ನಾವು ನೋಡಿದ ಚಿತ್ರ/ಪುಷ್ಪಕ ವಿಮಾನ

ಭಾವುಕ ಲೋಕದಲ್ಲೊಂದು ಹಗುರ ವಿಹಾರ

‘ಮಿರಾಕಲ್‌ ಇನ್‌ ಸೆಲ್ ನಂ.7’ ಎಂಬ ಕೊರಿಯನ್‌ ಸಿನಿಮಾವನ್ನು ‘ಸ್ಫೂರ್ತಿ’ ಎಂಬ ಪೋಷಾಕಿನಡಿ ‘ಪುಷ್ಪಕ ವಿಮಾನ’ ಎಂಬ ಹೆಸರಿಟ್ಟು ಅಚ್ಚುಕಟ್ಟಾಗಿ ಕನ್ನಡಕ್ಕೆ ರೀಮೇಕ್‌ ಮಾಡಿದ್ದಾರೆ ಎಸ್‌. ರವೀಂದ್ರನಾಥ್‌.

ಭಾವುಕ ಲೋಕದಲ್ಲೊಂದು ಹಗುರ ವಿಹಾರ

ಚಿತ್ರ: ಪುಷ್ಪಕ ವಿಮಾನ
ನಿರ್ದೇಶಕ: ಎಸ್‌. ರವೀಂದ್ರನಾಥ್‌
ನಿರ್ಮಾಣ: ವಿಖ್ಯಾತ್‌ ಚಿತ್ರ
ತಾರಾಗಣ: ರಮೇಶ್‌ ಅರವಿಂದ್‌, ಯುವಿನಾ ಪಾರ್ಥವಿ, ರವಿ ಕಾಳೆ, ರಚಿತಾ ರಾಮ್‌

‘ಮಿರಾಕಲ್‌ ಇನ್‌ ಸೆಲ್ ನಂ.7’ ಎಂಬ ಕೊರಿಯನ್‌ ಸಿನಿಮಾವನ್ನು ‘ಸ್ಫೂರ್ತಿ’ ಎಂಬ ಪೋಷಾಕಿನಡಿ ‘ಪುಷ್ಪಕ ವಿಮಾನ’ ಎಂಬ ಹೆಸರಿಟ್ಟು ಅಚ್ಚುಕಟ್ಟಾಗಿ ಕನ್ನಡಕ್ಕೆ ರೀಮೇಕ್‌ ಮಾಡಿದ್ದಾರೆ ಎಸ್‌. ರವೀಂದ್ರನಾಥ್‌. ಚಿತ್ರದ ಎಲ್ಲ ಪಾತ್ರಗಳು ಮತ್ತು ಬಹುತೇಕ ದೃಶ್ಯಗಳಲ್ಲಿ ಮೂಲ ಚಿತ್ರದ ಸ್ಫೂರ್ತಿ ಎದ್ದು ಕಾಣುತ್ತದೆ.

ಅನಂತರಾಮಯ್ಯ ಎಂಬ ಬುದ್ಧಿಮಾಂದ್ಯ ಮತ್ತು ಅವನ ಮಗಳು ಪುಟ್ಟಲಕ್ಷ್ಮಿಯ ಬಾಂಧವ್ಯವನ್ನು ನವಿಲುಗರಿಯಷ್ಟೇ ನವಿರಾಗಿ ಹೆಣೆದಿರುವ ಕಾರಣಕ್ಕೆ ‘ಪುಷ್ಪಕ ವಿಮಾನ’ ಪ್ರೇಕ್ಷಕನ ಭಾವನಾವಲಯದಲ್ಲಿ ಸರಿಯಾಗಿ ಲ್ಯಾಂಡ್‌ ಆಗುತ್ತದೆ. ನವಿಲುಗರಿಯ ಮಿದುತನ ಮತ್ತು ಅದರ ಜತೆಗೆ ಹೆಣೆದುಕೊಂಡಿರುವ ಭಾವುಕ ಪ್ರಭಾವಳಿ ಎರಡೂ ಈ ಸಿನಿಮಾಕ್ಕಿದೆ. ನಿರ್ದೇಶಕರು ತಮ್ಮ ಸ್ವಂತಿಕೆ–ಸೃಜನಶೀಲತೆಯನ್ನು ಬಳಸಿಕೊಳ್ಳುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲದಿರುವುದೂ ವರವಾಗಿಯೇ ಪರಿಣಮಿಸಿದಂತಿದೆ.

ಇಡೀ ಸಿನಿಮಾ ತಂದೆ ಮತ್ತು ಮಗಳ ಬಾಂಧವ್ಯದ ಭಾವುಕ ವಲಯದಲ್ಲಿಯೇ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಬುದ್ಧಿಮಾಂದ್ಯ ಅನಂತರಾಮಯ್ಯನಿಗೆ ತನ್ನ ಆರು ವರ್ಷದ ಮಗಳು ಪುಟ್ಟಲಕ್ಷ್ಮಿಯೇ ಜಗತ್ತು. ಮಗಳಿಗೂ ತಂದೆಯೆಂದರೆ ಪ್ರಾಣ. ಅವರಿಬ್ಬರದೇ ಒಂದು ಮುಗ್ಧ ಜಗತ್ತು. ಹೀಗಿರುವಾಗ ತಪ್ಪು ಗ್ರಹಿಕೆಗೆ ಒಳಗಾಗಿ ಆರು ವರ್ಷದ ಹೆಣ್ಣುಮಗುವೊಂದನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪದ ಮೇಲೆ ಅನಂತರಾಮಯ್ಯ ಜೈಲಿಗೆ ಹೋಗಬೇಕಾಗುತ್ತದೆ. ಅಲ್ಲಿಯೂ ತನ್ನ ಮುಗ್ಧತೆಯಿಂದಲೇ ಕೈದಿಗಳು ಮತ್ತು ಪೊಲೀಸರ ಮನಸ್ಸನ್ನೂ ಗೆಲ್ಲುತ್ತಾನೆ. ಜೈಲಿನಲ್ಲಿಯೇ ಚಿತ್ರದ ಬಹುತೇಕ ಭಾಗ ನಡೆಯುತ್ತದೆ. 

ರಮೇಶ್‌ ಅರವಿಂದ್‌ ಬುದ್ಧಿಮಾಂದ್ಯ ತಂದೆಯ ಪಾತ್ರಕ್ಕೆ ಸಂಪೂರ್ಣವಾಗಿ ತಮ್ಮನ್ನು ಕೊಟ್ಟುಕೊಂಡಿದ್ದಾರೆ. ಭಾವುಕ ತಂದೆ, ಪೆದ್ದ ಕೈದಿ, ಮಾನವೀಯ ಮನುಷ್ಯ, ಹೀಗೆ ತಮ್ಮ ಪಾತ್ರಕ್ಕಿರುವ ಹಲವು ಛಾಯೆಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮುದ್ದು ಮುಖ– ಮುಗ್ಧ ಮಾತುಗಳಿಂದ ಯುವಿನಾ ಪಾರ್ಥವಿ ಮನಸ್ಸನ್ನು ಆವರಿಸಿಕೊಳ್ಳುತ್ತಾಳೆ. ಅಳುವಲ್ಲಿಯೂ ನಗುವಲ್ಲಿಯೂ ರಮೇಶ್‌ ಎದುರು ಸಹಜತನದಿಂದಲೇ ಸಾಟಿಯಾಗಿ ನಿಲ್ಲುತ್ತಾಳೆ ಯುವಿನಾ.

ಮಾನವೀಯ ಹೃದಯದ ಜೈಲರ್‌ ಪಾತ್ರದಲ್ಲಿ ರವಿ ಕಾಳೆ ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ. ಪುಟ್ಟ ಪಾತ್ರವಾದರೂ ಅಚ್ಚಕಟ್ಟಾಗಿ ನಿಭಾಯಿಸಿದ್ದಾರೆ ರಚಿತಾ ರಾಮ್‌. ‘ಪುಷ್ಪಕ ವಿಮಾನ’ದ ಭಾವುಕ ಲೋಕದ ಸೌಂದರ್ಯವರ್ಧನೆಯಲ್ಲಿ ಭುವನ್‌ ಗೌಡ ಅವರ ಕ್ಯಾಮೆರಾ ಕಣ್ಣು ಮತ್ತು ಚರಣ್‌ ರಾಜ್‌ ಸಂಗೀತದ ಕೊಡುಗೆ ದೊಡ್ಡದಿದೆ.

ಇರುವುದಕ್ಕಿಂತ ಹೆಚ್ಚಾಗಿಯೇ ಸುಂದರವಾಗಿ ತೋರಿಸಲು ಭುವನ್‌ ಪಟ್ಟಿರುವ ಶ್ರಮ ಪ್ರತಿ ದೃಶ್ಯದಲ್ಲಿಯೂ ಎದ್ದು ಕಾಣುತ್ತದೆ. ಅದರ ಫಲವಾಗಿ ಜೈಲಿನೊಳಗಿನ ಕರಾಳ ಜಗತ್ತೂ ರಮ್ಯವಾಗಿಯೇ ಕಾಣುತ್ತದೆ. ಭಾವಗೀತಾತ್ಮಕ ಗುಣವುಳ್ಳ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಗುಣಾತ್ಮಕತೆಯನ್ನು ಹೆಚ್ಚಿಸಿದೆ.

ಗುರುಪ್ರಸಾದ್‌ ಅವರ ಸಂಭಾಷಣೆ, ನೋಡುಗ ಭಾವುಕಲೋಕದಲ್ಲಿ ಮುಳುಗಿ ಮೈಮರೆಯದಂತೆ ನೋಡಿಕೊಳ್ಳುತ್ತದೆ. ಹಲವು ಕಡೆ ಅವರ ಮಾತಿನ ಚಳಕ ನಗೆಬುಗ್ಗೆಯುಕ್ಕಿಸುವುದರ ಮೂಲಕ ಲವಲವಿಕೆ ಹುಟ್ಟಿಸಿದರೂ, ಕೆಲವು ಕಡೆ ಹದ್ದುಮೀರಿ ಮುಜುಗರ ಉಂಟುಮಾಡುತ್ತದೆ. ಮುಗ್ಧ ಪಾತ್ರಗಳ ಮೂಲಕ ಭಾರವೆನಿಸುವ ಮಾತುಗಳನ್ನೂ ಹೇಳಿಸಿರುವುದು ಕಿರಿಕಿರಿ ಎನಿಸುತ್ತದೆ.

ಮೂಲ ಸಿನಿಮಾ ನೋಡಿದವರು, ನೋಡದಿರುವರು ಎರಡೂ ವರ್ಗದವರೂ ‘ಪುಷ್ಪಕ ವಿಮಾನ’ದಲ್ಲಿ ಹತ್ತಿ ಭಾವುಕ ಲೋಕದಲ್ಲೊಂದು ಹಗುರ ವಿಹಾರ ಮಾಡಬಹುದು.

Comments