ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದ ಪಂಜರದೊಳಗೆ ಬಾಲ್ಯದ ಹಕ್ಕಿ...

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಕಳೆದ ಮಕ್ಕಳ ದಿನಾಚರಣೆಯಂದು ಹನ್ನೆರಡರ ಪುಟಾಣಿ ಹುಡುಗಿಯೊಬ್ಬಳಿಗೆ ಶುಭಾಶಯ ಹೇಳಿದೆ. ಮನೆಯ ಹೊರ ಜಗುಲಿಯ ಮೇಲೆ ಕುಟುಂಬದ ಎಲ್ಲರ ನಡುವೆ ಕುಳಿತಿದ್ದವಳು ಅಚ್ಚರಿಯಿಂದ ಕಣ್ಣರಳಿಸಿ, ಮರುಕ್ಷಣ ಮುಜುಗರವೋ, ಆನಂದವೋ, ಕಸಿವಿಸಿಯೋ ಏನೊಂದೂ ತೋರಗೊಡದೇ ಎದ್ದು ಒಳನಡೆದಳು. ಮರುಕ್ಷಣ ಮತ್ತೆ ಹೊರಬಂದು, ‘ನಾನೇನು ಇನ್ನೂ ಪುಟ್ಟ ಮಗೂನಾ?’ ಅಂತ ಕಣ್ಣರಳಿಸಿ ಕೇಳಿದಳು. 

ಆ ಕ್ಷಣ ಆ ಪ್ರಶ್ನೆ ಬರೀ ಅವಳದಷ್ಟೇ ಅಲ್ಲ, ಹಾಗೆಯೇ ಕೇಳಿದ್ದೂ ನನಗಷ್ಟೇ ಅಲ್ಲ ಎಂದು ಅನಿಸಿಬಿಟ್ಟಿತು.  ಅದು ಎರಡು ಜಗತ್ತುಗಳ ಮುಖಾಮುಖಿಯಂತೇ ತೋರಿತು. ತನಗೆ ತಾನೇ ಕೇಳಿಕೊಂಡಂತೆಯೂ ಇತ್ತು.

ಹೌದಲ್ಲ? ಮನುಷ್ಯನಿಗೆ ಎಷ್ಟು ವರ್ಷದವರೆಗೆ ಬಾಲ್ಯ? ಶೈಶವ, ಬಾಲ್ಯ, ಕೌಮಾರ, ಯೌವನ, ವೃದ್ಧಾಪ್ಯ ಇತ್ಯಾದಿ ವರ್ಗೀಕರಣಗಳು ಇವೆಯಷ್ಟೆ. ಇವುಗಳು ವ್ಯಕ್ತಿಯ ದೈಹಿಕ ಬೆಳವಣಿಗೆಗೆ ಮಾತ್ರ ಸಂಬಂಧಿಸಿದವೆ? ಅಥವಾ ಮಾನಸಿಕತೆಗೆ ಸಂಬಂಧಿಸಿವೆಯೆ? ಅಥವಾ ಅವೆಲ್ಲವುಗಳ ಮಿಳಿತವೆ?
ಆರಂಭದಲ್ಲೇ ಹೇಳಿದೆನಲ್ಲ, ಹನ್ನೆರಡು ವರ್ಷದ ಆ ಪುಟ್ಟ ಹುಡುಗಿಗೆ ತಾನಿನ್ನೂ ಪುಟ್ಟ ಹುಡುಗಿಯಾ? ಗಂಭೀರವಾಗಿರಬೇಕಾದ ಪ್ರೌಢೆಯಾ - ಎಂಬುದೇ ಉತ್ತರ ಕಂಡುಕೊಳ್ಳಲಾಗದ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.

ಆ ವಯಸ್ಸಿನ ಹುಡುಗಿಯರ ತಾಕಲಾಟವೇ ಅಂಥದು.  ಬಾಲ್ಯದ ದಡದಿಂದ ಹರೆಯದ ಇನ್ನೊಂದು ದಡಕ್ಕೆ ಸಪೂರ ಸಂಕದ ಮೂಲಕ ದಾಟುವ ವಯಸ್ಸು ಅದು.  ಆದರೆ ಈ ಸಂಕದ ಹರವು ಹುಡುಗರಿಗಿಂತ ಹುಡುಗಿಯರಿಗೆ ಭಿನ್ನವೇ ಆಗಿರುತ್ತದಲ್ಲವೇ? ಹನ್ನೆರಡು ವರ್ಷದ ಹುಡುಗನಲ್ಲಿ ಎಂದೂ ಉದ್ಭವಿಸದ, ಹಲವು ಅನುಮಾನಗಳು ಹುಡುಗಿಯರಿಗೆ ಬಗೆಹರಿಯಲಾರದ ಪ್ರಶ್ನೆಯಾಗಿ ಕಾಡುತ್ತದೇಕೆ?

ಹಿರಿಯರು ಮಕ್ಕಳನ್ನು ಹೊರಜಗತ್ತಿಗೆ ಅಣಿಗೊಳಿಸುವ ಕ್ರಮವೇ ಆ ಮಗು ಹೆಣ್ಣೋ ಗಂಡೋ ಎನ್ನುವುದನ್ನು ಆಧರಿಸಿರುತ್ತದೆನೋ. ಗಂಡುಮಗುವಿಗೆ ತುಂಟಾಟ, ಕೀಟಲೆ, ಹೊಡೆದಾಟಗಳು ‘ಸಹಜ’ ಗುಣಗಳು. ಆದ್ದರಿಂದಲೇ ನಮ್ಮಲ್ಲಿ ಅಣ್ಣನೆಂದರೆ ಹೊಡೆಯುವ ಅಣ್ಣನೇ (ಅಪವಾದಗಳೂ ಇರಬಹುದು).

ತಂಗಿ–ತಮ್ಮನ ಕುರಿತಾದ ಕಾಳಜಿಗಳು ಅಧಿಕಾರಯುತವಾಗಿ ಅದರ ಮಧ್ಯವೇ ವ್ಯಕ್ತವಾಗುತ್ತದೆ. ಆದರೆ ಅಕ್ಕನೆಂದರೆ ಹೊಡೆಯುವ ಅಕ್ಕನೇ? ಇಲ್ಲ. ತಂಗಿ ತಮ್ಮಂದಿರನ್ನು ಸೊಂಟಕ್ಕೇರಿಸಿಕೊಳ್ಳುವ ಅಕ್ಕ. ಪುಟ್ಟಿಯ ಕೈಹಿಡಿದು ಜತನ ಮಾಡುವ ಅಕ್ಕ, ಚಿಕ್ಕವರಿಂದ ಹೊಡೆಸಿಕೊಂಡರೂ ತಿರುಗಿ ಹೊಡೆಯದ ಅಕ್ಕ.

ಹೀಗೆ ಕುಟುಂಬದ ಮೊದಲ ಹೆಣ್ಣು ಮಗುವಂತೂ ತಮ್ಮ–ತಂಗಿಯರೊಂದಿಗಿನ ಹೋಲಿಕೆಯಲ್ಲಿ ಬೇಗ ದೊಡ್ಡವಳಾಗಿಬಿಡುತ್ತದೆ. ‘ತಮ್ಮ ತಂಗಿ ಚಿಕ್ಕವರು. ನೀನೂ ಚಿಕ್ಕವಳಾ?  ಇಷ್ಟು ದೊಡ್ಡವಳಾದರೂ ಬುದ್ಧಿ ಬೇಡ್ವಾ? ದೊಡ್ಡ ಮಕ್ಕಳು ತಮ್ಮಾ ತಂಗಿಯರನ್ನು ಎಷ್ಟು ಪ್ರೀತಿ ಮಾಡಬೇಕು’ ಎನ್ನುವ ಹಿರಿಯರ ಮಾತಿಗೆ ಹಿರಿಮಗು ಕಣ್ಣು ಪಿಳಿಗುಟ್ಟಿಸುತ್ತದೆ. ತನ್ನನ್ನೂ ಪುಟ್ಟಿ ತಮ್ಮನಂತೆ ತಂಗಿಯಂತೆ ಆದರಿಸಲಿ ಎಂದುಕೊಳ್ಳುವ ಮಗುವಿನ ಮನಸ್ಸಲ್ಲಿ ನಿರಾಸೆಯ ಕಾರ್ಮೋಡ ಕವಿಯುತ್ತದೆ. ಅಲ್ಲಿಂದ ಮನೆಯ ಹಿರಿಯಕ್ಕನ ಪಾತ್ರ ನಿರ್ವಹಣೆಗೆ ಶುರು...

ಮಕ್ಕಳಾಟಕ್ಕೆ ಮಾಡಿಕೊಳ್ಳುವ ಅಡುಗೆಮನೆಯಂತೂ ಅದ್ಭುತ ಜಗತ್ತು. ಅಲ್ಲಿ ತಮ್ಮ ಕಣ್ಣೆದುರಿನ ತುಂಬ ಶಕ್ತಿಯುತ ಮಾದರಿ–ಅಮ್ಮನನ್ನು ಅನುಕರಿಸುವ ಮಕ್ಕಳೇ ಎಲ್ಲರೂ. ಅಮ್ಮನಂತೆ ಅಡುಗೆ ಮಾಡುವ, ಕಸಗುಡಿಸುವ, ನೆಲ ಒರೆಸುವುದೆಲ್ಲ ಅವರಿಗೆ ಆಟಗಳೇ. ತುಂಬ ಎಳವೆಯಲ್ಲಿ ಗಂಡು–ಹೆಣ್ಣಿನ ಭೇದವಿಲ್ಲದೆ ಎಲ್ಲರೂ ಅಡುಗೆಮನೆಯಾಟ ಆಡಿದವರೇ. ತಾವೇ ಅಡುಗೆಮನೆಯಯೊಳಗೆ ಹೊಕ್ಕು ಅಡುಗೆ ಮಾಡಲು ಅನುಮತಿಯಿಲ್ಲವಲ್ಲ? ಅಂತಹ ನಿಷದ್ಧದ ಕಾಲದಲ್ಲಿ ತೆಂಗಿನಕಾಯಿ ಗರಟೆಗಳೇ ಪಾತ್ರೆಗಳಾಗಿ ಒದಗುವುದಿದೆ.

ಗೊಚ್ಚುಮಣ್ಣು ಅನ್ನವಾಗಿ ಅರಳುವುದಿದೆ. ಬೇಲಿತೊಂಡೆಯ ಹಸಿರೆಲೆಗಳು ತರಹೇವಾರಿ ಕಜ್ಜಾಯವಾಗಿ, ಮರಳು ಘಮ್ಮನೆಯ ಉಪ್ಪಿಟ್ಟಾಗುತ್ತದೆ. ಸೇವಂತಿಗೆ ಮೊಗ್ಗುಗಳಲ್ಲ ಪಲ್ಯವಾಗಿ ಬೆಂದು ಬಾಶಸುಂಟೆ ಮೂಡುವ ದಿನಗಳವು.

ಅಡುಗೆಮನೆಯಾಟದಲ್ಲಿ ಜೊತೆಗೇ ಅಡುಗೆ ಮಾಡಿ, ಪಾತ್ರೆ ತೊಳೆದು, ನೀರತುಂಬಿವ ಗೆಳೆಯರೆಲ್ಲ ಬರಬರುತ್ತ ಕವಲೊಡೆಯುತ್ತಾರೆ. ಬ್ಯಾಟು, ಚಿನ್ನಿದಾಂಡು, ಈಜುಗಳು  ಹುಡುಗರನ್ನು ತಮ್ಮ ಪಕ್ಷಪಾತಿಗಳಾಗಿ ಸೆಳೆದುಕೊಂಡುಬಿಡುತ್ತದೆ. ಆನಂತರ ಅವರಿಗೆ ಹೆಣ್ಣುಮಕ್ಕಳ ಜೊತೆ ಆಡುವುದು ಅವಮಾನವಾಗ ಕಾಣತೊಡಗುತ್ತದೆ.

ಇತ್ತ ಹುಡುಗಿಗೆ ಹೈಸ್ಕೂಲು ಕಾಲಿಡುವ ಹೊತ್ತಿಗೆ ಬಹಿರಂಗವಾಗಿ ಈ ಆಟಗಳನ್ನಾಡುವ ಭಾಗ್ಯವೂ ಲಭಿಸದೇ ಹೋಗುತ್ತದೆ. ಇದುವರೆಗೆ ತನಗೆ ಮುಚ್ಚಿದ್ದ ನಿಜದ ಅಡುಗೆಮನೆ ಬಾಗಿಲು ನಿಧಾನ ತೆರದುಕೊಳ್ಳುತ್ತಿದ್ದ ಹಾಗೆ ಆಟದ ಅಡುಗೆಮನೆ ಕದವಿಕ್ಕಿಕೊಳ್ಳತೊಡಗುತ್ತದೆ. ಕೈಯಲ್ಲಿ ಬ್ಯಾಟು–ಬಾಲು, ಗೋಲಿ ಹಿಡಿದು ಸೈಕಲ್ಲೇರಿ ರೆಕ್ಕೆ ಹಚ್ಚಿಕೊಂಡು ಹುಡುಗ ಹಾರುತ್ತ ಹಾರುತ್ತ ಆಕಾಶ ತಲುಪಿದರೆ, ಹುಡುಗಿ ಇರುವ ರೆಕ್ಕೆಗಳಿಗೆ ಬೀಗ ಜಡಿಸಿಕೊಂಡು ಮರುಗುತ್ತಾಳೆ.

‘ಹೆಣ್ಣುಮಕ್ಕಳು ಎಷ್ಟು ಬೇಗ ಬೆಳೆದು ದೊಡ್ಡವರಾಗಿ ಬಿಡ್ತಾರೆ ನೋಡಿ’ ಅಮ್ಮನಿಗೆ ಮೊನ್ನೆ ದಾರಿ ಮಧ್ಯೆ ಭೇಟಿಯಾದ ಸಂಬಂಧಿಕರೊಬ್ಬರು ಹೇಳಿದ್ದು ಮಗಳಿಗೆ ಸ್ಪಷ್ಟವಾಗಿಯೇ ಕೇಳಿಸಿದೆ. ಇತ್ತೀಚೆಗಂತೂ ಅಮ್ಮನಿಗೆ ಮಗಳ ಊಟ–ಉಡುಪು, ಆಟ–ಓಟ ಎಲ್ಲದರ ಮೇಲೂ ವಿಪರೀತ ಕಾಳಜಿ. ‘ಸರಿಯಾಗಿ ಕೂತ್ಕೋ. ಹೆಣ್ಣುಮಕ್ಕಳು ಪುಟ್ಟಿಗೆ ಕೂತ್ಕೋಬೇಕು. ಅದೆಂಥದು ಮೊಣಕಾಲು ಕಾಣುವಂತೆ ಕೂರೋದು?’ ಅಮ್ಮನ ಗದರುವಿಕೆಗೆ ಬಾಲ್ಯಸಹಜ ಚೆಲ್ಲುತನದ ಒಂದೊಂದೇ ಕೊಂಬೆಗಳು ಮುರಿದುಕೊಂಡು ಸಪಾಟಾಗತೊಡಗುತ್ತದೆ.

ಶಾಲೆ ಬಿಟ್ಟೊಡನೆ ಎಂದಿನಂತೆ ಪೆಟ್ಟಿಕೋಟಿನಲ್ಲಿ ಸೈಕಲ್ಲೇರಿ ಹೋಗುತ್ತಿದ್ದ ಹುಡುಗಿಗೆ  ‘ಮೇಲೊಂದು ಅಂಗಿ ತೊಟ್ಟೇ ಹೋಗು’ ಎಂದು ದುಂಬಾಲು ಬೀಳುತ್ತಾಳೆ. ‘ಹುಡುಗರ ಜೊತೆ ಉರಿದಿದ್ದು ಸಾಕು ಪುಟ್ಟಿ. ಅವರ ಸರ್ತಕ್ಕೆ ಸೈಕಲ್ಲು ಹೊಡೀಬೇಡ’ ಅಂತಾಳೆ. ಪೋರಿ ಶಾಲೆಗೋಗಿ ಮರಳುವ ಮುನ್ನವೇ ಬಣ್ಣದ ಕೊಡೆಗಳಂತಹ ಅವಳ ಚಂದದ ಫ್ರಾಕುಗಳಿಗೆ ಮೊಣಕಾಲು ಮುಚ್ಚುವಂತೆ ಹೆಚ್ಚುವರಿ ನೀರಿಗೆ ಹಚ್ಚಿಸಿ ಅಂದಗೆಡಿಸಿರುತ್ತಾಳೆ. ತನ್ನ ಫ್ರಾಕುಗಳಿಗಾದ ದುರ್ಗತಿ ನೆನೆದು ಕೆಂಡಾಮಂಡಲವಾಗುವ ಹುಡುಗಿ ‘ನನ್ನ ಚಂದದ–ಫ್ರಾಕುಗಳನ್ನೆಲ್ಲ ಹಾಳ್‌ ಮಾಡಿಬಿಟ್ಟೆ.

ನೀನೇ ಹಾಕ್ಕೋ. ನಂಗವು ಬೇಡ’ ಅಂದರೆ ‘ಮುದುಕಿಯಾಗೋವರೆಗೂ ಫ್ರಾಕನ್ನೇ ಹಾಕ್ತೀಯೇನು? ಇನ್ಮುಂದೆ ಚೂಡಿದಾರ ತರೋಣ’ ಅಂತ ತಣ್ಣಗೆ ನಿರ್ಧರಿಸಿಬಿಡ್ತಾಳೆ. ಮಗಳ ಪೇಚಾಟ ನೋಡಲಾರದ ಅಪ್ಪ ಸಮಾಧಾನಿಸಿ ‘ಹೋಗಲಿ ಬಿಡಮ್ಮಾ, ನೀಂಗ್ಯಾವುದು ಬೇಕೋ ಅದನ್ನೇ ತರೋಣ’ ಅಂತ ತಲೆ ಮೇಲೆ ಕೈಯಾಡಿಸಿದರೆ ದುರ್ಗೆಯಾಗುವ ಅಮ್ಮ, ‘ನೀವ್‌ ಸುಮ್ಮನಿರಿ ಮಧ್ಯೆ ಬಾಯಿ ಹಾಕಬೇಡಿ’ ಅಂತ ಗಪ್‌ಚುಪ್‌ ಮಾಡಿಬಿಡ್ತಾಳೆ.

ತಲೆಸ್ನಾನ ಮಾಡಿಸುವಾಗ ತುಟಿಪಿಟಕ್ಕೆನ್ನದಿದ್ದವಳು ಇತ್ತೀಚೆಗೆ ‘ಎಷ್ಟು ದಿನಾಂತ ನಾನೇ ಹಿಂಗೆ ತಲೆಸ್ನಾನ ಮಾಡಿಸೋದು? ತಲೆಬಾಚೋದು? ಎಲ್ಲ ‘ಟೈಮ’ಲ್ಲೂ ನಾನೇ ಮಾಡ್ಸೋದಾ?’ ಅಂತ ಪಿರಿಪಿರಿ ಮಾಡಲಾರಂಭಿಸಿದ್ದಾಳೆ. ‘ನಿನ್‌ ವಯಸ್ಸಲ್ಲಿ ನಾನು...’ ಅಂತ ಏನೋ ಶುರುವಿಟ್ಟುಕೊಂಡವಳು ತಟ್ಟಂತ ಅಲ್ಲಿಯೇ ನಿಲ್ಲಿಸಿಬಿಡುತ್ತಾಳೆ.

ಈ ಅಮ್ಮ ತನ್ನ ವಿಷಯದಲ್ಲಿ ಮಾತ್ರ ಯಾಕಿಂಗಾಡ್ತಾಳೆ? ಕೂತಿದ್ದೂ ತಪ್ಪು, ನಿಂತಿದ್ದು ತಪ್ಪು, ಓಡಿದ್ದು ತಪ್ಪು, ಜಿಗಿದದ್ದು ತಪ್ಪು, ತಮ್ಮ–ತಂಗಿಯರಿಗಿಲ್ಲದ   ನಿರ್ಬಂಧಗಳೇಕೆ ತನಗೆ? ನಾನಂದ್ರೆ ಅಮ್ಮನಿಗೆ ಇಷ್ಟ ಇಲ್ಲವಾ?’ ಅಂತ ಯೋಚಿಸುತ್ತ ಯೋಚಿಸುತ್ತ ಹುಡುಗಿ ಬಸವನ ಹುಳುವಿನಂತೆ ಇಂಚಿಂಚೇ ಇಂಚಿಂಚೇ ಚಿಪ್ಪಿನೊಳಗೆ ಸರಿಯಲಾರಂಭಿಸಿರುತ್ತಾಳೆ.

‘ಎರಡು ದಿನ ಮುನ್ನವೇ ಬನ್ನಿ ಮದುವೆಗೆ, ಗೊತ್ತಲ್ಲ. ಇವಳಿಗೆ ಎಷ್ಟೋ ಸಹಾಯವಾಗ್ತದೆ’ ಎಂಬ ಬಳಗದ ಕರೆಗೆ ಈಗೀಗ ಅಮ್ಮ ಕಡ್ಡಿ ಮುರಿದಂತೆ ನಿರಾಕರಿಸುತ್ತಾಳೆ. ‘ಇಲ್ಲ ಇಲ್ಲ ಈಗ ಮನೆಬಿಟ್ಟು ಬಂದಿನಾನೂ ಹೊರಗೆ ಉಳಿಯೋಕಾಗಲ್ಲ. ಮಕ್ಕಳೂ ದೊಡ್ಡೋರಾಗ್ತ ಬಂದ್ರಲ್ಲ’ ಎಂಬ ಉತ್ತರ ಅವಳಲ್ಲಿ ಸದಾ ಸಿದ್ಧವಿರುತ್ತದೆ. ಮೊದಲೆಲ್ಲ ಮಕ್ಕಳ ಖಬರಿಲ್ಲದೇ ವಾರಗಟ್ಟಲೇ ತವರಿನ ಕಷ್ಟಕ್ಕೆ ಒದಗುತ್ತಿದ್ದ ಅಮ್ಮ ಇವಳೇನಾ ಅನಿಸಿಬಿಡುತ್ತದೆ.

ಎಂದಿನಂತೆ ವಾರದ ಸಂತೆಗೆ ಅಪ್ಪನ ಬಾಲವಾಗಿ ನಿಂತ ಹುಡುಗಿಗೆ ‘ಎಲ್ಲಿ ಸಂತೆಗಾ? ಸಂತೆ–ಪೇಟೆ ಏನೂ ಬೇಡ. ಅವರಿಬ್ಬರು ಹೋಗಿಬರಲಿ’ ಅಂತ ತಮ್ಮನನ್ನು ಕಳಿಸೋದಕ್ಕೆ, ‘ನಿಂಗೆ ಜಾಸ್ತಿ ಓದೋದಿರತ್ತಲ್ಲ’ ಅಂತ ಸುಳ್‌ಸುಳ್ಳೇ ಸಮಜಾಯಿಷಿ ಕೊಡೋಕೆ ಅಮ್ಮನಿಗೆ ಮನಸ್ಸಾದರೂ ಹೇಗೆ ಬರ್ತದೋ... ಅಂತೂ ಬಿಟ್ಟೇ ಹೋಗಿಬಿಟ್ರಲ್ಲ ಪೇಟೆಗೆ.

‘ಏಯ್‌! ನೀನಾದ್ರೂ ಹಠ ಮಾಡಬಾರದಿತ್ತೇನೋ ಅಕ್ಕ ಬೇಕೇ ಬೇಕು ಅಂತ? ಮಾತಾಡಲ್ಲ ಹೋಗು...’ ಎಂದು ತಮ್ಮನೊಂದಿಗೆ ಮುನಿಸಿಕೊಳ್ಳುವುದ ಹೊರತುಪಡಿಸಿ ಇನ್ನೇನೂ ಮಾಡಲಾಗದ ಅಸಹಾಯಕತೆ ಅಕ್ಕನನ್ನು ಕಟ್ಟಿಹಾಕುತ್ತದೆ.

ತೋಟ–ಗದ್ದೆ, ಸಂತೆ–ಪೇಟೆ–ಊರುಗಳ ಅಪ್ಪ–ಮಗನ ಲೋಕದಿಂದ ಆಚೆ ನೂಕಲ್ಪಟ್ಟು ಹುಡುಗಿ ಸ್ಕೂಲು, ಮನೆ–ಅಡುಗೆಮನೆಗಳಿಗೆ ಒಗ್ಗಿ ಹೋಗುತ್ತಾಳೆ. ಹುಡುಗ ಅತ್ತ ಕಾಲೇಜಿಗೆಂದು ಬೆಳಿಗ್ಗೆ ಮನೆಬಿಟ್ಟವನು ಸಂಜೆಯೇ ಮರಳುತ್ತಾನೆ. ‘ಎಷ್ಟೊಂದು ಸುಸ್ತು’ ಏನ್ನುತ್ತ ಮೈಚೆಲ್ಲಿ ಕಾಫಿಗಾಗಿ ಅಮ್ಮನಿಗೆ ಆರ್ಡರು ಹಾಕುತ್ತಾನೆ. ತುಸು ಸಕ್ಕರೆ ಕಡಿಮೆಯಾಗಿದ್ದಕ್ಕೆ ಎಗರಾಡುತ್ತಾನೆ. ತಡವಾಗಿದ್ದು ಯಾಕೆ ಎಂದು ಅಮ್ಮ ಪ್ರಶ್ನಿಸಿದರೆ, ಥೇಟು ಅಪ್ಪನಂತೆಯೇ ರೇಗುತ್ತಾನೆ.

‘ನಾಳಿನ ಯುನಿಫಾರ್ಮಿಗೆ ಇಸ್ತ್ರಿ ಹಾಕೇ’ ಅಂತ ಅಕ್ಕನ ತೆರೆದ ಪುಸ್ತಕದ ಮೇಲೆಯೇ ತನ್ನ ವಸ್ತ್ರ ಎಸೆದು ಹೋಗುತ್ತಾನೆ. ‘ಈ ಮೀನುಸಾರು ನನಗೆ ಸೇರಲ್ಲ’ ಅಂತ ಅರ್ಧಕ್ಕೇ ಊಟ ಬಿಟ್ಟು ಕುದುರೆಹತ್ತಿ ನಡೆದುಬಿಡುತ್ತಾನೆ. ಹೌದು, ಮನೆಯ ಮುದ್ದುಮರಿ ಈಗ ಗಂಡಸಾಗುತ್ತಿದ್ದಾನೆ!

ಹುಡುಗ ವಿಶಾಲ ಜಗತ್ತಿನ ಕೊರೈಸುವ ಬೆಳಕಿಗೆ ಕಣ್ಣಗಲಿಸಿದರೆ, ಇತ್ತ ಹುಡುಗಿ ಅಮ್ಮನಿಗೆ ತರಕಾರಿ ಹೆಚ್ಚಿಕೊಡುತ್ತ, ಮತ್ತಷ್ಟು ಸೊಂಟ ಬಗ್ಗಿಸಿ ಗುಡಿಸುವುದನ್ನು ರೂಢಿ ಮಾಡುಕೊಳ್ಳುತ್ತ, ಅಣ್ಣ ತಿಂದಿಟ್ಟುಹೋದ ಪ್ಲೇಟು ತೊಳೆಯುತ್ತ, ಅಪ್ಪನಿಗೆ ದಿನಕ್ಕಾರು ಬಾರಿ ಚಹಾ ಮಾಡುತ್ತ ಅಮ್ಮನಾಗುವುದಕ್ಕೆ ಪ್ರಯತ್ನಿಸುತ್ತಾಳೆ. ದಪ್ಪನೆಯ ದೋಸೆಗೆ ಅಮ್ಮನಿಂದ ತಲೆ ಮೊಟಕಿಸಿಕೊಳ್ಳುತ್ತಾಳೆ. ಸ್ವಚ್ಛವಾಗದ ಪಾತ್ರೆಗೆ ಮತ್ತೊಂದು ಸೋಪು ಹಚ್ಚುತ್ತಾಳೆ.

ಮೂಲೆಯಲ್ಲಿ ಕಸಬಿಡದೇ ಗುಡಿಸುವುದನ್ನು ರೂಢಿ ಮಾಡಿಕೊಳ್ಳುತ್ತಾಳೆ. ಕಾದ ಕಾವಲಿಯೆದುರು ದೋಸೆಗಳು ಪೂರ್ತಿ ಮುಗಿಯುವವರೆಗೂ ಕೂರಲಾರದೇ, ಹೊರಗಿಡುವ ಹಪಾಹಪಿ ಹತ್ತಿಕ್ಕಲಾರದೇ ಖಿನ್ನಳಾಗುತ್ತಾಳೆ. ಹಬ್ಬದ ದಿನಗಳಲ್ಲಿ ಈಗ ಅಮ್ಮನೊಂದಿಗೆ ತಾನೂ ಬೇಯುತ್ತಾಳೆ. ಅವಳೊಂದಿಗೆ ಬಡಿಸಲು ಪಾತ್ರೆ ಹಿಡಿದು ನಿಲ್ಲುತ್ತಾಳೆ. ಕೊನೆಯಲ್ಲಿ ಉಣ್ಣುವ ಅಮ್ಮನಿಗೆ ಈಗವಳು ಕಂಪನಿ ಕೊಡುತ್ತಾಳೆ. ನಿಜ, ಮುದ್ದು ಕೂಸು ಹೆಣ್ಣಾಗತೊಡಗಿದ್ದಾಳೆ.

‘ಈ ಡ್ರೆಸ್ಸು ಸರಿ ಇಲ್ಲ. ಹಾಕ್ಕೊಂಬರಬೇಡ’ ಅಂತ ಪೀಟಿ ಮಾಸ್ತರು ಹೇಳುವಾಗಲೋ, ‘ಅಣ್ಣನೇ ಆಗಲಿ, ತಮ್ಮನೇ ಆಗಲಿ ಮೈಮುಟ್ಟಿ ಮಾತಾಡಿಸ್ತಾರೇನೇ?’ ಅಂತ ಚಿಕ್ಕಪ್ಪ ಗೊಣಗುವಾಗಲೋ, ಜೊತೆಗೇ ಆಡುತ್ತಿದ್ದ ವಾರಿಗೆಯ ಹೈಕಳು, ಏನೋ ವಿಚಿತ್ರ ಎಂಬಂತೆ ನೋಡಿ ಕಿಸಕ್ಕನೆ ನಕ್ಕಾಗಲೋ, ‘ಬಗ್ಗಿ ಎದ್ದು ಮಾಡುವಾಗ ಸನ್ನೆ–ಸೂಕ್ಷ್ಮ ಇಟ್ಕೊ’ ಅಂತ ಖುದ್ದು ಅಮ್ಮನೇ ಹೇಳುವಾಗಲೋ, ಇವಲ್ಲವುಗಳ ನಡುವೆ ಅದ್ಯಾವುದೋ ಅಮೃತಗಳಿಗೆಯಲ್ಲಿ ಹುಡುಗಿ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯ ಮನಸ್ಥಿತಿಗಳಿಗೆ ಹೆಣ್ಣು ದೇಹದ ಕುರಿತಾಗಿರುವ ಮುಚ್ಚಟೆಗಳನ್ನು ಅರ್ಥ ಮಾಡಿಕೊಳ್ಳಲಾರಂಭಿಸುತ್ತಾಳೆ.

ಹೀಗೆಯೇ, ನಮ್ಮ ಹುಡುಗಿಯ ಬಾಲ್ಯವೆಂಬುದು ಗೆಜ್ಜೆಕಟ್ಟಿಕೊಂಡು ಚಿನ್ನಾಟವಾಡುವ ಹೊತ್ತಿಗಾಗಲೇ ಸರಪಳಿ ಬಿಗಿಸಿಕೊಂಡು ಸೆರೆಯಾಗಿಬಿಡುತ್ತದೆ. ಜಾಮೀನಿನ ನೀರೀಕ್ಷೆಯಲ್ಲಿ ಬದುಕುವ ಅಪಾದಿತನಂತೆ, ಉಸಿರುಗಟ್ಟಿದಂತಾಗಿ, ಏದುಸಿರು ಬಿಡುತ್ತ ಅಕಾಲ ಮೃತ್ಯುಗೀಡಾಗುತ್ತದೆ.

ನೀವೂ ಸ್ಪಂದಿಸಿ ...
ಹೆಣ್ಣನ್ನು ಹಲವು ರೀತಿಯ ಪಂಜರಗಳಲ್ಲಿ ಬಂಧಿಸುವ ತವಕ ಸದಾ ಸಮಾಜದಲ್ಲಿ ಕ್ರಿಯಾಶೀಲವಾಗಿರುತ್ತದೆ. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಈ ಮಾತಿಗೆ ಪುಷ್ಟಿಯನ್ನು ಒದಗಿಸುವಂತಿದೆ. ಮಹಿಳೆಯರ ಮೇಲೆ ನಡೆದ ಲೈಂಗಿಕ ಹಲ್ಲೆಗೂ ಅವರು ಧರಿಸುವ ಬಟ್ಟೆಗೂ ಸಂಬಂಧವಿದೆ ಎಂಬಂಥ ತರ್ಕಗಳೂ ಈ ಸಂದರ್ಭದಲ್ಲಿ ಹುಟ್ಟಿಕೊಂಡಿವೆ.

ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಓದುಗರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಹೆಣ್ತನ, ಸ್ತ್ರೀಸ್ವಾತಂತ್ರ್ಯ, ಹೆಣ್ಣುಮಕ್ಕಳಿಗೂ ಸಮಾಜಕ್ಕೂ ಇರುವ/ಇರಬೇಕಾದ ನಂಟು – ಇವುಗಳನ್ನು ಕುರಿತು ನೀವೂ ಬರೆಯಬಹುದು.

ನಿಮ್ಮ ಬರಹ 250 ಪದಗಳನ್ನು ಮೀರದಂತಿರಲಿ. ನಿಮ್ಮ ಬರಹಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಭೂಮಿಕಾ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001. ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು  ಇ–ಮೇಲ್‌ ಮೂಲಕವೂ ಕಳುಹಿಸಬಹುದು.
ಇ–ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT