ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ನೀರಿನ 115 ತೊಟ್ಟಿ ಸಿದ್ಧ

* l 2016–17ನೇ ಸಾಲಿನಲ್ಲಿ ತೊಟ್ಟಿ ನಿರ್ಮಾಣಕ್ಕೆ ಆದ್ಯತೆ * ಚನ್ನಗಿರಿ, ಹರಪನಹಳ್ಳಿ, ಹೊನ್ನಾಳಿ ವ್ಯಾಪ್ತಿಯಲ್ಲಿ ಅಧಿಕ
ಅಕ್ಷರ ಗಾತ್ರ

ದಾವಣಗೆರೆ: ಅನಾವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಕೆರೆ–ಹಳ್ಳಗಳು ಬರಿದಾಗಿದ್ದು, ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂದು ಅಗತ್ಯವಿರುವ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದ್ದು, ಈಗಾಗಲೇ  ಜಿಲ್ಲೆಯ 233 ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ 115 ನೀರಿನ ತೊಟ್ಟಿಗಳು ಸಿದ್ಧಗೊಂಡಿವೆ. ಇನ್ನೂ ಕೆಲ ತೊಟ್ಟಿಗಳು ಕಾಮಗಾರಿ ಹಂತದಲ್ಲಿವೆ.

ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪಂಚಾಯ್ತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (MGNREGS) ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ ತೊಟ್ಟಿಗಳನ್ನು ನಿರ್ಮಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ.

₹ 42 ಸಾವಿರ ವೆಚ್ಚ: ‘ಜಿಲ್ಲೆಯಲ್ಲಿ ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಗ್ರಾಮಗಳನ್ನು ಗುರುತಿಸಿ, ‘ನರೇಗಾ’ ಯೋಜನೆ ಅಡಿಯಲ್ಲಿ 5 ಮೀಟರ್‌ ಉದ್ದ ಹಾಗೂ 1.7 ಮೀಟರ್‌ ಅಗಲದ ವಿಸ್ತೀರ್ಣದಲ್ಲಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಒಂದು ತೊಟ್ಟಿ ನಿರ್ಮಾಣಕ್ಕಾಗಿ ಅಂದಾಜು ₹ 42 ಸಾವಿರ ವೆಚ್ಚವಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಎಸ್‌.ಷಡಕ್ಷರಪ್ಪ ತಿಳಿಸಿದರು.

ಗ್ರಾಮ ಪಂಚಾಯ್ತಿ ನಿರ್ವಹಣೆ: ‘ಜಾನುವಾರು ಕುಡಿಯುವ ನೀರಿನ ತೊಟ್ಟಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯ್ತಿಗೆ ವಹಿಸಲಾಗಿದೆ. ತೊಟ್ಟಿಗಳಲ್ಲಿ ಪಾಚಿ ಕಟ್ಟದಂತೆ ಆಗಾಗ ಶುಚಿಗೊಳಿಸಿ, ಉತ್ತಮ ನೀರು ಪೂರೈಕೆ ಮಾಡಬೇಕು. ‘ಜಾನುವಾರಿಗೆ ಕುಡಿಯಲು ಮಾತ್ರ ಈ ನೀರನ್ನು ಬಳಸಬೇಕು’ ಎಂದು ಆಯಾ ತೊಟ್ಟಿಗಳ ಮೇಲೆ ಬರೆಯಿಸಬೇಕು ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಎನ್‌ಆರ್‌ಇಜಿ ಯೋಜನೆ ಅಡಿ ಪ್ರತಿ ಹಳ್ಳಿಗಳಲ್ಲಿ ನೀರಿನ ಪೂರೈಕೆ ಅನುಗುಣವಾಗಿ ಹಾಗೂ ಹತ್ತಿರದ ಕೊಳವೆ ಬಾವಿ ನೀರಿನ ಟ್ಯಾಂಕ್‌ ಸೌಲಭ್ಯ ಪಡೆದು ಜಾನುವಾರಿಗೆ ಕುಡಿಯುವ ನೀರಿನ ತೊಟ್ಟಿಯನ್ನು ನಿರ್ಮಿಸಬೇಕು ಎಂದು ಎಲ್ಲಾ ಪಿಡಿಒಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಚನ್ನಗಿರಿ, ಹರಪನಹಳ್ಳಿ, ಹೊನ್ನಾಳಿ ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚು ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ತೊಟ್ಟಿಗಳ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ದಾವಣಗೆರೆ ವ್ಯಾಪ್ತಿಯಲ್ಲಿ ಶಿವಪುರ, ಕೊಗ್ಗನೂರು, ಹುಳಪಿನಕಟ್ಟೆ, ಗೊಲ್ಲರಹಳ್ಳಿ, ಓಬಣ್ಣನಹಳ್ಳಿ, ಹೊನ್ನನಾಯಕನಹಳ್ಳಿ, ಕಿತ್ತೂರು, ಬೆಳವನೂರು ಹಾಗೂ ಹದಡಿ ಗ್ರಾಮಗಳಲ್ಲಿ 2016ನೇ ಸಾಲಿನಲ್ಲಿ ಒಟ್ಟು 13 ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ  ಜಿಲ್ಲೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿಗಳನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2016ನೇ ಸಾಲಿನಲ್ಲಿ ಹರಿಹರದಲ್ಲಿ ತೊಟ್ಟಿಗಳನ್ನು ನಿರ್ಮಿಸಿಲ್ಲ’ ಎಂದು ತಿಳಿಸಿದರು.

‘ಕೊಳವೆಬಾವಿ ನೀರಿನ ಸೌಲಭ್ಯವಿರುವ ಕಡೆ ಗ್ರಾಮಕ್ಕೆ ಒಂದರಂತೆ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಮಾಚಿಹಳ್ಳಿ, ನೀಲಗುಂದ, ಹುಲಿಕಟ್ಟಿ ಗ್ರಾಮಗಳಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದು ನೀಲಗುಂದ ಕ್ಷೇತ್ರದ ಜಿ.ಪಂ.ಸದಸ್ಯ ಎಚ್‌.ಬಿ. ಪರಶುರಾಮಪ್ಪ ತಿಳಿಸಿದರು.

ಬಟ್ಟೆ ತೊಳೆಯಲು ಬಳಕೆ
ದನಕರುಗಳು ಕುಡಿಯಲು ನಿರ್ಮಿಸಿರುವ ನೀರಿನ ತೊಟ್ಟಿಗಳು ಸ್ವಚ್ಛತೆ ಕಾಣದೇ ಕಸ ಬಿದ್ದು, ಹಸಿರು ಪಾಚಿ ಕಟ್ಟಿ ನೀರು ಕಲ್ಮಷಗೊಂಡಿದ್ದು ಕೆಟ್ಟ ವಾಸನೆ ಬರುತ್ತದೆ. ಕೆಲವೆಡೆ ನೀರಿನ ತೊಟ್ಟಿಗಳನ್ನು ಗ್ರಾಮಸ್ಥರು ಬಟ್ಟೆ ಹಾಗೂ ದನಕರುಗಳನ್ನು ತೊಳೆಯಲು ಬಳಕೆ ಮಾಡುತ್ತಿದ್ದಾರೆ.
–ಹನುಮಂತಪ್ಪ, ಇಟ್ಟಿಗುಡಿ ಗ್ರಾಮ, ಹರಪನಹಳ್ಳಿ ತಾ.

ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ತೊಟ್ಟಿಗಳನ್ನು ನಿರ್ಮಿಸುವಂತೆ ಸೂಚಿಸಲಾಗುವುದು.
–ಎಸ್‌.ಅಶ್ವತಿ, ಸಿಇಒ, ಜಿಲ್ಲಾ ಪಂಚಾಯ್ತಿ.


ಸಂತೇಬೆನ್ನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಈಗಾಗಲೇ  ಜಾನುವಾರು ಕುಡಿ ಯುವ ನೀರಿನ 17 ತೊಟ್ಟಿಗಳನ್ನು ನಿರ್ಮಿಸ ಲಾಗಿದ್ದು, ಸಮಸ್ಯೆ ಎದುರಾಗಿಲ್ಲ.
–ಪಿ.ವಾಗೀಶ್‌, ಅಧ್ಯಕ್ಷರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT