ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಗಳ ನಡುವೆ ಮುಗುಳುನಗೆ

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ರಾಜಮಾಚಿ!
ಪುಣೆಯಿಂದ ಮುಂಬೈಗೆ ಹೋಗುವಾಗಲೆಲ್ಲ, ಲೋನಾವಾಲ ಬಳಿ ‘ಈಚಾಕ್ವಾಚ ಪಿರಮಿಡ್’ ಥರ ಇರುವ ಈ ಪರ್ವತ ಕಣ್ಣಿಗೆ ಬೀಳುತ್ತಲೇ ಇತ್ತು. ಬೋಘಾಟ್‌ ಘಟ್ಟ ಪ್ರದೇಶದಲ್ಲಿ ಇರುವ ಈ ಪರ್ವತದ ತುದಿಯಲ್ಲಿ ಎರಡು ಕೋಟೆಗಳಿವೆ. ಆ ಕೋಟೆಗಳೇನೂ ಹೆದ್ದಾರಿಯಿಂದ ರಸ್ತೆಗೆ ಕಾಣುವುದಿಲ್ಲ.
ಮಳೆಗಾಲದಲ್ಲಂತೂ ಆ ಪರ್ವತವೇ ಮಂಜಿನ ಮೋಡದ ನಡುವೆ ಹುದುಗಿ ಕುಳಿತಿರುತ್ತಿತ್ತು.

ಬೇಸಿಗೆಯಲ್ಲಿಯೂ ಶುಭ್ರ ನೀಲಾಕಾಶದ ಹಿನ್ನೆಲೆಯಲ್ಲಿ ಕಂದುಬಣ್ಣದಲ್ಲಿ ಕಾಣುವ ರಾಜಮಾಚಿ ಎಂಥವರನ್ನೂ ಸೆಳೆಯುತ್ತದೆ. ಅಲ್ಲಿಇಲ್ಲಿ ಈ ಪರ್ವತದ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಪ್ರತಿ ಬಾರಿ ಬೋಘಾಟ್ ಘಟ್ಟವನ್ನು ಹಾದುಹೋಗುವಾಗ ಈ ಪರ್ವತವನ್ನು ಒಮ್ಮೆಯಾದರೂ ಹತ್ತಲೇಬೇಕು ಅನಿಸುತ್ತಿತ್ತು. ಅಂತೂ ಅನುಭವಿಗಳ ತಂಡದೊಂದಿಗೆ ಅದನ್ನು ಹತ್ತುವ ಅವಕಾಶ ಬಂದೊದಗಿತು.

‘ರಾಜಮಾಚಿ ಪರ್ವತ ಲೋನಾವಾಲ ಮತ್ತು ಕಾಂದಾಲ ನಗರಗಳ ಮಧ್ಯೆ ಇದೆ. ಎರಡು ಕಡೆಯಿಂದ ಇದನ್ನು ಹತ್ತಬಹುದು. ಯಾವ ಕಡೆಯಿಂದ ಹತ್ತಿದರೂ ಒಟ್ಟು ಚಾರಣದ ದೂರ ಸರಿಸುಮಾರು 14 ಕಿ.ಮೀ. ಕಾಂದಾಲ ನಗರದ ಮೂಲಕ ಕೋಂದಾಣೆ ಹಳ್ಳಿ ತಲುಪಿ ಅಲ್ಲಿಂದ ರಾಜಮಾಚಿ ಮುಟ್ಟಬಹುದು. ಇದು ಹತ್ತಿರದ ದಾರಿ ಆದರೂ ಹೆಚ್ಚು ಶ್ರಮ ಪಡಬೇಕು. ಲೋನಾವಾಲ ಮೂಲಕ ಹೋಗುವುದು ಸುಲಭದ ದಾರಿ. ಆದರೆ ಅದು ದೂರದ ಪಯಣ’ – ಪುಣೆಯಿಂದ ರಾಜಮಾಚಿಯತ್ತ ಬಸ್‌ ಹತ್ತಿದಾಗ ಚಾರಣದ ಮುಂದಾಳು ಚೇತನ್‌ ಹೇಳಿದ ಮಾತುಗಳಿವು.

ನನಗಿನ್ನೂ ಆಗ ಚಾರಣ ಹೊಸತು. ‘ಆ ಬೆಟ್ಟವನ್ನು ಹತ್ತುವುದು ಅಷ್ಟು ಕಷ್ಟವಾ’ ಎಂದು ಹುಂಬತನದಲ್ಲಿ ಗೊಣಗಿಕೊಂಡಿದ್ದೆ. ಕಾಂದಾಲ ತಲುಪಿದಾಗ ಅದಾಗಲೇ ಮಧ್ಯಾಹ್ನ ಕಳೆದಿತ್ತು. ಧೋ ಎಂದು ಮಳೆ ಸುರಿಯುತ್ತಿತ್ತು.

ಕಾಂದಾಲ ಬಳಿ ದಾರಿಹೋಕರೊಬ್ಬರನ್ನು ತಡೆದು, ಕೋಂದಾಣೆ ಹಳ್ಳಿಗೆ ಹೋಗುವುದು ಹೇಗೆ ಎಂದು ಕೇಳಿದೆವು. ಆ ವ್ಯಕ್ತಿ, ‘ಅಲ್ಲಿ ಎಲ್ಲಿಗೆ ಹೋಗಬೇಕು’ ಎಂದು ಕೇಳಿದರು. ‘ರಾಜಮಾಚಿಗೆ ಹೋಗಬೇಕು’ ಎಂದರು ಚೇತನ್‌. ಆ ವ್ಯಕ್ತಿ, ‘ಈ ಮಳೆಯಲ್ಲಾ?’ ಎಂದರು. ನಮ್ಮನ್ನು ನಖಶಿಖಾಂತ ನೋಡಿ, ‘ಮನೆ ಕಡೆ ಹೊರಡಿ‘ ಅಂದರು. ಒಂದ್ಹತ್ತು ನಿಮಿಷ ಆಗುವಷ್ಟರಲ್ಲಿ ಸೈಕಲ್‌ ಏರಿ ಬರುತ್ತಿದ್ದ ಶಾಲಾ ಮಕ್ಕಳ ಗುಂಪು ಕೋಂದಾಣೆ ಕಡೆ ಹೋಗುವ ದಾರಿ ತೋರಿಸಿತು.

ಸುರಿಯುತ್ತಿದ್ದ ಮಳೆಯಲ್ಲೇ ಹದಿನೈದೂ ಜನ ಅತ್ತ ಹೆಜ್ಜೆ ಹಾಕತೊಡಗಿದೆವು. ತೋಯ್ದು ಭಾರವಾಗಿದ್ದ ಷೂಗಳನ್ನು ಎಳೆಯುತ್ತಲೇ ಕೋಂದಾಣೆ ಮುಟ್ಟುವಷ್ಟರಲ್ಲಿ ರಾತ್ರಿಯಾಗಿತ್ತು. ಎಲ್ಲರೂ ಅಳಿದುಳಿದ ತಿಂಡಿ ತಿಂದು ಅಲ್ಲಿದ್ದ ದೇವಾಲಯವೊಂದರ ಆವರಣದಲ್ಲಿ ಮಲಗಿದೆವು. ಮೈಕೈ ನೋವಾಗಿದ್ದರಿಂದ ನೆಲಕ್ಕೊರಗಿದ ತಕ್ಷಣವೇ ನಿದ್ದೆ ಬರಬೇಕಿತ್ತು. ಆದರೆ ಸಾವರಿಸಿಕೊಳ್ಳಲೂ ಅವಕಾಶ ನೀಡದಂತೆ ಸೊಳ್ಳೆಗಳು ಕಚ್ಚತೊಡಗಿದಾಗ ನಿದ್ರಾದೇವಿ ನಾವು ಹತ್ತಿಬಂದಿದ್ದ ಘಟ್ಟವನ್ನು ಇಳಿದು ಓಡಿಹೋದಳು.

ಮಳೆ ಬೆಳಗಿನ ದಾರಿಯಲ್ಲಿ...
ಬೆಳಿಗ್ಗೆ ಐದಕ್ಕೇ ನಮ್ಮ ಚಾರಣ ಪುನರಾರಂಭವಾಗಿತ್ತು. ಮಳೆ ನಿಂತಂತಿದ್ದರೂ, ಜಡಿ ಇದ್ದೇ ಇತ್ತು. ಮರದ ಎಲೆಗಳ ಮೇಲಿಂದ ನೆಲಕ್ಕೆ ಬೀಳುವ ಹನಿಗಳ ಸದ್ದಿನ ಹೊರತಾಗಿ ಬೇರೇನೂ ಕಿವಿಗೆ ಬೀಳುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ಮೈ ಕೊರೆಯುವ ತಂಗಾಳಿ. ಯಾರೂ ಮಾತಾಡದೆ ಹೆಜ್ಜೆ ಇಡುತ್ತಿದ್ದೆವು. ಗುಂಪಿನಲ್ಲಿ ಇದ್ದವರಲ್ಲಿ ಹಲವರಿಗೆ ಇದು ಮೊದಲ ಚಾರಣ. ಆದ್ದರಿಂದ ದಾರಿ ದೀರ್ಘವಾಗುತ್ತಿತ್ತು. ಒಂದು ತಾಸು ಕಳೆಯುವಷ್ಟರಲ್ಲಿ ಬೆಳಕು ಹರಿದಿತ್ತು. ಪರ್ವತದ ಹಿಂಭಾಗದಲ್ಲಿ ಸೂರ್ಯ ಇದ್ದುದ್ದರಿಂದ, ಬೆಳಕು ಹರಿದರೂ ಬಿಸಿಲು ಬಂದಿರಲಿಲ್ಲ.

ಇನ್ನೂ ಒಂದರ್ಧ ಗಂಟೆ ಕಳೆಯುವಷ್ಟರಲ್ಲಿ ಬೆಳಕೂ ಬಂತು, ಮಂಜೂ ಸರಿದಿತ್ತು. ಆಗ ಉಂಟಾದ ಆನಂದವನ್ನು ಹೇಗೆ ಬಣ್ಣಿಸುವುದು? ಗೆಳೆಯ ಭಗತ್‌ ಜೋರಾಗಿ ಕೂಗಲು ಆರಂಭಿಸಿದ. ನನಗೂ ಕೂಗಬೇಕು ಅನಿಸುತ್ತಿತ್ತು.

ಹಸಿರು ಮಡುಗಟ್ಟಿ ನಿಂತಿದೆಯೇನೋ ಎಂಬಂತೆ ಎಲ್ಲಿ ನೋಡಿದರೂ ಹಸಿರು ಹಸಿರು ಹಸಿರು. ಗಿಡಗಳಂತೂ ಹಸಿರನ್ನು ಮುಕ್ಕಳಿಸುತ್ತಿವೆ. ಅಲ್ಲಿದ್ದದ್ದು ಮೂರೇ ಬಣ್ಣ. ಒಂದು ಹಸಿರು, ಇನ್ನೊಂದು ನಾವು ಹೆಜ್ಜೆ ಊರುತ್ತಿದ್ದ ಕಾಲುಹಾದಿಯ ಕಂದು, ಮತ್ತೊಂದು ಮಂಜು ಮುಸುಕಿದ ಆಗಸದ ಬಿಳಿ.

ಬೆಳಕು ಬಿದ್ದ ತಕ್ಷಣ ಕಣ್ಣಮುಂದೆ ಬಂದ ಈ ದೃಶ್ಯಗಳು ನಮ್ಮಲ್ಲಿ ಉತ್ಸಾಹ ಹೆಚ್ಚಿಸಿದ್ದವು. ಹಾದಿಯ ಎಡಮಗ್ಗುಲಲ್ಲಿದ್ದ ಬಂಡೆಗಳ ಮೇಲಿಂದ ಬೀಳುತ್ತಿದ್ದ ಸಣ್ಣ ಜಲಪಾತಗಳು ಮಳೆಹನಿಯ ಹಾಡಿಗೆ ಹಿಮ್ಮೇಳ ನೀಡುತ್ತಿದ್ದವು. ಐದೈದು ನಿಮಿಷಕ್ಕೂ ಕಣ್ಣಿಗೆ ಬೀಳುತ್ತಿದ್ದ ಒಂದೊಂದು ಜಲಧಾರೆ. ಮತ್ತೆ ಹತ್ತು ನಿಮಿಷ ಕಳೆಯುವಷ್ಟರಲ್ಲಿ ನಮ್ಮ ಹಾದಿಯ ಎದುರಿಗೇ ಒಂದು ಜಲಪಾತ! ಆದರೆ ಅದು ಬರಿ ಜಲಪಾತವಲ್ಲ. ಅದರ ಹಿಂದೆ ಏನೋ ಇದೆ... ‘ಅಲ್ಲಿ ಬೇರೇನೋ ಇದೆ. ಹತ್ತಿರದಿಂದ ನೋಡಿ ಆನಂದಿಸುವಿರಂತೆ ಬನ್ನಿ’ ಎಂದು ಚೇತನ್ ಮತ್ತಷ್ಟು ಕುತೂಹಲ ಮೂಡಿಸಿದರು.

ಜಲಪಾತದ ಸೆರಗಲ್ಲೊಂದು ಗುಹೆ
ಹತ್ತಿರ ಹೋದೆವು. ನೀರು ಧುಮುಕುತ್ತಿದ್ದ ಬಂಡೆ ತೀರಾ ದೊಡ್ಡದು. ಅದರ ಮೇಲೆ ಮಣ್ಣೇ ಇಲ್ಲ. ಬಂಡೆಯ ಮೇಲೆ ಆವಚಿ ಬೆಳೆದು ಅದು ಹಸಿರಾಗಿ ಕಾಣುತ್ತಿದೆ. ಅದೇ ಬಂಡೆಯನ್ನು ಕೊರೆದು ಗುಹೆ ಮಾಡಲಾಗಿದೆ. ಎರಕ ಹೊಯ್ದಷ್ಟು ಅಚ್ಚುಕಟ್ಟಾಗಿ ಬಂಡೆ ಕೊರೆದು, ಗುಹೆಯನ್ನು ಚಿತ್ತಾರ ಮಾಡಲಾಗಿದೆ. ಅದನ್ನು ನೋಡುತ್ತಾ ನಮಗೆ ಮಾತೇ ಬರದಾಗಿತ್ತು. ಅಷ್ಟು ದೊಡ್ಡದಾಗಿದೆ ಗುಹೆ!

ಅದು ಬೌದ್ಧ ಸನ್ಯಾಸಿಗಳು ಇದ್ದ ಗುಹೆ ಕೋಂದಾಣ. ಎರಡು ಸಾವಿರ ವರ್ಷಗಳಷ್ಟು ಹಿಂದಿನದು. ಕ್ರಿ.ಶ.1600ರಲ್ಲಿ ಭಾರಿ ಭೂಕಂಪನದಿಂದಾಗಿ ಹೊರಭಾಗ ಕೆಲವೆಡೆ ಹಾಳಾಗಿದ್ದನ್ನು ಹೊರತುಪಡಿಸಿದರೆ, ಗುಹೆ ಇನ್ನೂ ಸುಸ್ಥಿತಿಯಲ್ಲಿದೆ. ಒಳಗಿನ ಕಂಬಗಳಂತೂ ಎರಡಾಳೆತ್ತರ ಇವೆ. ಬುದ್ಧನ ಪ್ರತಿಮೆ ಇವೆಲ್ಲಕ್ಕೂ ಮುಕುಟವಿಟ್ಟಂತೆ ಇದೆ. ಗುಹೆ ಒಳಗೆ ದಿವ್ಯ ಶಾಂತಿ.

ಹೊರಗೆ ಸುರಿಯುತ್ತಿದ್ದ ಮಳೆ, ಧುಮ್ಮಿಕ್ಕುವ ಜಲಧಾರೆ, ಕಣ್ಣಿಗೆ ಅಪ್ಪಳಿಸುವ ಹಸಿರು! ನಾವೆಲ್ಲ ತಲೆ ಎತ್ತಿ, ಬಾಯಿಬಿಟ್ಟುಕೊಂಡು ಬೃಹತ್‌ ಕಂಬಗಳನ್ನೂ ಬುದ್ಧನ ಪ್ರತಿಮೆಯನ್ನೂ  ನೋಡುತ್ತಿದ್ದೆವು. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಗುಹೆಯಿಂದ ಹೊರಬಂದೆವು. ಗುಹೆಯೊಳಗೆ ಕಳೆದುಹೋಗಿದ್ದ ಹಸಿರು ಪ್ರಪಂಚ ಮತ್ತೆ ಎದುರಾಯಿತು.

ದಾರಿ ಮರೆತ ಪೀಕಲಾಟ
ಗುಹೆಯ ಮಗ್ಗುಲಲ್ಲಿದ್ದ ಹಾದಿಯಲ್ಲಿ ಚಾರಣ ಮುಂದುವರೆಸಬೇಕಿತ್ತು. ಗುಹೆಯ ಬಗ್ಗೆ ಮಾತನಾಡುತ್ತಲೇ ಎಲ್ಲರೂ ಪರ್ವತ ಏರುತ್ತಿದ್ದೆವು. ಒಂದು ನೂರು ಮೀಟರ್‌ ಹೋಗುವಷ್ಟರಲ್ಲಿ ಕವಲುದಾರಿ ಎದುರಾಯಿತು. ಒಂದು ದಾರಿ ಬೆಟ್ಟದ ಮೇಲಕ್ಕೆ ಹೋಗುತ್ತಿದ್ದರೆ, ಮತ್ತೊಂದು ಇಳಿಜಾರಿನತ್ತ ಹೋಗುತ್ತಿತ್ತು. ನಾವು ಏರುದಾರಿಯನ್ನೇ ಹಿಡಿದೆವು. ಮುಂದೆ ಹೋದಂತೆಲ್ಲಾ ದಾರಿ ಕಡಿದಾಗುತ್ತಾ ಹೋಯಿತು. ಮಳೆ ನಿಂತಿತ್ತು, ನೆಲ ಜಾರುತ್ತಿತ್ತು. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಿತ್ತು. ಎಷ್ಟೋ ಕಡೆ ನೆಲಕ್ಕೆ ಕೈಊರಿ ಮುಂದುವರೆದೆವು.

ಕೊನೆಗೂ ಕಡಿದಾಗಿದ್ದ ಏರನ್ನು ಹತ್ತಿದೆವು. ಅಲ್ಲಿಂದ ಮುಂದಕ್ಕೆ ಕಡಿದಾಗಿದ್ದರೂ ಸುಲಭವಾಗಿತ್ತು ಹಾದಿ. ಆಳೆತ್ತರ ಬೆಳೆದಿದ್ದ ಹುಲ್ಲು, ಗಿಡಗಳ ಮಧ್ಯೆ ನಡೆಯುತ್ತಿದ್ದೆವು. ಹಸಿರಿನ ಹೊರತಾಗಿ ಈಗ ಕಾಣುತ್ತಿದ್ದುದು ತಲೆಯ ಮೇಲಿನ ಆಕಾಶ ಮಾತ್ರ. ಮತ್ತೆಲ್ಲೋ ದೂರದಲ್ಲಿ ಬೆಟ್ಟದ ತುದಿ ಕಾಣುತ್ತಿತ್ತು, ಅದೂ ಹಸಿರು ಹೊದ್ದು. ಹೀಗೆ ನಡೆಯುತ್ತಿದ್ದಾಗಲೇ ಚೇತನ್‌ ನಿಂತರು. ರೈಲು ಬೋಗಿಗಳಂತೆ ಅಂಟಿಕೊಂಡು ಹೆಜ್ಜೆಹಾಕುತ್ತಿದ್ದ ನಾವೆಲ್ಲಾ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡು ನಿಂತೆವು. ನೋಡಿದರೆ ನಮ್ಮೆದುರಿನ ಹಾದಿ ಮುಗಿದಿದೆ. ಅದು ಡೆಡ್‌ಎಂಡ್‌!

ಕಾಲುಹಾದಿಯ ಮಧ್ಯೆ ನೆಲದಿಂದ ಲಂಬವಾಗಿ ಬಂಡೆ ಎದ್ದು ನಿಂತಿದೆ. ಅದರ ತುದಿ ಮಂಜಿನಲ್ಲಿ ಮಸುಕಾಗಿದೆ. ಹಸಿರು ಹೊದ್ದಿದ್ದರಿಂದಲೋ ಏನೋ ಅದು ದೂರದಿಂದಲೇ ನಮಗೆ ಗೋಚರಿಸಿಲ್ಲ. ಅಕ್ಕಪಕ್ಕ ಹುಡುಕಾಡಿದರೂ ಬೇರೆ ದಾರಿ ಸಿಗಲಿಲ್ಲ. ಹಾದಿ ತಪ್ಪಿದ್ದೇವೆಂದು ದೃಢವಾಯಿತು. ಇಡೀ ಚಾರಣದಲ್ಲಿ ಎದುರಾದದ್ದು ಒಂದೇ ಕಾಲುದಾರಿ, ಅದು ಇಳಿಜಾರಿನ ಕಡೆಗೆ ಹೋಗಿತ್ತು. ಬಹುಶಃ ಅದೇ ಸರಿಯಾದ ದಾರಿ ಇದ್ದಿರಬೇಕು. ಮತ್ತೆ ಅಲ್ಲಿಗೇ ಹಿಂತಿರುಗಿ ಹೋಗೋಣ ಅಂದರು ಚೇತನ್‌. ನಮಗಂತೂ ಉತ್ಸಾಹವೆಲ್ಲಾ ಇಳಿದುಹೋಯಿತು.

ಒಂದೂವರೆ ತಾಸು ಹತ್ತಿಬಂದಿದ್ದ ದಾರಿಯನ್ನು ಇಳಿಯಬೇಕಿತ್ತು. ಅಷ್ಟಕ್ಕೂ ಇಲ್ಲಿಯವರೆಗೆ ದಾರಿ ಮಾಡಿದವರು ಯಾರು ಎಂದು ಯೋಚಿಸತೊಡಗಿದೆ. ಬಹುಶಃ ಬಂಡೆಯ ಮಗ್ಗುಲಲ್ಲೇ ದಾರಿ ಮುಂದುವರೆಯಬಹುದೇನೊ... ಆದರೆ ಹುಡುಕುವ ತಾಳ್ಮೆ ನಮ್ಮಲ್ಲಿರಲಿಲ್ಲ. ಹತ್ತಿದ್ದಕ್ಕಿಂತ ಇಳಿಯುವುದು ಹೆಚ್ಚು ಕಷ್ಟವಾಗಿತ್ತು. ಅಂತೂ ಮುಂದಿನ ಒಂದು ಗಂಟೆಯಲ್ಲಿ ಕವಲುದಾರಿ ತಲುಪಿದ್ದೆವು. ಅಲ್ಲೇ ಕುಳಿತು ರೆಡಿಮೇಡ್‌ ಉಪಾಹಾರ ಹೊಟ್ಟೆಗಿಳಿಸಿದೆವು.

ಕವಲುದಾರಿಯಲ್ಲೇ ಒಂದು ಕೈಮರ ಇತ್ತು. ಅದೇನು ಸೂಚನಾಫಲಕ ಅಲ್ಲ – ಒಂದು ಷೂ ಅನ್ನು ಮರಕ್ಕೆ ನೇರವಾಗಿ ಕಟ್ಟಿ, ಅದಕ್ಕೆ ಅಡ್ಡಲಾಗಿ ನೀರಿನ ಬಾಟಲಿಯನ್ನು ಕಟ್ಟಲಾಗಿತ್ತು. ಬಾಟಲಿಯ ಮೂತಿ ದಾರಿಯ ಕಡೆಗಿತ್ತು. ಅದನ್ನು ಆಗಲೇ ತಾಳ್ಮೆಯಿಂದ ಗಮನಿಸಿದ್ದರೆ ಮೂರು ತಾಸು ಉಳಿಯುತ್ತಿತ್ತು. ನಮ್ಮ ಉತ್ಸಾಹವೆಲ್ಲಾ ಬತ್ತಿಹೋಗಿತ್ತು. ಬೇಗ ತುದಿ ತಲುಪಿದರೆ ಸಾಕು ಎಂದು ಹೆಜ್ಜೆ ಹಾಕತೊಡಗಿದೆವು. ಮುಂದಿನ ಅರ್ಧ ಗಂಟೆಯಲ್ಲಿ ಒಂದು ಹಳ್ಳಿ ಸಿಕ್ಕಿತು. ಅದೇ ರಾಜಮಾಚಿ. ಅದನ್ನು ‘ಉಧೇವಾಡಿ’ ಎಂದೂ ಕರೆಯುತ್ತಾರೆ.

ಒಂದು ಮುಗಿದರೆ ಮತ್ತೆರಡು
ರಾಜಮಾಚಿ ತಲುಪಿದೆವು ಎಂದು ಎಲ್ಲರೂ ಖುಷಿಪಟ್ಟೆವು. ಆದರೆ ಒಂದೆರಡು ನಿಮಿಷದಲ್ಲೇ ನಮ್ಮ ಖುಷಿಯೆಲ್ಲಾ ಕರಗಿಹೋಯಿತು. ಹಸಿರಿನ ಚಪ್ಪರದ ಕೆಳಗಿಂದ ಬಯಲಿಗೆ ಬಂದ ನಮ್ಮ ಎದುರು ಎರಡು ಬೆಟ್ಟಗಳು ಎದ್ದುನಿಂತಿದ್ದವು. ‘ಅವೆರಡನ್ನೂ ಹತ್ತಿಳಿದರೆ ಮಾತ್ರ ರಾಜಮಾಚಿ ಚಾರಣ ಪೂರ್ತಿ ಆಗುತ್ತದೆ’ ಎಂದು ಊರಿನ ಹುಡುಗರು ನಮ್ಮ ಉತ್ಸಾಹಕ್ಕೆ ತಣ್ಣೀರು ಎರಚಿದರು.

ಮೊದಲು ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ಹೋಟೆಲ್ ವಿಚಾರಿಸಿದೆವು. ಅಲ್ಲಿದ್ದದ್ದು ಹೋಟೆಲ್‌ ಅಲ್ಲ, ಬದಲಿಗೆ ಮನೆಯವರೇ ಚಾರಣಿಗರಿಗೆ ಅಡುಗೆ ಮಾಡಿಕೊಡುತ್ತಿದ್ದರು. ಅಡುಗೆ ನಮ್ಮ ತಟ್ಟೆಗೆ ಬರಲು ಇನ್ನೂ ಒಂದು ಗಂಟೆ ಬೇಕಿತ್ತು. ಹಳ್ಳಿಯ ಹೊರವಲಯದಲ್ಲಿದ್ದ ಉದಯಸಾಗರ ಕೆರೆಯತ್ತ ಹೊರಟೆವು. ದಟ್ಟ ಕಾಡನ್ನು ಹಾದುಹೋದ ನಂತರವೇ ಈ ಕೆರೆ ಸಿಕ್ಕಿದ್ದು.

‘ರಾಜ್‌ಪುರಿ ಮಾಮಲೆದಾರನಾಗಿದ್ದ ರಾಮರಾವ್ ನಾರಾಯಣ್ ದೇಶ್‌ಮುಖ ಇದನ್ನು ಕಟ್ಟಿಸಿದ್ದ’ ಎಂದು ಕೆರೆಯ ದಂಡೆಯ ಮೇಲಿರುವ ಶಾಸನದಲ್ಲಿದೆ. ಶಾಸನದ ಪ್ರಕಾರ ಕೆರೆಯನ್ನು ನಿರ್ಮಿಸಿದ್ದು 18ನೇ ಶತಮಾನದ ಆರಂಭದಲ್ಲಿ. ಕೆರೆಯ ಒಂದು ಬದಿಯಲ್ಲಿ ಶಿವನ ದೇವಾಲಯವಿದೆ. ಕೆರೆಯ ನೀರಿನಲ್ಲಿ ಕೈಕಾಲು ತೊಳೆದುಕೊಂಡು ಊರಿಗೆ ವಾಪಸ್‌ ಆದೆವು. ಊಟ ತಯಾರಿತ್ತು. ಹಬೆಯಾಡುತ್ತಿದ್ದ ಅನ್ನ–ದಾಲ್‌ ಹೊಟ್ಟೆಗಿಳಿಸಿದೆವು. ತಂಡದ ಹತ್ತು ಮಂದಿ ಮಲಗಿಯೇ ಬಿಟ್ಟಿದ್ದರು. ಉಳಿದ ಐದು ಮಂದಿ ಎದುರಿಗಿದ್ದ ಎರಡು ಬೆಟ್ಟಗಳನ್ನು ಹತ್ತಿಳಿಯಲು ನಿರ್ಧರಿಸಿದೆವು.

ಇವೆರಡೂ ಅವಳಿ ಬೆಟ್ಟಗಳು. ಚತುರ್ಭುಜಾಕೃತಿಯ ಬಂಡೆಯ ಮೇಲೆ ಎರಡು ಉಡಗಳು ಅಕ್ಕಪಕ್ಕ ಕುಳಿತಂತೆ ಇವೆರಡು ಇವೆ. ಎರಡರ ರಚನೆಯೂ ಒಂದೇ ರೀತಿ ಇದೆ. ಎತ್ತರವೂ ಸರಿಸುಮಾರು ಒಂದೇ. ಎರಡರ ಮೇಲೂ ಒಂದೊಂದು ಕೋಟೆ ಇದೆ.

ಊರಿನ ಎಡಮಗ್ಗುಲಿನಲ್ಲಿ ಇರುವುದು ಮನರಂಜನ್ ಕೋಟೆ. ಮೊದಲು ಅದನ್ನು ಹತ್ತಿದೆವು. ಮೆಟ್ಟಿಲುಗಳಿದ್ದುದ್ದರಿಂದ ಹತ್ತುವುದೇನೂ ಕಷ್ಟವಾಗಲಿಲ್ಲ. ಕೋಟೆಯ ಸಾಕಷ್ಟು ಭಾಗ ಹಾಳಾಗಿತ್ತು. ಕಲ್ಲುಗಳು, ದ್ವಾರಗಳು ಬಿದ್ದುಹೋಗಿದ್ದವು. ಬೆಟ್ಟದ ತುದಿಯಲ್ಲಿದ್ದ ಬುರುಜುಗಳನ್ನು ಏರಿ ಸಹ್ಯಾದ್ರಿ ಪರ್ವತ ಪಂಕ್ತಿಗಳನ್ನು ಕಣ್ತುಂಬಿಕೊಂಡೆವು. ಅರ್ಧ ಗಂಟೆಯಲ್ಲಿ ಮನರಂಜನ್ ಕೋಟೆಯನ್ನು ಹತ್ತಿಳಿದಾಗಿತ್ತು.

ಊರಿನ ಬಲಮಗ್ಗುಲಿನಲ್ಲಿದ್ದ ಶ್ರೀವರ್ಧನ ಕೋಟೆ ಇರುವ ಬೆಟ್ಟದತ್ತ ಹೆಜ್ಜೆ ಹಾಕಿದೆವು. ದೂರದಿಂದ ಕಂಡಷ್ಟೇನೂ ಇದು ಸುಲಭವಾಗಿರಲಿಲ್ಲ. ಮೆಟ್ಟಿಲು, ಹಾದಿ ಎಲ್ಲವೂ ಕಡಿದಾಗಿತ್ತು. ತುಸು ಪ್ರಯಾಸದಿಂದಲೇ ಅರ್ಧ ಗಂಟೆಯಲ್ಲಿ ಶ್ರೀವರ್ಧನ ಕೋಟೆ ಏರಿದ್ದೆವು. ಈ ಕೋಟೆಯಿಂದ ಕಾಣುವ ದೃಶ್ಯಕ್ಕೆ ಹೋಲಿಸಿಕೊಂಡರೆ, ಮನರಂಜನ ಕೋಟೆ ಮೇಲಿಂದ ನೋಡಿದ್ದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವಂತಿಲ್ಲ.

ಕೋಟೆಯ ಪೂರ್ವದ ತುದಿಯಲ್ಲಿ ನಿಂತರೆ ಅಲ್ಲಿಂದ ‘ಹಾರ್ಸ್‌ ಷೂ ಫಾಲ್ಸ್‌’ ಕಾಣಿಸುತ್ತದೆ. ಬರಿ ಜಲಪಾತವಲ್ಲ, ನೀರು ನೆಲಕ್ಕೆ ಧುಮ್ಮಿಕ್ಕಿ ಎರಡು ಕವಲಾಗಿ ರಾಜಮಾಚಿ ಪರ್ವತವನ್ನು ಎರಡೂ ಬದಿಯಿಂದ ಬಳಸಿಕೊಂಡು ಬರುವುದು ಕಾಣಿಸುತ್ತದೆ. ನಮಗಂತೂ ಅದನ್ನು ನೋಡಿ ಹುಚ್ಚೇ ಹಿಡಿದಂತಾಗಿತ್ತು. ಆದರೆ ಒಂದೆರಡು ಫೋಟೊ ಕ್ಲಿಕ್ಕಿಸುವಷ್ಟರಲ್ಲೇ ಮಂಜು ಮುಸುಕಿ ಜಲಪಾತ, ಅದರ ಹಿಂದಿದ್ದ ಪರ್ವತಗಳ ಸಾಲು ಮರೆಯಾಯಿತು. ಖಾಲಿಯಾಗಿದ್ದ ಉತ್ಸಾಹವನ್ನು ತುಂಬಿಕೊಂಡು ಊರಿನತ್ತ ಹೆಜ್ಜೆ ಹಾಕಿದೆವು. ಅದಾಗಲೇ ಸಂಜೆಯಾಗಿತ್ತು.

ರಾತ್ರಿ ಬಿಡಾರ ಹೂಡಿದೆವು. ಆದರೆ, ಮಳೆ ಬರುತ್ತಿದ್ದುದ್ದರಿಂದ ಊರವರ ಮನೆ–ದೇವಾಲಯವನ್ನು ಆಶ್ರಯಿಸಬೇಕಾಯಿತು. ಕೋಟೆಗಳಾಚೆ ಕಂಡ ದೃಶ್ಯವನ್ನು ಕಾಣದವರಿಗೆ ವರ್ಣಿಸುತ್ತಾ, ಹೊಟ್ಟೆ ಉರಿಸುತ್ತಾ ನಿದ್ದೆಗೆ ಜಾರಿದೆವು. ಆಗ ನಮ್ಮ ಕನಸಿನಲ್ಲಿ ಕಾಣಿಸಿದ್ದು – ಬೆಳಿಗ್ಗೆ ಎದ್ದು ಲೋನಾವಾಲದತ್ತ ಹಾಕಬೇಕಿದ್ದ 12 ಕಿ.ಮೀ. ದೂರದ ಹಾದಿ.

ನಮ್ಮ ಸಕಲೇಶಪುರದ ಹೊರವಲಯದಲ್ಲಿರುವ ಮಂಜಿರಾಬಾದ್‌ ಕೋಟೆಯನ್ನು ರಾಜಮಾಚಿ ನೆನಪಿಸುತ್ತದೆ. ಇದೂ ಸಹ ಹೆದ್ದಾರಿಯ ಮಗ್ಗುಲಲ್ಲೇ ಇದೆ. ಆದರೆ ಘಟ್ಟ ತೀರಾ ಕಡಿದಾಗಿದ್ದು, ಏರಲು ತುಸು ಕಷ್ಟಪಡಬೇಕು. ರಾಜಮಾಚಿಯಲ್ಲಿರುವ ಮನರಂಜನ ಮತ್ತು ಶ್ರೀವರ್ಧನ ಕೋಟೆಗಳನ್ನು ಮರಾಠರ ಕಾಲದ ಹೆದ್ದಾರಿ ಕಾವಲಿಗೆ ನಿರ್ಮಿಸಲಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಲೋನಾವಾಲದಿಂದ ಬೈಕ್ ಮತ್ತು ಜೀಪ್‌ಗಳಲ್ಲಿ ರಾಜಮಾಚಿಯನ್ನು ತಲುಪಬಹುದಾದರೂ, ಮಳೆಗಾಲದಲ್ಲಿ ಈ ಹಾದಿಯಲ್ಲಿ ಇಡೀ ಬೈಕ್‌ಗಳೇ ಹುದುಗಿಹೋಗುವಷ್ಟು ಕೆಸರು ತುಂಬಿರುತ್ತದೆ.

ಚಾರಣಕ್ಕಿದು ಪ್ರಶಸ್ತ ಸಮಯ
ರಾಜಮಾಚಿ ಸಹ್ಯಾದ್ರಿ ಶ್ರೇಣಿಯಲ್ಲಿ ಇರುವುದರಿಂದ ಮಳೆಗಾಲದಲ್ಲಿ ಅಲ್ಲಿ ಹಸಿರು ಮುಕ್ಕಳಿಸಿರುತ್ತದೆ. ಚಳಿಗಾಲದಲ್ಲಿ ಎಲೆಗಳು ಉದುರಿ, ಕಾಡು ಹೊಂಬಣ್ಣಕ್ಕೆ ತಿರುಗಿರುತ್ತದೆ. ಬೇಸಿಗೆಯಲ್ಲಂತೂ ಬಿಸಿಲು ನೆತ್ತಿ ಸುಡುವಂತಿರುತ್ತದೆ. ಹಾಗಾಗಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಚಾರಣ ಕೈಗೊಳ್ಳುವುದು ಹೆಚ್ಚು ಸೂಕ್ತ.

ಲೋನಾವಾಲ ಕಡೆಯಿಂದ ಚಾರಣ ಆರಂಭಿಸಿದರೆ, ರಾಜಮಾಚಿ ಮುಟ್ಟುವವರೆಗೂ ಮಧ್ಯದಲ್ಲಿ ಎಲ್ಲಿಯಾದರೂ ಟೆಂಟು ಹೊಡೆದು ರಾತ್ರಿ ಕಳೆಯಬಹುದು. ಕಾಂದಾಲ ಮೂಲಕವೂ ರಾಜಮಾಚಿ ತಲುಪಬಹುದು. ಆ ದಾರಿಯಲ್ಲಿ, ಕಾಂದಾಲ ಮತ್ತು ಕೋಂದಾಣೆ ಹಳ್ಳಿಗಳಲ್ಲಿ ಬಿಡಾರ ಹೂಡಬಹುದು. ಕಾಡಿನಲ್ಲಿ ಟೆಂಟು ಹಾಕಿದರೆ ಜಿಗಣೆಗಳ ದಾಳಿ ಎದುರಿಸಬೇಕಾಗುತ್ತದೆ.

ಕೋಟೆಗಳ ತಪ್ಪಲಿನಲ್ಲಿರುವ ಉಧೇವಾಡಿ ಹಳ್ಳಿಯಲ್ಲೂ ತಂಗಬಹುದು. ಎಲ್ಲಿಯೂ ಊಟ–ತಿಂಡಿ ಸಿದ್ಧವಾಗಿ ಇರುವುದಿಲ್ಲ. ಆ ಸ್ಥಳ ತಲುಪಿ, ತಿಳಿಸಿದ ನಂತರವಷ್ಟೇ ಊಟ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಹಸಿವು ತಡೆಯಲಾರದವರು ಅಗತ್ಯಕ್ಕಿಂತ ಹೆಚ್ಚು ತಿಂಡಿ ತಿನಿಸನ್ನು ಹೊತ್ತೊಯ್ಯುವುದು ಅನುಕೂಲಕರ. ಕಾಡಿನ ಪ್ರವೇಶಕ್ಕೆ ಅರಣ್ಯ ಇಲಾಖೆ ತಲೆಗೆ ₹ 200ರಂತೆ ಶುಲ್ಕ ವಿಧಿಸುತ್ತದೆ.

ನಿರೂಪಣೆ: ಜಯಸಿಂಹ ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT