ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಕ್ಕಿ ಚುಕ್ಕಿ ಸೇರಿ ಆದ ರಂಗಿನ ರಂಗೋಲಿ...

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

* ಬಣ್ಣದ ಬದುಕಿನ ಈ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ಏನನಿಸುತ್ತದೆ?
ಊಹಿಸಿಕೊಳ್ಳಲಿಕ್ಕೇ ಆಗದಷ್ಟು ಅಚ್ಚರಿಗಳ ಪಯಣ ಇದು. ನಾನೆಲ್ಲೋ ಒಂದು ಖಾಕಿ ಪ್ಯಾಂಟು, ಖಾಕಿ ಷರ್ಟು ಹಾಕಿಕೊಂಡು ಯಾವುದೋ ಫ್ಯಾಕ್ಟರಿಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿರಬೇಕಿತ್ತು. ಬದುಕು ಎಷ್ಟೆಲ್ಲ ತಿರುವುಗಳನ್ನು ಪಡೆದುಕೊಂಡು ಇಲ್ಲಿಗೆ ಬಂದು ನಿಂತಿದೆ ಎಂದು ತಿರುಗಿ ನೋಡಿದರೆ ಆಶ್ಚರ್ಯವಾಗುತ್ತದೆ.

ನಾನು ಇಷ್ಟಪಟ್ಟು ನೋಡಿದ ಸಿನಿಮಾಗಳಲ್ಲಿನ ಹೀರೊಗಳ ಜೊತೆಗೆ ನಟಿಸಲು ಅವಕಾಶ ಸಿಕ್ಕಿತು. ಅವರ ಸಿನಿಮಾಗಳನ್ನು ನಿರ್ದೇಶಿಸಲು ಅವಕಾಶ ಸಿಕ್ಕಿತು. ಬಹಳ ಇಷ್ಟಪಡುತ್ತಿದ್ದ ನಿರ್ದೇಶಕರ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವಂತಾಯಿತು.

ಈ ಜೀವನದಲ್ಲಿ ಏನೆಲ್ಲ ವಿಸ್ಮಯಗಳು ಕಾದಿರುತ್ತವೆ ನೋಡಿ. ಆಗೆಲ್ಲ ಇವೇನೂ ತಿಳಿದಿರಲಿಲ್ಲ. ಸುಮ್ಮನೇ ಕೆಲಸ ಮಾಡಿಕೊಂಡು ಬರುತ್ತಿದ್ದೆ ಅಷ್ಟೆ. ಈ ಪ್ರಯಾಣದಲ್ಲಿ ನನಗೆ ತುಂಬ ಸ್ಪಷ್ಟವಾಗಿ ತಿಳಿದ ಸಂಗತಿ ಏನೆಂದರೆ – ನಮ್ಮ ಕೆಲಸಕ್ಕಿಂತ ದೊಡ್ಡ ಬ್ರ್ಯಾಂಡ್‌ ಯಾವುದೂ ಇಲ್ಲ.

ಯಾವುದೇ ಕ್ಷೇತ್ರ ಇರಲಿ, ನಿಮ್ಮ ಪಾಡಿಗೆ ನೀವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರೆ ಜೀವನದ ಎಲ್ಲ ಸುಂದರವಾದ ವಿಷಯಗಳೂ ನಿಮ್ಮ ಪಾಲಿಗೆ ಬರುತ್ತವೆ. ನಾನು ಮಾಡಿದ ಒಂದೊಂದು ಸಿನಿಮಾವೂ ಒಂದೊಂದು ಚುಕ್ಕಿ ಇದ್ದ ಹಾಗೆ. ಈಗ ಹಿಂತಿರುಗಿ ನೋಡಿದರೆ ಅವೆಲ್ಲ ಒಂದಕ್ಕೊಂದು ಸೇರಿ ಅದ್ಭುತವಾದ ರಂಗೋಲಿಯಾಗಿ ಕಾಣುತ್ತಿದೆ.

*  ಭಗ್ನಪ್ರೇಮಿ, ಲವರ್‌ ಬಾಯ್‌, ಹಾಸ್ಯನಟ ಹೀಗೆ ನಿಮ್ಮ ನಟನಾ ಬದುಕು ಹಲವು ‘ಇಮೇಜ್’ಗಳನ್ನು ಹಾದು ಬಂದಿದೆ. ಇದು ಹೇಗೆ ಸಾಧ್ಯವಾಯ್ತು?
ಬಹಳ ವರ್ಷ ರೊಮ್ಯಾಂಟಿಕ್‌ ಇಮೇಜ್‌ ಇತ್ತು. ಪಾತ್ರಕ್ಕೆ ಏನು ಬೇಕೋ ಅದನ್ನು ನಾನು ಹಿಂಜರಿಕೆ ಇಲ್ಲದೇ ಮಾಡಿಬಿಡುತ್ತಿದ್ದೆ. ಆ ಪಾತ್ರವನ್ನು ನಾನು ಎಂಜಾಯ್‌ ಮಾಡಬಹುದು ಮತ್ತು ಪ್ರೇಕ್ಷಕರಿಗೂ ಖುಷಿ ಕೊಡುತ್ತದೆ ಅನಿಸಿಬಿಟ್ಟರೆ – ನನ್ನ ಇಮೇಜ್‌ ಏನು, ನಾಯಕಿ ಯಾರು, ಪರಿಣಾಮ ಏನಾಗುತ್ತದೆ ಅಂತೆಲ್ಲ ಯಾವುದನ್ನೂ ಯೋಚಿಸದೇ ಒಪ್ಪಿಕೊಂಡುಬಿಡುತ್ತಿದ್ದೆ. ಹೀಗೆ ತುಂಬಾ ವಿಶ್ಲೇಷಣೆ ಮಾಡದೇ ಬಂದ ಭಿನ್ನ ಪಾತ್ರಗಳನ್ನು ಒಪ್ಪಿಕೊಂಡು ಮಾಡುತ್ತ ಬಂದೆನಲ್ಲ, ಅದೇ ಈ ವೈವಿಧ್ಯಕ್ಕೆ ಕಾರಣ. ಈ ಗುಣ ಇಲ್ಲದಿದ್ದರೆ ‘ಅಮೃತವರ್ಷಿಣಿ’ ಮಾಡಲಿಕ್ಕಾಗುತ್ತಿರಲಿಲ್ಲ. ನಂತರ ‘ಕೋತಿಗಳು ಸಾರ್‌ ಕೋತಿಗಳು’, ‘ಕುರಿಗಳು ಸಾರ್‌ ಕುರಿಗಳು’ಗಳಂಥ ಸಿನಿಮಾಗಳನ್ನೂ ಮಾಡಲಿಕ್ಕಾಗುತ್ತಿರಲಿಲ್ಲ.

* ನೀವು ನಟನಷ್ಟೇ ಅಲ್ಲ, ನಿರ್ದೇಶಕ, ಟೀವಿ ಷೋ ನಿರೂಪಕ, ಬರಹಗಾರ – ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸಿ ಗೆದ್ದಿದ್ದೀರಿ. ಇದು ಹೇಗೆ ಸಾಧ್ಯವಾಯ್ತು?
ರೈಲಿನಲ್ಲಿ ಬೇರೆ ಬೇರೆ ಬೋಗಿಗಳಿರುತ್ತವಲ್ಲ. ಹಾಗೆಯೇ ನನ್ನ ತಲೆಯಲ್ಲಿಯೂ ಒಂದೊಂದು ವಿಭಾಗ ಮಾಡಿಕೊಂಡಿರುತ್ತೇನೆ. ಒಂದು ಬೋಗಿಯಲ್ಲಿದ್ದಾಗ ಇನ್ನೊಂದರ ಕುರಿತಾದ ಯೋಚನೆ ಒಳಗೆ ನುಸುಳುವುದಿಲ್ಲ. ಮತ್ತು ಒಂದು ಯೋಜನೆಯಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಶಕ್ತಿಯನ್ನೆಲ್ಲ ಅದಕ್ಕೆ ಹಾಕಿಬಿಡುತ್ತೇನೆ. ಆದ್ದರಿಂದ ನಂತರ ಏನಾಗುತ್ತದೋ ಎಂಬ ಆತಂಕವೂ ನನ್ನನ್ನು ಯಾವತ್ತೂ ಕಾಡುವುದಿಲ್ಲ.

* ನಿರ್ದೇಶಕನಾಗಿ ನಿಮ್ಮನ್ನು ನೀವು ಪ್ರಯೋಗಕ್ಕೆ ಒಡ್ಡಿಕೊಂಡ ಬಗೆ ಹೇಳಿ.
ನನ್ನ ಪ್ರಕಾರ ನಿರ್ದೇಶಕ ಎನ್ನುವವನು ಕಥಾವಾಚಕ ಅಷ್ಟೆ. ಒಂದು ಕಥೆಯನ್ನು ಪರದೆಯ ಮೇಲೆ ದೃಶ್ಯರೂಪದಲ್ಲಿ ಹೇಳಬಲ್ಲವನು ನಿರ್ದೇಶಕ. ಆ ಕಥೆ ಯಾವುದಾದರೂ ಆಗಿರಲಿ: ನಿಗೂಢ ಕಥೆ ಆಗಿರಲಿ, ಹಾಸ್ಯ ಕಥೆ ಆಗಿರಲಿ, ರೀಮೇಕ್‌ ಆಗಿರಲಿ.
‘ಉತ್ತಮ್‌ ವಿಲನ್‌’ ಅಂಥ ಒಂದು ಕಥೆ ಸಿಕ್ಕಿತು. 50 ಕೋಟಿ ಬಜೆಟ್‌ನ ಚಿತ್ರ. ಕಮಲ್‌ ಹಾಸನ್‌ ಅಂಥ ದೊಡ್ಡ ನಿರ್ದೇಶಕ. ಅದನ್ನೂ ಮಾಡಿದೆ.
‘ಸುಂದರಾಂಗ ಜಾಣ’ದಂಥ ಹಾಸ್ಯಚಿತ್ರ ಸಿಕ್ಕಿತು, ಅದನ್ನೂ ಮಾಡಿದೆ. ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುತ್ತ ಹೋಗುತ್ತಿರಬೇಕು ಅಷ್ಟೆ.

* ಮೂವತ್ತು ವರ್ಷಗಳ ನಿಮ್ಮ ವೃತ್ತಿಬದುಕಿನ ದಾರಿಯ ಪ್ರಮುಖ ತಿರುವುಗಳು ಎಂದು ಯಾವುದನ್ನು ಗುರ್ತಿಸುತ್ತೀರಾ?
ನನ್ನ ವೃತ್ತಿಬದುಕಿನ ಮೊದಲ ಮೈಲಿಗಲ್ಲು ‘ಮಧುಮಾಸ’ ಮತ್ತು ‘ಪಂಚಮವೇದ’ ಸಿನಿಮಾಗಳು. ಅಲ್ಲಿಯವರೆಗೂ ಪೋಷಕ ಪಾತ್ರ, ಎರಡನೇ ನಾಯಕನಾಗಿ ನಟಿಸುತ್ತಿದ್ದ ನನ್ನನ್ನು ನಾಯಕನಟನ ಪಟ್ಟಕ್ಕೇರಿಸಿದ ಚಿತ್ರಗಳವು. ನಂತರದ  ತಿರುವು ‘ಅನುರಾಗ ಸಂಗಮ’, ‘ಕರ್ಪೂರದ ಗೊಂಬೆ’ ಸಿನಿಮಾಗಳ ಸಮಯ.

ನಟಿಸಿದ ಸಿನಿಮಾಗಳೆಲ್ಲ ಸೂಪರ್‌ಹಿಟ್‌ ಆಗುತ್ತಿದ್ದ ಕಾಲ ಅದು. ಆಮೇಲಿನದು ‘ಆಪ್ತಮಿತ್ರ’, ‘ರಾಮ ಶಾಮ ಭಾಮ’ ಸಿನಿಮಾಗಳ ಕಾಲಘಟ್ಟ. ನಾನು ನಿರ್ದೇಶಕನಾಗಿದ್ದೂ ಈ ಸಮಯದಲ್ಲಿಯೇ. ಈಗ ‘ಪುಷ್ಪಕ ವಿಮಾನ’, ‘ಸುಂದರಾಂಗ ಜಾಣ’ದ ಮೂಲಕ ವೃತ್ತಿಬದುಕಿನ ಮತ್ತೊಂದು ಮಜಲನ್ನು ಏರಿದ್ದೇನೆ.

ಹೀಗೆ ನಾಲ್ಕು ಹಂತಗಳಲ್ಲಿ ನನ್ನ ಸಿನಿಬದುಕನ್ನು ನೋಡಬಹುದು. ಈ ಎಲ್ಲ ಹಂತಗಳೂ ನನ್ನನ್ನು ನಾನೇ ಮರುಶೋಧಿಸಿಕೊಂಡ ಸಂದರ್ಭಗಳು. ನನ್ನನ್ನು ನಾನೇ ಮರುಸೃಷ್ಟಿಸಿಕೊಳ್ಳುವುದು ನನಗೆ ತುಂಬ ಮುಖ್ಯ. ಇದಕ್ಕೆ ನನಗೆ ‘ವೀಕೆಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದಿಂದ ತುಂಬ ಸಹಾಯವಾಯ್ತು. ಮತ್ತೆ ಜನರ ಜತೆ ಸಂಪರ್ಕ ಸಿಕ್ಕಿದ್ದು ಆ ಕಾರ್ಯಕ್ರಮದಿಂದ.

* ಇಂದು ಚಿತ್ರರಂಗದಲ್ಲಿ ಹೊಸತನದ ಅಲೆ ಎದ್ದಿದೆ. ಈ ಅಲೆಯ ಕಾರಣದಿಂದ ಅನುಭವಿಗಳ ಕೊರತೆಯೂ ಸೃಷ್ಟಿಯಾಗಿದೆಯಾ?
ಹಳಬರು, ಅನುಭವಿಗಳು ಬೇಕು ಎನ್ನುವುದು ನಿಜ. ಆದರೆ ಹೊಸಬರಲ್ಲಿರುವ ಮುಕ್ತತೆ, ಎಲ್ಲದರ ಕುರಿತು ಇರುವ ಕುತೂಹಲ ಹಳಬರಲ್ಲಿ ಇರುವುದಿಲ್ಲ. ನಾವು ಹಳಬರಾಗುತ್ತ ಆ ಕುತೂಹಲ, ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತೇವೆ. ಹಾಗೆ ಕಳೆದುಕೊಳ್ಳದವರಿಗೆ ಇದೆಲ್ಲ ಸಮಸ್ಯೆಯೇ ಅಲ್ಲ. ನಮ್ಮ ಮನಸ್ಸಿನ ಸೃಜನಶೀಲತೆಯ ಆಂಟೆನಾ ಸದಾ ತೆರೆದುಕೊಂಡಿರಬೇಕು. ಆಗ ಹೊಸ ಹೊಸ ಆಲೋಚನೆಗಳು ನಿಮ್ಮನ್ನು ಅರಸಿಕೊಂಡು ಬರುತ್ತವೆ.

ಹೊಸಬರು–ಹಳಬರು ಇವೆಲ್ಲ ಯಾವುದೂ ಮುಖ್ಯವೇ ಅಲ್ಲ. ನಾವು ಮಾಡುವ ಕೆಲಸ ಚೆನ್ನಾಗಿದ್ದರೆ ಜನ ಮೆಚ್ಚಿಕೊಳ್ಳುತ್ತಾರೆ. ಜನರಿಗೆ ಇಷ್ಟವಾಗುವ ಸಂಗತಿಯನ್ನು ನೀವು ನೀಡುತ್ತಿರುವವರೆಗೂ ಅವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಲೇ ಇರುತ್ತಾರೆ. ಸಮಸ್ಯೆ ಬರುವುದು ನಾವು ಮಾಡುತ್ತಿರುವ ಕೆಲಸ ಕಳಪೆಯಾದಾಗ ಮಾತ್ರ.

* ಇಷ್ಟೊಂದು ಅವಕಾಶಗಳು, ಜನಪ್ರಿಯತೆಯ ನಡುವೆಯೂ ‘ವ್ಯಕ್ತಿತ್ವ ವಿಕಸನ’ ತರಗತಿಗಳನ್ನು ನಡೆಸುವುದು, ಗ್ರಾಮೀಣ ಮಕ್ಕಳಿಗಾಗಿ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮ ಮಾಡುವುದು – ನಿಮ್ಮ ವೃತ್ತಿಬದುಕಿಗೆ ಅಷ್ಟೇನೂ ಮುಖ್ಯವಲ್ಲದ ಇಂಥ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದು ಯಾಕೆ ಮುಖ್ಯ ಅನಿಸುತ್ತದೆ?
ಅವೆಲ್ಲ ನನಗೆ ಖುಷಿ ಕೊಡುವ ಕೆಲಸಗಳು. ನಮಗೆ ಖುಷಿ ಕೊಡುವ ಕೆಲಸಗಳನ್ನು ಮಾಡುವುದನ್ನು ಬಿಟ್ಟುಬಿಟ್ಟರೆ ಬದುಕಿನಲ್ಲಿ ಮಜಾ ಇರುವುದೇ ಇಲ್ಲ. ಅಂಥ ಕೆಲಸಗಳೇ ನನ್ನನ್ನು ಜೀವಂತವಾಗಿರಿಸಿಕೊಳ್ಳುವುದು. ಲವಲವಿಕೆಯಿಂದ ಇರುವ ಸತ್ವ ನೀಡುವುದು. ಇಲ್ಲದಿದ್ದರೆ ಬದುಕು ಬೋರಾಗಿಬಿಡುತ್ತದೆ.

* ‘ಪುಷ್ಟಕ ವಿಮಾನ’ ನಿಮ್ಮ ನೂರನೇ ಚಿತ್ರ. ಅದೊಂದು ಮೈಲುಗಲ್ಲು ಆಗುತ್ತದೆ ಎಂಬ ನಂಬಿಕೆ ಇದೆಯಾ?
ನೂರನೇ ಸಿನಿಮಾ, ನೂರೈವತ್ತನೇ ಸಿನಿಮಾ ಎಂಬ ಕಾರಣಕ್ಕಾಗಿಯೇ ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವುದರಲ್ಲಿ ಅರ್ಥವೇ ಇಲ್ಲ. ಪ್ರತಿಯೊಂದು ಸಿನಿಮಾವೂ ನನ್ನ ಪಾಲಿಗೆ ಮೈಲುಗಲ್ಲೇ. ಆದರೆ ಇಷ್ಟೊಂದು ಸಿನಿಮಾಗಳನ್ನು ಮಾಡಿದ್ದರೂ ‘ಪುಷ್ಟಕ ವಿಮಾನ’ದಲ್ಲಿ ಮಾಡಿದಂಥ ಪಾತ್ರ ಇದುವರೆಗೆ ನನಗೆ ಸಿಕ್ಕಿರಲಿಲ್ಲ. ಬುದ್ಧಿಮಾಂದ್ಯನ ಪಾತ್ರ, ತಂದೆ–ಮಗಳ ಸಂಬಂಧ ಎಲ್ಲವೂ ವಿಶಿಷ್ಟವಾಗಿವೆ. ಹೊಸಬರ ತಂಡ, ಅವರ ಉತ್ಸಾಹ, ಹೊಸ ಆಲೋಚನೆಗಳು – ಎಲ್ಲ ಕಾರಣಕ್ಕೂ ಈ ಸಿನಿಮಾ ನನ್ನಲ್ಲಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

*
ನಾನು ಕೆಲಸ ಮಾಡುತ್ತಲೇ ಇರಬೇಕು. ಆ ಕೆಲಸದಲ್ಲಿ ಒಂದಿಷ್ಟು ಸೃಜನಶೀಲ ಬೆಳವಣಿಗೆಗೆ ಅವಕಾಶ ಇರಬೇಕು. ಸುಮ್ಮನೇ ಕುಳಿತುಕೊಳ್ಳುವುದು ಸಾಧ್ಯವೇ ಇಲ್ಲ. ಪ್ರತಿದಿನ ಬೆಳಿಗ್ಗೆ ಎದ್ದರೆ ಇವತ್ತು ಏನು ಮಾಡುವುದು ಎಂಬ ಯೋಚನೆಯೇ ತಲೆಯಲ್ಲಿ ಓಡುತ್ತಿರುತ್ತದೆ. ನಾನು ಯಾವತ್ತೂ ಹಿಂದೆ ನೋಡಿಕೊಂಡು ಬದುಕನ್ನು ಚಲಾಯಿಸುವವನೇ ಅಲ್ಲ, ಭವಿಷ್ಯದ ಕಡೆಗೇ ನನ್ನ ದೃಷ್ಟಿ ನೆಟ್ಟಿರುತ್ತದೆ. ಮುಂದೆ ಏನು ಮಾಡುವುದು ಎಂಬ ಆಲೋಚನೆಯೇ ನನ್ನ  ಬದುಕನ್ನು ಮುನ್ನಡೆಸುವ ಚಾಲಕ ಶಕ್ತಿ.

*
ನಾನು ಮಾಡಿದ ಮೊದಲ ಸಿನಿಮಾದಿಂದ ಇದುವರೆಗೆ ನಿರ್ದೇಶಕರು, ಸಹನಟರು, ನಿರ್ಮಾಪಕರು ಎಲ್ಲರೂ ಬದಲಾಗುತ್ತ ಬಂದಿದ್ದಾರೆ. ಆದರೆ ಈ ನೂರೂ ಸಿನಿಮಾಗಳಲ್ಲಿ ನನ್ನ ಜತೆ ಸ್ಥಿರವಾಗಿ ಇದ್ದವ ಪ್ರೇಕ್ಷಕ. ಈ ಎಲ್ಲ ಸಿನಿಮಾಗಳಲ್ಲಿಯೂ ಬದಲಾಗದೇ ಇದ್ದವರು ನಾವಿಬ್ಬರೇ. ಹಾಗಾಗಿ ಮೂವತ್ತು ವರ್ಷಗಳ ಈ ಇಡೀ ಪ್ರಯಾಣವನ್ನು ಪ್ರೇಕ್ಷಕನಿಗೇ ಅರ್ಪಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT