ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯದಲ್ಲಿ ಸಂಧಿವಾತ

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಆರ್ಥ್ರೈಟಿಸ್ ಎಂದರೆ ಸಂಧಿವಾತವನ್ನು ‘ಕೀಲುಗಳಲ್ಲಿ ಊತ’ ಎಂದೂ ಕರೆಯುವುದುಂಟು. ಸಂಧಿವಾತದಲ್ಲಿ  ನೂರಕ್ಕೂ ಹೆಚ್ಚು  ವಿಧಗಳಿವೆ. ಪ್ರತಿಯೊಂದಕ್ಕೂ ಹಲವು ಲಕ್ಷಣಗಳು ಮತ್ತು ಚಿಕಿತ್ಸೆಗಳಿವೆ. 65 ವರ್ಷಕ್ಕೂ ಹೆಚ್ಚಿನ ವಯಸ್ಸಿನವರಲ್ಲಿ ಶೇ. 50ರಷ್ಟು ಜನರು ಈ ತೊಂದರೆಯಿಂದ ಬಳಲುತ್ತಿದ್ದಾರೆ.

ಇದು ದೀರ್ಘಕಾಲದ ತೊಂದರೆ; ಎಂದರೆ ಹೆಚ್ಚಿನ ಕಾಲಾವಧಿಯಲ್ಲಿ ಕಂಡು ಬರುವ ತೊಂದರೆ. ಸಾಮಾನ್ಯ ರೀತಿಯ ಸಂಧಿವಾತಗಳೆಂದರೆ:
ಓಸ್ಟಿಯೋ ಆರ್ಥ್ರೈಟಿಸ್(ಒಎ) - ಅಸ್ಥಿಸಂಧಿವಾತ:

ಇದು ಅತ್ಯಂತ ಸಾಮಾನ್ಯ ರೀತಿಯ ಸಂಧಿವಾತ ರೋಗ. ಇದು ಕೇವಲ ಕೀಲುಗಳ ಮೇಲೆ – ಎಂದರೆ ಸಾಮಾನ್ಯವಾಗಿ ಕೈಗಳು, ಮಂಡಿಗಳು, ಸೊಂಟ ಮತ್ತು ಬೆನ್ನುಮೂಳೆಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಮೃದ್ವಸ್ಥಿ ಚೂರುಚೂರಾಗಿ ಸವೆದುಹೋಗಲು ಆರಂಭಿಸಿದಾಗ ಈ ತೊಂದರೆ ಆರಂಭವಾಗುತ್ತದೆ. ಕೀಲಿನಲ್ಲಿ ಮೂಳೆಗಳ ನಡುವೆ ಮೆತ್ತೆಯಂತೆ ಇರುವ ಅಂಗಾಂಶವೇ ಮೃದ್ವಸ್ಥಿ. ಕೀಲಿನಲ್ಲಿರುವ ಮೃದ್ವಸ್ಥಿ ಸವೆದುಹೋಗಿ ಕೇವಲ ಮೂಳೆಗಳು ಒಂದನ್ನೊಂದು ಉಜ್ಜಿಕೊಳ್ಳುವಂತೆ ಉಳಿದುಕೊಂಡಾಗ ಈ ತೊಂದರೆ ಕಾಣಿಸಿಕೊಳ್ಳುತ್ತದೆ.    

ಕೀಲುಗಳಿಗೆ ಉಂಟಾದ ಯಾವುದೇ ಗಾಯವೂ ಕೀಲಿನ ಸಂಧಿವಾತಕ್ಕೆ ಕಾರಣವಾಗಬಹುದು. ಇದು ಭಾರತದಲ್ಲಿ ಅತ್ಯಂತ ಸಾಮಾನ್ಯ. ಪ್ರತಿ ವರ್ಷ ಹದಿನೈದು ದಶಲಕ್ಷಕ್ಕೂ ಹೆಚ್ಚಿನ ವಯಸ್ಕರರು ಈ ತೊಂದರೆಗೆ ತುತ್ತಾಗುತ್ತಿದ್ದಾರೆಂದು ಅಂಕಿ–ಅಂಶಗಳು ಹೇಳುತ್ತಿವೆ.

ರುಮಟಾಯ್ಡ್ ಆರ್ಥ್ರೈಟಿಸ್ - ಕೀಲುವಾಯುರೋಗ (ಸಂಧಿವಾತ): ಇದು ಎರಡನೇ ಅತ್ಯಂತ ಸಾಮಾನ್ಯ ರೀತಿಯ ಸಂಧಿವಾತವಾಗಿದೆ. ಇದು ಕೈ ಮಣಿಕಟ್ಟು, ಮೊಣಕೈ, ಭುಜಗಳು, ಮತ್ತು ಪಾದದ ಮಣಿಕಟ್ಟುಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಸಾಮಾನ್ಯ ಬದಲಾವಣೆಯೇ ಈ ತೊಂದರೆಗೆ ಕಾರಣವಾಗುತ್ತದೆಯಲ್ಲದೆ, ಇದು ದೇಹದ ಮೇಲೆ ಆಕ್ರಮಣಕ್ಕೂ ದಾರಿಯಾಗುತ್ತದೆ.

ಈ ಆಕ್ರಮಣಕ್ಕೆ ತುತ್ತಾಗಬಹುದಾದ ದೇಹದ ಇತರ ಅಂಗಾಂಶಗಳಲ್ಲಿ ಪ್ರಮುಖವಾದವು – ಮಾಂಸಖಂಡಗಳು, ರಕ್ತನಾಳಗಳು, ಹೃದಯ, ಶ್ವಾಸಕೋಶಗಳು, ನರಗಳು ಮತ್ತು ಚರ್ಮ. ಈ ಸಮಸ್ಯೆಯ ಲಕ್ಷಣಗಳೆಂದರೆ ಜ್ವರ ಕಾಣಿಸಿಕೊಳ್ಳುವುದು ಮತ್ತು ಅತ್ಯಂತ ತೀವ್ರವಾದ ಬಲಹೀನತೆಯೂ ಕಾಡತೊಡಗುತ್ತದೆ. ಬಹುತೇಕ ಪ್ರಕರಣಗಳು 60 ವರ್ಷಕ್ಕೆ ಮುನ್ನವೇ ಕಂಡುಬರುತ್ತವೆ; ಅನಂತರವೂ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಯು ಜೀವನದುದ್ದಕ್ಕೂ ಇರುವುದಲ್ಲದೇ, ಹೆಚ್ಚುತ್ತಲೇ ಹೋಗಬಹುದು ಕೂಡ.

ಗೌಟ್- ಸಣ್ಣಕೀಲುಗಳ ಸಂಧಿವಾತ: ಈ ರೀತಿಯ ಸಂಧಿವಾತ ಒಂದು ಅಥವಾ ಕೆಲವೇ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ (ಅತ್ಯಂತ ಸಾಮಾನ್ಯ ಎಂದರೆ ಕಾಲಿನ ಹೆಬ್ಬೆರಳೂ ಮತ್ತು ಮಣಿಕಟ್ಟು). ಈ ತೊಂದರೆ ಮೂತ್ರಪಿಂಡದಲ್ಲಿಯ ಕಲ್ಲುಗಳಿಂದಾಗಿ ಅಲ್ಲದೇ ಯುರೇಟ್‌ನೆಫ್ರೋಪಥಿ ಅಥವಾ ಟೋಫಿಯಿಂದಲೂ  ಉಂಟಾಗಬಹುದು. ಕೀಲುಗಳ ಒಳಗೆ ಯೂರಿಂಕ್ ಆಸಿಡ್ ಕ್ರಿಸ್ಟಲ್‌ಗಳು ತುಂಬಿಕೊಂಡು ತೀವ್ರ ನೋವಿನ ಜೊತೆಗೆ ಊತವೂ ಕಾಣಿಸಿಕೊಳ್ಳುತ್ತದೆ; ದೇಹದ ಆ ಭಾಗ ಕೆಂಪಾಗಿ, ಬಿಸಿಯಾಗಲೂ ಕಾರಣವಾಗುತ್ತದೆ.

ಅತ್ಯಂತ ಹೆಚ್ಚಿನ ಪ್ರಮಾಣದ ಮಾಂಸ, ಹೆಚ್ಚಿನ ಪ್ರಮಾಣದ ಬೀರ್ ಸೇವಿಸುವ ಮತ್ತು ಅತಿಯಾದ ತೂಕ ಹೊಂದಿರುವವರಲ್ಲಿ ಈ ತೊಂದರೆ ಸಾಮಾನ್ಯವಾಗಿರುತ್ತದೆ. ನೋವು ಶೀಘ್ರವಾಗಿಯೇ – ಹನ್ನೆರಡು ಗಂಟೆಗಳ ಒಳಗೇ – ಅನುಭವಕ್ಕೆ ಬರುತ್ತದೆ. ಉಳಿದ ಲಕ್ಷಣಗಳೆಂದರೆ ಸುಸ್ತು ಮತ್ತು ಹೆಚ್ಚು ತಾಪಮಾನದ ಜ್ವರ. ಬಹುತೇಕ ಈ ತೊಂದರೆ  ಹೆಚ್ಚು ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಗೌಟ್ ರೋಗವನ್ನು ಹಿಂದಿನ ಕಾಲದಲ್ಲಿ ‘ಶ್ರೀಮಂತರ ಕಾಯಿಲೆ’ ಅಥವಾ ‘ರಾಜರ ಕಾಯಿಲೆ’ ಎಂದೂ ಕರೆಯಲಾಗುತ್ತಿತ್ತು. 

ಇನ್‌ಫೆಕ್ಷಿಯಸ್ ಆರ್ಥ್ರೈಟಿಸ್- ಸೋಂಕಿನ ಸಂಧಿವಾತ:  ಇದಕ್ಕೆ ರಕ್ತನಂಜಿನ ಅಥವಾ ಕೀವು ತುಂಬುವ ಸಂಧಿವಾತ (ಸೆಪ್ಟಿಕ್ ಆರ್ಥ್ರೈಟಿಸ್) ಎಂದೂ ಕರೆಯಲಾಗುತ್ತದೆ. ಸೋಂಕೊಂದು ಕೀಲಿನೊಳಕ್ಕೆ ಹರಡುವ ಸ್ಥಿತಿ ಇದು. ದೇಹದ ಇನ್ನೊಂದು ಭಾಗದಿಂದ ಹರಡಬಹುದಾದ ಬ್ಯಾಕ್ಟೀರಿಯ ಅಥವಾ ವೈರಸ್ ಅಥವಾ ಶಿಲೀಂಧ್ರಗಳಿಂದ ಉಂಟಾಗುವ ಸೋಂಕಿದು.

ಈ ಸಂಧಿವಾತದ ಲಕ್ಷಣಗಳೆಂದರೆ – ಕೀಲಿನಲ್ಲಿ ತೀವ್ರ ಪ್ರಮಾಣದ ನೋವು, ಕೀಲು ಊದಿಕೊಳ್ಳುವುದು ಮತ್ತು ಕೆಂಪಾಗುವುದು, ಜ್ವರ ಮತ್ತು ಚಳಿ ಅಲ್ಲದೇ ಸೋಂಕು ಹೊಂದಿರುವ ಭಾಗವನ್ನು ಕದಲಿಸಲು ಆಗದೇ ಇರುವುದು ಮುಂತಾದವು ಸೇರಿವೆ. ಮತ್ತೊಂದು ರೀತಿಯ ಸೋಂಕಿನ ಸಂಧಿವಾತ ಎಂದರೆ ‘ಪ್ರತಿಕ್ರಿಯಾತ್ಮಕ ಸಂಧಿವಾತ’ (ರಿಯಾಕ್ಟಿವ್ ಆರ್ಥ್ರೈಟಿಸ್). ದೇಹದ ಮತ್ತೊಂದು ಭಾಗದಲ್ಲಿರುವ ಸೋಂಕು ಈ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ.

ಈ ತೊಂದರೆ ಸಾಮಾನ್ಯವಾಗಿ ಮಂಡಿ, ಪಾದದ ಮಣಿಕಟ್ಟು, ಪಾದದ ಹೆಬ್ಬೆರಳುಗಳ ಕೀಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಮೂತ್ರಕೋಶ ಅಥವಾ ಮೂತ್ರವಿಸರ್ಜನಾ ನಾಳದಲ್ಲಿನ ಸೋಂಕಿನಿಂದಲೂ ಈ ತೊಂದರೆ ಕಾಣಿಸಿಕೊಳ್ಳಬಹುದು. ಪುರುಷರು ಮತ್ತು ಮಹಿಳೆ – ಇಬ್ಬರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. 

ಸಂಧಿವಾತಕ್ಕೆ ಕಾರಣಗಳು
ನಮ್ಮ ದೇಶದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಇದಾಗಿದೆ. ಅಸ್ಥಿಸಂಧಿವಾತ ಹಿರಿಯ ವಯಸ್ಕರಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಈ ತೊಂದರೆ ಕಾಣಿಸಿಕೊಳ್ಳುವಲ್ಲಿ ವಯಸ್ಸು ಪ್ರಮುಖ ಅಂಶ. ಇನ್ನೊಂದು ಪ್ರಮುಖ ಅಂಶವೆಂದರೆ ಆನುವಂಶೀಯತೆ. ಆದರೆ ಮಂಡಿಗಳ ತೊಂದರೆಯ ಸ್ಥಿತಿಗೆ ಅತಿಯಾದ ತೂಕ ಕಾರಣವಾಗಬಹುದು. ಕೀಲುವಾಯು ರೋಗದ ಸಂಧಿವಾತ ಎಲ್ಲ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇದು  ಸಾಮಾನ್ಯವಾಗಿ ಮಹಿಳೆಯರಲ್ಲಿ  ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಕಂಡುಬರುತ್ತದೆ.

ಇದು ರೋಗನಿರೋಧಕ ವ್ಯವಸ್ಥೆಯ ವೈಫಲ್ಯದಿಂದ ಉಂಟಾಗುವ ಆಟೋ ಇಮ್ಯುನ್ ತೊಂದರೆಯಾಗಿದೆ. ಜೊತೆಗೆ ಕುಟುಂಬದಲ್ಲಿನ ಆರೋಗ್ಯ ತೊಂದರೆಗಳ ಇತಿಹಾಸವು ಸೇರಿಕೊಳ್ಳುತ್ತದೆ. ಸಣ್ಣ ಕೀಲುಗಳ ಸಂಧಿವಾತ, ಎಂದರೆ ಗೌಟ್ ವಯಸ್ಸಾದ ಪುರುಷರಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ತೀವ್ರ ರೀತಿಯ ಈ ರೋಗಸ್ಥಿತಿಯಿಂದ ಅಪಾರವಾದ ನೋವು ಉಂಟಾಗುತ್ತದೆ. ದೇಹದಲ್ಲಿ ಹೆಚ್ಚಿನ ಯೂರಿಕ್ ಆಸಿಡ್ ಸಂಗ್ರಹ ಆಗುವುದರಿಂದ ಗೌಟ್ ಉಂಟಾಗುತ್ತದೆ.  ಈ ಸ್ಥಿತಿಗೆ ಹೈಪರ್‌ಯುರಿಸಿಮಿಯಾ ಎಂದು ಕರೆಯಬಹುದಾಗಿದೆ.

ಸೋಂಕಿನ ಅಥವ ಕೀವಿನ ಸಂಧಿವಾತವನ್ನು ಬ್ಯಾಕ್ಟಿರಿಯಾ ಅಥವ ಶಿಲೀಂಧ್ರಗಳು ಉಂಟುಮಾಡುತ್ತವೆ. ವೈರಸ್‌ನಿಂದ ಉಂಟಾಗುವ ಇತರೆ ಸೋಂಕುಗಳು ಈ ಸಮಸ್ಯೆಗೆ ಕಾರಣವಾಗಬಹುದು. ಇತರ ವೈರಸ್‌ಗಳಲ್ಲಿ ಹೆಪಟೈಟಿಸ್ ಎ, ಬಿ ಮತ್ತು ಸಿ, ಹರ್ಪಿಸ್ ವೈರಸ್‌ಗಳು, ಎಚ್‌ಐವಿ ಮತ್ತು ಗದಗಟ್ಟು ಮುಂತಾದವುಗಳು ಸೇರಿವೆ.

ಈ ತೊಂದರೆಯನ್ನು ಉಂಟುಮಾಡಬಹುದಾದ ಶಿಲೀಂಧ್ರಗಳಲ್ಲಿ ಹಿಸ್ಟೋಪ್ಲಾಸ್ಮಾ, ಕೋಕಿಡಿಯಾಮೈಸೆಸ್ ಮತ್ತು ಬ್ಲ್ಯಾಸ್ಟೊಮೈಸೆಸ್ ಮುಂತಾದವು ಸೇರಿವೆ. ಎಳೆಯ ಮಕ್ಕಳು ಮತ್ತು ಹಿರಿಯ ವಯಸ್ಕರು ಸೋಂಕಿನ ಸಂಧಿವಾತಕ್ಕೆ ಗುರಿಯಾಗಬಹುದಲ್ಲದೆ, ತೆರೆದ ಗಾಯಗಳು, ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿರುವವರು ಮತ್ತು ಪೂರ್ವಸ್ಥಿತ ತೊಂದರೆಗಳಾದ ಕ್ಯಾನ್ಸರ್, ಮಧುಮೇಹ ಮುಂತಾದವುಗಳಿಂದ ಬಳಲುತ್ತಿರುವವರಿಗೂ ಈ ತೊಂದರೆ ಕಾಣಿಸಿಕೊಳ್ಳಬಹುದಾಗಿದೆ.

ಚಿಕಿತ್ಸೆ: ಕೆಲವು ಸಾಮಾನ್ಯ ಚಿಕಿತ್ಸೆಯ ಆಯ್ಕೆಗಳು ಇವೆ. ಸಂಧಿವಾತವನ್ನು ಗುಣಪಡಿಸುವುದಕ್ಕಾಗಿ ಸಂಶೋಧನೆಗಳು ಮುಂದುವರೆದಿವೆ. ಪ್ರಮುಖ ಚಿಕಿತ್ಸಾವಿಧಾನಗಳೆಂದರೆ ಔಷಧಗಳು, ವ್ಯಾಯಾಮ ಮತ್ತು ಶಸ್ತ್ರಕ್ರಿಯೆ.  ನೋವು ನಿವಾರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಔಷಧಗಳು ಸಹಾಯ ಮಾಡುತ್ತವೆ.

ಅಸ್ಥಿಸಂಧಿವಾತದ ರೋಗಿಗಳು ಮೊದಲ ಬಳಸಬೇಕಾದ ಔಷಧವೆಂದರೆ ‘ಅಸಿಟಾಮೈನೊಫೆನ್’ ಅಥವಾ ‘ಆಕ್ಟ್’; ನೋವನ್ನು ನಿಯಂತ್ರಿಸಲು ಇದನ್ನು ಬಳಸಲಾಗುತ್ತದೆ. ಈ ಔಷಧಕ್ಕೆ  ಮತ್ತು ಗೌಟ್ ಮತ್ತು ಪ್ರತಿಕ್ರಿಯಾತ್ಮಕ ಸಂಧಿವಾತದಿಂದ ಬಳಲುವವರಿಗೆ ಯೇತರ ಉರಿಯೂತ ನಿರೋಧಕ ಔಷಧಗಳಾದ ಇಬೂಪ್ರೊಫೆನ್‌ನಂತಹವುಗಳಿಂದ ಚಿಕಿತ್ಸೆ ನೀಡಬೇಕು. ಔಷಧ ತೆಗೆದುಕೊಳ್ಳುವ ಸಂದರ್ಭದಲ್ಲಿ ಮದ್ಯಸೇವನೆ ನಿಯಮಿತವಾಗಿರಬೇಕು.

ಜೀವನಶೈಲಿಯೂ ಸಂಧಿವಾತದ ಚಿಕಿತ್ಸೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಈಜು ಅಥವಾ ದೈನಂದಿನ ನಡಿಗೆಗಳಂತಹ ವ್ಯಾಯಾಮಗಳನ್ನು ಅಳವಡಿಸಿಕೊಳ್ಳಬೇಕು. ನೋವು ಕಡಿಮೆಯಾಗಲು ಮತ್ತು ಕೀಲುಗಳ ಸುತ್ತಲೂ ಇರುವ ಮಾಂಸಖಂಡಗಳು ದೃಢಗೊಳ್ಳಲು ವ್ಯಾಯಾಮ ನೆರವಾಗುತ್ತದೆ. ವೈದ್ಯರ ಸಲಹೆ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಕು; ಜೊತೆಗೆ ದೈಹಿಕ ಚಿಕಿತ್ಸೆಯನ್ನೂ ಪಡೆದುಕೊಳ್ಳಬೇಕು.

ಬಿಸಿಯಾದ ಸ್ನಾನ, ಕಾಯಿಸಿದ ನೀರು ಹೊಂದಿರುವ ಈಜುಕೊಳದಲ್ಲಿ ಈಜುವುದು ಅಥವಾ ತೊಂದರೆ ಇರುವ ಭಾಗಗಳ ಮೇಲೆ ಹಾಟ್ ಮತ್ತು ಕೋಲ್ಡ್ ಪ್ಯಾಕ್‌ಗಳನ್ನು ಇಡುವುದರಿಂದ ಉಪಶಮನ ಸಿಗಬಹುದು. ದೇಹದ ತೂಕವನ್ನು ನಿಯಂತ್ರಿಸುವುದರಿಂದಲೂ ಕೂಡ ನೋವು ನಿವಾರಣೆಯಾಗಿ ಕೀಲುಗಳ ಮೇಲೆ ಒತ್ತಡ ಕಡಿಮೆಯಾಗಲು ಸಹಾಯವಾಗಬಹುದು.

ಈ ಮೇಲಿನ ಕ್ರಮಗಳು ಸಹಾಯ ಮಾಡದಿದ್ದರೆ ಶಸ್ತ್ರಕ್ರಿಯೆಯನ್ನು ಅವಲಂಬಿಸಬೇಕಾಗುತ್ತದೆ. ಕೀಲುಗಳು ವೈಕಲ್ಯದ ಮಟ್ಟವನ್ನು ತಲುಪಿದಾಗ ಮತ್ತು ಇತರ ಚಿಕಿತ್ಸೆಗಳು ಪರಿಣಾಮಕಾರಿಯಾಗದಿದ್ದಾಗ ವೈದ್ಯರು ಶಸ್ತ್ರಕ್ರಿಯೆಯ ಸಲಹೆಯನ್ನು ನೀಡುತ್ತಾರೆ. ತಜ್ಞರು ಹಾನಿ ಹೊಂದಿರುವ ಕೀಲುಗಳನ್ನು ದುರಸ್ತಿ ಪಡಿಸಬಹುದು ಅಥವಾ ಕೃತಕ ಕೀಲುಗಳ ಬದಲಿ ಜೋಡಣೆ ನಡೆಸಬಹುದು.

ಅತ್ಯಂತ ಸಾಮಾನ್ಯವಾದ ಶಸ್ತ್ರಕ್ರಿಯೆ ಎಂದರೆ ಸೊಂಟ ಅಥವಾ ಮೊಂಡಿ ಕೀಲುಗಳ ಬದಲಾವಣೆ. ಸಂಧಿವಾತದ ಚಿಕಿತ್ಸೆಯನ್ನು ಪ್ರತಿ ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸಬೇಕಾಗುತ್ತದೆ. ಏಕೆಂದರೆ ಒಬ್ಬರಿಂದ ಒಬ್ಬರಿಗೆ ರೋಗದ ವಿಧ, ತೀವ್ರತೆ ಮತ್ತು ಪರಿಣಾಮಗಳಲ್ಲಿ ವ್ಯತ್ಯಾಸವಿರುತ್ತವೆ. ತೊಂದರೆ ಕಂಡುಬಂದ ಕೂಡಲೇ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕು. ಅದರಲ್ಲೂ ಹಿರಿಯ ವಯಸ್ಕರಲ್ಲಿ ಇದು ಅತ್ಯಂತ ಗಮನಾರ್ಹ ಸಂಗತಿ.
(ಲೇಖಕರು ಮೂಳೆರೋಗಶಾಸ್ತ್ರಜ್ಞರು)

ರೋಗನಿದಾನ
ವೈದ್ಯರನ್ನು ಸಂದರ್ಶಿಸಿ ಅವರಿಗೆ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವುದರಿಂದ ಈ ತೊಂದರೆಯನ್ನು ನಿರ್ಧರಿಸಬಹುದಾಗಿದೆ.  ಅನಂತರ ಸ್ಥಿತಿಯನ್ನು ದೃಢಪಡಿಸಲು ತಪಾಸಣೆಗಳನ್ನು ಕೈಗೊಳ್ಳಬಹುದು. ಈ ಪರೀಕ್ಷೆಗಳಲ್ಲಿ ರಕ್ತಪರೀಕ್ಷೆ, ಎಕ್ಸ್-ರೇಗಳು, ಮ್ಯಾಗ್ನಟಿಕ್ ರೆಸೋನ್ಯಾನ್ಸ್ ಇಮೇಜಿಂಗ್ (ಎಂಆರ್‌ಐ), ಕಂಪ್ಯೂಟರೈಸ್ಡ್ ಟೊಮೊಗ್ರಫಿ (ಸಿಟಿ) ಸ್ಕ್ಯಾನ್, ಅಲ್ಟ್ರಾಸೌಂಡ್ ಸ್ಕ್ಯಾನ್ ಮತ್ತು ಮೂತ್ರಪರೀಕ್ಷೆ ಮುಂತಾದವುಗಳು ಸೇರಿವೆ.

ನೀವೂ ಬರೆಯಬಹುದು...
ಭೂಮಿಕಾ ಪುರವಣಿಗೆ ಮಹಿಳಾ ಸಂಬಂಧಿತ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಮತ್ತು ನಳಪಾಕ, ಆರೋಗ್ಯ,ವಿಭಾಗಕ್ಕೆ ನೀವೂ ಬರೆಯಬಹುದು. ಪ್ರಕಟಿತ ಬರಹಗಳಿಗೆ ಸಂಭಾವನೆ ಉಂಟು. ಸಂಪಾದಕರ ತೀರ್ಮಾನವೇ ಅಂತಿಮ.
ಇಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT