ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನಿಗೆ ಎಷ್ಟು ಹಣ ಬೇಕು?

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಮನೆ, ಗ್ರಾಮ, ದೇಶದಲ್ಲಿ ಯಾವುದಾದರೂ ದುರ್ಘಟನೆ ಅಥವಾ ಆಘಾತಕಾರಿ ಬದಲಾವಣೆ ಉಂಟಾದರೆ ಅಲ್ಲಿ ವಾಸಿಸುವ ಮನುಷ್ಯರಾದ ನಾವೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾಗುತ್ತೇವಲ್ಲವೇ? ನವೆಂಬರ್ ಎಂಟರ ರಾತ್ರಿ ಪ್ರಧಾನಮಂತ್ರಿ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದರು. ಹೀಗೆ ನೋಟಿನ ಅಪಮೌಲ್ಯೀಕರಣ ಮಾಡಬೇಕಾದಂಥ ಪರಿಸ್ಥಿತಿಯನ್ನು ಸೃಷ್ಟಿಸಿದವರು ಯಾರು? ಸರ್ಕಾರವೇ ಅಥವಾ ಜನರೇ? ಈ ಕಾಲವು ಕೇವಲ ನೋಟಿಗೆ ಸಂಬಂಧಿಸಿದ ಅಪಮೌಲ್ಯೀಕರಣವಾಗಿರದೆ ನಮ್ಮೆಲ್ಲರ ಜೀವನದ, ಎಲ್ಲ ಕ್ಷೇತ್ರಗಳಲ್ಲಿ ನಾವೇ ಸೃಷ್ಟಿಸಿಕೊಂಡ ಸಾಮಾಜಿಕ ಮೌಲ್ಯಗಳನ್ನು ಅಪಮೌಲ್ಯೀಕರಣಗೊಳಿಸಿದ ಕಾಲವೂ ಆಗಿದೆ!

ಯಾವುದೇ ವಿಷಮ ಪರಿಸ್ಥಿತಿ ಉಂಟಾಗಲು ಒಬ್ಬ ವ್ಯಕ್ತಿ ಇಲ್ಲವೆ ಹಲವಾರು ವ್ಯಕ್ತಿಗಳು ಕಾರಣರಾಗುತ್ತಾರೆ. ನೋಟು ರದ್ದತಿಯಂತಹ ಪರಿಸ್ಥಿತಿಗೆ ನಾವೂ ಕಾರಣರಾಗಿರಬಹುದಲ್ಲವೇ? ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದುದು ಅಗತ್ಯ. ನೋಟು ರದ್ದತಿಯ ತರುವಾಯ ಉಂಟಾಗಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ವಿಫಲವಾಗಿದೆ.

ಈ ವಿಷಯದಲ್ಲಿ ಸರ್ಕಾರದ ಅದಕ್ಷತೆ ಮತ್ತು ದೂರದೃಷ್ಟಿಯ ಕೊರತೆ ಸ್ಪಷ್ಟವಾಗಿ ಎಲ್ಲರ ಅನುಭವಕ್ಕೆ ಬರುತ್ತಿದೆ. ಅದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಅಧಿಕಾರ ವಿರೋಧ ಪಕ್ಷಗಳಿಗಿದೆ. ನೋಟು ರದ್ದತಿಯಿಂದ ಎಲ್ಲರಿಗೂ ತೊಂದರೆಯಾಗಿದೆ. ನೋಟು ರದ್ದತಿ  ಸರ್ಕಾರದ ನೀತಿಯಾಗಿ ಹೊರಹೊಮ್ಮಿ ಅದು ಸಾರ್ವತ್ರೀಕರಣಗೊಂಡಿದೆ.

ದೇಶದ ಅರ್ಥಶಾಸ್ತ್ರಜ್ಞರಲ್ಲಿ ಈ ಬಗ್ಗೆ ಒಮ್ಮತದ ಅಭಿಪ್ರಾಯ ಹೊರಬಂದಿಲ್ಲ. ಸರ್ಕಾರದಲ್ಲಿರುವ ಅರ್ಥಶಾಸ್ತ್ರಜ್ಞರು ಸಹಜವಾಗಿಯೇ ನೋಟು ರದ್ದತಿ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನುಳಿದ ಕೆಲವರು ಸರ್ಕಾರದ ನೀತಿಯನ್ನು ಟೀಕಿಸಿದ್ದಾರೆ. ಅರ್ಥಶಾಸ್ತ್ರಜ್ಞರಿಂದ ಆಗಿರುವ ಸಮರ್ಥನೆ ಅಥವಾ ಟೀಕೆ ಎಲ್ಲವೂ ಶ್ರೀಸಾಮಾನ್ಯನ ಹೆಸರಿನಲ್ಲಿ! ಶ್ರೀಸಾಮಾನ್ಯ ಮಾತ್ರ ಅರ್ಥಶಾಸ್ತ್ರದ ವಿಜ್ಞಾನವನ್ನು ಅರಿಯದೆ ಯಾವುದನ್ನೂ ಹೇಳಲಿಕ್ಕಾಗದೆ ಮೌನವಾಗಿದ್ದಾನೆ. ಪಾಲಿಗೆ ಬಂದ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ.

ವಿರೋಧ ಪಕ್ಷಗಳು ನೋಟು ರದ್ದತಿ ಕ್ರಮವನ್ನು ವಿರೋಧಿಸುತ್ತಿವೆ. ಬರಲಿರುವ ಚುನಾವಣೆಯಲ್ಲಿ ಹೇಗೆ ಅದನ್ನು ತಮಗೆ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವುದು ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿವೆ. ಹೀಗೆ ತಜ್ಞರ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಪಕ್ಷಗಳ ಸ್ವಾರ್ಥದ ಮೇಲಾಟಗಳು ದೇಶದ ಪ್ರಜೆಗಳನ್ನು ಅನಾಥರನ್ನಾಗಿಸಿವೆ.

ನೋಟು ರದ್ದತಿ ಬಗ್ಗೆ ಬಿರುಸಿನಿಂದ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಜನಸಾಮಾನ್ಯರ ಪರ ಅಥವಾ ವಿರೋಧದ ಅಭಿಪ್ರಾಯವನ್ನು ಖಚಿತವಾಗಿ ಹೇಳಬಹುದಾದಂಥ ಜನತಾ ಸಂಘಟನೆಯು ಅವರಿಗಿಲ್ಲವಾಗಿದೆ. ‘ಬಡವ, ನೀನು ಇಟ್ಟಂಗೆ ಇರು’ ಎಂಬ ಗಾದೆಯಂತೆ ಶ್ರೀಸಾಮಾನ್ಯ ಮೌನವಾಗಿ ಬ್ಯಾಂಕುಗಳ ಮುಂದೆ, ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾನೆ.

ನೋಟು ರದ್ದತಿಗೆ ಸರ್ಕಾರದ ಆಡಳಿತ ವೈಖರಿ ನಿಮಿತ್ತವಾಗಿರಬಹುದಾದರೂ ಪ್ರಜೆಗಳಾದ ನಾವು ಸಹ ಕಾರಣರಾಗಿಲ್ಲವೇ ಎಂದು ಕೇಳಿಕೊಳ್ಳಬೇಕಾಗಿದೆ.  ಹಿಂದಿನ ಕಾಲದಲ್ಲಿ ‘ರಾಜನಂತೆ ಪ್ರಜೆಗಳು’ ಎಂಬ ಮಾತಿತ್ತು. ಆದರೆ ಈಗ ಪ್ರಜಾಪ್ರಭುತ್ವ ಇರುವುದರಿಂದ ‘ಪ್ರಜೆಗಳಂತೆ ರಾಜ’ ಎಂಬ ಮಾತು ಅನ್ವಯಿಸುತ್ತಿದೆ. ಈ ಮಾತಿನ ಪ್ರಕಾರ ಪ್ರಭುತ್ವವು ದೇಶದ ಹಿತಕ್ಕಾಗಿ ತನಗೆ ಉಚಿತವೆಂದೆನಿಸಿದ ಯಾವುದಾದರೊಂದು ನೀತಿ ಜಾರಿಗೊಳಿಸಿದರೆ ಅದರಲ್ಲಿ ಪ್ರಜೆಗಳ ಅನಿಸಿಕೆ, ವರ್ತನೆ, ವ್ಯವಹಾರ ಇತ್ಯಾದಿಗಳೂ  ಸಮ್ಮಿಳಿತವಾಗಿರುತ್ತವೆ.

ಸಮಾಜದಲ್ಲಿ ಕಳ್ಳತನ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಅತ್ಯಾಚಾರ, ಗಲಭೆ ಮುಂತಾದವು ಹೆಚ್ಚಾದಾಗ ಅವುಗಳ ನಿಯಂತ್ರಣ ಮತ್ತು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ  ಕಾಪಾಡಲು ಪ್ರಭುತ್ವ ಕೆಲ ಶಾಸನಗಳನ್ನು ಮಾಡಬೇಕಾಗುತ್ತದೆ. ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ರೀತಿಯ ಪ್ರಕ್ರಿಯೆ ಯಾವುದೇ ರಾಜ್ಯಾಡಳಿತದ ಪ್ರಾಥಮಿಕ ಕರ್ತವ್ಯವೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ದೇಶ ಮತ್ತು ಸಮಾಜದ ಹಿತಕ್ಕಾಗಿ ಯಾವುದೇ ಚುನಾಯಿತ ಪಕ್ಷದ ಸರ್ಕಾರ ಕ್ರಮ ಕೈಗೊಂಡಾಗ ಎಲ್ಲರೂ ಪ್ರಭುತ್ವದ ಜೊತೆ ಕೈಜೋಡಿಸಬೇಕಾಗುತ್ತದೆ. ಆ ರೀತಿ ಮಾಡದೇ ಇದ್ದಲ್ಲಿ ಸಮಾಜದಲ್ಲಿಯ ಕೆಟ್ಟ ಶಕ್ತಿಗಳಿಗೆ ಸಹಕಾರ ಮತ್ತು ಪ್ರೋತ್ಸಾಹ ಕೊಟ್ಟಂತಾಗುತ್ತದೆ.

ಹಣಕ್ಕೆ ಇನ್ನೊಂದು ಹೆಸರು ದ್ರವ್ಯ. ದ್ರವವಾಗಿ ಇರುವ ಪದಾರ್ಥ ಯಾವಾಗಲೂ ಶುದ್ಧವಾಗಿರುತ್ತದೆ. ಅದು ಹರಿಯದೇ ಇದ್ದಲ್ಲಿ ಕೊಳೆತಿರುತ್ತದೆ. ಕಳ್ಳತನದಿಂದ ಸಂಗ್ರಹವಾದ ಅಪಾರ ಹಣ ಹರಿದು ಹೋಗದೇ ಇದ್ದುದರಿಂದ ದೇಶದಲ್ಲಿ ಕೋಟಿ ಕೋಟಿ ಕಪ್ಪುಹಣ ಸಂಗ್ರಹವಾಗಿ ಭ್ರಷ್ಟಾಚಾರ ಸಮಾಜ ಜೀವನದ ಅವಿಭಾಜ್ಯ ಅಂಗವಾಯಿತು. ಕಪ್ಪುಹಣದ ಕಾರಣದಿಂದಾಗಿ ಹಣದುಬ್ಬರ ಹೆಚ್ಚಾಯಿತು. ಅದರಿಂದಾಗಿ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ.

ಅದರ ಲಾಭದ ಪ್ರಯೋಜನವನ್ನು ಶತ್ರು ದೇಶಗಳು, ಭಯೋತ್ಪಾದಕರು ಪಡೆಯಲು ಪ್ರಾರಂಭಿಸಿದರು. ದೇಶದಲ್ಲಿ ಸಾಮಾಜಿಕ ಅಶಾಂತಿ ಹೆಚ್ಚಾಗುವಂತಾಯಿತು. ಇದೆಲ್ಲದರ ಪರಿಣಾಮವೇ ನೋಟು ರದ್ದತಿ. ಈ ಪ್ರಕ್ರಿಯೆಯಿಂದ ಕಪ್ಪುಹಣ ಸಂಗ್ರಹ ಪ್ರವೃತ್ತಿ ನಿಯಂತ್ರಣಕ್ಕೆ ಬರುವುದೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಇದು ಸರಿ, ಪರಿಹಾರ ನಮ್ಮಲ್ಲಿಯೇ ಇದೆ. ನಮ್ಮ ಸಚ್ಚಾರಿತ್ರ್ಯವೇ ಕಪ್ಪುಹಣದ ಸಮಸ್ಯೆಗೆ ಶಾಶ್ವತ ಮದ್ದು.

ನೋಟು ರದ್ದತಿಗೆ ನಾವು ಎಷ್ಟು ಕಾರಣ ಮತ್ತು ರದ್ದತಿಗೆ ಕಾರಣವಾದ ಅಂಶಗಳ ನಿವಾರಣೆಗೆ ಎಷ್ಟು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂಬುದರ ಬಗ್ಗೆ ತೀವ್ರವಾದ ಆತ್ಮಾವಲೋಕನ ಮಾಡಿಕೊಳ್ಳುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರವು ನೋಟು ರದ್ದತಿಯನ್ನು ಸಾಮಾಜಿಕವಾಗಿ ಯಾವುದೇ ಸಮೂಹಕ್ಕೆ ಅನ್ಯಾಯವಾಗುವಂತೆ ಮತ್ತು ದೇಶದ ಆರ್ಥಿಕ ಸ್ಥಿತಿ ಬುಡಮೇಲಾಗುವಂತೆ ಮಾಡುವುದಾದರೆ ಜನರು ಪ್ರತಿರೋಧ ತೋರಲೇಬೇಕು. 

ಪ್ರಸ್ತುತ ಕೈಗಾರಿಕೀಕರಣ ಮತ್ತು ಜಾಗತೀಕರಣದಲ್ಲಿ ನಮ್ಮ ಜೀವನದ ಮೌಲ್ಯಗಳನ್ನು ಹಣದ ರೂಪದಲ್ಲಿಯೇ ಅಳೆಯಲಾಗುತ್ತಿದೆ. ನಾವು ಹಣಕಾಸಿನ ಮನುಷ್ಯರಾಗಿದ್ದೇವೆಯೇ ಹೊರತು ಪ್ರಕೃತಿ ಸಹಜ ಮನುಷ್ಯರಾಗಿ ಉಳಿದಿಲ್ಲ. ಅಕ್ರಮ ವ್ಯವಹಾರ ಮಾಡಿ ಸಕ್ರಮಗೊಳಿಸಿಕೊಳ್ಳುವ ವ್ಯವಸ್ಥೆ ರೂಪಿಸಿಕೊಂಡಿದ್ದೇವೆ!

ಶಾಶ್ವತವಲ್ಲದ ಅರ್ಥಶಾಸ್ತ್ರವನ್ನು ಒಪ್ಪಿಕೊಂಡಿದ್ದೇವೆ. ‘ಮನುಷ್ಯನಿಗೆ ಎಷ್ಟು ಭೂಮಿ ಬೇಕು’ ಎಂಬ ಟಾಲ್‌ಸ್ಟಾಯ್‌ರ ಪ್ರಶ್ನೆಗೆ ಉತ್ತರ ಹುಡುಕಬೇಕಿರುವಂತೆಯೇ, ‘ಮನುಷ್ಯನಿಗೆ ಎಷ್ಟು ಹಣ ಬೇಕು’ ಎಂಬ ಪ್ರಶ್ನೆಗೂ ಉತ್ತರ ಹುಡುಕಬೇಕಿದೆ. ಅದಕ್ಕೆ ಜೆ.ಸಿ.ಕುಮಾರಪ್ಪ ಅವರು ಪ್ರತಿಪಾದಿಸಿರುವ ‘ಶಾಶ್ವತ ಅರ್ಥಶಾಸ್ತ್ರ’ ಸಿದ್ಧಾಂತವು ಉತ್ತರವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT