ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಂದಿರ ಪಡಿಪಾಟಲು, ಮಕ್ಕಳ ವ್ಯಸನದ ‘ಗೂಗಲ್’

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

‘ಶನಿವಾರ ಮಕ್ಕಳಿಗೆ ಸ್ವಲ್ಪ ಹೆಚ್ಚಿನ ಬಿಡುವು ಕೊಡಿ’. ಇದು, ಈಚಿನ ದಿನಗಳಲ್ಲಿ ಟ್ಯೂಷನ್‌ ಮೇಡಂ ಬಳಿ ಹೆಚ್ಚಿನ ಪಾಲಕರು ಸಲ್ಲಿಸುತ್ತಿರುವ ಬೇಡಿಕೆ. ತಮ್ಮ ಮಕ್ಕಳು ಹೆಚ್ಚಿನ ಸಮಯ ಆಡಿಕೊಳ್ಳಲಿ ಎನ್ನುವ ಕಾಳಜಿಯೇನೂ ಈ ಬೇಡಿಕೆಯ ಹಿಂದಿಲ್ಲ. ಶಾಲೆಯಲ್ಲಿ ಕೊಡುವ ಹತ್ತಾರು ಪ್ರಾಜೆಕ್ಟ್‌ಗಳಿಗೆ ಬೇಕಾದ ಬಣ್ಣದ ಚಿತ್ರಗಳು ಹಾಗೂ ಮಾಹಿತಿಯನ್ನು ಹುಡುಕಿ ಹೆಕ್ಕಲಿಕ್ಕಾಗಿ ಈ ಸಮಯದ ಬೇಡಿಕೆ. ಸೈಬರ್‌ ಕೆಫೆಗೆ ತೆರಳಿ, ಗೂಗಲ್‌ನಲ್ಲಿ ಹುಡುಕಾಟ ನಡೆಸಿ, ಡೌನ್‌ಲೋಡ್‌ ಮಾಡಿ, ಪ್ರಿಂಟ್‌ ಔಟ್‌ ತೆಗೆಯಲು ಮಕ್ಕಳಿಗೆ ಒಂದಷ್ಟು ಪುರುಸೊತ್ತು ಬೇಡವೆ?

ನಗರಪ್ರದೇಶಗಳಲ್ಲಿ ಮಕ್ಕಳು ಮುಸ್ಸಂಜೆ ಸಮಯದಲ್ಲಿ ಸೈಬರ್‌ ಸೆಂಟರ್‌ಗೆ ಹೋಗಿ ಪ್ರಿಂಟ್‌ಔಟ್‌ಗಳನ್ನು ತರಲಿಕ್ಕೆ ಅವಕಾಶವಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹೀಗೆ ಮಾಡಲು ಸಾಧ್ಯವೆ? ಹತ್ತಿರದ ಪಟ್ಟಣಗಳಲ್ಲಿನ ಸೈಬರ್‌ ಸೆಂಟರ್‌ಗೆ ಹೋಗಲು ಅವರಿಗೆ ಸಾಕಷ್ಟು ವ್ಯವಧಾನ ಬೇಕು. ಹಾಗಾಗಿ ಟ್ಯೂಷನ್‌ ಟೀಚರ್‌ ಬಳಿ ಬಿಡುವು ಕೇಳುತ್ತಾರೆ. ಇನ್ನು ಕೆಲವೆಡೆ ಪ್ರಿಂಟ್‌ಔಟ್‌ಗಳನ್ನು ತೆಗೆದು, ಮಕ್ಕಳ ಪ್ರಾಜೆಕ್ಟ್‌ಗಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಟ್ಯೂಷನ್‌ ಟೀಚರ್‌ಗಳೇ ಒದಗಿಸಿಕೊಡುತ್ತಾರೆ; ಪೋಷಕರಿಂದ ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ.

ಗೂಗಲ್ ಬ್ರಹ್ಮಾಂಡ
ಟ್ಯೂಷನ್‌ ಅವಕಾಶ ಇಲ್ಲದ, ಅಥವಾ ಮನೆಯಲ್ಲಿ ಕಂಪ್ಯೂಟರ್‌ ಪ್ರಿಂಟರ್‌ಗಳನ್ನು ಇಟ್ಟುಕೊಳ್ಳದೇ ಇರುವವರ ಮನೆಯಲ್ಲಿ ಅಮ್ಮಂದಿರ ಪಾಡು ದೇವರಿಗೇ ಪ್ರೀತಿ. ಪ್ರತಿದಿನ ಸಂಜೆ ಚಾರ್ಟ್‌ಗಳನ್ನು ಹುಡುಕುತ್ತಾ – ಒಂದೇ ಒಂದು ಪಾಂಡಾ, ಅಳಿಲು, ಮಿಡತೆಯ ಚಿತ್ರಕ್ಕಾಗಿ, ಆ ಚಿತ್ರ ಇರುವ ಇಡೀ ಶೀಟನ್ನು ಖರೀದಿಸುತ್ತ, ಅವುಗಳನ್ನು ಕತ್ತರಿಸುತ್ತಾ  ಸಮಯ ಕಳೆಯಬೇಕು.

ಚಾರ್ಟ್‌ಗಳನ್ನು ಮಕ್ಕಳ ಮನಸ್ಸಿಗೊಪ್ಪುವಂತೆ ಸಿದ್ಧ ಮಾಡಿಕೊಡಬೇಕು. ಈ ಓಡಾಟ, ಗಡಿಬಿಡಿಯಲ್ಲಿ ‘ಮಗು ನಿಜವಾಗಿಯೂ ಕಲಿತದ್ದೇನು?’ ಎನ್ನುವ ಪ್ರಶ್ನೆಗೆ ದೊರೆಯುವ ಉತ್ತರ – ಜೀವನದಲ್ಲಿ ಏನೇ ಅಗತ್ಯ ಬಂದರೂ ಕಷ್ಟ ಬಂದರೂ ಮಾಹಿತಿ ಬೇಕಿದ್ದರೂ ಸೈಬರ್‌ ಕೆಫೆಗೆ ಹೋಗಬೇಕು, ಅಥವಾ ‘ಗೂಗಲ್‌’ನಲ್ಲಿ ಹುಡುಕಾಟ ನಡೆಸುವ ಜಾಣ್ಮೆ ಕಲಿಯಬೇಕು!

‘ನಿರಂತರ ಸಮಗ್ರ ಶಿಕ್ಷಣ ಕಲಿಕೆ’ಯ ಪರಿಕಲ್ಪನೆಯನ್ನು ಆರಂಭಿಸಿದ ಸರ್ಕಾರದ ಆಶಯ ಏನೇ ಇರಲಿ, ಸದ್ಯಕ್ಕೆ ಮಕ್ಕಳ ತಲೆಯಲ್ಲಿ ವಿಕಾಸವಾಗಿರುವ ಯೋಚನೆಯೊಂದೇ – ಏನೇ ಆಗಲಿ, ಕೈಯಲ್ಲೊಂದು ಮೊಬೈಲ್‌ ಇರಬೇಕು ಮತ್ತು ಅದರಲ್ಲಿ ಗೂಗಲ್‌ ಕಿಂಡಿ ಇರಬೇಕು.

ಸಂಕುಚಿತ ಜಗತ್ತು
ಅತ್ಯಂತ ಸುಂದರವಾದ ಈ ಜಗತ್ತಿನಲ್ಲಿ ಎದುರಾಗುವ ಸಮಸ್ಯೆಗಳು, ಅವುಗಳನ್ನು ಎದುರಿಸುವಲ್ಲಿ ಸಿಗುವ ಥ್ರಿಲ್‌ಗಳು, ನೋವು–ನಿರಾಸೆಗಳು ಹಾಗೂ ಅವನ್ನೆಲ್ಲ ದಾಟಿದ ಬಳಿಕ ದೊರೆಯುವ ನಿರುಮ್ಮಳತೆಯನ್ನು ಅರ್ಥಮಾಡಿಕೊಳ್ಳಲು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಂಚೂರೂ ಅವಕಾಶವಿಲ್ಲ. ಶಾಲೆಯಲ್ಲಿ ಬೆಂಚೋ ಡೆಸ್ಕೋ ದೂಡುವಾಗ ‘ಥಟ್‌’ ಅಂತ ಹೆಬ್ಬೆರಳಿಗೆ ಗಾಯವಾದರೆ ಏನು ಮಾಡಬೇಕೆನ್ನುವುದು ಮಕ್ಕಳಿಗೆ ಗೊತ್ತಿಲ್ಲ. ಅಂಥ ಸಂದರ್ಭದಲ್ಲಿ ಟೀಚರ್‌ ಬಳಿ ಧಾವಿಸಿ, ‘ಮಿಸ್‌ ಒಂಚೂರು ಮೊಬೈಲ್‌ಕೊಡಿ’ ಅಂತ ಕೇಳುವ ಪರಿಸ್ಥಿತಿ ಇದೆ.

‘‘ವಿದ್ಯಾರ್ಥಿಗಳ ಭಾವನಾತ್ಮಕ ಕೌಶಲ, ವೈಜ್ಞಾನಿಕ ಅನ್ವಯಿಸುವಿಕೆಯ ಕೌಶಲ, ಸಾಮಾಜಿಕ ಪ್ರತಿಸ್ಪಂದನೆ, ಲಲಿತಕಲೆಯ ಕೌಶಲವನ್ನು ಅರಿಯಲು ‘ನಿರಂತರ ಸಮಗ್ರ ಕಲಿಕೆ’ (‘ಸಿಸಿಇ’) ಪ್ರಕ್ರಿಯೆಯನ್ನು ಸರ್ಕಾರ ರೂಪಿಸಿದೆ. ಆದರೆ ಮೂಲ ಉದ್ದೇಶವೇ ಬುಡಮೇಲಾಗಿ, ‘ಸಿಸಿಇ’ಯಿಂದ ಸೈಬರ್‌ ಕೆಫೆಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುವಂತಾಗಿದೆ.

ಮತ್ತೊಂದೆಡೆ ಕಲಿಕೆಗೆ ಪಠ್ಯಪುಸ್ತಕಕ್ಕಿಂತಲೂ ಸೈಬರ್‌ಕೆಫೆಯಲ್ಲಿ ಪಡೆಯುವ ಪ್ರಿಂಟ್‌ಔಟ್‌ಗಳೇ ಮುಖ್ಯವೆನ್ನಿಸುತ್ತದೆ. ಇಂಥ ಸಂದರ್ಭದಲ್ಲಿ ‘ಸಿಸಿಇ’ ಪರಿಕಲ್ಪನೆ ಬಗ್ಗೆ ಪುನರ್ ಅವಲೋಕನ ಮಾಡಲೇಬೇಕಾಗಿದೆ’’ ಎನ್ನುತ್ತಾರೆ ಬ್ಯಾಂಕ್‌ ಉದ್ಯೋಗಿ ಮಂಜುಳಾ ಕಾಮತ್‌.

‘‘ಚಾರ್ಟ್‌ ಉಸಾಬರಿಯಿಂದ ಮಕ್ಕಳಿಗೆ ಏನೂ ಲಾಭವಿಲ್ಲ. ಹಿಂದೆಲ್ಲ ಮಕ್ಕಳು ಶಾಲೆಯಲ್ಲಿ ಕೈ ತೋಟ ರೂಪಿಸುವ, ಶಾಲೆಯನ್ನು ಸ್ವಚ್ಛ ಮಾಡುವ ಕೆಲಸಗಳಲ್ಲೇ ಅವರ ಭಾವಾನಾತ್ಮಕ ಹಾಗೂ ವೈಚಾರಿಕ ಕೌಶಲ ವ್ಯಕ್ತವಾಗುತ್ತಿತ್ತು. ಈಗಲೂ ಅಂತಹ ಕೆಲಸಗಳಿಗೆ ಅವಕಾಶ ಕಲ್ಪಿಸುವುದು ಸಾಧ್ಯವಿದೆ. ಹಳ್ಳಿ ಶಾಲೆಗಳಲ್ಲಿ ಕೈತೋಟಕ್ಕೆ ಜಾಗವಿದೆ. ನಗರ ಶಾಲೆಗಳಲ್ಲಿ ಕುಂಡಗಳಲ್ಲಿ ಗಿಡಗಳನ್ನು ನೆಡಬಹುದು. ತರಗತಿಯೊಂದರ ಕೈತೋಟವು ಮಕ್ಕಳ ಸಂಘಟನಾ ಕೌಶಲದ ಅಭಿವ್ಯಕ್ತಿ. ಕೈತೋಟದ ಚಟುವಟಿಕೆಗಳು ಸಾಧ್ಯವಾದಲ್ಲಿ, ಮಕ್ಕಳು ಮಿಡತೆಯ ಚಿತ್ರಕ್ಕಾಗಿ ಗೂಗಲ್‌ ಮಾಡಬೇಕಾಗಿಲ್ಲ.

ಕಾಂಪೋಸ್ಟ್‌ ಗೊಬ್ಬರ ತಯಾರಿಸಿದಲ್ಲಿ, ಎರೆಹುಳುವಿನ ಚಿತ್ರವನ್ನು ಡೌನ್‌ಲೋಡ್‌ ಮಾಡಿ ಚಾರ್ಟ್‌ನಲ್ಲಿ ಅಂಟಿಸಬೇಕಾಗಿಲ್ಲ... ಒಂದು ಕೈತೋಟ ಮಗುವಿಗೆ ಕಲಿಸುವ ಪಾಠ ನೂರಾರು ತೆರನಾದ್ದು. ಅದು ‘ಸಿಸಿಇ’ ಪರಿಕಲ್ಪನೆಯಲ್ಲಿ ಉಲ್ಲೇಖವಾಗಿರುವುದಕ್ಕಿಂತಲೂ ಹೆಚ್ಚು ವಿಚಾರವನ್ನು ಮಗುವಿಗೆ ಕಲಿಸುತ್ತದೆ’’ ಎನ್ನುವುದು ಮಂಜುಳಾ ಅವರ ಅನಿಸಿಕೆ.

‘‘ಗೂಗಲ್‌ ಕಾಟದಿಂದಾಗಿ ಮಕ್ಕಳಲ್ಲಿ ಬರವಣಿಗೆಯ ಅಭ್ಯಾಸವೇ ತಪ್ಪಿದಂತಾಗಿದೆ. ಎಲ್ಲವನ್ನೂ ಕಾಪಿ ಪೇಸ್ಟ್‌ ಮಾಡಿದರಾಯಿತು. ಅಕ್ಷರ ಚೆಂದವಿರಬೇಕು ಎಂಬ ಅಪೇಕ್ಷೆ ಈಗಿಲ್ಲವಾದರೂ, ಬರೆಯುವ ಪ್ರಕ್ರಿಯೆಯಲ್ಲಿ ಮಾಹಿತಿಯು ಅರಿವಿಗೆ ಬರುತ್ತದೆ. ತಾಳ್ಮೆ, ನಿಧಾನ ನಡೆ, ಒಂದು ಕೆಲಸವನ್ನು ಸುಂದರವಾಗಿ ನಿಭಾಯಿಸಬೇಕು ಎನ್ನುವ ಆಶಯ ಮಗುವಿನ ಮನಸ್ಸಿನಲ್ಲಿ ಅರಳುವಂತೆ ಮಾಡುತ್ತದೆ.

ಇನ್ನು ‘ಸಿಸಿಇ’ ಇದ್ದರೂ, ಚಿಕ್ಕವರೊಂದಿಗೆ ಹೇಗೆ ವ್ಯವಹರಿಸಬೇಕು, ದೊಡ್ಡವರೊಂದಿಗೆ ಹೇಗೆ ಮಾತನಾಡಬೇಕು, ಸಾಮಾಜಿಕ ಸ್ತರಗಳನ್ನು ಮೀರಿ ಬೆರೆಯುವ ಉದಾರತೆಯ ಪಾಠವಂತೂ ಮಕ್ಕಳಿಗೆ  ಇಲ್ಲವೇ ಇಲ್ಲ ಎಂಬಂತಾಗಿದೆ’’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡಿ, ಅಂಕಕೇಂದ್ರಿತ ಕಲಿಕೆಯನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶದಿಂದ ‘ಸಿಸಿಇ’ ಪ್ರಕ್ರಿಯೆಯನ್ನು ಸದಾಶಯದಿಂದಲೇ ರೂಪಿಸಿರಬಹುದು. ಅದು ಪೂರಾ ವಿಫಲವಾಗಿದೆಯೆಂದೇನೂ ಅಲ್ಲ. ಆದರೆ ಅದರಲ್ಲಿ ಚಾರ್ಟ್‌ಗಳನ್ನು ಮಾಡುವ ಪ್ರಾಜೆಕ್ಟ್‌ನಿಂದಾಗಿ ಮಕ್ಕಳಲ್ಲಿ ಋಣಾತ್ಮಕ ಪ್ರಭಾವವೊಂದು ಬೀರಿರುವುದು ಸುಳ್ಳಲ್ಲ. ಹಾಗಾಗಿ ಮಕ್ಕಳ ಪ್ರಾಯೋಗಿಕ ಕಲಿಕೆಯ ಶೈಲಿಯನ್ನು ಮಣ್ಣಿಗೆ ಹತ್ತಿರವಾದ, ಬದುಕನ್ನು ಪ್ರೀತಿಸಲು ಪೂರಕವಾದ ರೀತಿಯಲ್ಲಿ ರೂಪಿಸುವ ಜರೂರತ್ತು ಇದೆ ಎಂಬ ಸಲಹೆ, ಸೈಬರ್‌ಕೆಫೆಗೆ  ಅಲೆದು ಅಲೆದು ಸುಸ್ತಾದ ಅಮ್ಮಂದಿರದ್ದು.

ಸ್ವಾವಲಂಬನೆಯ ಮಂತ್ರ
ಒಬ್ಬ ವ್ಯಕ್ತಿ ಶಾಲಾ ಶಿಕ್ಷಣವನ್ನು ಪಡೆಯಲಿ, ಪಡೆಯದೇ ಇರಲಿ – ಸ್ವತಂತ್ರನಾಗಿ ಬಾಳುವೆ ಮಾಡುವ ದಾರಿಯನ್ನು ಅವನು ಹುಡುಕುತ್ತಲೇ ಇರುತ್ತಾನೆ. ಶಾಲಾ ಶಿಕ್ಷಣವು ಈ ಸ್ವತಂತ್ರವಾದ ಬದುಕನ್ನು ರೂಪಿಸಲು ಸಹಾಯ ಮಾಡುತ್ತದೆ. ಮನುಷ್ಯನಲ್ಲಿ ಅಂತರ್ಗತವಾಗಿರುವ ಹಲವಾರು ಪ್ರತಿಭೆಗೆ ನೀರೆರೆಯುವ, ಅದರ ವಿಕಾಸಕ್ಕೆ ವೇದಿಕೆ ಕಲ್ಪಿಸುವ ಕೆಲಸವನ್ನು ಮಾಡುತ್ತದೆ.

ಪ್ರಾಥಮಿಕ ಹಂತದಲ್ಲಂತೂ ಈ ವಿಕಾಸ ಪ್ರಕ್ರಿಯೆ ತುಸು ವೇಗವಾಗಿಯೇ ಸಾಗುತ್ತದೆ. ಈ ಹಂತದಲ್ಲಿ ಮಕ್ಕಳಿಗೆ ಅವಲಂಬನೆಯನ್ನೇ ಕಲಿಸುತ್ತಾ ಬಂದಲ್ಲಿ ತಮ್ಮೊಳಗೆ ಇರುವ ಸಾಮರ್ಥ್ಯವನ್ನು ಅವರು ಅರಿತುಕೊಳ್ಳುವ ಅವಕಾಶವೇ ದೊರೆಯುವುದಿಲ್ಲ.

‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶಿವಶಂಕರ ಭಟ್‌ – ‘‘ಮನುಷ್ಯನು ಈ ಪ್ರಕೃತಿಗೆ ಪೂರಕವಾಗಿ, ಸ್ವತಂತ್ರವಾಗಿ ಜೀವನ ನಡೆಸಲು ಶಿಕ್ಷಣ ಸಹಕಾರಿ ಆಗಿರಬೇಕು. ಈಗಿನ ಕಲಿಕಾ ಮಾಧ್ಯಮಗಳಿಂದ ಬಡವರು–ಶ್ರೀಮಂತರು ಎಂಬ ತಾರತಮ್ಯ ಸೃಷ್ಟಿಯಾಗುತ್ತಿದೆ. ಸಾಮಾಜಿಕವಾಗಿಯೂ ಹಬ್ಬ ಹರಿದಿನಗಳು ಮತ್ತು ಮನೆಯ ಕಾರ್ಯಕ್ರಮಗಳಲ್ಲಿ ಮಕ್ಕಳು ಸಹಭಾಗಿತ್ವವನ್ನು ನಿರಾಕರಿಸುತ್ತಾರೆ.

ಇಂತಹ ಕಾರ್ಯಕ್ರಮಗಳೇ ಅವರಿಗೆ ಸಮಾಜವನ್ನು, ಅಲ್ಲಿನ ಒಳಿತು ಕೆಡುಕುಗಳನ್ನೂ ಪರಿಚಯಿಸುವ ವೇದಿಕೆಗಳು. ಆದರೆ ಮಕ್ಕಳಿಗೆ ಯಾಕೋ ಕೌಟುಂಬಿಕ ಕಾರ್ಯಕ್ರಮಗಳೆಲ್ಲ ಬೋರ್‌ ಆಗುತ್ತಿವೆ. ಮಕ್ಕಳು ತಂತ್ರಜ್ಞಾನವನ್ನು ಬಳಸಿಕೊಂಡು ಸಂಘಜೀವಿಗಳಾಗಿ ಬಾಳಬೇಕೇ ಹೊರತು, ತಮ್ಮ ಮೊಬೈಲ್‌ ಜೊತೆ ದ್ವೀಪಗಳಾಗಿಬಿಡುವ ಅಪಾಯವನ್ನು ತಪ್ಪಿಸಬೇಕು’’ ಎನ್ನುತ್ತಾರೆ.

ಮಕ್ಕಳು ಗೂಗಲ್‌ ವ್ಯಸನಿಗಳಾಗುವಂತೆ ಪರೋಕ್ಷವಾಗಿ ಶಿಕ್ಷಕರೇ ಪ್ರೇರೇಪಿಸುತ್ತಾರೆ ಎಂಬ ಆರೋಪ ಇನ್ನು ಕೆಲವು ಪೋಷಕರದ್ದು. ಗೂಗಲ್‌ನಿಂದ ಮಾಹಿತಿ ತರುವುದು, ನಾಲ್ಕೈದು ಚಿತ್ರಗಳನ್ನು ಅಂಟಿಸುವಂತೆ ಹೇಳಿ ಪ್ರಾಜೆಕ್ಟ್‌ ವರ್ಕ್‌ಗಳನ್ನು ಮುಗಿಸಿ, ಅಂಕ ಲಗತ್ತಿಸಿಬಿಡುವುದು ಶಿಕ್ಷಕರಿಗೆ ಸುಲಭವಾಗುತ್ತಿದೆ ಎನ್ನುತ್ತಾರೆ ಪೋಷಕರ ಸಂಘದಲ್ಲಿ ಸಕ್ರಿಯರಾಗಿರುವ ಪದ್ಮಾ.

ಸರ್ಕಾರ ಯಾವುದೇ ನೀತಿಯನ್ನು ಜಾರಿ ಮಾಡಲಿ, ಅದನ್ನು ಅನ್ವಯಿಸುವಿಕೆಯಲ್ಲಿಯೇ ಅದರ ಯಶಸ್ಸು ಮತ್ತು ಸೋಲು ಅಡಗಿದೆ. ಲಲಿತಕಲೆಗಳ ಕಲಿಕೆ ಎಲ್ಲ ಶಾಲೆಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ಇರುತ್ತದೆ. ಆದರೆ ಹಿಂದಿನಂತೆ ಶಿಕ್ಷಕರು ಮತ್ತು ಮಕ್ಕಳು ಕುಳಿತು ವಾರ್ಷಿಕೋತ್ಸವದ ಯೋಜನೆಯನ್ನು ತಯಾರಿಸುವ, ಮಕ್ಕಳೇ ತಮ್ಮ ನೃತ್ಯ, ಭಾಷಣಗಳನ್ನು ಮುಖ್ಯೋಪಾದ್ಯಾಯರ ಮುಂದೆ ಪ್ರದರ್ಶಿಸಿ, ಉತ್ತಮವಾದುದನ್ನು ಆಯ್ಕೆ ಮಾಡುವ ಹಳೇ ಪದ್ಧತಿಗಳು ಈಗ ಉಳಿದಿಲ್ಲ. ಹೆಚ್ಚಿನ ಶಾಲೆಗಳಲ್ಲಿ ವಾರ್ಷಿಕೋತ್ಸವದ ಇಡೀ ಯೋಜನೆಯನ್ನು ‘ಕೋಚ್‌’ಗಳೇ ರೂಪಿಸುತ್ತಾರೆ. ಮಕ್ಕಳಿಂದ ಸಂಗ್ರಹಿಸಿದ ಹಣವನ್ನು ಪ್ಯಾಕೇಜ್‌ ರೂಪದಲ್ಲಿ ಅವರಿಗೆ ಕೊಟ್ಟರಾಯಿತು. ಈ ಇವೆಂಟ್‌ ಮ್ಯಾನೇಜ್‌ಮೆಂಟ್‌ನಿಂದ ಮಕ್ಕಳು ಏನು ಕಲಿಯಬಹುದು ಎನ್ನುವುದು ಅವರ ಪ್ರಶ್ನೆ.

‘‘ಚಾರ್ಟ್‌ಗೆ ಚಿತ್ರ ಅಂಟಿಸಿಯೇ ಪ್ರಾಜೆಕ್ಟ್‌ಗಳನ್ನು ಮಾಡಬೇಕು ಎನ್ನುವುದು ಕಡ್ಡಾಯ ಆಗಬಾರದು. ತೋಟ ಮಾಡುವುದೋ, ಹತ್ತಿರದ ಬೆಟ್ಟವನ್ನು ಏರುವುದೋ, ಮಕ್ಕಳನ್ನು ಗುಂಪಾಗಿ ಕೂರಿಸಿ ಕಥೆ ಪುಸ್ತಕಗಳನ್ನು ಓದಿಸಿ, ಆ ಪುಸ್ತಕದ ಬಗ್ಗೆ ಒಂದಷ್ಟು ಬರೆಯಲು ಹೇಳುವುದೋ... ಇಂಥ ಚಟುವಟಿಕೆಗಳನ್ನು ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಸ್ವಯಂ ಇಚ್ಛೆಯಿಂದ ಮಾಡುವ ಉದಾಹರಣೆಗಳೂ ಇವೆ.

ಆದರೆ ಎಲ್ಲರಿಂದ ಇದೇ ಮಾದರಿಯ ಕೆಲಸವನ್ನು ನಿರೀಕ್ಷಿಸುವುದು ಸಾಧ್ಯವಾಗದೇ ಇರುವುದರಿಂದ ಸರ್ಕಾರ ರೂಪಿಸಿರುವ ‘ಸಿಸಿಇ’ಯಲ್ಲಿ ಬದಲಾವಣೆ ತರಬೇಕು ಎನ್ನುವ ಆಗ್ರಹಗಳು ಕೇಳಿ ಬರುತ್ತಿವೆ’’ ಎನ್ನುವ ಪದ್ಮಾ ಅವರ ಮಾತನ್ನು ನಮ್ಮ ಪೋಷಕರು,  ಬೋಧಕರು ಮತ್ತು ಸರ್ಕಾರ ಗಂಭೀರವಾಗಿ ಕೇಳಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT