ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬ್ರದರ್ ಮತ್ತು ಬಿಗ್ ಬಾಸ್

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಕಾರ್ತಿಕ್ ಅಮೈ

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ‘ಬಿಗ್ ಬಾಸ್’ ರಿಯಾಲೀಟಿ ಷೋ ಅಪಾರ ಜನಪ್ರಿಯತೆ ಗಳಿಸಿದೆ. ಒಂದು ಮನೆಯೊಳಗೆ ಇರುವ ಸದಸ್ಯರು ಬಿಗ್ ಬಾಸ್‌ನ ಅಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಮನೆಯೊಳಗಿರುವ ಕ್ಯಾಮೆರಾಗಳು, ಪಾಲಿಸಲೇಬೇಕಾದ ನೀತಿ ನಿಯಮಗಳು ಮತ್ತು ಶಿಕ್ಷೆಗಳಿಗೆ ತನ್ನದೇ ಆದ ಅರ್ಥಗಳಿವೆ. ಸದಸ್ಯರುಗಳು ನಿಯಮಗಳನ್ನು ಮುರಿದು ‘ಬಿಗ್ ಬಾಸ್’ನ ಆಶಯಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದೇ ಆದಲ್ಲಿ, ‘ಬಿಗ್ ಬಾಸ್’ ಕೈಗೊಳ್ಳುವ ನಿರ್ಧಾರಕ್ಕೆ ಸದಸ್ಯರುಗಳು ಕಟಿಬದ್ಧ ಆಗಿರಬೇಕಾಗುತ್ತದೆ.

ಜಾರ್ಜ್ ಆರ್ವೆಲ್‌ನ ‘1984’ ಕಾದಂಬರಿಯನ್ನು ಓದಿದಾಗ, ಅದು ‘ಬಿಗ್‌ ಬಾಸ್‌’ಗೆ ಬರೆದ ಚಿತ್ರಕಥೆಯೇನೊ ಎನ್ನುವಂತಿದೆ. ‘1984’ – ಒಂದು ವ್ಯವಸ್ಥೆಯ ಕುರಿತು ಅಣಕವಾಡುವ ಕಾದಂಬರಿ. ಆರ್ವೆಲ್‌ ಹೇಳಿರುವಂತೆ – ‘ವಾಸ್ತವ ಜಗತ್ತಿನ ರೀತಿನೀತಿಗಳು ಮತ್ತು ಬದುಕಿನ ಶೈಲಿಯನ್ನು ವಿಮರ್ಶಾತ್ಮಕವಾಗಿ ಓದುಗರ ಮುಂದಿಡುವ ಪ್ರಯತ್ನದಲ್ಲಿ ಕಾದಂಬರಿಯಲ್ಲಿರುವ ಬಹಳಷ್ಟು ಸಂಗತಿಗಳು ರೂಪುಗೊಂಡಿವೆ’.

1948ರಲ್ಲಿ ಬರೆದ ‘1984’ ಕಾದಂಬರಿಯು ಕಾಲ್ಪನಿಕ ಜಗತ್ತೊಂದರ ಅಕ್ಷರ ಅಭಿವ್ಯಕ್ತಿ. ತಾನು ಬದುಕುತ್ತಿರುವ ಕಾಲ 1984ರ ವೇಳೆಗೆ ಹೇಗಿರಬಹುದು ಎಂದು ತನ್ನೊಳಗೆ ಮೂಡಿದ ಪ್ರಶ್ನೆಗೆ ಲೇಖಕ ಕಂಡುಕೊಳ್ಳಲು ಪ್ರಯತ್ನಿಸಿದ ಉತ್ತರರೂಪದ ಕೃತಿಯಿದು. ಈ ಕಾದಂಬರಿ ಪ್ರಕಟಗೊಂಡಾಗ ಅಂದಿನ ಅನೇಕ ಮಂದಿಯ ಕಣ್ಣು ಕೆಂಪಾಗಿದ್ದು ಸುಳ್ಳಲ್ಲ.

‘ಬಿಗ್ ಬಾಸ್’ ಶೈಲಿ, ಅದರ ಒಟ್ಟು ಕಾರ್ಯಕ್ರಮ ಜಾರ್ಜ್ ಆರ್ವೆಲ್‌ನ ಕಾದಂಬರಿಯ ಸನ್ನಿವೇಶಗಳಂತೆಯೇ ಇದೆ. ಕಾದಂಬರಿಯನ್ನು ಒಮ್ಮೆ ಓದಿದ ಮೇಲೆ ‘ಬಿಗ್ ಬಾಸ್‌’ನ ವಿವಿಧ ಎಪಿಸೋಡ್‌ಗಳನ್ನು ನೋಡಿದರೆ, ಬಹಳಷ್ಟು ಸಂಗತಿಗಳನ್ನು ನಾವು ತುಲನಾತ್ಮಕವಾಗಿ ಜೋಡಿಸುತ್ತಾ ಹೋಗಬಹುದು.

ಕಾದಂಬರಿಯಲ್ಲಿರುವ ‘ಬಿಗ್ ಬ್ರದರ್’ ಆ ನಾಡಿನಲ್ಲಿರುವ ಅತೀ ಹೆಚ್ಚು ಪ್ರಭಾವಿ ಮತ್ತು ಬಂಡವಾಳಶಾಹಿ ದೊರೆಯಾಗಿದ್ದಾನೆ. ಪ್ರಜೆಗಳು ಆತ ಹೇಳಿದ ಹಾಗೆ ನಡೆದುಕೊಳ್ಳತಕ್ಕದ್ದು. ಒಂದು ವೇಳೆ ‘ಬಿಗ್ ಬ್ರದರ್‌’ನ ವಿರುದ್ಧವಾಗಿ ಹೋದರೆ ಈ ಜಗತ್ತಿನಿಂದ ಎಲಿಮಿನೇಟ್ ಆಗಿಬಿಡುತ್ತಾರೆ.

‘ಬಿಗ್ ಬ್ರದರ್‌’ಗೆ ತನ್ನ ಪ್ರಜೆಗಳ ಮೇಲೆ ನಂಬಿಕೆ ಇರುವುದಿಲ್ಲ. ತನ್ನ ಸಾಮ್ರಾಜ್ಯದ ಪ್ರತಿಯೊಂದು ಮನೆಯಲ್ಲಿ, ಜನ ಸೇರುವ ಕಡೆಗಳಲ್ಲಿಯೂ ಟೆಲಿಸ್ಕ್ರೀನ್‌ಗಳನ್ನು ಅಳವಡಿಸುತ್ತಾನೆ. ‘ಬಿಗ್ ಬ್ರದರ್’ಗೆ ಅತೀವ ನಂಬಿಕೆಯುಳ್ಳವರನ್ನು ಜನರ ಮಧ್ಯೆ ಗೌಪ್ಯವಾಗಿ ಬಿಡಲಾಗುತ್ತದೆ. ಇವೆಲ್ಲವನ್ನು ನಾವು ‘ಬಿಗ್ ಬಾಸ್’ನಲ್ಲಿಯೂ ಗಮನಿಸಬಹುದು.

‘ಬಿಗ್ ಬ್ರದರ್‌’ನ ವ್ಯವಸ್ಥೆಯ ಪ್ರಕಾರ ತನ್ನ ಸಾಮ್ರಾಜ್ಯದಲ್ಲಿ ಯಾರೂ ಕೂಡ ಆರಾಮವಾಗಿ ಇರಬಾರದು. ಪ್ರಜೆಗಳು ಸ್ವತಂತ್ರವಾಗಿ ಜೀವನ ಸಾಗಿಸುವುದನ್ನು ಆತ ಬಯಸುವುದಿಲ್ಲ. ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ಭಾಷೆಯ ಕೋಶಮಾಲಿಕೆಯಲ್ಲಿ ಸ್ವಾತಂತ್ರ್ಯ ಮತ್ತು ವ್ಯಕ್ತಿಯಲ್ಲಿ ಆಸೆಗಳನ್ನು ಪೋಷಿಸುವಂತಹ ಪದಗಳನ್ನು ತೆಗೆದುಹಾಕುತ್ತಾನೆ. ‘ಥಾಟ್ ಪೊಲೀಸ್’ ಎಂಬ ಗೂಢಾಚಾರಿಗಳನ್ನು ಜನರ ನಡುವೆ ಬಿಡುತ್ತಾನೆ.

ಸಂಸಾರದಲ್ಲಿ ಸುಖ ಪಡೆಯಬಾರದೆಂಬ ಕಾರಣಕ್ಕೆ ಲೈಂಗಿಕ ಸಂಬಂಧವನ್ನು ಹೊಂದುವುದು ಘೋರ ಅಪರಾಧ ಎಂಬ ಆದೇಶ ಜಾರಿಯಾಗುತ್ತದೆ. ‘ಬಿಗ್ ಬ್ರದರ್’ನ ಪರಿಕಲ್ಪನೆ ಪ್ರಕಾರ ಪ್ರಜೆಗಳು ಸುಖ, ನೆಮ್ಮದಿಯೊಂದಿಗೆ ಜೀವನ ನಡೆಸಿದಾಗ ಆಸೆಗಳು ಮತ್ತು ಪಡೆಯುವ ತುಡಿತ ಜಾಸ್ತಿಯಾಗುತ್ತದೆ.

ಹೀಗೆ ‘ಬಿಗ್ ಬ್ರದರ್’ ಮತ್ತು ‘ಬಿಗ್ ಬಾಸ್’ ನಡುವೆ ತುಂಬಾ ಸಾಮ್ಯತೆಗಳಿವೆ. ಆತ್ಮಗೌರವ ಹಾಗೂ ವೈಯಕ್ತಿಕ ವಿಚಾರ–ಆಸೆಗಳನ್ನು ನೀಗಿಕೊಂಡು ವ್ಯಕ್ತಿಯೊಬ್ಬ ಹೇಗೆ ಜೀವನ ನಡೆಸಬಹುದು ಎನ್ನುವುದಕ್ಕೆ ಉತ್ತರದ ರೂಪದಲ್ಲಿ ಕಾದಂಬರಿಯನ್ನೂ ಕಾರ್ಯಕ್ರಮವನ್ನೂ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT