ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಮಕ್ಕಳ ಕೊಲೆಯ ಸುತ್ತ...

ಈ ಭಾನುವಾರ
Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ
ಅಪರಾಧ ಕಾನೂನಿನ ಮಾರ್ಗದರ್ಶಕ ನಿಯಮ ‘ರೂಲ್ ಆಫ್ ಪ್ರುಡೆನ್ಸ್‌’ನಲ್ಲಿ ‘ಬೆನಿಫಿಟ್ ಆಫ್ ಡೌಟ್’ ಎಂಬುದು ಬಹಳ ಪ್ರಚಲಿತ ಪದ. ಇದರ ಯಥಾವತ್‌ ಅರ್ಥ ‘ಅನುಮಾನದ ಲಾಭ’ ಎಂದು. ನಿರಪರಾಧಿಯೊಬ್ಬ ವಿಚಾರಣೆ ಸಂದರ್ಭದಲ್ಲಿ ಅಪರಾಧಿಯಂತೆ ಕಂಡುಬಂದಾಗ, ಆ ವ್ಯಕ್ತಿ ಅಪರಾಧ ಕೃತ್ಯ ಎಸಗಿಲ್ಲ ಎಂದು ತೀರ್ಮಾನಿಸುವುದು ಈ ತತ್ವದ ಉದ್ದೇಶ. ಈ ತತ್ವದ ಅನ್ವಯದಿಂದ ಯಾರಿಗೆ ಹೆಚ್ಚು ಅನುಕೂಲ... ಅಪರಾಧಿಗೋ ಇಲ್ಲಾ ನಿರಪರಾಧಿಗೋ ಎಂದು ಬಹುವಾಗಿ ಕಾಡಿದ್ದು ಈ ಪ್ರಕರಣದಲ್ಲಿ.
 
ಅದು ಬೆಂಗಳೂರಿನ ದಾಬಸ್‌ಪೇಟೆಯ ಸೆರಗಂಚಿನಲ್ಲಿ ಇರುವ ಒಂದು ವಠಾರ. ಅಲ್ಲಿ ಹತ್ತಾರು ಕುಟುಂಬಗಳು ನೆಲೆಸಿದ್ದವು. ಅಲ್ಲಿ ಯಾವ ತಂಟೆ ತಕರಾರೂ ಬಾರದಂತೆ ವಠಾರದವರನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದ ಮೋಟಮ್ಮ ಇದರ ಮಾಲೀಕರು. ಮೋಟಮ್ಮ ಕಷ್ಟಗಳ ಜೊತೆ ಸರಸವಾಡುತ್ತಲೇ ಬದುಕು ಕಟ್ಟಿಕೊಂಡವರು. ತಮಗೆ ಸರಿ ಅನ್ನಿಸಿದ್ದನ್ನು ಸುಳ್ಳಾಡಿಯಾದರೂ ಸಮರ್ಥಿಸಿಕೊಳ್ಳುತ್ತಿದ್ದರು. ಅವರಲ್ಲಿದ್ದ ಈ ವಿಶೇಷ ಗುಣ ವಠಾರದ ಬಾಡಿಗೆದಾರರಿಗೆ ತುಂಬಾ ಸಹಾಯಕವಾಗಿತ್ತು. ಒಟ್ಟಿನಲ್ಲಿ ವಠಾರದಲ್ಲಿದ್ದವರಿಗೆಲ್ಲ ಅವರೇ ‘ಅಮ್ಮ’.
 
1981ರಲ್ಲಿ ಅಲ್ಲಿಗೆ ಚೆಲ್ಲಯ್ಯ ಎಂಬಾತ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸ್ತವ್ಯಕ್ಕೆ ಬಂದ. ಆತ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಬಂದ ಕೆಲವೇ ತಿಂಗಳುಗಳಲ್ಲಿ ಅವನ ಹೆಂಡತಿ ಸತ್ಯಮ್ಮ ಇದ್ದಕ್ಕಿದ್ದಂತೆಯೇ ತೀರಿಕೊಂಡಳು. ಚೆಲ್ಲಯ್ಯನ ಹೆಂಡತಿಯ ಸಾವು ಮೋಟಮ್ಮನ ಹೃದಯಕ್ಕೆ ಗಾಯ ಮಾಡಿತು. ಸೂತಕ ಕಳೆದು, ಮನೆಯಲ್ಲಿ ವಾತಾವರಣ ತಿಳಿಯಾಗುವವರೆಗೆ ಚೆಲ್ಲಯ್ಯನ ಮಕ್ಕಳಾದ ಶಾಂತವೀರ (7) ಮತ್ತು ದಯಾವೀರ (5) ಅವರನ್ನು ಸಂತೈಸಿ ಆರೈಕೆ ಮಾಡಿದ್ದು ಮೋಟಮ್ಮನವರೇ.
 
ಮೊದಲನೇ ಹೆಂಡತಿಯ ಸಾವಿನ ಧಗೆ ತಣ್ಣಗಾಗುವ ಮೊದಲೇ ಚೆಲ್ಲಯ್ಯ ಇನ್ನೊಂದು ಮದುವೆ ಏರ್ಪಾಟಿನಲ್ಲಿ ತೊಡಗಿದ. ಇದು ಮೋಟಮ್ಮ ಅವರಿಗೆ ಬೇಸರ ತರಿಸಿತು. ಬೇಸರದ ಬೇಗುದಿಯನ್ನು ಅದುಮಿಟ್ಟುಕೊಳ್ಳಲಾಗದೆ ಅನೇಕ ದಿನಗಳವರೆಗೆ ವಠಾರದ ಗಂಡಸರನ್ನೆಲ್ಲಾ ಸಾರಾಸಗಟಾಗಿ ‘ಬುದ್ಧಿಗೆ ಕಾಮ ಹತ್ತಿದಾಗ ಮದ್ದಿಲ್ಲವಲ್ಲ’ ಎಂದು ಕುಟುಕತೊಡಗಿದರು. ಆನಂತರ ತಮ್ಮನ್ನು ತಾವು ಸಮಾಧಾನಪಡಿಸಿಕೊಂಡು, ‘ಅನಾಥ ಮಕ್ಕಳಿಗೆ ಅಮ್ಮ ಒದಗಲಿ ಎಂದುಕೊಂಡು ಮತ್ತೊಂದು ಮದುವೆ ಆಗುತ್ತಿದ್ದಾನೋ ಏನೋ’ ಎಂದುಕೊಂಡು ಕೋಪವನ್ನು ತಣ್ಣಗೆ ಮಾಡಿಕೊಂಡರು.
 
ಈ ನಡುವೆ ಚೆಲ್ಲಯ್ಯ 19 ವರ್ಷ ವಯಸ್ಸಿನ ಸಿರಿಗೌರಿಯನ್ನು ಮದುವೆಯಾಗಿ ಮನೆಗೆ ಕರೆತಂದ. ಮದುವೆಯಾಗಿ ವಠಾರವನ್ನು ಹೊಕ್ಕ ಸಿರಿಗೌರಿ ಅಲ್ಲಿ ಸಂಸಾರ ಪ್ರಾರಂಭಿಸಿದಳು. ಸಿರಿಗೌರಿ ವಠಾರಕ್ಕೆ ಹೊಸಬಳಾದ್ದರಿಂದ ಮೋಟಮ್ಮ ಅವಳ ಚಲನವಲನ, ವರ್ತನೆ, ಮಾತುಕತೆಗಳ ಮೇಲೆ ವಿಶೇಷ ನಿಗಾ ಇಟ್ಟಿದ್ದರು. ಯಾರನ್ನಾದರೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳುವವರೆಗೆ ಈ ರೀತಿ ಗುಪ್ತವಾಗಿ ಅವರ ಮೇಲೆ ಒಂದು ಕಣ್ಣಿಟ್ಟಿರುವುದು ಮೋಟಮ್ಮನವರ ಸ್ವಭಾವದ ಒಂದು ಭಾಗವೇ ಆಗಿತ್ತು. ಅವರ ಗುಮಾನಿ ಕೆಲಸ ಇನ್ನೂ ಪೂರ್ತಿಯಾಗಿರಲಿಲ್ಲ.
 
ಒಂದು ದಿನ ಚೆಲ್ಲಯ್ಯನ ಹಿರಿಯ ಮಗ ಶಾಂತವೀರ, ಹೊರಗಡೆ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಬಟ್ಟೆಯೆಲ್ಲಾ ಕೆಸರು ಮಾಡಿಕೊಂಡಿದ್ದ. ಇದನ್ನು ಗಮನಿಸಿದ ಸಿರಿಗೌರಿ ಅವನನ್ನು ಕರೆದು ಬಚ್ಚಲುಮನೆಯಲ್ಲಿ ತೊಳೆದುಕೊಳ್ಳುವಂತೆ ಹೇಳಿದಳು. ಅದು ವಠಾರದ ಎಲ್ಲಾ ಮನೆಗಳಿಗೂ ಇದ್ದ ಒಂದೇ ಸ್ನಾನದ ಮನೆ. ಶಾಂತವೀರ ಬಚ್ಚಲುಮನೆಗೆ ಹೋದ. ಕೈಕಾಲು ಮುಖ ತೊಳೆದುಕೊಂಡು ಬರಲು ಹೋದ ಮಗ ಒಂದು ಗಂಟೆಯಾದರೂ ಹೊರಗೆ ಬರಲಿಲ್ಲ. ಸಿರಿಗೌರಿ ಅವನನ್ನು ಕರೆಯಲು ಹೋದಾಗ ದಂಗಾಗಿ ಹೋದಳು. ಏಕೆಂದರೆ ಅಲ್ಲಿ ಶಾಂತವೀರ ರಕ್ತದ ಮಡುವಿನಲ್ಲಿ ಸತ್ತುಬಿದ್ದಿದ್ದ! ಅವನ ತಲೆಗೆ ಬಲವಾದ ಏಟು ಬಿದ್ದಿತ್ತು. ಸಿರಿಗೌರಿ ಕಿಟಾರನೆ ಚೀರಿಕೊಂಡಳು. ವಠಾರದವರು ಮತ್ತು ಸುತ್ತಮುತ್ತಲಿನವರು ಜಮಾಯಿಸಿದರು.
 
ನೆರೆದವರೆಲ್ಲಾ ಸಿರಿಗೌರಿಯನ್ನು ಅನುಮಾನದ ದೃಷ್ಟಿಯಿಂದ ನೋಡತೊಡಗಿದರು. 
 
ವಠಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಮೋಟಮ್ಮ ಪೊಲೀಸರಿಗೆ ದೂರು ಹೋಗದಂತೆ ನೋಡಿಕೊಂಡರು. ಮೋಟಮ್ಮನ ಮೇಲೆ ಅಲ್ಲಿಯ ಜನರಿಗೆ ಎಂಥಾ ಭಕ್ತಿಯಿತ್ತೆಂದರೆ ಯಾರೊಬ್ಬರೂ ಪೊಲೀಸರಿಗೆ ಈ ವಿಷಯ ತಿಳಿಸಲಿಲ್ಲ! ಸದ್ದಿಲ್ಲದೇ ಶಾಂತವೀರನಿಗೆ ಮಣ್ಣು ಕೊಟ್ಟದ್ದಾಯಿತು. 
 
ಶಾಂತವೀರನ ಸಾವಿನ ನೋವು ಸ್ವಲ್ಪ ಮಾಸುತ್ತಿದ್ದಂತೆ ಇನ್ನೊಂದು ದುರಂತ ನಡೆದುಹೋಯಿತು. ಅದೊಂದು ಸಂಜೆ ಶಾಲೆಯಿಂದ ವಾಪಸಾದ ದಯಾವೀರ ಅದೇ ಸ್ನಾನದ ಮನೆಗೆ ಕೈಕಾಲು ಮುಖ ತೊಳೆದುಕೊಳ್ಳಲು ಹೋದವನು ಎಷ್ಟೊತ್ತಾದರೂ ಹೊರಗೆ ಬರಲಿಲ್ಲ. ಬಚ್ಚಲು ಮನೆ ಸ್ವಲ್ಪ ದೂರ ಇದ್ದುದರಿಂದ ಸಿರಿಗೌರಿ ಅವನನ್ನು ಕೂಗಿ ಕರೆದಳು. ಅವಳ ಕೂಗು ಕೇಳಿ ಮೋಟಮ್ಮ ಕೂಡ ಹೊರ ಬಂದರು. ಇಬ್ಬರೂ ಬಚ್ಚಲುಮನೆಗೆ ಹೋದಾಗ ಅವರ ಎದೆ ಝಲ್‌ ಎಂದಿತು. ಏಕೆಂದರೆ ಶಾಂತವೀರ ಸತ್ತಂತೆಯೇ ದಯಾವೀರ  ಕೂಡ ಸತ್ತುಬಿದ್ದಿದ್ದ!
 
ವಿಷಯ ತಿಳಿದು ಕಾರ್ಖಾನೆಯಿಂದ ಏದುಸಿರಿನಲ್ಲಿ ಮನೆಗೆ ಬಂದ ಚೆಲ್ಲಯ್ಯ ಹಿಂದು ಮುಂದು ನೋಡದೆ ಸಿರಿಗೌರಿಯ ಮೇಲೇ ಸಂಶಯ ಪಟ್ಟ.  ಮರಣೋತ್ತರ ಪರೀಕ್ಷೆಯಿಂದ ದಯಾವೀರನ ಕೊಲೆ ಆಗಿದೆ ಎಂದು ತಿಳಿಯಿತು. ಶಾಂತವೀರನ ಶವವನ್ನು ಗುಂಡಿಯಿಂದ ಹೊರತೆಗೆಸಿ ಪರೀಕ್ಷೆ ಮಾಡಿದಾಗ ಅದೂ ಕೊಲೆ ಎಂಬುದು ಖಚಿತವಾಯಿತು.  ಚೆಲ್ಲಯ್ಯ ಹೆಂಡತಿ ವಿರುದ್ಧವೇ ಪೊಲೀಸರಿಗೆ ದೂರು ಕೂಡ ನೀಡಿದ. ಎರಡು ಕೊಲೆ ಕೇಸಿನಲ್ಲಿ ಆರೋಪಿಯಾದ ಸಿರಿಗೌರಿ ಜೈಲು ಪಾಲಾದಳು.
 
ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಠಾರದ ಅಷ್ಟೂ ವರ್ಷಗಳ ಶಾಂತಿ– ಸಮಾಧಾನ ಮಾಯವಾದವು. ಇತ್ತ ಪೊಲೀಸರು ತನಿಖೆ ಮುಗಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
 
ಸಿರಿಗೌರಿಯನ್ನು ಹತ್ತಿರದಿಂದ ಕಂಡಿದ್ದ ವಠಾರದವರು ಕೂಡ ಸಿರಿಗೌರಿ ಮಲತಾಯಿಯ ಕೈಚಳಕ ತೋರಿಸಿದಳೆಂದು ತೀರ್ಮಾನಿಸಿಬಿಟ್ಟರು. ಅದಕ್ಕೆ ಪುಷ್ಟಿ ನೀಡಲು ಎಂಬಂತೆ ಆಗೀಗ ಕಂಡ ಸಂದರ್ಭಗಳೂ ನೆನಪಿಗೆ ಬಂದವು. ಜೊತೆಗೆ, ಚೆಲ್ಲಯ್ಯನೇ ಸಿರಿಗೌರಿಯನ್ನು ಅನುಮಾನಿಸಿದ್ದು ಅವರ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ಕೊಟ್ಟಿತು. ಇದಕ್ಕೆ ಇಂಬು ನೀಡಲು, ಸಿರಿಗೌರಿಯ ಚಿಕ್ಕಪ್ಪ ಗೆಜ್ಜಪ್ಪ, ಈ ಕೊಲೆಗಳನ್ನು ಮಾಡಿದ್ದು ತಾನೇ ಎಂಬುದಾಗಿ ಖುದ್ದು ಸಿರಿಗೌರಿಯೇ ತಮ್ಮ ಬಳಿ ಹೇಳಿಕೊಂಡಿದ್ದಳು ಎಂಬ ಗುಲ್ಲು ಎಬ್ಬಿಸಿದರು.  ಇದನ್ನೆಲ್ಲಾ ಕೇಳಿದ ಪೊಲೀಸರು ‘ಎಕ್ಸ್‌ಟ್ರಾ ಜುಡಿಶಿಯಲ್ ಕನ್ಫೆಶನ್’ (ಸ್ವಯಂಪ್ರೇರಿತವಾಗಿ ತಪ್ಪು ಒಪ್ಪಿಕೊಳ್ಳುವುದು) ಎಂದೂ ದೂರು ದಾಖಲಿಸಿದರು.
 
ಸಿರಿಗೌರಿಯ ಪರಿಚಯಸ್ಥರೊಬ್ಬರು ಆಕೆಯ ಪರ ವಕಾಲತ್ತು ವಹಿಸಲು ನನ್ನನ್ನು ಕೇಳಿಕೊಂಡಾಗ ನಾನು ಒಪ್ಪಿದೆ. ಸಾಕ್ಷಿಗಳ ವಿಚಾರಣೆಗೆ ಮುನ್ನ ಕೊಲೆಯ  ಸ್ಥಳ ಪರಿಶೀಲನೆಗೆ ಹೋದೆ. ಆಗ ವಠಾರದವರು ಸಿರಿಗೌರಿ ಬಗೆಗಿದ್ದ ಆಕ್ರೋಶ ಹೊರಗೆ ಹಾಕಿದರು. ಅದನ್ನು ಗಮನಿಸಿದ ಅಲ್ಲಿದ್ದವರೆಲ್ಲ ಸಿರಿಗೌರಿಯೇ ಕೊಲೆಪಾತಕಿ ಎಂಬ ಪೂರ್ವಭಾವಿ ತೀರ್ಮಾನಕ್ಕೆ ಬಂದಿರುವುದು ಎದ್ದು ಕಂಡಿತು.
 
ನಾನು ಕೇಸಿನ ದೋಷಾರೋಪಪಟ್ಟಿಯಲ್ಲಿ ಇದ್ದ ಸಾಕ್ಷಿಗಳ ಹಾಗೂ ಸಿರಿಗೌರಿಯ ಹಿನ್ನೆಲೆ ಮುನ್ನೆಲೆ ತಿಳಿದುಕೊಳ್ಳುವ ಪ್ರಯತ್ನಕ್ಕೆ ಮುಂದಾದೆ. ಸಿರಿಗೌರಿ ಮದುವೆಗೂ ಮುನ್ನ ಹಾಗೂ ನಂತರ ಹೇಗೆ ವರ್ತಿಸುತ್ತಿದ್ದಳು, ಇತರರು ಗಮನಿಸಿದಂತೆ ಅವಳ ಮನೋಧರ್ಮ ಎಂಥದ್ದು - ಇವೇ ಮುಂತಾದ ಮಗ್ಗಲುಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ.
 
ವಿಚಾರಣೆ ಪ್ರಾರಂಭವಾಯಿತು. ಸಿರಿಗೌರಿಯ ಚಿಕ್ಕಪ್ಪ ಗೆಜ್ಜಪ್ಪ, ಮೋಟಮ್ಮ ಹಾಗೂ ವಠಾರದ ಕೆಲವರ ಹೇಳಿಕೆಗಳನ್ನು ಸರ್ಕಾರಿ ಪರ ವಕೀಲರು (ಪ್ರಾಸಿಕ್ಯೂಟರ್‌) ಕೋರ್ಟಿನ ಮುಂದೆ ಇರಿಸುತ್ತಿದ್ದಾಗ ಅಲ್ಲಿದ್ದವರೆಲ್ಲ ಸಿರಿಗೌರಿಗೆ ನೇಣುಶಿಕ್ಷೆ ಕಟ್ಟಿಟ್ಟದ್ದು ಎನ್ನುವಂತೆ ವರ್ತಿಸತೊಡಗಿದರು. ಆಕೆ ಕೊಲೆ ಮಾಡಿಲ್ಲ ಎಂಬುದನ್ನು ತಿಳಿದಿದ್ದ ನನಗೆ ನನ್ನ ವಾದದ ನಂತರ ಇವರೆಲ್ಲರ ಪೂರ್ವಗ್ರಹಿತ ತೀರ್ಮಾನವನ್ನು ಹಿಮ್ಮೆಟಿಸಬಹುದೇನೋ ಎನ್ನಿಸಿತು.
 
ಪ್ರಾಸಿಕ್ಯೂಷನ್‌ ಪರ ವಕೀಲರು ಕರೆತಂದ ವಿಧವಿಧವಾದ ಸಾಕ್ಷಿದಾರರನ್ನು ನಾನು ಪಾಟಿಸವಾಲಿಗೆ ಒಳಪಡಿಸಿದೆ. ಅವರಿಂದ ನಾನು ಹೊರತೆಗೆದ  ವಿಚಾರಗಳು ಇಷ್ಟು: ಚೆಲ್ಲಯ್ಯನಿಗೆ ಈಗಾಗಲೇ ಎರಡು ಮಕ್ಕಳು ಇರುವ ವಿಷಯ  ತಿಳಿದಿದ್ದರೂ, ಆತ ತನಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವ ಎಂದು ಗೊತ್ತಿದ್ದರೂ ಸಿರಿಗೌರಿ ಮದುವೆಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಮದುವೆಯಾದ ಮೇಲೆ ಆಕೆ ಮಕ್ಕಳನ್ನು ತನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಇದ್ದಷ್ಟೂ ದಿನ ಮಕ್ಕಳನ್ನು ದೇವಸ್ಥಾನಗಳಿಗೆ, ಸಂತೆಗೆ ಕರೆದುಕೊಂಡು ಹೋಗಿ ಸಂಭ್ರಮಿಸುತ್ತಿದ್ದಳು. ವಠಾರದಲ್ಲಿ ಮಕ್ಕಳೊಂದಿಗೆ ವಾಸಿಸುವ ಸಂದರ್ಭದಲ್ಲೂ ಅವರನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿ ಶಾಲೆಗೆ ಕಳಿಸುತ್ತಿದ್ದಳು; ಸಂಜೆ ಮನೆಗೆ ವಾಪಸಾದಾಗ ಅವರ ಮೈಕೈ ತೊಳೆದು, ತಿಂಡಿ ಕೊಟ್ಟು ಮುತುವರ್ಜಿಯಿಂದ ಓದಲು ಕೂರಿಸುತ್ತಿದ್ದಳು; ಪ್ರತಿ ಭಾನುವಾರ ಬೆಳಿಗ್ಗೆ ಅವರಿಬ್ಬರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪ್ರಾರ್ಥನೆ ಮಾಡಿಸಿ ಕರೆತರುತ್ತಿದ್ದಳು; ಖುದ್ದಾಗಿ ಅವರಿಗೆ ಬಟ್ಟೆ ಆರಿಸಿ ಹೊಲಿಸಿ, ತೊಡಿಸಿ ಆ ಮಕ್ಕಳು ಶಾಲೆಗೆ ಹೊರಟಾಗ ವಠಾರದ ಮುಂಭಾಗದಲ್ಲಿ ನಿಂತು ಅವರು ಅಷ್ಟು ದೂರ ಸಾಗುವವರೆಗೆ ಗಮನಿಸಿಕೊಳ್ಳುತ್ತಿದ್ದಳು. 
 
ಇಷ್ಟು ವಿಚಾರಗಳ ಜೊತೆಗೆ ಇನ್ನೊಂದು ಮುಖ್ಯ ವಿಷಯವನ್ನು ಕೋರ್ಟ್ ಗಮನಿಸುವಂತೆ ಮಾಡಿದೆ. ಸಿರಿಗೌರಿಯ ಚಿಕ್ಕಪ್ಪ ಗೆಜ್ಜಪ್ಪನಿಗೂ, ಆಕೆಯ ತಂದೆಗೂ ಜಮೀನು ವಿಚಾರದಲ್ಲಿ ಅನೇಕ ವರ್ಷಗಳ ತಕರಾರು ಇತ್ತು. ಸಿರಿಗೌರಿಯ ಮೇಲೆ ಕೊಲೆ ಆರೋಪ ಬರುತ್ತಿದ್ದಂತೆಯೇ ಗೆಜ್ಜಪ್ಪ, ಸಿರಿಗೌರಿ ಈ ಕೊಲೆಯ ವಿಷಯವನ್ನು ತಮ್ಮ ಬಳಿ ಹೇಳಿಕೊಂಡಿದ್ದಳು ಎಂದು ಎಲ್ಲರೆದುರು ಸುಳ್ಳು ಹೇಳಿದ್ದರು. ಸಾಲದು ಎಂಬುದಕ್ಕೆ ಈ ಕೊಲೆ ಕೇಸಿನಲ್ಲಿ ಪೊಲೀಸರ ಎದುರು ಆಕೆಯ ವಿರುದ್ಧ ಒಬ್ಬ ಸಾಕ್ಷಿದಾರ ದೊರಕುವಂತೆಯೂ ಮಾಡಿದ್ದರು. ಈ ಮೂಲಕ ಸಿರಿಗೌರಿಯ ತಂದೆಯನ್ನು ಜಮೀನು ವಿಚಾರದಲ್ಲಿ ಒಪ್ಪಂದಕ್ಕೆ ಬಗ್ಗಿಸುವುದು ಅವರ ದುರುದ್ದೇಶವಾಗಿತ್ತು. ಇದನ್ನು ನ್ಯಾಯಾಲಯದ ಮುಂದೆ ನಿರೂಪಿಸಿದೆ.
 
ಆರೋಪಿಯನ್ನು ಅಪರಾಧಿಯನ್ನಾಗಿಸಬೇಕಿದ್ದರೆ ಕೋರ್ಟ್‌ಗೆ ಬಹುಮುಖ್ಯವಾಗಿ ‘ಉದ್ದೇಶ’ ಬೇಕು. ಅಂದರೆ ಅಪರಾಧ ಎಸಗಲು ಆರೋಪಿಗೆ ಇರುವ ಉದ್ದೇಶದ ಬಗ್ಗೆ ಕೋರ್ಟ್‌ಗೆ ಮನವರಿಕೆಯಾಗಬೇಕು. ಆದರೆ ಸಿರಿಗೌರಿಯ ವಿಷಯದಲ್ಲಿ, ಆಕೆಗೆ ಯಾವ ಅಪರಾಧಿಕ ಮನಸ್ಸೂ ಇಲ್ಲದ್ದನ್ನು ಸಾಬೀತುಪಡಿಸಿದೆ. 
ಎರಡೂ ಪ್ರಕರಣಗಳಲ್ಲಿ, ಮಕ್ಕಳು ಬಚ್ಚಲು ಮನೆಗೆ ಹೋಗುವುದಕ್ಕೂ, ಸಿರಿಗೌರಿ ಅವರನ್ನು ಸತ್ತ ಸ್ಥಿತಿಯಲ್ಲಿ ನೋಡುವುದಕ್ಕೂ ನಡುವಿನ ಒಂದು ಗಂಟೆಯ ಅವಧಿಯಲ್ಲಿ ಸಿರಿಗೌರಿ ನಿಜವಾಗಿಯೂ ಬಚ್ಚಲುಮನೆಗೆ ಹೋಗಿರಲಿಲ್ಲ ಎಂಬುದನ್ನು ಸಾಬೀತು ಮಾಡುವುದು ದೊಡ್ಡ ಸವಾಲಾಯಿತು. ಆದರೂ ಅದನ್ನು ಸಾಬೀತು ಮಾಡುವುದರಲ್ಲಿ ಯಶಸ್ವಿಯಾದೆ.
 
ವಿಚಾರಣೆಯ ಪ್ರಾರಂಭದಿಂದ ಕೊನೆಯವರೆಗೂ ಇದೊಂದು ‘ಸಾಂದರ್ಭಿಕ ಸಾಕ್ಷ್ಯಗಳನ್ನಾಧರಿಸಿರುವ ಕೊಲೆಯ ಪ್ರಕರಣ’, ಇಲ್ಲಿರುವುದು ‘ಬೆನಿಫಿಟ್ ಆಫ್ ಡೌಟ್’ ಮಾತ್ರ ಎನ್ನುವುದನ್ನು ಕೋರ್ಟ್‌ಗೆ ನೆನಪು ಮಾಡುತ್ತಲೇ ಇದ್ದೆ. ‘ಅನುಮಾನ ಎಷ್ಟೇ ಪ್ರಬಲವಾಗಿದ್ದರೂ ಅದು ಸಾಕ್ಷ್ಯವಾಗುವುದಿಲ್ಲ’ (Suspicion however strong cannot take the place of proof) ಮತ್ತು ‘ಎಷ್ಟೇ ಪ್ರಬಲವಾದ ಅನುಮಾನವಾದರೂ ಅದು ಯಾವುದಕ್ಕೂ ಪುರಾವೆಯಲ್ಲ (even the strongest suspicion is no proof)  ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪನ್ನೂ ಉಲ್ಲೇಖಿಸಿದೆ.
 
ನನ್ನ ವಾದವನ್ನು ಕೋರ್ಟ್‌ ಪುರಸ್ಕರಿಸಿತು. ಸಾಂದರ್ಭಿಕ ಸಾಕ್ಷ್ಯಾಧಾರಗಳು ಒಂದಕ್ಕೊಂದು ಪೂರಕ ಅಲ್ಲದೇ ಇರುವುದನ್ನು ಗಮನಿಸಿದ ನ್ಯಾಯಾಧೀಶರು ಸಿರಿಗೌರಿಯನ್ನು ಆರೋಪಮುಕ್ತಗೊಳಿಸಿದರು. ಅಲ್ಲಿಗೆ ನಿರಪರಾಧಿ ಸಿರಿಗೌರಿ ನಿರಾಳವಾದಳು.
 
ಇಷ್ಟೆಲ್ಲಾ ಆದರೂ ಸಿರಿಗೌರಿಯ ಜೀವನದಲ್ಲಿ ದುರಂತವೊಂದು ನಡೆಯಿತು! ಸಿರಿಗೌರಿಯೇ ಕೊಲೆ ಮಾಡಿದ್ದಾಳೆ ಎಂದು ಆಕೆಯ ವಿರುದ್ಧ ರಾಜಾರೋಷವಾಗಿ ಸಾಕ್ಷಿ ನುಡಿದಿದ್ದ ಅವಳ ಗಂಡನಿಗೆ ಈಗ ತೇಜೋವಧೆಯಾಗಿತ್ತು. ಆದ್ದರಿಂದ ಅವಳಿಂದ ದೂರ ಆಗಿಬಿಟ್ಟ. ಆಪ್ತರು ಮಾಡಿದ ರಾಜಿ ಸಂಧಾನವೂ ಅವನ ಮೇಲೆ ಪರಿಣಾಮ ಬೀರಲಿಲ್ಲ. ಗಂಡ ಬಿಟ್ಟ, ಆದರೆ ವಿಚಿತ್ರ ನೋಡಿ. ಸತ್ಯ ಏನೆಂದು ಗೊತ್ತಿದ್ದ ಮೋಟಮ್ಮ ಮಾತ್ರ ಅವಳನ್ನು ಕೈಬಿಡದೆ ತಮ್ಮ ಮನೆಯಲ್ಲಿಯೇ ಇರಿಸಿಕೊಂಡರು!
(ಎಲ್ಲರ ಹೆಸರು ಬದಲಾಯಿಸಲಾಗಿದೆ)
-ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT