ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಹೆಜ್ಜೆ ಹಿಡಿದ ಸುಗಂಧ!

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಅವನು ಮುದ್ದು ಮುದ್ದಾದ ಹುಡುಗ. ‘ನನ್ನ ಅಪ್ಪ, ತುಂಬ ಸಾಧು ಮನುಷ್ಯ’ ಎಂದ. ಮರು ಮಾತಿಗೇ ‘ಅವರೀಗ ಇಲ್ಲ’ ಎಂದ! ಇನ್ನೂ ಏಳನೆಯ ಕ್ಲಾಸಿನ ಹುಡುಗ ಇದೇನು ಹೇಳುತ್ತಾನಪ್ಪ ಎಂದರೆ ಮತ್ತೊಮ್ಮೆ ‘ಆದರೆ ಅವರು ಸಾಧು ಮನುಷ್ಯ’ ಎಂದ. ‘ನನ್ನನ್ನು ಹತ್ತಿರ ಕರೆದರು, ತಂಟೆ ಗಿಂಟೆ ಮಾಡಬೇಡ, ಚೆನ್ನಾಗಿ ಓದು, ಒಳ್ಳೆಯ ವಿದ್ಯಾಬುದ್ಧಿ ಕಲಿ, ನಾನಿನ್ನು ಇರುವುದಿಲ್ಲ, ನನ್ನದು ಮುಗಿಯಿತು ಎಂದರು. ತಂಗಿಯನ್ನ ಕರೆದರು. ಅವಳಿಗೂ ಹೇಳಿದರು.

ಮತ್ತೆ ಅಮ್ಮನನ್ನು ಕರೆದರು. ಈ ಜನ್ಮದಲ್ಲಿ ಇಷ್ಟೇ ನಮ್ಮದು. ಮುಂದಿನ ಜನ್ಮದಲ್ಲಿ ಸಿಗ್ತೇನೆ ಎಂದರು. ನನ್ನಪ್ಪ ತುಂಬ ಸಾಧು, ಅವರೀಗ ಇಲ್ಲ’ ಎಂದ. ನಗುನಗುತ್ತಲೇ ಇಷ್ಟನ್ನು ಹೇಳಿ ವೇದಿಕೆ ಇಳಿದುಹೋದ ಈ ಮುದ್ದು ಹುಡುಗನ ಹೆಸರು ಖ್ಯಾತಿ ಸತೀಶ್ ನಾಯಕ್. ಪಕ್ಕದಲ್ಲೇ ಕೂತವರನ್ನು ಕೇಳಿದೆ, ‘ಹುಡುಗನ ತಂದೆ ಇದ್ದಾರಲ್ವೇ?’. ‘ಇಲ್ಲ ಇಲ್ಲ, ತೀರಿಕೊಂಡಿದ್ದಾರೆ’ ಎನ್ನುವ ಉತ್ತರ ಬಂತು.

ಗೋವಾದ ಎಂಡ್ರಿಯಾ ಮಿನೇಜಸ್ ಎನ್ನುವ, ಕಣ್ಣುಗಳಲ್ಲೇ ನಕ್ಷತ್ರಗಳನ್ನಿರಿಸಿಕೊಂಡಂತಿರುವ ಕಪ್ಪು ಹುಡುಗಿ ಬಂದವಳೇ ‘ನನ್ನ ಹೊಡೆಯಬೇಡಿ, ನನ್ನ ಹೊಡೆಯಬೇಡಿ’ ಎನ್ನತೊಡಗಿದಳು. ‘ನಿಮಗೆ ತಿನ್ನಲು ಕೊಡುವೆ, ಕುಡಿಯಲು ಕೊಡುವೆ; ನನ್ನ ಹೊಡೆಯಬೇಡಿ, ನನ್ನ ಹೊಡೆಯಬೇಡಿ. ಮಳೆಯೇ ಬರಲಿ, ಬಿಸಿಲೇ ಬರಲಿ, ನಿಮ್ಮ ನಾ ಕಾಯುವೆ; ನನ್ನ ಹೊಡೆಯಬೇಡಿ, ನನ್ನ ಹೊಡೆಯಬೇಡಿ.

ನಿಲ್ಲಲು ಮನೆ ಕೊಡುವೆ, ಅಡುಗೆಗೆ ಬೆಂಕಿ ಕೊಡುವೆ; ನನ್ನ ಹೊಡೆಯಬೇಡಿ, ನನ್ನ ಹೊಡೆಯಬೇಡಿ. ಏನು ಕೇಳಿದರೂ ಕೊಟ್ಟುಬಿಡುವೆ, ನನ್ನ ಹೊಡೆಯಬೇಡಿ, ನನ್ನ ಹೊಡೆಯಬೇಡಿ’ ಎಂದು ಚಟಚಟನೆ ಹೇಳಿ ಹೊರಟುಹೋದಳು.

ಗೋವಾ ಸರ್ಕಾರ ತೆಂಗಿನ ಮರ ಕಡಿಯಲು ಪೂರ್ವಾನುಮತಿ ಪಡೆಯುವ ಅಗತ್ಯವನ್ನು ತೆಗೆದುಹಾಕಿದ ಸಂದರ್ಭದಲ್ಲಿ ಅಲವತ್ತುಕೊಳ್ಳುವ ತೆಂಗಿನ ಮರದ ಹಾಡಿದು.

ಹಸಿವಲ್ಲೇ ಬಿಸಿಲಿಗೆ ಕೂತು ಕರಟಿ ಬೆಂಡಾದವರು ಅಷ್ಟಿರಲು
ಅವರ ಹಸಿವಿನ ಬೆಂಕಿ ಆರದೆ ನನ್ನ ಹೆಣ ಸುಡಬೇಡಿ;
ತುಂಡು ಬಟ್ಟೆಗಾಗಿ ತಹತಹಿಸುತ್ತಿರುವವರು ಅಷ್ಟಿರಲು
ನನ್ನ ಹೆಣ ಹೊದಿಸಲು ಹೊಸ ಬಟ್ಟೆಯೊಂದ ತರಬೇಡಿ;
ಜೀವ ನಳನಳಿಸಿ ಅರಳಿ ಓಲಾಡುವ ಹೂವನ್ನು
ಸತ್ತ ದೇಹದ ಮೇಲೆ ಸುರಿಯಲೆಂದೆ ಹಾಗೆ ಕಿತ್ತು ತರಬೇಡಿ;
ಇಲ್ಲಿ ಮನುಷ್ಯ ಹಸಿದಿರಲು ಅಲ್ಲಿ ಕಾಗೆಗೆ ಪಿಂಡ ಇಡಬೇಡಿ;

ಎನ್ನುತ್ತಲೇ ‘ತನ್ನ ಸಾವಿನ ನಂತರ’ದ ಕವಿತೆ ಬರೆದ ಕವಿ ರಾಜೈ ಪವಾರ್ ಅವರ ಭಾವಲಹರಿ ಇಲ್ಲಿ ಹರಿಸಿದ್ದು ಇನ್ನೊಂದು ನಕ್ಷತ್ರ, ಅಲ್ಕಾ ಪವಿತ್ರಾ ಲುವಿಸ್.

ಆಮೇಲೆ ಒಬ್ಬೊಬ್ಬರೇ ಬರತೊಡಗಿದರು. ಏನದು ಹಾವ ಭಾವ, ಧ್ವನಿಯ ಏರಿಳಿತ, ಕಣ್ಣುಗಳ ಕೊಂಕು–ಬಿಂಕಗಳ ಭಾವಸಂಗಮ, ಬೊಗಸೆಯಲ್ಲೇ ಕಡಲ ನೀರನ್ನೆಲ್ಲ ನುಂಗಿ ಆಪೋಶನ ತೆಗೆದುಕೊಳ್ಳುವ ಅದಮ್ಯ ಉತ್ಸಾಹ! ಇವಳು ನಿಂತ ಭಂಗಿಗೇ ಸಭೆ ಬೆಕ್ಕಸ ಬೆರಗಾಗಿ ನೋಡುತ್ತಿರಬೇಕಾದರೆ ಸುರು ಹಚ್ಚಿಕೊಂಡೇ ಬಿಟ್ಟಳು.

‘ಅಪ್ಪ, ನನಗೆ ನೀನೇ ಹೇಳಿದ್ದಲ್ಲವೆ ಅಪ್ಪ, ಬಾಯ್ಮುಚ್ಚಿಕೊಂಡಿರು, ಬಾಯ್ಮುಚ್ಚಿಕೊಂಡಿರು ಅಂತ?
ಎಷ್ಟೊಂದು ಪ್ರಶ್ನೆ ಕೇಳುತ್ತಿ, ಎಷ್ಟು ಬಾಯಿ ಮಾಡ್ತೀ, ಇದೆಲ್ಲ ನಡೆಯುತ್ತೇನೆ ನಿನ್ನ ಗಂಡನ ಮನೇಲಿ, ನಡೆಯುತ್ತಾ!
ಎಂದು ಕೇಳಿದ್ದೆ ನೀನು, ಅಪ್ಪ. ಹೌದು, ಆವತ್ತಿನಿಂದಲೇ ಇದೆಲ್ಲ ಸುರುವಾಯ್ತು ಅಪ್ಪ, ಆವತ್ತಿನಿಂದ್ಲೇ, ನನಗೆ ನೆನಪಿದೆ.
ನಾನು ಬಾಯ್ಮುಚ್ಚಿಕೊಂಡೇ ಇದ್ದೇನಪ್ಪ, ಆವತ್ತಿಂದ್ಲೂ ಬಾಯ್ಮುಚ್ಚಿಕೊಂಡೇ ಇದ್ದೇನೆ.

ನೀನು ಬದುಕೆಲ್ಲಾ ರಕ್ತ ಬಸಿದು ಚಿನ್ನ ಸೋಸಿ ಕೊಟ್ಟಿದ್ದೆಲ್ಲ ಕಾಲಕಸವೆಂದು ಹೀನೈಸಿ
ಆಡಿಕೊಂಡಾಗಲೂ, ನಾನು ಬಾಯ್ಮುಚ್ಚಿಕೊಂಡೇ ಇದ್ದೇನಪ್ಪ. ನೀನೇ ಹೇಳಿದ್ದಲ್ವೇನಪ್ಪ?
ಅವರಿವರ ನಾಲಗೆಯ ತೆವಲಿಗೆ ತವರು ತಗುಲಿಕೊಂಡು ಹಗುರ ಮಾತಾದಾಗ ಕೂಡ
ಅಪ್ಪ, ನಾನು ಬಾಯ್ಮುಚ್ಚಿಕೊಂಡೇ ಇದ್ದೇನಪ್ಪ. ನೀನೇ ಹೇಳಿದ್ದಲ್ವೇನಪ್ಪ, ಬಾಯ್ಮುಚ್ಚಿಕೊಂಡಿರು ಅಂತ?
ಒಂದೊಂದು ಅಪಮಾನದ ಗುಟುಕನ್ನೂ ಬಾಯ್ಮುಚ್ಚಿಕೊಂಡು ನುಂಗಿ ಸಹಿಸಿದ್ದೇನಪ್ಪ.

ನೀನೇ ಹೇಳಿದ್ದಲ್ವೇನಪ್ಪ, ಬಾಯ್ಮುಚ್ಚಿಕೊಂಡಿರು ಅಂತ? ಅಪ್ಪ?
ಎರಡನೆಯದೂ ಹೆಣ್ಣಾದಾಗ ಅವನು ಹೇಗೆಲ್ಲ ಹಾರಾಡಿದ್ದ ಗೊತ್ತೇನಪ್ಪ.
ಕಷ್ಟದಲ್ಲಿ ಸುಖದಲ್ಲಿ ನಿನ್ನ ಜೊತೆಗಿರುವೇನೆಂದು ವಾಗ್ದಾನವಿತ್ತ ನಿನ್ನ ಅಳಿಯ!
ನನಗಿಲ್ಲಿ ನಿಲ್ಲುವುದಿತ್ತಪ್ಪ, ನಿನ್ನ ಮಗಳು ಮನೆ ನಡೆಸಿದಳೆಂದು ಸಮಾಜಕ್ಕೆ ತೋರಿಸುವುದಿತ್ತಪ್ಪ.

ಅಷ್ಟೆಲ್ಲ ಸಂಭ್ರಮದಿಂದ, ವಿಜೃಂಭಣೆಯಿಂದ ನೀನೇ ನನ್ನ ಇಲ್ಲಿಗೆ ಕಳಿಸಿದ್ದಲ್ವೇನಪ್ಪ!
ನೀನೇ ಹೇಳಿದ್ದು ಅಪ್ಪ. ಹೌದು ನೀನೇ ಹೇಳಿದ್ದು ಅಪ್ಪ, ಬಾಯ್ಮುಚ್ಚಿಕೊಂಡಿರಬೇಕು ಅಂತ.
ಬಾಯ್ಮುಚ್ಚಿಕೊಂಡು ಮುಚ್ಚಿಕೊಂಡು ನನಗೀಗ ನನ್ನದೇ ಧ್ವನಿ ಮರೆತೇ ಹೋಗಿದೆಯಪ್ಪ.

ಸುಮ್ಮನಿದ್ದೂ ಇದ್ದೂ ನನಗೆ ಮಾತು ಬರುತ್ತಿತ್ತು ಎನ್ನುವುದೇ ಮರೆತಿದೆ ಅಪ್ಪ.
ನೀನೇ ಹೇಳಿದ್ದಲ್ವೇನಪ್ಪ, ಬಾಯ್ಮುಚ್ಚಿಕೊಂಡಿರಬೇಕು ಅಂತ?
ಆದರೆ ಅಪ್ಪ, ನಿನಗೆ ಗೊತ್ತೇನಪ್ಪ, ನಾನು ನನ್ನ ಮಕ್ಕಳಿಗೆ ಹಾಗೆ ಹೇಳಿಲ್ಲಪ್ಪ.

ಯಾವತ್ತೂ ಅವರಿಗೆ ಬಾಯ್ಮುಚ್ಚಿಕೊಂಡಿರಲು ಕಲಿಸಲ್ಲ ಅಪ್ಪ.
ಅನ್ಯಾಯ ಕಂಡಾಗೆಲ್ಲ ಬಾಯ್ಬಿಟ್ಟು ಪ್ರತಿಭಟಿಸಲು ಕಲಿಸಿದ್ದೇನಪ್ಪ.
ಮತ್ತು ಅವರ ಧ್ವನಿಯಲ್ಲಿ ನನಗೆ ನನ್ನದೇ ಸ್ವರ ಕೇಳಿಸುತ್ತಿದೆಯಪ್ಪ.

ಅವರಲ್ಲಿ ನಾನು ಧ್ವನಿಯಾಗಿದ್ದೇನಪ್ಪ.
ಮತ್ತು ಅವರು ಎಂದಿಗೂ ಬಾಯ್ಮುಚ್ಚಿಕೊಂಡಿರುವುದಿಲ್ಲ ಅಪ್ಪ.....’

ಈ ಹುಡುಗಿ ಸುಶ್ಮಿತಾ ಪೈ ಕಾನೆ. ನೊಂದು ಬೆಂದವಳ ನೋವನ್ನೆಲ್ಲ ಉಸಿರಲ್ಲೇ ಬಿಸುಸುಯ್ದು ಸುಡುವಂತೆ, ನಿಮ್ಮ ಜೊತೆಗೇ ನೇರಾನೇರ ಮಾತಿಗೆ ನಿಂತಂತೆ ಕವಿತೆ ಓದಿದ ಈ ಪರಿ ಅದ್ಭುತ. ಮತ್ತೆ ಬಂದವಳು ಸುಪ್ರಿಯಾ ಕಾಣಕೋಣಕರ್. ಈಕೆಯ ಚೂಪುಗಣ್ಣುಗಳ ಉರಿಗೆ ಸಭೆ ಮತ್ತೆ ಸ್ತಬ್ಧ! ತನ್ನ ಹಣೆತುಂಬ ಹೆಣ್ಣು ಹೀನ ಎಂದು ಸಾರುವ ಪದಕಗಳ ಪಟ್ಟಿ ಕಟ್ಟಿದ ಸಮಾಜವನ್ನು ಇನ್ನಿಲ್ಲದಂತೆ ಹರಿತ ಮಾತುಗಳಲ್ಲಿ ಕತ್ತರಿಸಿದ ಈಕೆಯ ಕವನ, ಅದರ ವಾಚನ ಕೊನೆಯ ಫಲಿತಾಂಶ ಬಂದಾಗ ಮೊದಲ ಸ್ಥಾನದಲ್ಲಿತ್ತು!

ಕವಿ ಮೆಲ್ವಿನ್ ರೊಡ್ರಿಗಸ್ ಅವರ ‘ಎರಡನೆಯ ಅಧ್ಯಾಯ’ ಕವಿತೆಯನ್ನು ಎಡ್ಲಿನ್ ಜೆ ಡಿಸೋಜಾ ಓದಿದ ಬಗೆ ಹೇಗಿತ್ತೆಂದರೆ, ಬಹುಶಃ ಈ ಕವಿತೆಯನ್ನು ಹೀಗಲ್ಲದೆ ಬೇರೆ ರೀತಿ ಓದುವುದು ಸಾಧ್ಯವೇ ಇಲ್ಲವೇನೊ ಎಂಬಂತೆ. ಸ್ವತಃ ಕವಿಯೇ ಇದನ್ನು ಹಾಳೆಯ ಮೇಲೆ ಬರೆಯುತ್ತ, ತಮ್ಮ ಮೌನದನಿಯಲ್ಲಿ ಆಲಿಸಿದ್ದು ಇದೇ ಲಯದಲ್ಲಿ ಇತ್ತೇ? ಅನುಮಾನ!

‘ವಾರೆಂ, ಉದಕಾ ಆನಿ ಉಜ್ಯಾಮಧೆಂ’ – ಅಂದರೆ, ‘ಗಾಳಿ, ನೀರು ಮತ್ತು ಅಗ್ನಿಯ ನಡುವೆ’. ಕವಿತೆ ಬರೆದವರು ರೋಹನ್ ಅಡ್ಕಬಾರೆ. ಈ ಕವಿತೆ ಎಷ್ಟು ಸುಂದರವಾಗಿದೆ ನೋಡಿ:

ನಾನು ನಿನ್ನಲ್ಲಿ ಅನುರಕ್ತನೆಂದು
ಗಾಳಿಯ ಬಳಿ ಹೇಳ ಹೋಗಲು
ನಿನ್ನ ಮೊಗವೆನಗೆ ಅಡ್ಡಬಂತೆ!
ನೀನು ಹೊಗೆಯೆಂದು ನನಗಾಗ ತಿಳಿಯದೇ ಹೋಯ್ತಲ್ಲೆ!

ನಾನು ನಿನ್ನಲ್ಲಿ ಅನುರಕ್ತನೆಂದು
ನೀರ ಬಳಿ ಉಸುರ ಹೋದರೆ
ನಿನ್ನ ಗಲ್ಲ ಬಂತೆ ನಮ್ಮ ನಡುವೆ!
ನೀನು ಸಕ್ಕರೆಯೆಂದು ನನಗಾಗ ತಿಳಿಯದೇ ಹೋಯ್ತಲ್ಲೆ!

ನಾನು ನಿನ್ನಲ್ಲಿ ಅನುರಕ್ತನೆಂದು
ಬೆಂಕಿಯ ಬಳಿ ಮಾತೆತ್ತಲು
ನಿನ್ನ ತುಟಿಯೆದುರು ಬರಬೇಕೆ!
ನೀನು ಕರ್ಪೂರವೆಂದು ನನಗಾಗ ತಿಳಿಯದೇ ಹೋಯ್ತಲ್ಲೆ!

ಒಂದೇ ಸಮ ಗಾಳಿ ನೀರು ಮತ್ತು ಬೆಂಕಿಯಲ್ಲಿ
ಪಟಪಟನೆ ತಪತಪನೆ ಕೊತಕೊತನೆ
ಕುಸಿಯುತಿರೆ ಕೈಗೆ ಸಿಗದಿರು ಗೆಳತಿ
ನೀನಿಲ್ಲದ ನನ್ನ ಅರೆಹುಚ್ಚನೆಂದು ಓಲೈಸುತಿಹ
ಈ ಮಣ್ಣಸಂಗದಲ್ಲೆ ನಾನು ಸುಖವಾಗಿಹೆನು ನಲ್ಲೆ
ಮಣ್ಣಲ್ಲೆ ನಾನು ಸುಖವಾಗಿಹೆನು ನಲ್ಲೆ!

ಓದಿ ಮುಗಿಸಿದ ರೋಹನ್ ಕಂಗಳು ಹನಿಗೂಡಿದ್ದವು.

***
ಇತ್ತೀಚೆಗೆ ಭೇಟಿಯಾದ ಹಿರಿಯ ಕವಿಯೊಬ್ಬರು ಮಾತನಾಡುತ್ತ ‘ಕನ್ನಡದಲ್ಲೇನು, ಅಂತರರಾಷ್ಟ್ರೀಯ ಮಟ್ಟದಲ್ಲೂ ತೀರಾ ಸೊರಗುತ್ತಿರುವ ಪ್ರಕಾರವೆಂದರೆ ಕವಿತೆಯೇ’ ಎಂದಿದ್ದರು. ತಲೆಯಾಡಿಸುತ್ತಿದ್ದರೂ ನನಗೇಕೊ ಅದು ಸುಳ್ಳು ಎನಿಸುತ್ತಿತ್ತು. ಸಾಹಿತ್ಯ ರಚನೆಯ ಆದಿಕಾಲದಿಂದಲೂ ಮೊದಲು ಮನುಷ್ಯ ಒಲಿದಿದ್ದು ಕಾವ್ಯಕ್ಕೆ, ಕವಿತೆಗೆ, ಕವನಕ್ಕೆ. ಗದ್ಯಕ್ಕೆ ಅವನು ಹೊರಳಿದ್ದು ಆಮೇಲೆಯೇ. ಅಪವಾದಗಳಂತೆ ಕಾಣುವ ನಮ್ಮ ತೇಜಸ್ವಿ, ವಿವೇಕ ಶಾನಭಾಗ ಕೂಡ ಮೊದಲಿಗೆ ಕವಿತೆಗಳನ್ನೇ ಬರೆದಿದ್ದರು.  ಬಸವಣ್ಣ, ಅಲ್ಲಮ, ಅಕ್ಕ ಎಲ್ಲರೂ ಬರೆದಿದ್ದು ಕವಿತೆಗಳನ್ನೇ. ದಾಸರು ಹಾಡಿದ್ದು ಕವಿತೆಗಳನ್ನೇ.

ನಮ್ಮ ಜಾನಪದ ಕವಿತೆಗಳಿಗೆ ಸರಿಸಾಟಿಯುಂಟೆ? ಇವತ್ತಿಗೂ ಹರೆಯದಾ ಬಲೆಯೊಳಗೆ ಬಿದ್ಹಾಂಗ ಇರುವ ತುಂಟ ಹುಡುಗ್ಯಾರೆಲ್ಲ ಕವಿತೆಯನ್ನೇ ನೆನೆಯುತ್ತಾರೆ. ನಮ್ಮೆಲ್ಲರ ಮೊದಲ ಪ್ರೇಮಪತ್ರಗಳೂ ಅತ್ತ ಕವಿತೆಯಾಗದೆ ಇತ್ತ ಗದ್ಯವಾಗದೆ ಒದ್ದಾಡುತ್ತಲೇ ಇರುವುದು ಸುಳ್ಳೆ! ಬಹುಶಃ ಕವಿತೆ ಎನ್ನುವುದು ನಮ್ಮೆದೆಯೊಳಗೆ ಸದಾ ರೆಕ್ಕೆ ಫಡಫಡಿಸುತ್ತಲೇ ಇರುವ ಚಿಟ್ಟೆಯಂತೆ. ಕೆಲವರಲ್ಲಿ ಅದಿನ್ನೂ ಕಂಬಳಿ ಹುಳುವಾಗಿಯೇ ತೆವಳುತ್ತಿರಬಹುದಾದರೂ ಅದರ ವಿಕಾಸವಾಗುವುದು ಕವಿತೆಯಾಗಿಯೇ.

ಆದರೆ ಕವಿತೆಯನ್ನು ಓದುವವರು ಕಡಿಮೆ, ಅದಕ್ಕೆ ತೆರೆದುಕೊಂಡವರು ಕಡಿಮೆ ಎಂದರೆ ಒಪ್ಪಬಹುದು. ಅದಕ್ಕೆ ಕಾರಣಗಳಿವೆ. ಬಹುಶಃ ನಮಗೆ ನಿತ್ಯ ಪೇಪರ್ ಓದುವುದು, ಸಾಪ್ತಾಹಿಕಗಳ ಕತೆ, ಲೇಖನ ಓದುವುದು ಗೊತ್ತಿದ್ದಷ್ಟು ಕವಿತೆ ಓದುವ ಬಗೆ ಗೊತ್ತಿಲ್ಲ! ಇಷ್ಟು ಪುಟ್ಟದಾಗಿರುವ ಕವಿತೆಯನ್ನು ಸರ್ರೆಂದು ಓದಿ ಮುಗಿಸಲು ಬರುವುದಿಲ್ಲ! ಹಾಗೆ ಓದಿದರೆ ಏನೂ ದಕ್ಕುವುದಿಲ್ಲ! ಜನ ಇಲ್ಲಿಗೆ ಕಂಗಾಲಾಗುತ್ತಾರೆ.

ಕವಿತೆಯ ಸಹವಾಸವೇ ಬೇಡ ಎಂದುಕೊಳ್ಳುತ್ತಾರೆ. ಹಿಂದಿ ಕವಿ ಪ್ರಸೂನ್ ಜೋಶಿ ಹೇಳಿದ ಮಾತುಗಳಿವು: ‘ಗದ್ಯ ಆಲಸಿಗಳಿಗೆ. ಕಾವ್ಯ ಯಾರಿಗೆಂದರೆ ಸಮೃದ್ಧ ಪ್ರತಿಮಾಲೋಕವುಳ್ಳವರಿಗೆ. ಅದು ಬಫೆ ಇದ್ದ ಹಾಗೆ. ನೀವೇ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ತಟ್ಟೆಗೇ, ನಿಮಗೆ ಬೇಕಾದ್ದನ್ನೇ ತಂದು ಬಡಿಸುವವರಿಲ್ಲ ಅಲ್ಲಿ. ನೋವೆಂದರೆ ಕಾವ್ಯವನ್ನು ಆಸ್ವಾದಿಸುವ ಸಂವೇದನೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ’.

ನಿಜಕ್ಕೂ ಕವಿತೆ ಓದಬೇಕು ಹೇಗೆ? ನಮಗಾಗಿ ಓದುವುದು ಹೇಗೆ, ಎಲ್ಲರಿಗಾಗಿ ಓದುವುದು ಹೇಗೆ? ಕೆಲವೇ ಕೆಲವು ಮೆಲುದನಿಯಲ್ಲಿ ಗುನುಗಬಹುದಾದ, ಕೆಲವೇ ಕೆಲವು ಗಟ್ಟಿಧ್ವನಿಯಲ್ಲಿ ಹಾಡಬಹುದಾದ, ಕೆಲವೇ ಕೆಲವು ಬೊಬ್ಬಿಟ್ಟು ಕೂಗಿ ಹೇಳಬಹುದಾದ ಕವಿತೆಗಳನ್ನು ಬಿಟ್ಟರೆ ಹೆಚ್ಚಿನ ಕವಿತೆಗಳನ್ನು ಸ್ವರಕೊಟ್ಟು ಸದ್ದು ಮಾಡಿ ಹಾಡಲಾಗದು, ಓದಲಾಗದು.

ಅವುಗಳನ್ನು ನಿಮ್ಮದೇ ಮೌನದಲ್ಲಿ ಪಿಸುನುಡಿಯನ್ನು ಕೇಳಿಸಿಕೊಂಡಂತೆ ನಿಮ್ಮ ‘ಆತ್ಮನ ಮೊರೆ ಕೇಳಿದಂತೆ’ ಕೇಳಿಸಿಕೊಳ್ಳಬೇಕಿದೆ. ಅದಕ್ಕೆ ಮಹಾಧ್ಯಾನದ – ವ್ಯವಧಾನದ ಅಗತ್ಯವಿದೆ. ಬುದ್ಧನ ಮೊಗದ ಶಾಂತಿಯಂತೆ ಮನಸ್ಸಿಗೊಲಿವ ಈ ಅದ್ಭುತದ ಕವಿತೆಗಳನ್ನು ನಿಜಕ್ಕೂ ಓದುವುದು ಹೇಗೆ? ಇದು ಈ ಕಾಲದ ಒಂದು ಸಮಸ್ಯೆ, ನಿಜಕ್ಕೂ ಯಕ್ಷಪ್ರಶ್ನೆ.

ಮತ್ತೆ ಪ್ರಸೂನ್ ಜೋಶಿಯ ಮಾತುಗಳಲ್ಲೇ ಹೇಳುವುದಾದರೆ, ‘ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ’. (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ –ಜಯಂತ ಕಾಯ್ಕಿಣಿ).

ಬೇಂದ್ರೆಯವರ ಕವಿತೆಗಳನ್ನು ಓದುವಷ್ಟೇ ನನಗೆ ಅವುಗಳ ಬಗ್ಗೆ ಕುರ್ತಕೋಟಿ, ಅನಂತಮೂರ್ತಿ, ಆನಂದ ಝುಂಜರವಾಡ, ಅಮೂರ, ಮುಗಳಿ, ವಿಜಯಶಂಕರ ಮುಂತಾದವರೆಲ್ಲ ಬರೆದಿರುವುದನ್ನು ಓದುವುದೂ ಇಷ್ಟ; ಕೀರಂ ಅವರು ಆಡುವುದನ್ನು ಕೇಳಲು ಇಷ್ಟ. ಒಬ್ಬೊಬ್ಬರೂ ಬೇಂದ್ರೆ ಬಗ್ಗೆ ಹೇಳಿದಷ್ಟೂ ಹೇಳದಿರುವುದು ಉಳಿದೇ ಉಳಿಯುತ್ತದೆ! ಅಂಥ ಕವಿತೆಗಳನ್ನು ಓದುವುದು ಹೇಗೆ! ಇದು ನನ್ನನ್ನು ಕೊರೆಯುತ್ತಲೇ ಇತ್ತು. ಯಾರಾದರೂ ಅರ್ಥವತ್ತಾಗಿ ಇವುಗಳನ್ನೆಲ್ಲಾ ವಿವರಿಸುತ್ತ ಓದುವವರು ಇದ್ದರೆ ಎಂದು ಬಯಸುತ್ತಿದ್ದುದೂ ಇತ್ತು.

ನಾನು ಇದುವರೆಗೂ ಹೇಳಿದ್ದು ಕನ್ನಡದ ಕವಿತೆಗಳ ಬಗ್ಗೆ. ನಮಗೆ ಲಿಪಿ ಇದೆ, ಅದ್ಭುತವಾದ ಕಾವ್ಯ ಪರಂಪರೆಯಿದೆ, ಜನ್ಮವಿಡೀ ಓದಿಕೊಂಡು ಸುಖವಾಗಿರಲು ಬೇಕಾದಷ್ಟು ಕವಿತೆಗಳಿವೆ. ಆದರೆ ಇಲ್ಲಿ ಹೇಳುತ್ತಿರುವ ಕೊಂಕಣಿ ಭಾಷೆಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಲಿಪಿ, ಐವತ್ತು ಅರವತ್ತು ಕಿಲೊಮೀಟರಿನಾಚೆ ಅದೇ ವಸ್ತುವಿಗೆ ಜನ ಬಳಸುವ ಶಬ್ದಗಳು ಬೇರೆ, ಉಚ್ಚಾರ ಕ್ರಮ ಬೇರೆ, ರಾಗ ಬೇರೆ, ಲಯ ಬೇರೆ! ಕೊಂಕಣಿಯ ಶಬ್ದ ಸಂಪತ್ತು ಅಗಾಧವಾಗಿದ್ದೂ ದಿನಬಳಕೆಗಷ್ಟೇ ಅದನ್ನು ಬಳಸುವ ಮಂದಿಗೆ ಗೊತ್ತಿರುವುದು ದೊಡ್ಡ ಸೊನ್ನೆ!

ಮರಗಿಡಗಳ, ಹೂವುಗಳ, ಆಟಗಳ, ಪಾತ್ರೆಪಗಡಿಗಳ, ಸಂಬಂಧಗಳ, ವಸ್ತುಗಳ ಹೆಸರು ಕನ್ನಡದ ಎರವಲು. ಅಂದರೆ ಇಲ್ಲಿದ್ದ ಸವಾಲು ದೊಡ್ಡದು. ಆದರೆ ಕ್ರಿಶ್ಚಿಯನ್ ಸಮಾಜದಲ್ಲಿ ಪರಿಸ್ಥಿತಿ ಇಷ್ಟು ಹದಗೆಟ್ಟಿಲ್ಲ. ಅವರಲ್ಲಿ ಇವತ್ತಿಗೂ ಶಬ್ದಭಂಡಾರ ಸಾಕಷ್ಟು ಶ್ರೀಮಂತವಾಗಿದೆ, ಬಳಕೆಯಲ್ಲಿ ಎರವಲು ತೀರ ಕನಿಷ್ಠ ಪ್ರಮಾಣದಲ್ಲಿದೆ ಮಾತ್ರವಲ್ಲ – ಕವಿತೆಗಳು, ನಾಟಕಗಳು, ಪುಸ್ತಕಗಳು, ಪತ್ರಿಕೆಗಳು ಸಮೃದ್ಧವಾಗಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮೆಲ್ವಿನ್ ರೊಡ್ರಿಗಸ್ ರೀತಿಯ ಮಂದಿ, ಅಂಥ ಮಂದಿಯ ಬೆನ್ನಿಗೆ ನಿಲ್ಲುವ ಮಂದಿ ಅಲ್ಲಿದ್ದಾರೆ.

ತಮ್ಮ ‘ಪ್ರಕೃತಿಚೊ ಪಾಸ್’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಪಡೆದಿರುವ ಮೆಲ್ವಿನ್ ರೊಡ್ರಿಗಸ್ ಹತ್ತಾರು ವರ್ಷಗಳ ಹಿಂದಿನಿಂದಲೂ ಕೊಂಕಣಿ ಕವಿತೆಗಳನ್ನು ಬರೆಯುತ್ತ, ಕವಿಗಳನ್ನು ಪೊರೆಯುತ್ತ ಬಂದವರು. ‘ಕವಿತಾ ಟ್ರಸ್ಟ್’ ಸ್ಥಾಪಿಸಿ ತಾವು ದುಡಿದಿದ್ದನ್ನೂ ತಮ್ಮಂಥ ಸಮಾನ ಮನಸ್ಕ ಯುವಕರ ದೇಣಿಗೆಯನ್ನೂ ಸುರಿದು ಸದ್ದಿಲ್ಲದೇ ಸಾಹಿತ್ಯ ಪರಿಚಾರಿಕೆ ಮಾಡಿದವರು. ಯುವಕವಿಗಳನ್ನೆಲ್ಲ ಸೇರಿಸಿಕೊಂಡು ಇವರು ಕವಿತಾ ವಾಚನ, ಕವಿತೆಗಳ ಹಬ್ಬ ಎಂದೆಲ್ಲ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಕವಿತೆಗಳಿಗಾಗಿಯೇ ವೆಬ್‌ಸೈಟ್ ತೆರೆದರು.

ತಾವು ಬರೆಯುತ್ತಲೇ ಮತ್ತಷ್ಟು ಮಂದಿ ಬರೆಯುವವರ ಉದಯಕ್ಕೆ, ಬೆಳವಣಿಗೆಗೆ, ಉತ್ಸಾಹಕ್ಕೆ ಕಾರಣರಾದರು. ಕೊಂಕಣಿ ಪುಸ್ತಕಗಳನ್ನು ನಿಯಮಿತವಾಗಿ ಪ್ರಕಟಿಸಿದರು. ವಿದೇಶದಲ್ಲಿದ್ದರೂ ಇವರೂ, ಇವರ ಪತ್ನಿ ಎವ್ರೆಲ್ ರೊಡ್ರಿಗಸ್ ಸೇರಿಕೊಂಡು ನಮ್ಮ ರಹಮತ್ ತರೀಕೆರೆ, ವೈದೇಹಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಗುಲ್ಜಾರ್, ಅಶೋಕ್ ವಾಜಪೇಯಿ, ಜೆರ್ರಿಪಿಂಟೊ, ಅರುಂಧತಿ ಸುಬ್ರಹ್ಮಣ್ಯಮ್, ಕೇಕಿ ದಾರುವಾಲ ಮುಂತಾದ ಕವಿ, ಬರಹಗಾರರನ್ನು ಆಗಾಗ ಮಂಗಳೂರಿಗೆ ಕರೆಸಿಕೊಂಡು ಕವನ ಓದುವ ಯಾತ್ರೆ ಹಮ್ಮಿಕೊಂಡೇ ಕವಿತೆಯ ಜಾತ್ರೆ ಎಬ್ಬಿಸಿದವರು.

ಆಗೆಲ್ಲ ನನಗೆ ಈ ಯುವಕನ ಉತ್ಸಾಹ, ಅರ್ಪಣಾ ಮನೋಭಾವ, ನಿಸ್ವಾರ್ಥ ಮನೋಧರ್ಮಗಳನ್ನು ಕಂಡು, ಇಂಥವನ್ನೆಲ್ಲ ನಂಬಲಾರದೆ ಏನಿದೆಲ್ಲ ಎನಿಸಿತ್ತು. ಆದರೆ ಈಚೆಗೆ ‘ವಿಶ್ವಕೊಂಕಣಿ ಕೇಂದ್ರ’ದ ಸಹಯೋಗದೊಂದಿಗೆ ಇವರು ಹಮ್ಮಿಕೊಂಡ ಕವಿತಾ ವಾಚನದ ಅಂತಿಮ ಸುತ್ತಿನ ಸ್ಪರ್ಧಾಕಣದಲ್ಲೇ ಇವರ ಜೊತೆ ಕುಳಿತು ಮಾತನಾಡುತ್ತ ‘ನಿಮಗಿದೆಲ್ಲ ಹೇಗೆ ಸಾಧ್ಯವಾಯಿತು?’ ಎಂದು ಕೇಳಿದರೆ – ‘ಇದೆಲ್ಲ ಥಟ್ಟನೆ ಆಗಿದ್ದಲ್ಲ ಮಹರಾಯ, ಸುರುವಾತಿನಲ್ಲಿ ಇದೆಲ್ಲ ಹೇಗಿತ್ತು ಎಂದರೆ ನೀನು ನಂಬಲಿಕ್ಕಿಲ್ಲ’ ಎಂದರು.

ಹತ್ತು ವರ್ಷಗಳ ಹಿಂದೆ ಕವಿತಾ ರಚನೆಯ ಸ್ಪರ್ಧೆ ಸುರುಮಾಡಿದಾಗ ಅಂಥ ಪ್ರತಿಸ್ಪಂದನವೇನೂ ಇರಲಿಲ್ಲ. ಪುಟ್ಟ ಮಕ್ಕಳ ಕವಿತಾ ವಾಚನಕ್ಕೆ ಇದೀಗ ಇನ್ನೂ ಮೂರರ ಶೈಶವ. ಯುವಕರ ಸ್ಪರ್ಧೆಗೆ ಆರರ ಹರೆಯ. ಹದಿನೈದು ಮಂದಿ ಕಿರಿಯರು, ಇಪ್ಪತ್ತೈದು ಮಂದಿ ಯುವ–ಮಕ್ಕಳು ಕೊಂಕಣಿಯ ಶ್ರೇಷ್ಠ ಕವಿತೆಗಳನ್ನು ಪ್ರಸ್ತುತಪಡಿಸಿದ ರೀತಿಗೆ ದಂಗಾದೆ.

ಇವರು ಬಳಸುವ ಸಮಯ ಕಾಯಲು ಒಬ್ಬರು, ಕಳಿಸಿದ ಪಠ್ಯಕ್ಕೆ ನಿಷ್ಠರಾಗಿದ್ದಾರೆಯೇ ಇಲ್ಲವೇ ಗಮನಿಸಲು ಒಬ್ಬರು, ದೇಹಭಾಷೆಯನ್ನು ಗಮನಿಸಲು ನಾಟಕರಂಗದ ಒಬ್ಬರು, ಧ್ವನಿಯ ಏರಿಳಿತ ಗಮನಿಸಲು ಆಕಾಶವಾಣಿಯ ಒಬ್ಬರು, ಕವಿತೆಯನ್ನು ಎಷ್ಟರಮಟ್ಟಿಗೆ ತಮ್ಮದನ್ನಾಗಿಸಿಕೊಂಡಿದ್ದಾರೆ, ಅದರ ಭಾವ–ಧ್ವನಿ–ಅರ್ಥ ಎಷ್ಟರಮಟ್ಟಿಗೆ ಇವರಿಗೆ ದಕ್ಕಿದೆ ಎನ್ನುವುದನ್ನು ಗಮನಿಸಲು ಒಬ್ಬರು, ಒಟ್ಟಾರೆ ಪ್ರಸ್ತುತಿ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಪರೀಕ್ಷಿಸಲು ಒಬ್ಬರು – ಹೀಗೆ ಏಳು ಮಂದಿ ತೀರ್ಪುಗಾರರು.

ಎಲ್ಲರೂ ಕೊಂಕಣಿಯ ಕವಿಗಳು, ಮಾಧ್ಯಮಗಳಲ್ಲಿ ಕಾರ್ಯಕ್ರಮ ನಿರ್ವಹಿಸಿದವರು, ನಟಿಸಿದವರು, ಪತ್ರಕರ್ತರು ಅಥವಾ ಪ್ರಾಧ್ಯಾಪಕರು. ಈ ಮಕ್ಕಳು ಸ್ಪರ್ಧೆಗೆ ತಲಾ ಮೂರು ಕವಿತೆಗಳನ್ನು ಆಯ್ದು ಕಳಿಸಬೇಕಾಗುತ್ತದೆ. ಅಂದರೆ ಮೊದಲ ಹಂತದ ಸ್ಪರ್ಧಿಗಳಾದ ಇನ್ನೂರೈವತ್ತು ಮಂದಿ ಒಟ್ಟು ಏಳುನೂರ ಐವತ್ತು ಕವಿತೆಗಳನ್ನು ಆಯ್ದಿದ್ದಾರೆ, ಓದಿದ್ದಾರೆ, ಅರ್ಥ ಮಾಡಿಕೊಂಡು ನಟನೆ–ಹಾವ–ಭಾವ–ಧ್ವನಿ ಮತ್ತು ಭಾವದೊಂದಿಗೆ ಪ್ರಸ್ತುತಪಡಿಸಲು ಕಲಿತಿದ್ದಾರೆ.

ಕೊನೆಯ ಸುತ್ತಿನ ಈ ನಲವತ್ತು ಮಕ್ಕಳನ್ನು ನೋಡಿದರೆ ಸುಮ್ಮನೇ ಎರಡೂವರೆ ಗಂಟೆ ಕೂತಿದ್ದಕ್ಕೇ ನಲವತ್ತು ಅದ್ಭುತ ಕವಿತೆಗಳನ್ನು ನಮಗೆಲ್ಲ ದಕ್ಕಿಸಿಬಿಟ್ಟರು! ಕೆಲವು ಮಂದಿ ತಮ್ಮ ಸ್ವಂತ ರಚನೆಗಳನ್ನು ಓದಿದ್ದರೂ (ಸ್ವಂತ ರಚನೆ ಓದಲು ನಿರ್ಬಂಧವಿಲ್ಲ) ಅವು ಉಳಿದವರ ಮಟ್ಟದಲ್ಲೇ ಇದ್ದವು, ಗೆಲ್ಲಬೇಕಲ್ಲ!

ಹಲವಾರು ಭಾಷಾವಾರು ಪ್ರಾಂತ್ಯಗಳಲ್ಲಿ ಹಂಚಿಹೋಗಿ, ಏಕರೂಪದ ಲಿಪಿಯಾಗಲಿ, ಉಚ್ಚಾರವಾಗಲಿ ಇಲ್ಲದ, ವಾಚಿಕ ನೆಲೆಯಲ್ಲೇ ನೆಲೆಗಟ್ಟಿಗೊಳಿಸಿಕೊಳ್ಳಬೇಕಾದ ಕೊಂಕಣಿಯಂಥ ಭಾಷೆಗೆ ಇದು ಅನಿವಾರ್ಯವಾದರೆ – ಕನ್ನಡ ಇದರಿಂದ ಕಲಿಯುವುದಿದೆ, ವಿಶೇಷತಃ ಕವಿತೆಗಳನ್ನು ಓದುವವರಿಲ್ಲದ ಈ ದಿನಗಳಲ್ಲಿ. ತಮ್ಮ ತಮ್ಮದೇ ಸಾಧಾರಣ ಕವಿತೆಗಳನ್ನು ಓದುವ ಕಾಟಾಚಾರದ ಕವಿಗೋಷ್ಠಿಗಳಿಗಿಂತ ಇದು ತೀರ ಭಿನ್ನ.

ಭಾಗವಹಿಸಿದ ಮಕ್ಕಳಲ್ಲಿ ಗೋವಾದಿಂದ ಬಂದವರು ಹೆಚ್ಚು. ಇವರ ಊಟ, ವಸತಿ, ಬಂದು ಹೋಗುವ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮಾತ್ರವಲ್ಲ, ಹೆಚ್ಚಿನವರ ತಂದೆ ತಾಯಿ ಕೂಡ ತಮ್ಮ ತಮ್ಮ ಮಕ್ಕಳೊಂದಿಗೆ ಬಂದಿದ್ದರು ಎನ್ನುವುದು ಗಮನಾರ್ಹ. ಇದೆಲ್ಲದರಿಂದ ಏನಾಗುತ್ತದೆ ನೋಡಿ, ಒಂದು ಕುಟುಂಬವೇ ಸಾಹಿತ್ಯದತ್ತ, ಕವಿತೆಗಳತ್ತ ಗಮನ ಕೊಡುತ್ತದೆ. ಒಂದು ಸ್ಪರ್ಧೆ ಇಷ್ಟು ಮಹತ್ವ ಪಡೆದುಕೊಳ್ಳುವುದು ಸಾಧಾರಣ ಸಂಗತಿ ಅಲ್ಲ.

ಆದರೆ ಇದೆಲ್ಲ ಇವತ್ತು ಭಾಷೆಯ ಬಗ್ಗೆ ಮಾತನಾಡುವವರಿಂದ, ರಟ್ಟೆಯೇರಿಸುವವರಿಂದ ಆಗುತ್ತಿಲ್ಲ; ಮೆಲ್ವಿನ್ ಥರದ ಯುವಕರು ತಮ್ಮ ಪಾಡಿಗೆ ತಾವು ಮಾಡುತ್ತಲೇ ಇದ್ದಾರೆ, ದಶಕದಿಂದ! ಹೀಗೆ ವರ್ಷಕ್ಕೆ ಇನ್ನೂರರಿಂದ ಮುನ್ನೂರು ಮಕ್ಕಳಿಂದ ಕವಿತೆ ಬರೆಸುವ ಕೆಲಸ ಮಾಡುತ್ತ ಇದೀಗ ಹತ್ತು ವರ್ಷ ಪೂರೈಸಿದ ‘ಕವಿತಾ ಟ್ರಸ್ಟ್’ ಇದುವರೆಗೆ ಎರಡು ಸಾವಿರದಷ್ಟು ಕವಿತೆಗಳನ್ನು ಬರೆಸಿದೆ. ಆರನೆಯ ವರ್ಷದ ಹಿರಿಯ ಮಕ್ಕಳ ಕವಿತಾ ವಾಚನ ಸ್ಪರ್ಧೆಯಂತೂ ಪ್ರತಿವರ್ಷ ಸಾವಿರದಷ್ಟು ಅತ್ಯುತ್ತಮ ಕವಿತೆಗಳ ಅಧ್ಯಯನ, ಕಂಠಪಾಠಕ್ಕೆ ಕಾರಣವಾಗಿದೆ. ಚಿಕ್ಕಮಕ್ಕಳ ಅಭಿರುಚಿ ತಿದ್ದಿದೆ, ಪ್ರೋತ್ಸಾಹಿಸಿದೆ.

ತುಂಬ ಹಿಂದೆ ಎಸ್. ದಿವಾಕರ್ ಬೆಂಗಳೂರಿನಲ್ಲಿ ಸಂಯೋಜಿಸಿದ್ದ ಬೇಂದ್ರೆ ಕವಿತೆಗಳ ಒಂದು ವಾಚನ ಕಾರ್ಯಕ್ರಮ ನಿಮ್ಮ ನೆನಪಿನಲ್ಲಿ ಹಸಿರಾಗಿರಬಹುದು. ಕನ್ನಡದ ದಿಗ್ಗಜರೆಲ್ಲ ಬಂದು ಒಂದೊಂದು ಕವಿತೆಯನ್ನು ಓದಿ, ಆ ಕವಿತೆಯೊಂದಿಗಿನ ತಮ್ಮತಮ್ಮ ಅನುಬಂಧವನ್ನು ಒಂದೆರಡು ಮಾತುಗಳಲ್ಲಿ ವಿವರಿಸಿದ ಒಂದು ಮಾಯಕದ ಹಗಲದು. ಅಂಥ ಒಂದು ಅದ್ಭುತ ಕಾರ್ಯಕ್ರಮ ನಮ್ಮಲ್ಲಿ ಯಾವುದೇ ಪರಂಪರೆಗೆ ಕಾರಣವಾಗಲೇ ಇಲ್ಲ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಮಕ್ಕಳು ಅದನ್ನು ಸಾಧಿಸುತ್ತಾರೆ. ಕವಿತೆಗಳೊಂದಿಗೆ ಅನುಸಂಧಾನ ನಡೆಸಿ ಬಂದ ಈ ಮಕ್ಕಳ ಹೊಳೆವ ಕಂಗಳ ಚೈತನ್ಯವೇ ಅದನ್ನು ಸಾರಿ ಸಾರಿ ಹೇಳುತ್ತಿತ್ತು. 

*
‘ಮುಕ್ತಛಂದ’ ಪುರವಣಿ ಈಗ ಮತ್ತಷ್ಟು ಓದುಗಸ್ನೇಹಿಯಾಗಿದೆ. ಸಹೃದಯರು ತಮ್ಮ ಸುತ್ತಲಿನ ಬದುಕು ಹಾಗೂ ಜೀವನಶೈಲಿಯ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಪುಟ್ಟ ಬರಹಗಳನ್ನು ಕಳುಹಿಸಬಹುದು. ಸ್ವಾರಸ್ಯಕರ ಹಾಗೂ ಹೊಸ ಸಂಗತಿಗಳನ್ನು ಪ್ರಸ್ತಾಪಿಸುವ ಬರಹಗಳನ್ನು ಸ್ವಾಗತಿಸುತ್ತೇವೆ.

ಕನ್ನಡದ ಸಾಂಸ್ಕೃತಿಕ – ಸಾಹಿತ್ಯಿಕ ಇತಿಹಾಸಕ್ಕೆ ಸಂಬಂಧಿಸಿದ ಅಪರೂಪ ಕ್ಷಣವೊಂದರ ಛಾಯಾಚಿತ್ರ ನಿಮ್ಮಲಿದೆಯೇ? ಆ ಫೋಟೊ ಮತ್ತು ವಿವರಗಳನ್ನು ‘ಮುಕ್ತಛಂದ’ದಕ್ಕೆ ಕಳುಹಿಸಬಹುದು. ಆಕರ್ಷಕ ಪ್ರವಾಸ ಕಥನಗಳಿಗೂ ಸ್ವಾಗತ. ಬರಹದೊಂದಿಗೆ ಉತ್ತಮ ಗುಣಮಟ್ಟದ ಛಾಯಾಚಿತ್ರಗಳಿರಲಿ.

ಬರಹಗಳೊಂದಿಗೆ ನಿಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆಯಿರಿ. ಇಮೇಲ್ ಮೂಲಕವೂ ಲೇಖನಗಳನ್ನು ಕಳುಹಿಸಬಹುದು. ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶವನ್ನು ಬಳಸಿ ಇ–ಮೇಲ್‌ಗಳನ್ನು ಕಳುಹಿಸಬೇಕಾದ
ವಿಳಾಸ: mukthachanda@prajavani.co.in
ನಮ್ಮ ವಿಳಾಸ: ಸಂಪಾದಕರು, ಮುಕ್ತಛಂದ ಪುರವಣಿ ವಿಭಾಗ, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು– 560 001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT