ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್‌ ಹೊಸ ಚಿತ್ರದ ಟ್ರೇಲರೂ ಸೂಪರ್‌ ಹಿಟ್‌

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ನಿದ್ದೆ ಮಾಡೂ ಅಂತೀಯ, ಆಮೇಲೆ  ಕನಸು ಕಾಣೋದನ್ನು ನಿಲ್ಲಿಸು ಅಂತೀಯ... ಅದು ಹೇಗೆ ಸಾಧ್ಯ ಅಮ್ಮಾ?  ನಾನು ನಿದ್ದೆ ಹೋದರೆ ತಾನಾಗೇ ಕನಸನ್ನು ಅರ್ಧಕ್ಕೇ ಕತ್ತರಿಸಿದಂತೆ ಆಗುವುದಿಲ್ಲವೇ? ಕನಸು ಕಾಣುವುದು ಪ್ರತಿಯೊಬ್ಬರ ಹಕ್ಕು ಅಲ್ವೇನಮ್ಮಾ?
***
‘ರಾತ್ರಿ ಮೂರು ಗಂಟೆ ಆಗಿದೆ, ಕನಸು ಕಂಡಿದ್ದು ಸಾಕು ನಿದ್ದೆ ಮಾಡು’ ಅಂತ ಬುದ್ಧಿ ಹೇಳಿದ ತಾಯಿಯನ್ನು ಆ ಎಳಸು ಹುಡುಗಿ ಹೀಗೆ ಕೇಳಿದಾಗ ಉತ್ತರಿಸಲು ತಾಯಿ ತಡವರಿಸುತ್ತಾಳೆ.

ಎಡ ಅಂಗೈ ಮೇಲೆ ಬಲ ಅಂಗೈಯನ್ನು ಮುಚ್ಚಳದಂತೆ ಮುಚ್ಚಿ, ಅದರೊಳಗೆ ತನ್ನ ಅಸಹಾಯಕತೆಯನ್ನು ಬಚ್ಚಿಟ್ಟು ತಾಯಿ ಕೇಳುತ್ತಾಳೆ– ನೀನು ಏನು ಹೇಳಬೇಕೆಂದಿದ್ದೀಯಾ? ನಿನ್ನ ಕನಸು ಏನು? ಮಗಳು ಆವೇಶದಿಂದಲೂ, ಅಮ್ಮ ಸಾವಧಾನದಿಂದಲೂ ಚರ್ಚಿಸುತ್ತಾರೆ...

ಮಗಳು: ‘ನನ್ನ ಸ್ವರವನ್ನು ಇಡೀ ಜಗತ್ತು ಆಲಿಸಬೇಕು’
ಅಮ್ಮ: ‘ಹೌದು, ಅದು ನನ್ನ ಕನಸೂ ಹೌದಲ್ಲ? ಆದರೆ ನಿನ್ನಪ್ಪನಿಗೆ ಅದು ಇಷ್ಟ ಇಲ್ವೇ?’
***
ತಾಯಿ ಮತ್ತು ಮಗಳು ಸಂತೈಸಿಕೊಂಡು ನಿದ್ರಿಸಿದರೇನೊ?
ಆದರೆ ಬೆಳಿಗ್ಗೆ ಎದ್ದು ಸಮವಸ್ತ್ರ ಧರಿಸಿ ಶಾಲೆಗೆ ರೆಡಿಯಾಗಿ ಹಜಾರಕ್ಕೆ ಬಂದ ಇನ್ಸು ಸ್ತಂಭದಂತೆ ನಿಂತುಬಿಡುತ್ತಾಳೆ. ಅವಳಪ್ಪ  ಸೋಫಾದಲ್ಲಿ ಕುಳಿತುಕೊಂಡು ಗಿಟಾರ್‌ನ ಒಂದೊಂದು ತಂತಿಯನ್ನೂ ಕಿತ್ತು ಕಿತ್ತು ಹಾಕುತ್ತಿರುತ್ತಾನೆ! ಕರುಳು, ಹೃದಯ ಕಿತ್ತು ಬಾಯಿಗೆ ಬಂದಂತಾಗುತ್ತದೆ. ಎಲ್ಲಾ ತಂತಿಗಳೂ ನೇತಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಅಪ್ಪ ಮುರುಕು ಗಿಟಾರನ್ನು ಮಗಳ ಕೈಗಿಟ್ಟು ಮತ್ತೆ ಸೋಫಾದಲ್ಲಿ ಕುಳಿತು ಮಗಳನ್ನು, ‘ಇಡೀ ಜಗತ್ತು ಕೇಳೋ ಹಾಗೆ ಸ್ವರ ಎಬ್ಬಿಸು ನೋಡೋಣ’ ಅಂತ ಕಣ್ಣಲ್ಲೇ ಪ್ರಶ್ನಿಸುತ್ತಾನೆ.
***
ಅಸಾಮಾನ್ಯ ಚಿತ್ರಗಳ ಸರದಾರ ಅಮೀರ್‌ಖಾನ್‌ ಅವರ ಹೊಸ ಚಿತ್ರ ‘ಸೀಕ್ರೆಟ್‌ ಸೂಪರ್‌ಸ್ಟಾರ್‌’ನ ಟೀಸರ್‌ ಬಿಟ್ಟುಕೊಡುವ ಚಿತ್ರದ ಸುಳಿವು ಇಷ್ಟು. ಮುಂದಿನ ದೃಶ್ಯದಲ್ಲಿ, ಕಪ್ಪು ಬಣ್ಣದ ಬುರ್ಖಾ ಧರಿಸಿದ ಇನ್ಸು ಕೈಯಲ್ಲಿ ಗಿಟಾರ್‌ ಹಿಡಿದುಕೊಂಡು ಮುಖಾಮುಖಿಯಾಗುತ್ತಾಳೆ. ‘ಈ ವಿಡಿಯೊ ನೋಡುತ್ತಿರುವವರಿಗೆ, ಇದು ನನ್ನ ಮೊತ್ತಮೊದಲ ವಿಡಿಯೊ. ನನ್ನ ಹೆಸರು... ಊಹೂಂ... ನನ್ನ ಹೆಸರು ಹೇಳಲಾರೆ. ಆದರೆ ನನಗೆ ಡಾನ್ಸ್‌ ಮಾಡುವ ಹುಚ್ಚು ಇದೆ’ ಎಂದು ಹೇಳುತ್ತಾಳೆ.

ಮಂಡಿ ಮೇಲೆ ಕೈಯೂರಿ ತಲೆ ತಗ್ಗಿಸಿ ಏಕಾಗ್ರತೆಯಿಂದ ವಿಡಿಯೊದ ಮಾತುಗಳನ್ನು ಆಲಿಸುತ್ತಿದ್ದ ಅಮೀರ್‌ಖಾನ್‌ ಆ ಕಿವಿಗೊಮ್ಮೆ, ಈ ಕಿವಿಗೊಮ್ಮೆ ಬೆರಳು ತೋರಿಸಿ ಎರಡು ಸಲ ‘ಸೂಪರ್‌ಹಿಟ್‌’, ಸೂಪರ್‌ ಹಿಟ್‌’ ಎಂದು  ಹೆಬ್ಬೆಟ್ಟು ಮೇಲೆತ್ತಿ ತೋರುತ್ತಾರೆ.
***
‘ಸೀಕ್ರೆಟ್‌ ಸೂಪರ್‌ಸ್ಟಾರ್‌’ನಲ್ಲಿ ಅಮೀರ್‌ಖಾನ್‌ ಜತೆ ಜಾಯಿರಾ ವಾಸಿಂ (‘ದಂಗಲ್‌’ನಲ್ಲಿ ಅಮೀರ್‌ ಮಗಳ ಪಾತ್ರ)  ನಟಿಸಿದ್ದಾರೆ. ವಡೋದರಾದ 14 ವರ್ಷದ ‘ಇನ್ಸಿಯಾ’ ಎಂಬ ಬಾಲಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾಯಿರಾ ಮತ್ತೊಮ್ಮೆ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನಗೆಲ್ಲುವ ಲಕ್ಷಣ  ತೋರಿಸಿದ್ದಾರೆ.

ಅವಳ ಸಂಗೀತಗಾರಳಾಗುವ ಅದಮ್ಯ ಕನಸನ್ನು ಅವಳಪ್ಪನೂ ಮುರಿಯಲಾಗಲಿಲ್ಲ. ಅರ್ಥಾತ್‌, ಅಮ್ಮನ ಮುದ್ದಿನ ಇನ್ಸು ಜಗ ಮೆಚ್ಚಿದ ಗಾಯಕಿಯಾಗುತ್ತಾಳೆ ಎಂಬುದು ಚಿತ್ರದ ಧನಾತ್ಮಕ ಅಂಶ.

ಡಿಸೆಂಬರ್‌ 23ರಂದು ಬಿಡುಗಡೆಯಾದ ‘ದಂಗಲ್‌’ ಸಿನಿಮಾ ಭರದಿಂದ ಓಡುತ್ತಿರುವಾಗಲೇ ಮತ್ತೊಂದು ಸೂಪರ್‌ಹಿಟ್‌ ಚಿತ್ರ ಕೊಡುವ ಸ್ಪಷ್ಟ ಸೂಚನೆಯನ್ನು ಈ ಮೂಲಕ ಅಮೀರ್‌ಖಾನ್‌ ನೀಡಿದ್ದಾರೆ. ಅವರ ಲೆಕ್ಕಾಚಾರ ನಿಜವಾದರೆ ಆಗಸ್ಟ್‌ ನಾಲ್ಕರಂದು ಚಿತ್ರ ತೆರೆ ಕಾಣಲಿದೆ.

ಹೇಳಲೇಬೇಕಾದ ಸಂಗತಿಯೆಂದರೆ, ಡಿ. 16ರಂದು ‘ಸೀಕ್ರೆಟ್‌...’ನ ಟೀಸರ್‌ ಬಿಡುಗಡೆಯಾಗಿದ್ದು, ಇದುವರೆಗೂ ಸುಮಾರು 8.4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಸುಮಾರು 88 ಸಾವಿರ ಮಂದಿ ಇಷ್ಟಪಟ್ಟಿದ್ದರೆ, ಸುಮಾರು 7 ಸಾವಿರ ಮಂದಿಗೆ ಟೀಸರ್‌ ಇಷ್ಟವಾಗಿಲ್ಲವಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT