ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ನೀತಿ ಪ್ರತಿಪಾದನೆಗೆ ಬೇಕಿದೆ ಕಾನೂನು ಬಲ

ಅಂತರಾಳ
Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
ರಾಜ್ಯದಲ್ಲಿ ನೆಲೆಯೂರಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಆದ್ಯತೆ ನೀಡಬೇಕೆಂಬ ನೆಲದ ನೀತಿಯನ್ನು ಪ್ರತಿಪಾದಿಸಿದ ಡಾ. ಸರೋಜಿನಿ ಮಹಿಷಿ ವರದಿ ಹೊರಬಂದು 32 ವರ್ಷಗಳೇ ಕಳೆದು ಹೋಗಿವೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂಬ ಕಠಿಣ ಕಾನೂನುಗಳನ್ನು ಸರ್ಕಾರ ಮುತುವರ್ಜಿ ವಹಿಸಿ ಜಾರಿಗೆ ತರದ ಹೊರತು ಅನ್ನದ ಪ್ರಶ್ನೆ, ಕನ್ನಡದ ಪ್ರಶ್ನೆ ಶಾಶ್ವತವಾಗಿರುತ್ತದೆ. ಕನ್ನಡದ ಯುವಜನರಿಗೆ ಉದ್ಯೋಗಾವಕಾಶ ಲಭಿಸಿ, ಕನ್ನಡದಿಂದ ಅನ್ನ ಸಿಕ್ಕರೆ, ಸಾಮಾನ್ಯವಾಗಿ ಕನ್ನಡದ ಉಳಿವಿನ ಪ್ರಶ್ನೆ ತೆರೆ ಮರೆಗೆ ಸರಿಯಲಾರಂಭಿಸುತ್ತದೆ. ಈ ಕಾರಣಕ್ಕೆ ಈ ವರದಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಆದರೆ, ಮಹಿಷಿ ವರದಿಗೆ ಕಾನೂನು ಬಲ ಇಲ್ಲ. ಅದು ವರದಿ ಅಷ್ಟೆ!
 
ಮಹಿಷಿ ಅವರು ಅಧ್ಯಯನ ವರದಿ ಸಲ್ಲಿಸಿದ ಸಂದರ್ಭದಲ್ಲಿ ಸರ್ಕಾರಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಅಂಚೆ ಇಲಾಖೆ, ಬ್ಯಾಂಕು, ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕಚೇರಿಗಳು, ಉದ್ದಿಮೆ, ರಾಜ್ಯ ಸರ್ಕಾರದ ಕಚೇರಿ, ಉದ್ದಿಮೆಗಳಲ್ಲಿ ಶೇ 90ರಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ, ಕಾಲ ಸಂಪೂರ್ಣ ಬದಲಾಗಿದೆ. ಈಗ ಸರ್ಕಾರಿ ವಲಯದಲ್ಲಿ ಕೇವಲ ಶೇ 7ರಷ್ಟು ಉದ್ಯೋಗ ಇದೆ. ಉಳಿದ ಶೇ 93ರಷ್ಟು ಖಾಸಗಿ ವಲಯದ ತೆಕ್ಕೆಯಲ್ಲಿದೆ. ಆ ದಿನಗಳಲ್ಲಿ ಐ.ಟಿ– ಬಿ.ಟಿ, ಬಹುರಾಷ್ಟ್ರೀಯ ಕಂಪೆನಿಗಳು ಇನ್ನೂ ಕಾಲಿಟ್ಟಿರಲಿಲ್ಲ. ಖಾಸಗಿ ಕಾರ್ಖಾನೆಗಳು ದೊಡ್ಡ ಸಂಖ್ಯೆಯಲ್ಲಿ ಇರಲಿಲ್ಲ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ– ಕಾಮರ್ಸ್‌ ಸಂಸ್ಥೆಗಳೂ ಇರಲಿಲ್ಲ. ಈ ಕಾರಣಕ್ಕೆ, ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎನ್ನುವುದು ಬಹು ಚರ್ಚಿತ ವಿಷಯ; ರಾಜ್ಯ ಸರ್ಕಾರದ ವಾದ. ಆದರೆ, ಖಾಸಗಿ ಕ್ಷೇತ್ರಗಳು ಮಹಿಷಿ ವರದಿ ವ್ಯಾಪ್ತಿಗೆ ಬರುವುದಿಲ್ಲ, ಹೀಗಿರುವಾಗ ವರದಿ ಅನುಷ್ಠಾನ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಇಲ್ಲಿ ಗಮನಿಸಬೇಕು.
 
ಖಾಸಗಿ ಉದ್ದಿಮೆಗಳಲ್ಲಿ ಹಂತ ಹಂತವಾಗಿ, ಶೇ 100ರಷ್ಟು ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದೂ ಸೇರಿದಂತೆ ಮಹಿಷಿ ಸಮಿತಿ 1986ರಲ್ಲೇ 58 ಶಿಫಾರಸುಗಳನ್ನು ಒಳಗೊಂಡ ವರದಿ ಸಲ್ಲಿಸಿತ್ತು. ಅದರಲ್ಲಿನ 12 ಶಿಫಾರಸುಗಳನ್ನು ತನಗೆ ಒಪ್ಪುವ ಅಧಿಕಾರ ಇಲ್ಲವೆಂದು ಕೈಬಿಟ್ಟು, ಉಳಿದವುಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿತ್ತು. ಕೇಂದ್ರ ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್‌ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇ 100ರಷ್ಟು, ಗ್ರೂಪ್‌ ‘ಬಿ’ ಹುದ್ದೆಗಳಿಗೆ ಶೇ 65ರಷ್ಟು ಕನ್ನಡಿಗರನ್ನು ನೇಮಿಸಿಕೊಳ್ಳಬೇಕು, ರಾಜ್ಯ ಸರ್ಕಾರದ ಅಥವಾ ಅಖಿಲ ಭಾರತ ಸೇವೆಯ ಅಧಿಕಾರಿಗಳನ್ನು ಈ ನೇಮಕಾತಿ ಸಮಯದಲ್ಲಿ  ಒಟ್ಟುಗೂಡಿಸಿಕೊಳ್ಳಬೇಕು, ಕೇಂದ್ರ  ಸರ್ಕಾರಿ ಸ್ವಾಮ್ಯದ ಉದ್ದಿಮೆ ಸ್ಥಾಪಿಸಲು ನೆಲ, ಜಲ, ವಿದ್ಯುತ್‌ ಮುಂತಾದವುಗಳನ್ನು ರಾಜ್ಯ ಸರ್ಕಾರ ನೀಡುವಾಗ ಈ ಷರತ್ತು ಹಾಕಬೇಕು ಎನ್ನುವುದು ವರದಿಯಲ್ಲಿನ ಪ್ರಮುಖ ಅಂಶ. ರಾಜ್ಯ  ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಎಲ್ಲ ಹಂತಗಳಲ್ಲಿ ಶೇ 100ರಷ್ಟು ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಬೇಕು. ವಿಶೇಷ ಪರಿಣತಿ ಬೇಕಾಗಿರುವ ಗ್ರೂಪ್‌ ‘ಎ’ ಮತ್ತು ‘ಬಿ’ ನೇಮಕಾತಿ ಮಾಡುವಾಗ ಸರ್ಕಾರದ ಅನುಮತಿ ಪಡೆದ ನಂತರವಷ್ಟೇ ಈ ನಿರ್ಬಂಧದಿಂದ ವಿನಾಯಿತಿ ನೀಡಬಹುದು. ಖಾಸಗಿ ಉದ್ದಿಮೆಗಳು ಸರ್ಕಾರದಿಂದ ಪೂರ್ವಭಾವಿ ವ್ಯವಸ್ಥೆ, ಸಹಾಯಧನ ಪಡೆದಿರುವುದರಿಂದ ಎಲ್ಲ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು ಎಂದೂ  ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡುವುದು ಕಡ್ಡಾಯ ಎಂಬ ನಿಯಮವನ್ನೇ ಹಿಡಿದುಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯರಿಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದರೂ ಅದಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
 
ಮಹಿಷಿ ವರದಿ ಸಲ್ಲಿಸುವ ದಿನಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇಂದು ಆ ಕೇಂದ್ರಗಳನ್ನು ಕೇಳುವವರೇ ಇಲ್ಲ. ಬ್ಯಾಂಕು, ರೈಲ್ವೆ, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ಗಳು ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ಮಾಡಿಕೊಳ್ಳುತ್ತವೆ. ಹೀಗಾಗಿ ಈ ಕೇಂದ್ರಗಳಿಗೆ ಈಗ ಮಹತ್ವವಿಲ್ಲ. ಹಾಗೆಂದು, ಮಹಿಷಿ ವರದಿ ಸಂಪೂರ್ಣ ಅಪ್ರಸ್ತುತ ಎಂದಲ್ಲ. ಅದರಲ್ಲಿರುವ ಸುಮಾರು 18–20 ಅಂಶಗಳು ಇವತ್ತಿಗೂ ಅನ್ವಯವಾಗುವಂಥವುಗಳೆ. ಅಂಥ ಅಂಶಗಳನ್ನು ಉಳಿಸಿಕೊಂಡು, ಹೊಸ ಕೆಲವು ಅಂಶಗಳನ್ನು ಸೇರಿಸಿ ಇಡೀ ವರದಿಯನ್ನು ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ.
 
ಸರ್ಕಾರದಿಂದ ರಿಯಾಯಿತಿ ದರದಲ್ಲಿ ಜಾಗ ಪಡೆಯುವ, ಈ ನೆಲದ ನೀರು, ವಿದ್ಯುತ್‌ ಬಳಸುವ ಖಾಸಗಿ ಉದ್ದಿಮೆಗಳು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಅಂಶವನ್ನು ‘ಹೊಸ ಕೈಗಾರಿಕಾ ನೀತಿ 2014–19’ರಲ್ಲಿ ಸರ್ಕಾರ ಸೇರಿಸಿದೆ. ಆದರೆ, ಅದೊಂದು ನೀತಿ ಅಷ್ಟೆ. ಪಾಲಿಸಲೇಬೇಕು ಎಂದೇನೂ ಇಲ್ಲ. ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲು ಅವಕಾಶವೂ ಇಲ್ಲ. ಈ ನೀತಿಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಾಯ್ದೆ ರೂಪಿಸುವ ಅಗತ್ಯವಿದೆ. ಇದು ರಾಜ್ಯ ಸರ್ಕಾರದಿಂದ ಸಾಧ್ಯವಾಗುವ ಕೆಲಸ. ಸ್ಥಳೀಯರಿಗೆ ಉದ್ಯೋಗ ನೀಡದ ಅಥವಾ ಹಿತ ಕಾಪಾಡದ ಉದ್ದಿಮೆಗಳಿಗೆ ನೀಡಿದ ಸೌಲಭ್ಯಗಳನ್ನು ಮರಳಿ ಪಡೆಯುವ ಅಧಿಕಾರ ಸರ್ಕಾರದ ಕೈಯಲ್ಲಿ ಇರಬೇಕು ಎನ್ನುವುದು ಪ್ರಾಧಿಕಾರ ಸೇರಿದಂತೆ ಕನ್ನಡಪರ ಸಂಘಟನೆಗಳ ಆಗ್ರಹ. ಅಂತೆಯೇ, ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿ, ಕೈಗಾರಿಕೆಗಳಲ್ಲೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭ್ಯವಾಗಬೇಕು. ಆದರೆ, ಈ ವಿಷಯದಲ್ಲಿ ಕೇಂದ್ರ ಕಾಯ್ದೆ ಮಾಡಬೇಕು. ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಲಷ್ಟೇ ರಾಜ್ಯ ಸರ್ಕಾರದಿಂದ ಸಾಧ್ಯ. ಈ ವಿಷಯವನ್ನೂ ಪರಿಷ್ಕೃತ ವರದಿಯಲ್ಲಿ ಮಂಡಿಸಲು ಪ್ರಾಧಿಕಾರ ಬಯಸಿದೆ.
 
ಐ.ಟಿ– ಬಿ.ಟಿ ಕಂಪೆನಿಗಳು ಸೇರಿದಂತೆ, ಖಾಸಗಿ ವಲಯದ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿನ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವುದಕ್ಕೆ ಸಂಬಂಧಿಸಿದ ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿರುವುದು  ಸಕಾರಾತ್ಮಕ ಕ್ರಮವೇ ಸರಿ. ಇಂಥ ಉದ್ದಿಮೆಗಳು ಸರ್ಕಾರದ ಈ ನಿಲುವಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತೆಯೂ ಇಲ್ಲ.
 
‘ಈ ನೆಲದ ಮೂಲಸೌಕರ್ಯ ಪಡೆಯುತ್ತಿರುವ ವಿದೇಶಿ, ಖಾಸಗಿ ವಲಯ ಅಥವಾ ಸರ್ಕಾರಿ ಸ್ವಾಮ್ಯದ ಯಾವುದೇ ಕಂಪೆನಿಯು ನೆಲಕ್ಕೆ ನಿಷ್ಠವಾಗಿ ಅಲ್ಲಿನ ನಿಯಮ ಪಾಲಿಸಲೇಬೇಕು. ನೆಲೆ ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಒಂದು ಉದ್ಯೋಗ ಕೊಡುವುದು ಕನಿಷ್ಠ ಪ್ರಮಾಣದ ಪರಿಹಾರ. ಅದರಲ್ಲೂ ಕೃಷಿಕನಿಗೆ ನೆಲವೇ ಶಾಶ್ವತ ಉದ್ಯೋಗ. ಅದನ್ನು ಕಳೆದುಕೊಂಡ ಕುಟುಂಬಕ್ಕೆ ತತ್ಕಾಲೀನ ಉದ್ಯೋಗ ನೀಡುವುದೇ ಪರಿಹಾರ. ಅದನ್ನೂ ಕೊಡದವರು ಮಹಾ ಕೃತಘ್ನರು’ ಎನ್ನುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಅವರ ಆಕ್ರೋಶದ ಮಾತು.
 
ಆಯಾ ರಾಜ್ಯಗಳ ಜನ ಉದ್ಯೋಗ, ಭಾಷೆಯ ಅನುಷ್ಠಾನವನ್ನು ಹಕ್ಕಾಗಿ ಪಡೆಯುವ ಸಂವಿಧಾನಾತ್ಮಕ ಅಧಿಕಾರವನ್ನು ಪಾಲಿಸಬೇಕಾದುದು ಕಂಪೆನಿಗಳ ಕರ್ತವ್ಯವೂ ಹೌದು. ಮಹಿಷಿ ವರದಿ ಬಂದ ಕಾಲಕ್ಕೂ ಪ್ರಸ್ತುತ ಕಾಲಮಾನಕ್ಕೂ ಬಹಳಷ್ಟು ಬದಲಾವಣೆಗಳಾಗಿವೆ. ಆಡಳಿತದಲ್ಲೂ ಪರಿವರ್ತನೆಗಳಾಗಿವೆ. ರಾಜ್ಯದಲ್ಲಿ ನೂರಾರು ಐ.ಟಿ- ಬಿ.ಟಿ ಕಂಪೆನಿಗಳು ತಲೆ ಎತ್ತಿ, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ. ಪ್ರಸ್ತುತ ಸಂದರ್ಭದಲ್ಲಿ ಮಹಿಷಿ ವರದಿಯ ಯಥಾವತ್‌ ಜಾರಿಗೆ ಆಗ್ರಹಿಸುವುದರಲ್ಲಿ ಅರ್ಥ ಇಲ್ಲ. ವರದಿಯನ್ನು ಪರಿಷ್ಕರಿಸಿ, ನಿಷ್ಕ್ರಿಯಗೊಂಡಿರುವ ಕೆಲವು ಶಿಫಾರಸುಗಳನ್ನು ತೆಗೆದು ಹಾಕಿ, ಹೊಸ ಅಂಶಗಳನ್ನು ಸೇರ್ಪಡೆ ಮಾಡುವ ಮೂಲಕ ಅದನ್ನು ಬಲಗೊಳಿಸಬೇಕು. ಕಾನೂನಿನ ಶಕ್ತಿ ನೀಡಬೇಕು ಎನ್ನುವುದು ಸದ್ಯದ ವಾದ.
 
‘ನಮ್ಮಲ್ಲಿ ಕಾನೂನುಗಳು ಅಪವ್ಯಾಖ್ಯಾನಕ್ಕೆ ಒಳಗಾದಂತೆ ನೆಲದ ಹಕ್ಕುಗಳನ್ನೂ ಕಸಿಯಲಾಗುತ್ತಿದೆ. ಖಾಸಗಿ ದೂರವಾಣಿ ಕಂಪೆನಿಯೊಂದು ಇಲ್ಲಿನ ಎಲ್ಲ ಮೂಲಸೌಕರ್ಯ ಬಳಸಿಕೊಂಡಿದೆ. ಆದರೆ, ವ್ಯವಹಾರದಲ್ಲಿ ನೆಲದ ಭಾಷೆ ಬಳಸಲು ವಿರೋಧ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಈ ವಿಷಯದಲ್ಲಿ ಕೋರ್ಟ್‌ ಮೆಟ್ಟಿಲೇರಿದೆ. ಉಂಡ ಮನೆಗೆ ದ್ರೋಹ ಬಗೆಯುವ ಈ ಹಾದಿಯನ್ನು ಬೇರೆಯವರೂ ಹಿಡಿಯುವಂತಾಗಿದೆ. ಇದೆಲ್ಲ ತಪ್ಪಬೇಕಾದರೆ ಕಾನೂನನ್ನು ಬಲಪಡಿಸಬೇಕು’ ಎನ್ನುವುದು ಸಿದ್ಧರಾಮಯ್ಯ ಸೇರಿದಂತೆ ಕನ್ನಡದ ಮನಸುಗಳ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT