ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾನ ಉಳಿಸಿಕೊಳ್ಳಲು ನೆರವಾಗಿದ್ದ ದೋನಿ

ಭಾರತದ ಸೀಮಿತ ಓವರ್‌ಗಳ ನೂತನ ನಾಯಕ ವಿರಾಟ್‌ ಮನದ ಮಾತು
Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ‘ವೃತ್ತಿ ಬದುಕಿನ ಆರಂಭದ ದಿನ ಗಳಲ್ಲಿ ನಾನು ಸ್ಥಿರ ಪ್ರದರ್ಶನ ನೀಡಲು ವಿಫಲನಾಗುತ್ತಿದ್ದೆ. ಆಗ ತಂಡದಿಂದ ಹೊರಬೀಳುವ ಆತಂಕ ಎದುರಾಗಿತ್ತು. ಅಂತಹ ಸಂದಿಗ್ಧ ಸಮಯಗಳಲ್ಲಿ ನಾಯಕ ಮಹೇಂದ್ರ ಸಿಂಗ್‌ ದೋನಿ ನನ್ನನ್ನು ತಂಡದಲ್ಲಿ ಉಳಿಸಿಕೊಂಡು ಸಾಕಷ್ಟು ಅವಕಾಶ ನೀಡಿದ್ದರು’ ಎಂದು ಭಾರತದ ಸೀಮಿತ ಓವರ್‌ಗಳ ತಂಡದ ನೂತನ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್‌ ಅಂದಿನಿಂದ ಕ್ರಿಕೆಟ್‌ನ ಮೂರು ಮಾದರಿಗಳಲ್ಲೂ ದೋನಿ ಸಾರಥ್ಯದಲ್ಲಿ ಆಡಿದ್ದರು.

‘ಆರಂಭದ ದಿನಗಳಲ್ಲಿ ದೋನಿ   ಅಗತ್ಯ ಮಾರ್ಗದರ್ಶನ ನೀಡುವ ಜೊತೆಗೆ ಆಡುವ ಬಳಗದಲ್ಲೂ ಸ್ಥಾನ ಸಿಗುವಂತೆ ನೋಡಿಕೊಳ್ಳುತ್ತಿದ್ದರು.  ವೈಫಲ್ಯ ಕಂಡಾಗ ಲೆಲ್ಲಾ  ನನ್ನ ಬೆನ್ನಿಗೆ ನಿಂತು  ಸ್ಫೂರ್ತಿ ತುಂಬುತ್ತಿದ್ದರು. ಹೀಗಾಗಿಯೇ ನಾನು ಪರಿಪೂರ್ಣ ಕ್ರಿಕೆಟಿಗನಾಗಿ ಬೆಳೆಯಲು ಸಾಧ್ಯವಾಯಿತು’ ಎಂದು ವಿರಾಟ್‌ ತಮ್ಮ ನೆನಪಿನ ಪುಟ ತಿರುವಿ ಹಾಕಿದ್ದಾರೆ.

‘ದೋನಿ ವಿಶ್ವ ಕಂಡ ಯಶಸ್ವಿ ನಾಯಕ ರಲ್ಲಿ ಒಬ್ಬರು. ಅವರ ಸ್ಥಾನವನ್ನು ತುಂಬು ವುದು ಸವಾಲಿನ ಕೆಲಸ. ದೋನಿ ಎಂದರೆ ಥಟ್ಟನೆ ನೆನಪಾಗುವುದು ಅವರ ನಾಯಕತ್ವದ ಗುಣಗಳು. ಅವರು ಎಂತಹುದೇ ಸಂದಿಗ್ಧತೆಯಲ್ಲೂ ತಾಳ್ಮೆ ಕಳೆದುಕೊಳ್ಳದೆ, ಶಾಂತ ಚಿತ್ತದಿಂದ ಕಠಿಣ  ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರು. ಆ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಿದ್ದರು. ಆ ಗುಣ ನನಗೆ ತುಂಬಾ ಹಿಡಿಸುತ್ತಿತ್ತು. ಅವರು ಈಗ ನಾಯಕತ್ವ ತ್ಯಜಿಸಿರಬಹುದು. ಆದರೆ ತಂಡದಲ್ಲಿ ಇರುವವರೆಗೂ ನನ್ನ ಪಾಲಿಗೆ ಅವರೇ  ನಾಯಕ’ ಎಂದು ದೆಹಲಿಯ ಬ್ಯಾಟ್ಸ್‌ಮನ್‌ ನುಡಿದಿದ್ದಾರೆ.

ದೋನಿ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ ಅವರ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೊಹ್ಲಿ ಸತತ ಐದು ಟೆಸ್ಟ್‌ ಸರಣಿಗಳನ್ನು ಜಯಿಸಿದ್ದರು. ನಾಯಕ ನಾಗಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಮತ್ತು ಟ್ವೆಂಟಿ–20 ಸರಣಿ ಅವರ ಪಾಲಿಗೆ ಮಹತ್ವದ್ದಾಗಿದ್ದು ಈ ಜವಾಬ್ದಾರಿಯನ್ನು ವಿರಾಟ್‌ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಕ್ರಿಕೆಟ್‌ ವಲಯದಲ್ಲಿ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT