ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಭೂಮಿ ಮೇಲಿರುವನಾ?

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಅರಸೀಕೆರೆ ರೈಲ್ವೆನಿಲ್ದಾಣದಿಂದ ಬಳ್ಳಾರಿಗೆ ಹೊರಟ ನಾವು ರೈಲಿನ ಆಗಮನಕ್ಕಾಗಿ ಕಾಯುತ್ತಿದ್ದೆವು. ನನ್ನಾಕೆ ಎಳನೀರು ಬೇಕೆಂದಳು. ಮಗಳ ಜೊತೆಗೂಡಿ ನಿಲ್ದಾಣದ ಹೊರಗೆ ಎಳನೀರು ಹುಡುಕತೊಡಗಿದೆ.

ದಾರಿಯಲ್ಲಿ ಕಂಡು ಬಂದ ದೃಶ್ಯದಿಂದ ನನ್ನ ಮನಸ್ಸಿಗೆ ಬಹಳ ಆಘಾತವಾಯಿತು. 35 ರಿಂದ 40ರ ವಯೋಮಿತಿಯ ಎಲುಬಿನ ದೇಹದ ಒಂದು ಹೆಂಗಸು ರಸ್ತೆಯ ಮಧ್ಯದಲ್ಲಿ ಬಿದ್ದಿದ್ದಳು. ನಿರ್ಜೀವ ವಸ್ತುವಿನಂತೆ ಬಿದ್ದುಕೊಂಡಿದ್ದಳು. ನೊಣಗಳ ದಂಡು ಬಿಟ್ಟು ಬಿಡದೆ ದಾಳಿ ನಡೆಸಿದ್ದವು. ಅವಳ ಕಣ್ಣುಗಳು ಬರುವ ಹೋಗುವವರನ್ನು ದೀನವಾಗಿ ನೋಡುತ್ತಿದ್ದವು. ಯಾರೋ ಹೃದಯವಂತರು ಒಂದು ಬಾಟಲ್‌ನಲ್ಲಿ ನೀರು ಮತ್ತು ಆಹಾರದ ಪೊಟ್ಟಣವನ್ನು ಪಕ್ಕದಲ್ಲಿ ಇರಿಸಿದ್ದರು. ಕೂಗಳತೆಯಲ್ಲಿ ಮೂರು ನಾಲ್ಕು ಜನ ಭಿಕ್ಷುಕರು ಭಿಕ್ಷೆ ಬೇಡುತ್ತಿದ್ದರು.

ನನ್ನ ಮಗಳು ‘ಯಾರಪ್ಪ ಆಯಮ್ಮ, ಹೀಗೆ ರಸ್ತೆಯಲ್ಲಿ ಬಿದ್ದಿದ್ದಾರೆ? ಪಾಪ! ಅವರಿಗೆ ಯಾರೂ ಇಲ್ಲವೇನಪ್ಪ?’ – ಹೀಗೆ ಪ್ರಶ್ನೆಗಳ ಸರಮಾಲೆಯನ್ನು ಕೇಳತೊಡಗಿದಳು. ಆದರೆ ನನ್ನ ಬಾಲ್ಯದ ಮನಸ್ಸಿನಲ್ಲಿ ಇದೇ ರೀತಿ ಮೂಡಿದ ಪ್ರಶ್ನೆಗಳಿಗೆ ಯಾರು ಸರಿಯಾಗಿ ಉತ್ತರಿಸಿರಲಿಲ್ಲ.

ಮತ್ತೆ ನಾನು ಹೇಗೆ ಇವಳಿಗೆ ಉತ್ತರ ನೀಡಲಿ? ಇಂಥ ಜನರನ್ನು ನೋಡಿದಾಗಲೆಲ್ಲಾ ನನ್ನ ಮನಸ್ಸಿಗೆ ಬಹಳ ನೋವಾಗುತ್ತಿತ್ತು, ಯಾಕೆ ಇವರಿಗೆ ಹೀನಾಯ ಸ್ಥಿತಿ ಬರುತ್ತೆ? ಅಥವಾ ಬದುಕಿನ ವೈಚಿತ್ರ್ಯಗಳಲ್ಲಿ ಇದೂ ಒಂದಾ? ಅವಳು ಇಷ್ಟು ದಿನ ಎಲ್ಲಿದ್ದಳು? ಯಾಕೆ ಬೀದಿಗೆ ಬಿದ್ದಳು? ಅವಳಿಗೆ ಯಾರೂ ಇಲ್ಲವೇ? ಇದ್ದರೂ ಯಾಕೆ ಬೀದಿಗೆ ಹಾಕಿದರು? ಎಂಬೆಲ್ಲಾ ಆಕ್ರೋಶದ ಪ್ರಶ್ನೆಗಳು ಬಂದರೆ ಉತ್ತರಿಸುವವರು ಯಾರೂ ಇಲ್ಲ. ಸಮಾಜದಲ್ಲಿ ಏನೆಲ್ಲಾ ಬದಲಾವಣೆಯ ಗಾಳಿ ಬೀಸಿದರೂ, ವೈಜ್ಞಾನಿಕತೆ, ಆಧುನಿಕತೆ ಬೆಳೆದರೂ ಈ ಚಿತ್ರಣಗಳಿಗೆ ಪರಿಹಾರ ಇಲ್ಲವೆ?

ಮನಸ್ಸಲ್ಲಿ ನೂರಾರು ಪ್ರಶ್ನೆಗಳನ್ನಿಟ್ಟುಕೊಂಡು, ಮಗಳಿಗೆ ಹಾರಿಕೆ ಉತ್ತರ ಕೊಟ್ಟು ಬಳ್ಳಾರಿಗೆ ಬಂದೆವು. ಒಂದು ವಾರದ ನಂತರ ಮತ್ತೆ ಅರಸೀಕೆರೆಗೆ ರೈಲಿನಲ್ಲಿ ಬಂದು ಇಳಿದು ಹಾಸನಕ್ಕೆ ಬಸ್ಸಿನಲ್ಲಿ ತೆರಳಲು ಮತ್ತೆ ಅದೇ ದಾರಿಯಲ್ಲಿ ಬಂದೆವು. ನೋಡಿದರೆ ಅವಳು ಶವವಾಗಿ ಹೋಗಿದ್ದಳು. ದೇಹ ಕೊಳೆತು ಕೆಟ್ಟ ವಾಸನೆ ಎಲ್ಲರ ಮೂಗಿಗೆ ಬಡಿಯುತ್ತಿತ್ತು. ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ಪಕ್ಕದಲ್ಲಿ ಇದ್ದ ಭಿಕ್ಷುಕರೂ ಜಾಗ ಖಾಲಿ ಮಾಡಿದ್ದರು.

ಮತ್ತೆ ಮಗಳದ್ದು ಅದೇ ಪ್ರಶ್ನೆ ‘ಯಾಕಪ್ಪ ಇನ್ನೂ ಇಲ್ಲೇ ಬಿದ್ದಿದ್ದಾರೆ?’ ಏನು ಹೇಳಲಿ? ಪಕ್ಕದ ರಸ್ತೆಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಜನ ವಿಜೃಂಭಣೆಯಿಂದ ಜೈಕಾರ ಹಾಕುತ್ತಾ ಮೆರವಣಿಗೆ ಹೊರಟಿದ್ದರು. ಆಗ ನನಗೆ ಬಲವಾದ ಒಂದು ಪ್ರಶ್ನೆ ಮೂಡಿತು. ದೇವರು ಭೂಮಿ ಮೇಲೆ ಇನ್ನೂ ಇದ್ದಾನಾ?
–ಎಚ್‌.ಎಸ್‌. ರವಿ, ಹಾಸನ

*
ಬರಿಗಾಲಿನ ಮುಗ್ಧ ಹುಡುಗಿ ನೆನಪು
ನಾನು ಯಲ್ಲಾಪುರದ ‘ವೈ.ಟಿ.ಎಸ್.ಎಸ್. ಕಾಲೇಜ್‌’ನಲ್ಲಿ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುತ್ತಿದ್ದ ಸಮಯ. ಹಿರಿಯ ಉಪನ್ಯಾಸಕರ ಜೊತೆ ನನ್ನ ಕೊಠಡಿಯಲ್ಲಿ ಅಂತಿಮ ಪರೀಕ್ಷೆಯ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಬಾಗಿಲಲ್ಲಿ ಹತ್ತಾರು ಮಕ್ಕಳು ನನ್ನ ಭೇಟಿಗಾಗಿ ಕಾಯುತ್ತಿರುವುದನ್ನು ಗಮನಿಸಿದೆ. ಒಬ್ಬಳು ಅತ್ಯಂತ ತರಾತುರಿಯಲ್ಲಿದ್ದಂತೆ ಕಂಡಳು. ಹತ್ತಾರುಸಲ ಅವಳ ತಲೆ ನನಗೆ ಕಾಣುವಂತೆ ಪ್ರಯತ್ನಿಸುತ್ತಿದ್ದಳು.

ನನ್ನ ಎದುರಿಗೆ ಬಂದು ನಿಂತವಳು ಪಾದರಕ್ಷೆರಹಿತ ಮುಗ್ಧ ಹುಡುಗಿ ಧಾಕಿ. ಕೀಳರಿಮೆಯ ಕಹಿಯಿಂದ ಬಳಲುವ ಅವಳನ್ನು ಮಾತನಾಡಿಸಿದೆ. ಅವಳಿಗೆ ಕಾಲೇಜಿನ ಶುಲ್ಕ ತುಂಬಲು 160 ರೂಪಾಯಿ ಬೇಕಿತ್ತು. ಅದನ್ನು ನೀಡಿದಾಗ ‘ಮೂರು ತಿಂಗಳಲ್ಲಿ ಕೊಡ್ತೇನೆ ಸರ್’ ಎಂದು ಯುದ್ಧದಲ್ಲಿ ಗೆದ್ದವಳಂತೆ ಹೊರಟಳು.

ಧಾಕಿಗೆ ಹಣನೀಡಿ ಎಷ್ಟುದಿನ ಆಗಿದೆಯೊ ಗೊತ್ತಿಲ್ಲ. ಆ ಹಣದ ಬಗ್ಗೆ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಒಂದು ದಿನ ಅವಳು ನನ್ನ ಕೊಠಡಿಯಲ್ಲಿ ಪ್ರತ್ಯಕ್ಷಳಾಗಿ, ಹಣ ನೀಡಲು ಮುಂದಾದಳು. ಹಣವನ್ನು ನಿರಾಕರಿಸಿ, ಒಂದು ಜೊತೆ ಪಾದರಕ್ಷೆ ತೆಗೆದುಕೊಳ್ಳುವಂತೆ ಸಲಹೆನೀಡಿ ಬೇರೊಂದು ಕೆಲಸಕ್ಕಾಗಿ ಹೊರನಡೆದೆ.

ನನ್ನ ಕಾರ್ಯಕಲಾಪಗಳನ್ನು ಮುಗಿಸಿ ನನ್ನ ಕೋಣೆಗೆ ಆಗಮಿಸಿದಾಗ ನನ್ನ ಟೇಬಲ್ ಮೇಲೆ 32 ಐದು ರೂಪಾಯಿಯ ನೋಟುಗಳಿದ್ದವು. ವಿಶ್ರಾಂತಿ ಸಮಯದಲ್ಲಿ ನನ್ನನ್ನು ಕಾಣುವಂತೆ ಧಾಕಿಗೆ ಕರೆ ಕಳಿಸಿದೆ.

ಧಾಕಿ ನನ್ನೆದುರಿಗೆ ಮತ್ತೆ ನಿಂತಿದ್ದಳು. ನಾನು ಅವಳನ್ನು ಪ್ರೀತಿಯಿಂದ ವಿಚಾರಿಸಿದೆ. ಧಾಕಿ ಗೌಳಿ ಜನಾಂಗದ ಬಡಕುಟುಂಬದ ಹುಡುಗಿ. ಹೆತ್ತವರಿಗೆ ನಾಲ್ಕನೇ ಮಗಳು. ಬಡತನದ ನಡುವೆಯೂ ಓದುವ ಹಂಬಲ ಉಳಿಸಿಕೊಂಡವಳು. ಭಾಗವತಿ ಊರಿಂದ ಹತ್ತಾರು ಕಿ.ಮೀ. ಒಳಗಡೆಯ ಕುಗ್ರಾಮದವಳು. ಆ ಊರಿನ ಜನ ಕೂಲಿಕೆಲಸಕ್ಕೆ ಹೋಗಬೇಕಾದರೆ ಹಾಲಿನ ಕ್ಯಾನನ್ನು ಸಮೀಪದ ಊರಿನ ಹಾಲಿನಡೈರಿಗೆ ಕೊಟ್ಟು ಹೋಗುತ್ತಾರೆ.

ರವಿವಾರ ಮಾತ್ರ ಕೂಲಿಕಾರರಿಗೆ ರಜೆಯ ಮಜ! ಅಂದು ಧಾಕಿಗೂ ರಜೆ. ಈ ರಜೆಯನ್ನೇ ಬಳಸಿಕೊಂಡು ಧಾಕಿ ಎಲ್ಲರ ಮನೆಯ ಹಾಲಿನ ಕ್ಯಾನುಗಳನ್ನು ಸೈಕಲ್ ಮೇಲೆ ಡೈರಿಗೆ ಮುಟ್ಟಿಸುತ್ತಾಳೆ. ಪ್ರತಿ ಕ್ಯಾನಿಗೂ 5 ರೂಪಾಯಿ ದುಡಿಮೆ!

ಧಾಕಿಯ ಹತ್ತಿರವೂ ಚಪ್ಪಲಿ ಇದೆ! ಅದನ್ನು ಅವರಪ್ಪ ಟ್ರ್ಯಾಕ್ಟರಿನ ಬಿಸಾಡಿದ ಟೈಯರ್‌ನಿಂದ ಮಾಡಿಸಿ ಕೊಟ್ಟಿದ್ದಾರೆ. ರಜೆಯಲ್ಲಿ ಕೂಲಿಗೆ ಹೋಗುವಾಗ ಧಾಕಿ ಅದನ್ನೇ ಬಳಸುತ್ತಾಳೆ. ಆದರೆ, ಆ ಜೋಡು ಕಾಲೇಜಿಗೆ ಆಗದು. ಧಾಕಿ ಇವೆಲ್ಲವನ್ನೂ ವಿವರಿಸುತ್ತಿದ್ದಂತೆ ನನಗರಿವಿಲ್ಲದೆ ಕಣ್ಣೀರಿನ ಹನಿಗಳು ಮೇಜಿನ ಮೇಲೆ ಉದುರಿದವು.
–ಬೀರಣ್ಣ ನಾಯಕ, ಮೊಗಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT