ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಡೆಲ್ ಕ್ಯಾಸ್ಟ್ರೊ ಹೇಗಿದ್ದರು ಗೊತ್ತೆ?

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ನವೆಂಬರ್ 25ರಂದು ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟರು.

* ಅವರು ಹುಟ್ಟಿದ್ದೆಲ್ಲಿ?
1926ರ ಆಗಸ್ಟ್ 13ರಂದು ಆಗ್ನೇಯ ಕ್ಯೂಬಾದಲ್ಲಿ ಜನಿಸಿದರು. ಶಾಲಾದಿನಗಳಲ್ಲಿ ಅವರು ಕ್ರೀಡೆಗಳಲ್ಲಿ ಚುರುಕಾಗಿದ್ದರು. ಮೊದಲಿನಿಂದಲೂ ಅವರು ಕ್ರಾಂತಿಕಾರಿ. ಹವಾನಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಓದುವಾಗ ವಿದ್ಯಾರ್ಥಿ ಸಂಘಟನೆಗಳ ಮೂಲಕ ರಾಜಕೀಯ ಪ್ರವೇಶಿಸಿದರು. ಕಾರ್ಲ್ ಮಾರ್ಕ್ಸ್ ಚಿಂತನೆಗಳಿಂದ ಪ್ರಭಾವಿತರಾಗಿದ್ದವರು. ಬಡ ಕಾರ್ಮಿಕರು ಹಾಗೂ ಸಕ್ಕರೆ ಕಾರ್ಖಾನೆಗಳ ಶ್ರೀಮಂತರ ನಡುವಿನ ಕಂದಕವನ್ನು ತೊಡೆದುಹಾಕಿ, ಸಮಾನತೆ ತರಬೇಕೆನ್ನುವುದು ಅವರ ಉದ್ದೇಶವಾಗಿತ್ತು.

* ಅವರು ಅಧಿಕಾರಕ್ಕೆ ಬಂದದ್ದು ಹೇಗೆ?
ಆಗ್ನೇಯ ಕ್ಯೂಬಾದ ಬೆಟ್ಟತಪ್ಪಲಿನಲ್ಲಿ ಅರ್ಜೆಂಟಿನಾದ ಕ್ರಾಂತಿಕಾರಿ ಚೆ ಗುವೆರಾ ಅವರನ್ನೂ ಸೇರಿಸಿಕೊಂಡು ಅವರು ಬಿಡಾರ ಹೂಡಿದರು. 1957–58ರಲ್ಲಿ ಸರ್ಕಾರದ ಸೇನೆಗಳ ಮೇಲೆ ಗೆರಿಲ್ಲಾ ದಾಳಿ ನಡೆಸಿದರು. 1959ರ ಜನವರಿ 1ರಂದು ಸರ್ವಾಧಿಕಾರಿ ಜನರಲ್ ಫುಲ್ಗೆನ್ಸಿಯೊ ಬಾಟಿಸ್ಟ ಕ್ಯೂಬಾದಿಂದ ಓಡಿಹೋಗುವಂತೆ ಮಾಡಿದರು. ಫಿಡೆಲ್ ಕ್ಯಾಸ್ಟ್ರೊ ಪ್ರಧಾನಿ ಆದದ್ದಲ್ಲದೆ ಪಶ್ಚಿಮ ಭಾಗದಲ್ಲಿ ಮೊದಲ ಕಮ್ಯುನಿಸ್ಟ್ ಸರ್ಕಾರ ರಚಿಸಿದರು.

* ಅಧಿಕಾರಕ್ಕೆ ಬಂದಮೇಲೆ ಅವರು ಏನು ಮಾಡಿದರು?
ಶಿಕ್ಷಣ ಮತ್ತು ಆರೋಗ್ಯ ಸೌಕರ್ಯವನ್ನು ಜನರಿಗೆ ಉಚಿತವಾಗಿ ಒದಗಿಸಿದರು. ಕ್ಯೂಬಾದ ನಾಗರಿಕರಿಗೆ ಅನುಕೂಲ ಕಲ್ಪಿಸಲು ರಸ್ತೆಗಳನ್ನು ನಿರ್ಮಿಸಿದರು. ಭೂಸುಧಾರಣೆಗೆ ಪೂರಕ ಕ್ರಮ ಕೈಗೊಂಡು, ವಾಣಿಜ್ಯ ಉದ್ದಿಮೆಗಳ ರಾಷ್ಟ್ರೀಕರಣ ಮಾಡಿದರು.

ಇನ್ನೊಂದೆಡೆ, ಪತ್ರಿಕಾ ಸ್ವಾತಂತ್ರ್ಯದ ಮೇಲೆಯೇ ಅಂಕೆ ಹೇರಿದರು. ರಾಜಕೀಯ ವಿರೋಧಿಗಳ ದನಿ ಉಡುಗಿಸಿದರು. ಕಾರ್ಮಿಕರು ಹಾಗೂ ರೈತರ ಬದುಕನ್ನು ಹಸನುಗೊಳಿಸಿದ ಕ್ಯಾಸ್ಟ್ರೊ ಸುಶಿಕ್ಷಿತ ಮಧ್ಯಮ ವರ್ಗದವರಿಂದ ಟೀಕೆಗೆ ಗುರಿಯಾದರು. ಅನೇಕರು ಅಮೆರಿಕಕ್ಕೆ ವಲಸೆ ಹೋದರು.

* ಅಮೆರಿಕ ಜತೆ ಕ್ಯೂಬಾ ಸಂಬಂಧ ಯಾಕೆ ಹಸನಾಗಿ ಇರಲಿಲ್ಲ?
ಅಮೆರಿಕನ್ನರ ಪಾಲಿಗೆ ಕ್ಯಾಸ್ಟ್ರೊ ಎಂದರೆ ಸೇನಾ ದಿರಿಸಿನಲ್ಲಿ ಇರುವ ಏಕೈಕ ವೈರಿ ಎಂಬ ಭಾವನೆ ದಟ್ಟವಾಯಿತು. ಶೀತಲ ಯುದ್ಧದಲ್ಲಿ ರಷ್ಯಾ ಅನ್ನು ಬೆಂಬಿಲಿಸಿದರು. ಅಮೆರಿಕದ ಕಂಪೆನಿಗಳು ರಷ್ಯಾಗೆ ತೈಲ ಸಂಸ್ಕರಣೆ ಮಾಡಿಕೊಡಲು ನಿರಾಕರಿಸಿದಾಗ ಕ್ಯಾಸ್ಟ್ರೊ ತನ್ನ ನೆಲದಲ್ಲಿದ್ದ ಅಮೆರಿಕ ಒಡೆತನದ ಸಕ್ಕರೆ ಕಾರ್ಖಾನೆಗಳು, ಬ್ಯಾಂಕ್‌ಗಳ ಮೇಲೆ ಪ್ರತೀಕಾರ ತೀರಿಸಿಕೊಂಡರು. ಇದರಿಂದ ಕೋಪಗೊಂಡ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿತು. 1961ರಲ್ಲಿ ಕ್ಯೂಬಾ ಜತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು.

ಮುಂದಿನ ದಶಕಗಳಲ್ಲಿ ಕ್ಯಾಸ್ಟ್ರೊ ಅಮೆರಿಕದ ಪಾಲಿಗೆ ಮುಳ್ಳಾಗಿಯೇ ಇದ್ದುಬಿಟ್ಟರು. ಲ್ಯಾಟಿನ್ ಅಮೆರಿಕ ಹಾಗೂ ಆಫ್ರಿಕಾದ ಕ್ರಾಂತಿಕಾರಿ ಚಳವಳಿಗಳನ್ನು ಬೆಂಬಲಿಸಿದರು. 1961ರಲ್ಲಿ ಕ್ಯೂಬಾದ ಪಿಗ್ಸ್ ಕೊಲ್ಲಿಯಲ್ಲಿ ಗಡೀಪಾರಾದ ಅನೇಕರು ದಂಗೆ ಎದ್ದರು. ಅಮೆರಿಕ ಅವರಿಗೆ ನೆರವು ನೀಡಿತು. ಹಾಗಿದ್ದೂ ಕ್ಯಾಸ್ಟ್ರೊ ಅವರನ್ನು ಮಟ್ಟಹಾಕಿದರು.

ಕ್ಯೂಬಾದಲ್ಲಿ ಅಣು ಸ್ಥಾವರ ಸ್ಥಾಪಿಸಲು ರಷ್ಯಾಕ್ಕೆ 1962ರಲ್ಲಿ ಕ್ಯಾಸ್ಟ್ರೊ ಅನುಮತಿ ನೀಡಿದರು. ಅವರ ಕ್ಷಿಪಣಿಗಳನ್ನು ತೆರವುಗೊಳಿಸದೇ ಇದ್ದರೆ ರಷ್ಯಾ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಎಚ್ಚರಿಸಿತು. ಪರಮಾಣು ದಾಳಿಯ ಭೀತಿಯಲ್ಲಿ ಆಗ ಇಡೀ ಜಗತ್ತು ಇತ್ತು. ಅದೃಷ್ಟವಶಾತ್, ಶಾಂತಿಯುತ ಮಾತುಕತೆಯಲ್ಲೇ ಆ ಸಮಸ್ಯೆ ಬಗೆಹರಿಯಿತು.

* ಕ್ಯಾಸ್ಟ್ರೊ ಅಧಿಕಾರ ತ್ಯಜಿಸಿದ್ದು ಯಾವಾಗ?
2008ರಲ್ಲಿ ಅಧಿಕೃತವಾಗಿ ಅವರು ರಾಜೀನಾಮೆ ನೀಡಿ, ತಮ್ಮ ಸಹೋದರ ರೌಲ್ಗ್‌ ಆಡಳಿತ ನಡೆಸುವ ಅವಕಾಶ ಕೊಟ್ಟರು. 49 ವರ್ಷ ಆಡಳಿತ ನಡೆಸಿದ ಅವರನ್ನು ಸರಳ ನಾಯಕ ಎಂದೇ ಅನೇಕರು ಬಣ್ಣಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT