆಚ್ಚು ಬೆಲೆ ಸಿಗುವ ಕಾಲ ಶುರುವಾಗಲಿದೆ’ ಎಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT