ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್ಯ ಕಪ್ಪತಗುಡ್ಡ ಉಳಿಸಲು ಕಟಿಬದ್ಧ

ವಾರದ ಸಂದರ್ಶನ
Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುವ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ನೀಡಿದ್ದ ‘ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ’ ಸ್ಥಾನಮಾನವನ್ನು ರಾಜ್ಯ ಸರ್ಕಾರ ನವೆಂಬರ್‌ 4ರಂದು ವಾಪಸ್‌ ಪಡೆದಿದೆ. 2015ರ ಡಿಸೆಂಬರ್‌ 19ರಂದು ಹೊರಡಿಸಿದ್ದ ಅಧಿಸೂಚನೆಯನ್ನು, ಸಂರಕ್ಷಿತ ಅರಣ್ಯ ಘೋಷಣೆಗೆ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆದಿಲ್ಲ ಮತ್ತು ಸಂರಕ್ಷಿತ ಪ್ರದೇಶದ ಪಕ್ಕದಲ್ಲಿ ಯಾವುದೇ ರಾಷ್ಟ್ರೀಯ ಉದ್ಯಾನ ಇಲ್ಲ ಎಂಬ ಎರಡು ಕಾರಣಗಳನ್ನು ಮುಂದಿಟ್ಟು, 11 ತಿಂಗಳ ಒಳಗಾಗಿ ಸರ್ಕಾರವೇ ವಾಪಸ್‌ ಪಡೆದಿದೆ. ಇದರ ಹಿಂದೆ ಗಣಿಗಾರಿಕೆ ಮತ್ತು ಗಾಳಿ ವಿದ್ಯುತ್‌ ಕಂಪೆನಿಗಳ ಲಾಬಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ ಎನ್ನುವ ಆರೋಪಗಳು ಜಿಲ್ಲೆಯ ಪರಿಸರ ಪ್ರೇಮಿಗಳು, ಹೋರಾಟಗಾರರಿಂದ ಕೇಳಿಬರುತ್ತಿವೆ. ದಶಕದ ಹಿಂದೆ ಸಂರಕ್ಷಿತ ಅರಣ್ಯ ಪ್ರದೇಶಕ್ಕಾಗಿ ಆಗ್ರಹಿಸಿ ಜಿಲ್ಲೆಯಲ್ಲಿ ರೂಪುಗೊಂಡಿದ್ದ ಜನಾಂದೋಲನ ಮತ್ತೆ ನಿಧಾನವಾಗಿ ಪ್ರಾರಂಭವಾಗಿದೆ. ಹೋರಾಟದ ಮುಂಚೂಣಿಯಲ್ಲಿರುವ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ. 
 
*  ನೀಡಿದ್ದ ಸ್ಥಾನಮಾನವನ್ನು ಸರ್ಕಾರ 11 ತಿಂಗಳೊಳಗೆ ವಾಪಸ್‌ ಪಡೆದಿರುವುದರ ಹಿಂದೆ ಗಣಿಗಾರಿಕೆ ಲಾಬಿ ಇದೆ ಎನ್ನುವಿರಾ? 
ಒಟ್ಟಾರೆ ಅಭಿಪ್ರಾಯದಲ್ಲಿ ರಾಜ್ಯ ಸರ್ಕಾರ ಕಪ್ಪತಗುಡ್ಡದ ವಿಷಯದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಆ ಮೂಲಕ ಗಂಭೀರ ಸಮಸ್ಯೆ ಸೃಷ್ಟಿಸಿಕೊಂಡಿದೆ. ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನವನ್ನು ಒಂದು ವರ್ಷದೊಳಗಾಗಿ ವಾಪಸ್‌ ಪಡೆದು ಈ ಭಾಗಕ್ಕೆ ಘೋರ ಅನ್ಯಾಯ ಮಾಡಿದೆ. ಈ ಅತಿ ಅವಸರದ ನಿರ್ಧಾರದ ಹಿಂದೆ ಗಣಿ ಲಾಬಿ ಇದೆ. ಇದಕ್ಕೆ ಸರ್ಕಾರ ಮಣೆ ಹಾಕಿದ್ದು ಖಂಡನೀಯ. ಸ್ಥಾನಮಾನ ವಾಪಸ್‌ ಪಡೆದುಕೊಂಡದ್ದಕ್ಕೆ ಸರ್ಕಾರ ಮುಂದಿಟ್ಟಿರುವ ಎರಡು ಕಾರಣಗಳು ಅತ್ಯಂತ ದುರ್ಬಲ ಹಾಗೂ ಅರ್ಥಹೀನವಾದವುಗಳು. ಸರ್ಕಾರ ಈ ಹಂತದಲ್ಲಿ ತನ್ನ ಪ್ರೌಢಿಮೆ ಹಾಗೂ ಬದ್ಧತೆ ಪ್ರದರ್ಶಿಸಬೇಕು. ಮರು ಆದೇಶ ಹೊರಡಿಸಿ ಸಂರಕ್ಷಿತ ಸ್ಥಾನಮಾನ ಮುಂದುವರಿಸಬೇಕು. ಸಂಘರ್ಷ, ಹೋರಾಟಗಳಿಗೆ ಜನ ಮುಂದಾಗದಂತೆ ನೋಡಿಕೊಳ್ಳಬೇಕು. 
 
* ಕಪ್ಪತಗುಡ್ಡ ಹೋರಾಟವು ಕೇವಲ ತೋಂಟದಾರ್ಯ ಮಠದ ಹೋರಾಟವಲ್ಲ, ಇಡೀ ರಾಜ್ಯದ ಹೋರಾಟ ಎಂದು ಹೇಳಿದ್ದೀರಿ. ಇದಕ್ಕೆ ಯಾವ ರೀತಿಯ ಸ್ಪಂದನೆ ಸಿಗುತ್ತಿದೆ?
ಕಪ್ಪತಗುಡ್ಡ ಹೋರಾಟವು ಒಂದು ಮಠ ಅಥವಾ ಒಂದು ಸಂಸ್ಥೆಯ ಹೋರಾಟವಲ್ಲ. ಇದು ಇಡೀ ರಾಜ್ಯದ ಹೋರಾಟ. ವಿಶೇಷವಾಗಿ ಮಧ್ಯ ಕರ್ನಾಟಕದ ಜೀವನ್ಮರಣದ ಹೋರಾಟ. ಕಪ್ಪತಗುಡ್ಡವು ತೋಂಟದಾರ್ಯ ಮಠದ ಆಸ್ತಿ ಅಲ್ಲ. ಅದರಲ್ಲಿ ಮಠದ ವೈಯಕ್ತಿಕ ಹಿತಾಸಕ್ತಿಯೂ ಅಡಗಿಲ್ಲ. ಇದು ನಾಡಿನ, ಜನತೆಯ ಹಿತಾಸಕ್ತಿಗೆ ಸಂಬಂಧಿಸಿದ್ದು. ಹೀಗಾಗಿ ಇದು ಇಡೀ ರಾಜ್ಯದ ಜನರ ಹೋರಾಟವಾದ್ದರಿಂದ ಅವರು ಇದಕ್ಕೆ ಸ್ಪಂದಿಸುತ್ತಿದ್ದಾರೆ. ಇದೊಂದು ಜನಪರ ಹೋರಾಟ. ಖಂಡಿತ, ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿದ ಮಠದ ಹೋರಾಟವಲ್ಲ. 
 
* ಕಪ್ಪತಗುಡ್ಡ ಯಾಕೆ ಉಳಿಯಬೇಕು ಮತ್ತು ಹೇಗೆ ಉಳಿಸಬೇಕು? ಯಾರು ಉಳಿಸಬೇಕು?
ಕಪ್ಪತಗುಡ್ಡವನ್ನು ಯಾಕೆ ಉಳಿಸಿಕೊಳ್ಳಬೇಕು ಎನ್ನುವ ಕಾರಣವೇ ಬಲವಾಗಿದೆ, ಸಮಗ್ರವಾಗಿದೆ, ಅನಿವಾರ್ಯವಾಗಿದೆ. ಹೀಗಾಗಿ ಕಪ್ಪತಗುಡ್ಡ ನಾಶವಾಗಬಾರದು. ಕಪ್ಪತಗುಡ್ಡ ಉಳಿದರೆ ಗದಗ ಸೇರಿದಂತೆ ಈ ಭಾಗ ಉಳಿಯುತ್ತದೆ. ಇದು ನಮ್ಮ ಪಶ್ಚಿಮ ಘಟ್ಟ. ಮಧ್ಯ ಕರ್ನಾಟಕದ ಹೃದಯ. ಇದರಿಂದಾಗಿ ಇಲ್ಲಿ ಮಳೆಯಾಗುತ್ತದೆ. ಈ ಭಾಗದ ಜನಜೀವನಕ್ಕೂ ಕಪ್ಪತಗುಡ್ಡಕ್ಕೂ ನೇರ ಸಂಬಂಧ ಇದೆ. ಇದು ಜನರ ಜೀವನದ ಅವಿಭಾಜ್ಯ ಅಂಗ. ಹೀಗಾಗಿ ಕಪ್ಪತಗುಡ್ಡ ಉಳಿಯಬೇಕು. ಉಳಿಸಲೇಬೇಕು. ಕಪ್ಪತಗುಡ್ಡದ ಮೇಲೆ ನಡೆಯುವ ದಾಳಿ ಮತ್ತು ವಿನಾಶದ ಯತ್ನ ತಡೆಯಬೇಕು. ಈ ಅಪರೂಪದ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಬೇಕು. ಇದು ಒಂದು ಭೂಪ್ರದೇಶದ ಸಮಸ್ಯೆಯಲ್ಲ. ಇಡೀ ರಾಜ್ಯದ ಸಮಸ್ಯೆ. ಜನ ಸಂಘಟಿತರಾಗಿ ಹೋರಾಟ ಮಾಡುತ್ತಾರೆ. ಕಪ್ಪತಗುಡ್ಡವನ್ನು ಉಳಿಸಿಕೊಳ್ಳುತ್ತಾರೆ.
 
*ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ಸ್ಥಾನಮಾನ ಮುಂದುವರಿಸುವ ಬಗ್ಗೆ ಕೆಲವು ಸಂಘಟನೆಗಳು ಭಿನ್ನ ಧ್ವನಿ ಎತ್ತಿವೆ? ಹೀಗಾದರೆ ಹೋರಾಟ ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದು? ಹೋರಾಟದ ರೂಪುರೇಷೆ ಸಿದ್ಧವಾಗಿದೆಯೇ?
ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ಸ್ಥಾನಮಾನ ಮುಂದುವರಿಸುವ ಬಗ್ಗೆ ಯಾವುದೇ ಸಂಘ– ಸಂಸ್ಥೆಗಳು ಅಪಸ್ವರ ಎತ್ತಿದ್ದಾಗಲಿ, ವಿರೋಧಿಸಿದ್ದಾಗಲಿ, ಸಂಘಟನೆ ಮಾಡಿದ್ದಾಗಲಿ ನಡೆದಿಲ್ಲ. ನಡೆಯಲೂ ಬಾರದು. ಒಂದು ಹೋರಾಟ ಆರಂಭವಾದಾಗ ಅದಕ್ಕೆ ಪರ ವಿರೋಧಗಳು ಇದ್ದೇ ಇರುತ್ತವೆ. ಬಹುಜನ ಕಲ್ಯಾಣವನ್ನೊಳಗೊಂಡ ಈ ಹೋರಾಟ ಸ್ಪಷ್ಟ ನಿಲುವು ಹೊಂದಿದೆ. ಇದು ಬೇರೆ ದಿಕ್ಕಿಗೆ ತಿರುಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಸರ್ಕಾರದ ಪ್ರತಿಕ್ರಿಯೆ ನೋಡಿಕೊಂಡು ಹೋರಾಟ ತನ್ನ ರೂಪುರೇಷೆಗಳನ್ನು ಸಿದ್ಧಮಾಡಿಕೊಳ್ಳುತ್ತದೆ. ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ.
 
* ಪೋಸ್ಕೊ ಕಂಪೆನಿ ಓಡಿಸಿದ ಸ್ವಾಮೀಜಿ, ಈಗ ಕಪ್ಪತಗುಡ್ಡದ ಬೆನ್ನು ಬಿದ್ದಿದ್ದಾರೆಂಬ ರಾಜಕೀಯ ಮುಖಂಡರ ಹೇಳಿಕೆ ಉಲ್ಲೇಖಿಸಿದ್ದೀರಿ, ಗಣಿಗಾರಿಕೆ ಲಾಬಿ ಹೋರಾಟದ ಮೇಲೆ ಇದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತಿದೆ? 
ದಕ್ಷಿಣ ಕೊರಿಯಾದ ಪೋಸ್ಕೊ ಕಂಪೆನಿ ಇಲ್ಲಿ ನೆಲೆಗೊಳ್ಳದಂತೆ ಮಾಡಿದ್ದು ಸತ್ಯ. ಅದೊಂದು ಮಹತ್ವದ ಹೋರಾಟ. ಕಪ್ಪತಗುಡ್ಡ ವ್ಯಾಪ್ತಿಗೆ ಬಂದು ನೆಲೆಯೂರಲು ಪ್ರಯತ್ನಿಸುವ ಕಂಪೆನಿಗಳು ಇಲ್ಲಿರುವ ಅಪಾರ ಖನಿಜ ಸಂಪತ್ತಿನ  ಮೇಲೆ ಕಣ್ಣಿಟ್ಟುಕೊಂಡೇ ಬಂದಿರುತ್ತವೆ. ಹೀಗಾಗಿ ಕಪ್ಪತಗುಡ್ಡವನ್ನು ರಕ್ಷಿಸುವ ಏಕೈಕ ಉದ್ದೇಶದಿಂದಲೇ ಅಂದು ಪೋಸ್ಕೊ ಕಂಪೆನಿಯನ್ನು ಬಲವಾಗಿ ವಿರೋಧಿಸಲಾಯಿತು. ಈಗ ಮತ್ತೆ ಅದೇ ಗಣಿಗಾರಿಕೆ ಕೆಲಸ ಇಲ್ಲಿ ನಡೆಯಲಿರುವುದರಿಂದ ಅದನ್ನು ಬಲವಾಗಿ ವಿರೋಧಿಸದೆ ಬೇರೆ ದಾರಿ ಇಲ್ಲ. ಗಣಿಗಾರಿಕೆ ಲಾಬಿ ಎಷ್ಟೇ ಬಲಿಷ್ಠವಾಗಿದ್ದರೂ ಅದನ್ನು ವಿರೋಧಿಸಬೇಕಾಗುತ್ತದೆ. ರಾಜಕೀಯ ಅಥವಾ ಸಾಮಾಜಿಕ ಮುಖಂಡರಿರಲಿ, ಅವರ ಅಭಿಪ್ರಾಯಗಳು ಏನೇ ಇರಲಿ, ಈ ಹೋರಾಟಕ್ಕೆ ಅಭಿಪ್ರಾಯ ಭೇದಗಳನ್ನು ಬದಿಗಿರಿಸಿ ಎಲ್ಲರೂ ಕೈಜೋಡಿಸುವುದು ಅವಶ್ಯಕ. ಈಗ ಅಂತಹ ವಿರೋಧ ಅಭಿಪ್ರಾಯಗಳೇನೂ ಹುಟ್ಟಿಕೊಂಡಿಲ್ಲ. 
 
* ಭಿನ್ನ ರಾಜಕೀಯ ಸಿದ್ಧಾಂತ ಹೊಂದಿರುವ ಪಕ್ಷಗಳ ಬೆಂಬಲವು ಕಪ್ಪತಗುಡ್ಡ ಹೋರಾಟಕ್ಕೆ ಅನಿವಾರ್ಯವೆ? 
ಕಪ್ಪತಗುಡ್ಡದ ಈಗಿನ ಪರಿಸ್ಥಿತಿಗೆ ಜನಪ್ರತಿನಿಧಿಗಳೇ ಕಾರಣ. ಪಕ್ಷಗಳ ರಾಜಕೀಯ ಸಿದ್ಧಾಂತಗಳ ಪ್ರಶ್ನೆ ಇಲ್ಲಿ ಉದ್ಭವಿಸದು. ರಾಜಕೀಯ ಪಕ್ಷಗಳಾಗಲಿ, ಅವುಗಳ ಸಿದ್ಧಾಂತಗಳಾಗಲಿ, ಮುಖಂಡರಾಗಲಿ ಈ ಹೋರಾಟದಲ್ಲಿ ಪ್ರಸ್ತುತವಾಗುವುದಿಲ್ಲ. ಇದು ಜನಪರ ಹೋರಾಟ. ಒಂದು ಅಮೂಲ್ಯ ಭೂಪ್ರದೇಶದ ಉಳಿವಿನ ಹೋರಾಟ. ಹೀಗಾಗಿ ರಾಜಕೀಯ ಪಕ್ಷಗಳನ್ನೊಳಗೊಂಡು ಎಲ್ಲ ಸಂಘ –ಸಂಸ್ಥೆಗಳು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿರಿಸಿ ಹೋರಾಟಕ್ಕೆ ಕೈಜೋಡಿಸುತ್ತವೆ.
 
* ಕಪ್ಪತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಅದರ ಅಗತ್ಯ ಇದೆಯೇ? ಕುವೆಂಪು ಜೈವಿಕ ಧಾಮದಂತೆ ಕಪ್ಪತಗುಡ್ಡ ಸಂರಕ್ಷಣೆ ಮಾಡಬಹುದು ಎಂಬ ಮತ್ತೊಂದು ಅಭಿಪ್ರಾಯವೂ ಇದೆಯಲ್ಲಾ? 
ಹೋರಾಟದ ಉದ್ದೇಶವು ಕಪ್ಪತಗುಡ್ಡಕ್ಕೆ ನೀಡಿದ ಸಂರಕ್ಷಿತ ಮೀಸಲು ಅರಣ್ಯ ಸ್ಥಾನಮಾನವನ್ನು ಉಳಿಸಿಕೊಳ್ಳುವುದಾಗಿದೆ. ಇದು ಅತ್ಯಂತ ಸ್ಪಷ್ಟ. ಹೀಗಾಗಿ ಕಪ್ಪತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಲಿ ಅಥವಾ ಕುವೆಂಪು ಜೈವಿಕ ಧಾಮದಂತೆ ಉಳಿಸಿಕೊಳ್ಳುವುದಾಗಲಿ ನಮ್ಮ ಬೇಡಿಕೆಗಳಲ್ಲ. ನಮ್ಮ ಬೇಡಿಕೆ ಕಪ್ಪತಗುಡ್ಡಕ್ಕೆ ನೀಡಿದ್ದ ಸ್ಥಾನಮಾನವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕೆನ್ನುವುದು. ಪರ್ಯಾಯ ಮಾರ್ಗಗಳ ಬಗೆಗೆ ಆಲೋಚಿಸಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಆ ಪ್ರಸಂಗವೂ ಬರುವುದಿಲ್ಲ.  
 
* ಕಸ್ತೂರಿ ರಂಗನ್‌ ವರದಿ ಸಲ್ಲಿಕೆ ನಂತರ ಮಲೆನಾಡು ಭಾಗದ ಜನರು ಆತಂಕಗೊಂಡಿರುವಂತೆ, ಸಂರಕ್ಷಿತ ಮೀಸಲು ಸ್ಥಾನಮಾನ ಮುಂದುವರಿಸಿದ ನಂತರ ಒಕ್ಕಲೆಬ್ಬಿಸುತ್ತಾರೆ ಎಂಬ ಭಯ ಕಪ್ಪತಗುಡ್ಡ ವ್ಯಾಪ್ತಿಯ ಹಳ್ಳಿಗಳು, ತಾಂಡಾಗಳ ಜನರಿಗೆ ಇದೆಯಲ್ಲಾ? ಸ್ಥಳೀಯರ ಸಹಭಾಗಿತ್ವದಲ್ಲೇ ಅಭಿವೃದ್ಧಿ ಸಾಧ್ಯವಿಲ್ಲವೇ?
ಕಪ್ಪತಗುಡ್ಡ ಸಂರಕ್ಷಿತ ಪ್ರದೇಶವಾಗಿ ಮುಂದುವರಿಯುವುದರಿಂದ ಅದರ ತಪ್ಪಲಿನ ಹಳ್ಳಿಗಳಿಗೆ ಹಾಗೂ ತಾಂಡಾಗಳಿಗೆ ತೊಂದರೆ ಉಂಟಾಗುತ್ತದೆ ಎನ್ನುವುದಾಗಲಿ ಅಥವಾ ಅವರನ್ನು ಒಕ್ಕಲೆಬ್ಬಿಸಲಾಗುತ್ತದೆ ಎನ್ನುವುದಾಗಲಿ ಕೇವಲ ಊಹೆಗಳು. ಅವುಗಳಿಗೆ ಯಾವುದೇ ಆಧಾರವಿಲ್ಲ. ಇಂತಹ ಸಂದೇಹಗಳನ್ನು ಜನರ ನಡುವೆ ಹರಿಬಿಟ್ಟು ಹೋರಾಟವನ್ನು ದುರ್ಬಲಗೊಳಿಸುವ ಹುನ್ನಾರ ಇದರ ಹಿಂದಿದೆ. ಬಲ್ದೋಟಾ ಕಂಪೆನಿಯಿಂದ ಹಣ ಪಡೆದಿರುವ ಫಲಾನುಭವಿಗಳು ಹೋರಾಟ ಹತ್ತಿಕ್ಕುವ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಏನೂ ಆಗದು. ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸದು. 17,872 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬಹುವಿಶಾಲವಾಗಿ ಹಬ್ಬಿಕೊಂಡಿರುವ ಕಪ್ಪತಗುಡ್ಡವನ್ನು ಕೇವಲ ಸ್ಥಳೀಯರ ಸಹಭಾಗಿತ್ವದಿಂದ ಅಭಿವೃದ್ಧಿಪಡಿಸುವುದು ಎಂದೂ ಆಗದ ಕೆಲಸ. ಇದನ್ನು ಸರ್ಕಾರ ಮಾತ್ರ ನಿಭಾಯಿಸಲು ಸಾಧ್ಯ.
 
* ಸಂರಕ್ಷಿತ ಸ್ಥಾನ ಮುಂದುವರಿಸುವುದರಿಂದ ಕಪ್ಪತಗುಡ್ಡದ ದೀರ್ಘಕಾಲದ ಉಳಿವು ಸಾಧ್ಯವೇ? 
ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ರಾಮಗಡ್ ಮೈನಿಂಗ್‌ ಕಂಪೆನಿ 2001ರಲ್ಲೇ ಕೇಂದ್ರದಿಂದ ಪರವಾನಗಿ ಪಡೆದುಕೊಂಡಿದೆ. ಸರ್ಕಾರ ಸಂರಕ್ಷಿತ ಸ್ಥಾನ ವಾಪಸ್‌ ಪಡೆದುಕೊಳ್ಳುವುದರಿಂದ ಈ ಪ್ರದೇಶ ಗಣಿಗಾರಿಕೆಗೆ ಮುಕ್ತವಾಗುತ್ತದೆ. ಒಮ್ಮೆ ಗಣಿಗಾರಿಕೆ ಪ್ರಾರಂಭಗೊಂಡರೆ ಅದು ಕಪ್ಪತಗುಡ್ಡದ ಮರಣಶಾಸನ ಬರೆದಂತೆ. ಹೀಗಾಗಿ ಕಪ್ಪತಗುಡ್ಡ ‘ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ’ವಾಗಿಯೇ ಮುಂದುವರಿಯಬೇಕು ಎನ್ನುವುದು ನಮ್ಮ ಬೇಡಿಕೆ. ನಮ್ಮ ಹೋರಾಟದ ಘೋಷವಾಕ್ಯವೂ ಇದೇ ಆಗಿದೆ. ಇದಕ್ಕೆ ಬೇರೆ ಹೆಸರಿಡುವ ಪ್ರಮೇಯವೇ ಉದ್ಭವಿಸದು.  
 
* ಕಪ್ಪತಗುಡ್ಡದಲ್ಲಿ ಆರ್ಯುವೇದ ಔಷಧ ಸಂಸ್ಕರಣಾ ಘಟಕ ಆರಂಭಿಸುವ ಪ್ರಸ್ತಾವದ ಕುರಿತು?
ಕಪ್ಪತಗುಡ್ಡ ಔಷಧೀಯ ಸಸ್ಯಗಳ ಆಗರ. ಅಪರೂಪದ ಔಷಧೀಯ ಸಸ್ಯಗಳಿಂದಾಗಿಯೇ ಕಪ್ಪತಗುಡ್ಡಕ್ಕೆ ಇಷ್ಟೊಂದು ಮಹತ್ವ ಬಂದಿದೆ. ಕರಿಲೆಕ್ಕಿ, ಅಶ್ವಗಂಧ, ಚದುರಂಗ, ಅಮೃತಬಳ್ಳಿ ಸೇರಿದಂತೆ ಇಲ್ಲಿ 300ಕ್ಕೂ ಹೆಚ್ಚು ಜಾತಿಯ ಔಷಧೀಯ ಸಸ್ಯಗಳು ಇವೆ. ಈ ಸಸ್ಯಗಳ ಸಂರಕ್ಷಣೆ ಮತ್ತು ಸಂಶೋಧನೆ ನಡೆದು ಜನರಿಗೆ ಉಪಯೋಗವಾಗಬೇಕಾದರೆ ಇದು ಸಂರಕ್ಷಿತ ಪ್ರದೇಶವಾಗಬೇಕು. ಇಲ್ಲಿ ಬೇರೆ ಬೇರೆ ಔಷಧೀಯ ಸಸ್ಯಗಳನ್ನು ನೆಟ್ಟು ಪೋಷಿಸಿ, ಅದನ್ನು ಔಷಧ ಸಂಸ್ಕರಣಾ ಘಟಕಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳುವ ಮೂಲಕ ದೇಶಕ್ಕೆ ಆಯುರ್ವೇದ ಔಷಧಗಳು ಸಿಗುವಂತೆ  ಮಾಡುವುದು ಸಾಧ್ಯವಾಗುತ್ತದೆ. ಪ್ರಾಚೀನ ಆಯುರ್ವೇದ ಔಷಧಗಳ ತಯಾರಿಕೆ ಈ ಭಾಗದಲ್ಲಿ ನಡೆದಂತಾಗುತ್ತದೆ. ಮಳೆಯಾಗುತ್ತದೆ ಎಂಬ ಕಾರಣಕ್ಕೆ ಕಪ್ಪತಗುಡ್ಡಕ್ಕೆ ಬೆಂಕಿ ಹಚ್ಚುವ ಸಂಪ್ರದಾಯ ಮೌಢ್ಯದ್ದು. ಈ ಕುರಿತು ಜನಜಾಗೃತಿ ಆಗಬೇಕು.  
 
* ಕಪ್ಪತಗುಡ್ಡಕ್ಕೆ ಸರ್ಕಾರ ಸಂರಕ್ಷಿತ ಸ್ಥಾನ ಮುಂದುವರಿಸುವ ವಿಶ್ವಾಸ ಇದೆಯೇ? 
ಸಂರಕ್ಷಿತ ಸ್ಥಾನಮಾನ ಮುಂದುವರಿಸಬೇಕು ಮತ್ತು ಗಣಿಗಾರಿಕೆಗೆ ಅವಕಾಶ ಕೊಡಬಾರದು  ಎಂದು ಆಗ್ರಹಿಸಿ ಉತ್ತರ ಕರ್ನಾಟಕದ ಮಠಾಧೀಶರ ನಿಯೋಗವು ಇತ್ತೀಚೆಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಸರ್ಕಾರದಿಂದ ಇದುವರೆಗೆ ಸಕಾರಾತ್ಮಕ ಸ್ಪಂದನೆಯೇ ಲಭಿಸಿದೆ. ಸ್ವತಃ ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಮಾದಿಗರ ಸಮಾವೇಶಕ್ಕೆ ಬಂದ ಸಂದರ್ಭದಲ್ಲೂ, ಸದ್ಯ ಸಂರಕ್ಷಿತ ಸ್ಥಾನಮಾನ ವಾಪಸ್‌ ಪಡೆಯಲಾಗಿದ್ದರೂ, ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಚಟುವಟಿಕೆಗೆ ಅವಕಾಶ ನೀಡದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾಗಿ ಅವರು ಹೇಳಿದ್ದಾರೆ. ಹಾಗಾಗಿ ಸದ್ಯದ ಪರಿಸ್ಥಿತಿ ತೀರಾ ನಕಾರಾತ್ಮಕವಾಗೇನೂ ಇಲ್ಲ. ಆದರೆ, ಚುನಾವಣೆ ಮತ್ತಿತರ ಕಾರಣಗಳನ್ನು ಮುಂದಿಟ್ಟು ಸರ್ಕಾರ ಇದರಲ್ಲಿ ವಿಳಂಬ ನೀತಿ ಅನುಸರಿಸಬಾರದು. ಆದಷ್ಟು ಬೇಗನೆ ಸಂರಕ್ಷಿತ ಪ್ರದೇಶ ಸ್ಥಾನಮಾನ ವಾಪಸ್‌ ನೀಡಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT