ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಕಲಿಕೆಗೆ ಬೇಕಿಷ್ಟು ಎಚ್ಚರ

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಹೇಗೆ ನಾವು ನಮ್ಮ ವಾಹನವನ್ನು ಚಲಾಯಿಸಲಷ್ಟೆ ಕಲಿತೆವೋ ಹಾಗೆಯೇ ಗಣಕಗಳನ್ನು ನಾವು ನಮ್ಮ ಕೆಲಸವನ್ನು ಮಾಡಿಕೊಳ್ಳಲಷ್ಟೇ ಕಲಿಯಲಿದ್ದೇವೆ. ಕೆಟ್ಟರೆ? ನಮ್ಮ ವಾಹನ ಕೆಟ್ಟರೆ ಏನು ಮಾಡುತ್ತೇವೆ? ಗ್ಯಾರೇಜಿಗೆ ಬಿಡುತ್ತೇವಲ್ಲವೆ? ಹಾಗೆಯೇ, ನಮ್ಮ ಕಂಪ್ಯೂಟರ್‌ ಕೆಟ್ಟರೆ ಅದನ್ನು ರಿಪೇರಿ ಮಾಡುವವರಿಗೆ ವಹಿಸಿದರಾಯಿತು! ಕಚೇರಿಗಳಲ್ಲಿ ಇದ್ದನ್ನು ಗುತ್ತಿಗೆ ಕೊಟ್ಟಿರುತ್ತಾರೆ, ಅವರಿಗೆ ಹೇಳಿದರಾಯಿತು.

ಒಟ್ಟಾರೆ, ನಾವು ಕಲಿಯಲು ಹೊರಟಿರುವುದು ಕಂಪ್ಯೂಟರ್ ಅಥವಾ ಗಣಕಗಳಿಂದ ನಮ್ಮ ಕೆಲಸಗಳನ್ನು ಸುಲಲಿತವಾಗಿ ಹೇಗೆ ಮಾಡಿಕೊಳ್ಳುವುದು ಎಂಬುದನ್ನೇ ಹೊರತಾಗಿ ಗಣಕ ಹೇಗೆ ಕೆಲಸ ಮಾಡುತ್ತದೆ - ಎಂಬುದಲ್ಲ ಆ ವಿಚಾರ ನಮಗೀಗ ಸ್ಪಷ್ಟವಾಗಿದೆ. ಇದು ಬಹುಮುಖ್ಯವಾದ ಹೆಜ್ಜೆ.

ನಮ್ಮಲ್ಲಿರುವ ಮತ್ತೊಂದು ದೊಡ್ಡ ತಪ್ಪುಕಲ್ಪನೆಯನ್ನು ಈಗ ನಿವಾರಿಸಿಕೊಳ್ಳೋಣ. ಕಂಪ್ಯೂಟರಿಗೆ ಎಲ್ಲವೂ ಗೊತ್ತಿರುತ್ತದೆ ಎಂಬುದೇ ಆ ದೊಡ್ಡ ತಪ್ಪುಕಲ್ಪನೆ! ವಾಸ್ತವವಾಗಿ, ‘ಕೃತಕ ಬುದ್ಧಿಮತ್ತೆ’, ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಎಂದೆಲ್ಲ ನಾವೂ ನೀವು ಕೇಳಿರುತ್ತೇವೆ. ಆದರೆ ಅದು ಈ ಸಣ್ಣ ಮಟ್ಟದಲ್ಲಿ ಬಳಕೆ ಬಂದಿಲ್ಲ. ತೀರಾ ಹೆಚ್ಚೆಂದರೆ ವ್ಯಾಕರಣದೋಷಗಳನ್ನು ತೋರಿಸೀತು. ಕಾಗುಣಿತ ತಪ್ಪೆಂದು ಹೇಳೀತು ಅಷ್ಟೆ.

ಅದೂ ಇನ್ನು ಸಾಕಷ್ಟು ಸುಧಾರಣೆಯಾಗಬೇಕಿದೆ. ಅದ್ದರಿಂದ ಕಂಪ್ಯೂಟರಿನಲ್ಲಿ ಕೆಲಸ ಮಾಡುವಾಗ ನಾವು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕಂಪ್ಯೂಟರ್‍ ನಾವು ಹೇಳಿದ್ದನ್ನು ಮಾಡುತ್ತದೆ, ನಮ್ಮ ಮನಸ್ಸಿನಲ್ಲಿ ಏನಾಗಬೇಕು ಎಂದಿರುವುದನ್ನಲ್ಲ! ಸಾಮಾನ್ಯವಾಗಿ ನಾವು ಎಂ. ಎಸ್. ಆಫೀಸ್ ಬಳಸುತ್ತೇವೆ. ವರ್ಡ್, ಎಕ್ಸೆಲ್, ಪವರ್‌ ಪಾಯಿಂಟ್‍ ಇವುಗಳಲ್ಲಿ ಅನೇಕ ಸಮಾನ ಕಮಾಂಡ್‌ಗಳಿರುತ್ತವೆ. ಕೆಲವು ಇದರಾಚೆಗೂ ಅದೇ ಅರ್ಥದಲ್ಲಿ ಬಳಕೆಯಾಗುತ್ತವೆ. ಅವನ್ನು ತಿಳಿದುಕೊಳ್ಳಿರಿ. ಉದಾ: ‘ಕಂಟ್ರೋಲ್ ಮತ್ತು ಎಸ್‍’ ಕೀಯನ್ನು ‘ಉಳಿಸಲು’ (ಸೇವ್‌) ಸಾರ್ವತ್ರಿಕವಾಗಿ ಬಳಕೆಯಾಗುತ್ತದೆ. ಹಾಗೆಯೇ ‘ಕಂಟ್ರೋಲ್ ಸಿ’ ಮತ್ತು ‘ಕಂಟ್ರೋಲ್ ವಿ.’ ಕ್ರಮವಾಗಿ ‘ಪ್ರತಿ ಮಾಡು’ (ಕಾಪಿ) ಮತ್ತು ‘ಅಂಟಿಸು’ (ಪೇಸ್ಟ್‌) ಎಂಬುದಕ್ಕೆ ಬಳಕೆಯಾಗುತ್ತದೆ.

ಕಲಿಯುವ ಹಂತದಲ್ಲಿರುವ ನಾವು ತಿಳಿಯಬೇಕಾದ್ದು ಇದಕ್ಕಿಂತಲೂ ‘ಕಂಟ್ರೋಲ್‍ ಜೆ಼ಡ್’ ಮತ್ತು ‘ಕಂಟ್ರೋಲ್ ವೈ!’ ಕಂಟ್ರೋಲ್ ಜೆ಼ಡ್‍ – ನಾವು ಈ ಹಿಂದೆ ಮಾಡಿದ್ದನ್ನು ತೆಗೆಯುತ್ತದೆ (‘ಅನ್‍ ಡು’). ಕಂಟ್ರೋಲ್‍ ವೈ – ಹಾಗೆ ತೆಗೆದದ್ದನ್ನು ಮತ್ತೆ ಹಾಕುತ್ತದೆ (‘ರೀ ಡು’). ಇದನ್ನು ಅಭ್ಯಾಸ ಮಾಡಿದರೆ ಆತ್ಮವಿಶ್ವಾಸ ಬರುತ್ತದೆ; ಹೆದರುವ ಆವಶ್ಯಕತೆಯೇ ಇಲ್ಲ.

ಏನಾದರೂ ತಪ್ಪಾಗಿದರೆ ಸಾಮಾನ್ಯವಾಗಿ ಮಾಡುವ ಇನ್ನೊಂದು ದೊಡ್ಡ ತಪ್ಪೆಂದರೆ, ಕಂಪ್ಯೂಟರನ್ನೇ ಆರಿಸಿ ಸುಮ್ಮನಿದ್ದುಬಿಡುವುದು! ಇದು ಸೋಲಲು ಬಂದಾಗ ಪಗಡೆ ಹಾಸನ್ನು ಎತ್ತಿದಂತೆ! ಇದನ್ನು ಎಂದಿಗೂ ಮಾಡಬೇಡಿ. ಏನು ಮಾಡುತ್ತಿದ್ದಿರಿ? ಏನಾಯಿತು? ಸಂದೇಶ ಏನೆಂದು ಬಂದಿತು ಎಲ್ಲವನ್ನು ಗಮನಿಸಿ, ಸಂಬಂಧಪಟ್ಟವರ ಗಮನಕ್ಕೆ ತನ್ನಿರಿ. ಸಂದೇಶ ಬಂದಾಗ ನೀವು ಕ್ಯಾನ್ಸಲ್ ಕೊಡದೆ ಅಥವಾ ಓಕೆ ಎನ್ನದೆ ಅದು ಹೋಗುವುದಿಲ್ಲ. ಅದನ್ನು ಹಾಗೆಯೇ ಇಟ್ಟು ಸಂಬಂಧಪಟ್ಟವರಿಗೆ ತೋರಿಸಬಹುದು.

ಸ್ಕ್ರೀನ್ ಶಾಟ್ ತೆಗೆದು ಇಟ್ಟುಕೊಳ್ಳಬಹುದು. (ಸ್ಕ್ರೀನ್ ಶಾಟ್ ತೆಗೆಯುವುದು ಹೇಗೆಂದು ಗೂಗಲ್ ಮಾಡಿ ತಿಳಿಯಿರಿ). ನೂರಕ್ಕೆ ತೊಂಬತ್ತೊಂಬತ್ತು ಪಾಲು ಏನು ತೊಂದರೆಯಾಗಿರುವುದಿಲ್ಲ. ಆದರೆ, ನೀವು ಕಂಪ್ಯೂಟರನ್ನೇ ಆರಿಸಿದರೆ ಹೆಚ್ಚು ತೊಂದರೆಗಳಾಗುತ್ತವೆ. ಕಚೇರಿಯಲ್ಲಿ ಸಾಕಷ್ಟು ಮಾತು ಕೇಳಬೇಕಾಗುತ್ತದೆ. ಅಂತಿಮವಾಗಿ ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಕಂಪ್ಯೂಟರನ್ನು ಆರಿಸುವ ಗೋಜಿಗೆ ಹೋಗದೆ ಏನಾಗಿರಬಹುದೆಂದು ನೀವೂ ಯೋಚಿಸಿ.

ನಾನು ಮಾಡಿದ್ದು ಇಷ್ಟು ಮಾತ್ರ ಎಂದು ದೃಢವಾಗಿ ಹೇಳಿರಿ. ಸಂಬಂಧಪಟ್ಟವರೊಂದಿಗೆ ಧೈರ್ಯದಿಂದ ಚರ್ಚಿಸಿ. ವಿಷಯ ಕುರಿತು ಗೂಗಲ್ ಮಾಡಿ ತಿಳಿಯಿರಿ. ಇದರಿಂದ ನಿಮ್ಮ ದಕ್ಷತೆ ಹೆಚ್ಚುತ್ತದೆ. ನಿಮ್ಮಲ್ಲಿ ಯುಪಿಎಸ್ ಇರಲಿ ಬಿಡಲಿ; ಆಗಾಗ್ಗೆ ಉಳಿಸುವುದನ್ನು (‘ಕಂಟ್ರೋಲ್‍ ಎಸ್‍’ ಅನ್ನು ಒತ್ತುವುದು) ಅಭ್ಯಾಸ ಮಾಡಿಕೊಳ್ಳಿರಿ.

ಎಷ್ಟೋ ಕಡೆ ‘ಟೈಪ್‍ ಮಾಡಿಟ್ಟಿದ್ದೆ, ಈಗ ಸಿಗ್ತಾ ಇಲ್ಲ’ ಎಂಬುದನ್ನು ಕೇಳುತ್ತೇವೆ. ಮೇಲಧಿಕಾರಿಗಳು “ಮಾಡಿದ್ದರೆ ತಾನೆ, ಸಿಗುವುದು!’ ಎನ್ನುವುದೂ ಸಾಮಾನ್ಯ! ಇದಕ್ಕೆ ಕಾರಣ ನೀವು ನಿಮ್ಮ ‘ಕಡತ’ಕ್ಕೆ (ಫೈಲ್‌ಗೆ) ಸರಿಯಾದ ಹೆಸರು ಕೊಡದಿರುವುದು ಒಂದು, ಸರಿಯಾಗಿ ಹುಡುಕದಿರುವುದು ಇನ್ನೊಂದು! ಎರಡನ್ನೂ ಈಗ ನೋಡೋಣ. ಬಹಳ ಹಿಂದೆ ಕಡತಗಳಿಗೆ ಹೆಸರು ಕೊಡಲು ಇಂತಿಷ್ಟೇ ಅಕ್ಷರಗಳನ್ನು ಬಳಸಬೇಕು ಎಂಬ ನಿಯಮವಿತ್ತು. ಹಾಗಾಗಿ, ವಿಷಯಾಧಾರಿತ ಹೆಸರು ಕೊಡಲು ಸರ್ಕಸ್ ಮಾಡಬೇಕಿತ್ತು!

ಈಗ ‘ಕಾರ್ಯಸೂಚಿ ಕುರಿತಂತೆ ಮ್ಯಾನೇಜರರ ಸಲಹೆ ದಿನಾಂಕ…’ ಎಂದೇ ಹೆಸರಿಡಬಹುದು! ಹೀಗೆ ವಿಷಯಾಧಾರಿತವಾಗಿ ಹೆಸರನ್ನು ಕೊಟ್ಟು ದಿನಾಂಕವನ್ನೂ ಹಾಕಿ ಸಂಬಂಧಿಸಿದ ಕಡತಕೋಶ(ಫೋಲ್ಡರ್‍)ದಲ್ಲಿಟ್ಟರೆ ನೆನಪಿನಲ್ಲಿಡುವುದೂ ಸುಲಭ, ಹುಡುಕುವುದೂ ಸುಲಭ! (ನಿಮ್ಮ ಅನುಪಸ್ಥಿತಿಯಲ್ಲಿ ಇತರರಿಗೆ ಹುಡಕಲೂ ಅನುಕೂಲ).

ಇನ್ನು ಹುಡುಕಲು ಅನೇಕ ಮಾರ್ಗಳಿದೆ. ‘ಸ್ಟಾರ್ಟ್’ ಎಂಬಲ್ಲಿಯೇ ಒಂದು ಡಬ್ಬಿಯಲ್ಲಿ ಕಡತದ ಹೆಸರು/ಪದ ಹಾಕಿದರೂ ಸಾಕಾಗುತ್ತದೆ. ಎಂಟರ್ ಮಾಡಿದರೆ ಹೆಚ್ಚಿನ ಹುಡುಕುವಿಕೆ ಸೌಲಭ್ಯ ತೆರೆದುಕೊಳ್ಳುತ್ತದೆ. ಅಷ್ಟೇ ಏಕೆ? ಹೆಸರು ಮರೆತಿದೆ ಎಂದಿಟ್ಟುಕೊಳ್ಳಿ. ನಿಮಗೆ ಆ ಕಡತದಲ್ಲಿರುವ ಒಂದು ವಿಶಿಷ್ಟ ಪದ ನೆನಪಿದ್ದರೆ ಅದರ ಆಧಾರದ ಮೇಲೆಯೇ ಹುಡುಕಬಹುದು! ಹಾಗಾಗಿ, ಗಾಬರಿಯಾಗುವ ಆವಶ್ಯಕತೆಯೇ ಇಲ್ಲ! ನೀವು ಮಾಡಿದ್ದು ಇದ್ದೇ ಇರುತ್ತದೆ!

ಇನ್ನು ನಮ್ಮ ಕಡತಗಳನ್ನು ಎಲ್ಲಿ ಉಳಿಸುವುದು ಎಂಬ ಪ್ರಶ್ನೆ. ಇದಕ್ಕೆ ಒಂದು ಸೂತ್ರವನ್ನು ಅನುಸರಿಸಿರಿ. ನಮ್ಮ ಹಾರ್ಡ್ ಡಿಸ್ಕಿನಲ್ಲಿ ಸಿ, ಡಿ, ಇ, ಎಫ್‍. – ಎಂದೆಲ್ಲ ಭಾಗಗಳಿರುತ್ತವೆಯಲ್ಲವೆ? ಇವುಗಳಲ್ಲಿ ಯಾವುದರಲ್ಲಿ ಏನಿಡಬೇಕು ಎಂಬುದನ್ನು ತಿಳಿದುಕೊಳ್ಳಿರಿ. ಸಾಮಾನ್ಯವಾಗಿ ಎಲ್ಲವನ್ನೂ ಎಲ್ಲೆಡೆ ತುಂಬಿರುತ್ತೇವೆ. (ಈ ಸಿ ಡಿ ಇ ಫ್ ಅಕ್ಷರಮಾಲೆಯಲ್ಲಿ ಎ ಬಿ ಏಕಿಲ್ಲ ಎಂಬುದೂ ಕುತೂಹಲಕರ ವಿಷಯವೇ! ನಿಮಗೆ ನೆನಪಿರಬಹುದು. ಬಹಳ ಹಿಂದೆ ಹಾರ್ಡ್ ಡಿಸ್ಕಿರದ ಕಂಪ್ಯೂಟರುಗಳಿದ್ದವು. ಅವಕ್ಕೆ ಎರಡು ಡ್ರೈವ್‌ಗಳು ಒಂದು ಎ ಇನ್ನೊಂದು ಬಿ! ಒಂದರಲ್ಲಿ ಕಾರ್ಯಾಚರಣೆ ವ್ಯವಸ್ಥೆಯ ಪ್ಲಾಪಿ ಹಾಕಿ, ಮತ್ತೊಂದರಲ್ಲಿ ನಮ್ಮ ಕೆಲಸಕ್ಕೆ ಬೇಕಾದ ಪ್ಲಾಪಿ ಹಾಕಿ ಕೆಲಸ ಮಾಡುತ್ತಿದ್ದೆವು.

ಈಗ ಹಾರ್ಡ್ ಡಿಸ್ಕಿರಿವುದರಿಂದ ಆ ಡ್ರೈವ್‌ಗಳು ಹೋದವು.) ಮುಂದೆ ಹಾರ್ಡ್‍ಡಿಸ್ಕ್ ‘ಸಿ’ ಎಂದಾಯಿತು. ಅದರ ವಿಭಾಗಗಳೇ ’ಡಿ’, ‘ಇ’, ‘ಎಫ್’ – ಇತ್ಯಾದಿಗಳು. ನಾವು ಹಾರ್ಡ್ ಡಿಸ್ಕನ್ನೇ ‘ಸಿ’ ಎನ್ನುತ್ತೇವೆ. ಈ 'ಸಿ'ಯಲ್ಲಿ ಕಂಪ್ಯೂಟರ್‌ ಕೆಲಸ ಮಾಡಲು ಅವಶ್ಯವಾದ ತಂತ್ರಾಂಶಗಳಿರುತ್ತವೆ. ‘ಸಿ’ ಅನ್ನು ತಂತ್ರಾಂಶಗಳಿಗೇ ಮೀಸಲಿಟ್ಟುಬಿಡುವುದು ಒಳಿತು. ಡಿ, ಇ, ಎಫ್–ಗಳಲ್ಲಿ ನಿಮ್ಮ ಕಡತಗಳು, ಚಿತ್ರಗಳು, ಹಾಡು, ವಿಡಿಯೋಗಳಿರಲಿ. ಏಕೆಂದರೆ ಹಾರ್ಡ್ ಡಿಸ್ಕ್ ಕ್ರಾಶ್ ಆಯಿತು ಎಂದು ಕೇಳಿರುತ್ತೀರಲ್ಲವೆ?

ಹಾಗಾದಾಗ, ಸಾಮಾನ್ಯವಾಗಿ ‘ಸಿ’ ಮಾತ್ರ ತೊಂದರೆಗೆ ಈಡಾಗಿರುತ್ತದೆ. ಆಗ ಅದರಲ್ಲಿರುವ ಎಲ್ಲ ಮಾಹಿತಿ ಅಳಿಸಿ (ಫಾರ್ಮಾಟ್ ಮಾಡಿ) ಮರುವ್ಯವಸ್ಥೆ ಮಾಡುತ್ತಾರೆ. ಆಗ ನಿಮ್ಮ ಮುಖ್ಯ ಕಡತಗಳು ಅಲ್ಲಿದ್ದರೆ ಹೋಗುತ್ತವೆ. ತಂತ್ರಾಂಶಗಳ ಸಿಡಿ ಇರುತ್ತದೆ; ಮತ್ತೆ ಹಾಕುತ್ತಾರೆ. ಅದ್ದರಿಂದ ಕಡತಗಳನ್ನು ಯಾವುದರಲ್ಲಿಸುವುದು ಎಂಬ ಪ್ರಶ್ನೆ. ಇದಕ್ಕೆ ಒಂದು ಸೂತ್ರವನ್ನು ಅನುಸರಿಸಿರಿ. ನಿಮ್ಮ ಮುಖ್ಯಮಾಹಿತಿಗಳನ್ನು ‘ಸಿ’ ಅಲ್ಲದ ವಿಭಾಗದಲ್ಲಿ ಇಡುವುದು ಒಳ್ಳೆಯದು.

ತುಸು ಮುಂದುವರೆದು ನಾವು ಮಾಡಿಕೊಳ್ಳಬೇಕಾಗಿರುವ ಕೆಲಸವೆಂದರೆ ಬ್ಯಾಕ್‍–ಅಪ್‍ ಮಾಡಿಕೊಳ್ಳುವುದು. ಎಂದರೆ ನಾವು ಸಿದ್ಧಪಡಿಸಿಕೊಂಡಿರುವ ಎಲ್ಲ ಕಡತಗಳ ಇನ್ನೊಂದು ಪ್ರತಿಯನ್ನು ಇಟ್ಟುಕೊಳ್ಳುವುದು. ಯಾವುದೇ ಕಾರಣಕ್ಕಾಗಿ ಕಂಪ್ಯೂಟರ್‌ನಲ್ಲಿರುವ ಮಾಹಿತಿ ಹೋದಲ್ಲಿ ಇದು ನಮಗೆ ಕೆಲಸಕ್ಕೆ ಬರುತ್ತದೆ. ಇದು ಬಹಳ ಮುಖ್ಯವಾದ ಸಂಗತಿ. ದೊಡ್ಡ ಸಂಸ್ಥೆಗಳಲ್ಲಿ ಇದನ್ನು ಹೊರಗುತ್ತಿಗೆ ಕೊಡಲಾಗುತ್ತದೆ. ಇರಲಿ, ನಮ್ಮ ಸಣ್ಣ ಆವಶ್ಯಕತೆಗೆ ಏನು ಮಾಡಬಹುದೆಂದು ನೋಡೋಣ.

ನಮ್ಮ ಕಚೇರಿ/ವೈಯಕ್ತಿಕ ಆವಶ್ಯಕತೆಗಳಿಗನುಸಾರವಾಗಿ ತಿಂಗಳು/ಎರಡು ತಿಂಗಳು/ವಾರಕ್ಕೊಮ್ಮೆ ಎಲ್ಲ ಕಡತಗಳನ್ನೂ (ಎಲ್ಲ ವರ್ಡ್, ಎಕ್ಸೆಲ್, ಪವರ್‌–ಪಾಯಿಂಟ್‍)ಗಳನ್ನು ಒಂದು ಹೊಸ ಸಿಡಿಗೆ ಬರೆದು ಕ್ರಮವಾಗಿ ಅದಕ್ಕೆ ಹೆಸರುಕೊಟ್ಟು ಎತ್ತಿಡುವುದು. ಮುಂದಿನ ವಾರ/ತಿಂಗಳು ಮತ್ತೊಂದು ಹೊಸ ಸಿ.ಡಿ.ಗೆ. ಇದರಿಂದ ಯಾವುದೇ ಕಾರಣಕ್ಕೆ ನಮ್ಮ ಕಂಪ್ಯೂಟರ್‌ ಕೈಕೊಟ್ಟರೆ ನಮ್ಮ ಮಾಹಿತಿಯ ಇನ್ನೊಂದು ಪ್ರತಿ ಇದ್ದೇ ಇರುತ್ತದೆ.

ತೀರ ಮಹತ್ವದದ್ದು ಎನಿಸಿದ್ದನ್ನು ನಮ್ಮ ವಿ–ಅಂಚೆ (ಇ–ಮೇಲ್‍)ಗೆ ಕಳಿಸಿಟ್ಟಿರಿ. ಎಲ್ಲಿ ಹೋದರು ಅಲ್ಲಿ ನಮ್ಮ ಕಡತದ ಪ್ರತಿ ಇದ್ದೇ ಇರುತ್ತದೆ. ಒಟ್ಟಾರೆ, ವಿಪರೀತ ಕ್ಷಮತೆಯಿರುವ ತಪ್ಪು ಸರಿ ಗೊತ್ತಾಗದ ಯಂತ್ರದಿಂದ ನಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವ ಜಾಣ್ಮೆ ನಮಗಿರಬೇಕು! ರಾಕ್ಷಸನಿಂದಲೂ ಕೆಲಸ ತೆಗೆಸಬಹುದಲ್ಲವೆ!

ಇನ್ನು ಮುದ್ರಣ. ಸಾಮಾನ್ಯವಾಗಿ ಹೇಗೆ ಮುದ್ರಿಸುವುದು ಎಂಬುದೇ ಅನೇಕರ ಸಂದೇಹ. ನಿಮ್ಮ ಗಣಕಕ್ಕೂ ಮುದ್ರಕಕ್ಕೂ (ಪ್ರಿಂಟರ್‌) ಸಂಪರ್ಕ ಸರಿಯಿದೆಯೇ ಎಂಬುದನ್ನು ಗಮನಿಸಿ. ನೀವು ಸಿದ್ಧಪಡಿಸಿರುವ ಮಾಹಿತಿಯಲ್ಲಿನ ಮಾರ್ಜಿನ್‌ಗಳನ್ನು ಗಮನಿಸಿ. ಅಲ್ಲಿ ‘ಪ್ರಿಂಟ್‍ ಪ್ರಿವ್ಯೂ’ ಎಂಬುದಕ್ಕೆ ಹೋಗಿ ನೋಡಿರಿ. ಅದು ಮುದ್ರಿಸಿದಾಗ ಹೇಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಸರಿಯಿಲ್ಲವೆನಿಸಿದರೆ ಮತ್ತೆ ಹೋಗಿ ಮಾರ್ಜಿನ್ ಇತ್ಯಾದಿಗಳನ್ನು ಸರಿಪಡಿಸಿರಿ.

ನೀವು ಲೆಟರ್‍‍ಹೆಡ್‍ ಬಳಸುತ್ತಿದ್ದರೆ ಒಂದು ಖಾಲಿ ಹಾಳೆಯನ್ನು ಅದರ ಮೇಲಿಟ್ಟು ಎಲ್ಲಿಯವರೆಗೆ ಮುದ್ರಿತ ವಿಷಯವಿದೆ ಗುರುತು ಮಾಡಿಕೊಂಡು ಮಾರ್ಜಿನ್‌ಗಳನ್ನು ಹೆಚ್ಚು ಮಾಡಿರಿ. ಈಗ ಮುದ್ರಿಸಿ ಅದನ್ನು ಲೆಟರ್‍ ಹೆಡ್‌ಗೆ ಹೋಲಿಸಿ ಮಾರ್ಜಿನ್ ಅನ್ನು ಸರಿಪಡಿಸಿಕೊಳ್ಳಿ. ಇದು ಒಮ್ಮೆ ಮಾಡಿಕೊಳ್ಳುವ ಕೆಲಸವಷ್ಟೆ. ಒಂದೆರಡು ಹಾಳೆ ವ್ಯರ್ಥವಾಗಬಹುದು. ಅದನ್ನು ಪುಟ್ಟದಾಗಿ ಕತ್ತಿರಿಸಿಟ್ಟುಕೊಂಡರೆ ಹಿಂಭಾಗದಲ್ಲಿ ಏನನ್ನಾದರೂ ಬರೆಯಲು ಉಪಯೋಗಿಸಬಹುದು.

ಒಟ್ಟಾರೆ, ಕಂಪ್ಯೂಟರ್‌ನ ಕಲಿಕೆಗೆ ಬೇಕಾಗಿರುವುದು ಎಚ್ಚರ. ಏನಾಗುತ್ತಿದೆ –ಎಂಬ ಎಚ್ಚರ. ತಂತಾನೆ ಅದು ಏನೂ ಮಾಡದು –ಎಂಬ ಎಚ್ಚರ. ಆ ಎಚ್ಚರ ನಮಗಿರಬೇಕು. ತನ್ಮಯತೆಯಿಂದ ಕಾರ್ಯವೆಸಗಬೇಕು.  

ದೂಳಿನಿಂದ ರಕ್ಷಿಸಿ
ಕಂಪ್ಯೂಟರ್‌ ಇರುವ ಕಡೆ ದೂಳಿರದಂತೆ ನೋಡಿಕೊಳ್ಳಿ. ಎಷ್ಟೋ ಕಚೇರಿಗಳಲ್ಲಿ ‘ಚಪ್ಪಲಿ ಹೊರಗೆ ಬಿಟ್ಟು ಬನ್ನಿ’ ಎನ್ನುವುದು ದೂಳನ್ನು ತಡೆಯಲೆಂದೇ ಹೌದು. ನಮ್ಮ ವಾತಾವರಣದಲ್ಲಿ ಎಷ್ಟು ದೂಳು ಕಡಿಮೆಯಿರುತ್ತದೆಯೋ ಅಷ್ಟು ಒಳ್ಳೆಯದು ಕಂಪ್ಯೂಟರ್‌ಗಳಿಗೆ. ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಿರಿ.

ಕಂಪ್ಯೂಟರ್‌ನ ಕಲ್ಪವೃಕ್ಷ
ಯಾವ ವಿಷಯ ಗೊತ್ತಿಲ್ಲದಿದ್ದರೂ ಪರವಾಗಿಲ್ಲ – ಒಂದು ಕಲ್ಪವೃಕ್ಷವಿದೆ, ಕಂಪ್ಯೂಟರಿನಲ್ಲಿ! ಅದೇ ‘ಎಫ್‌1 ಕೀಲಿ’ (F1 key). ಇದು ಎಫ್‌ ಮತ್ತು ಒಂದು ಅಲ್ಲ.; ‘ಎಸ್ಕೇಪ್‍’ ಕೀಲಿಯ ಪಕ್ಕದ ‘ಎಫ್‍ 1’. ಇದನ್ನು ಒತ್ತಿದರೆ ಸಹಾಯಕ್ಕೆ ಹೋಗುತ್ತದೆ. ಇಲ್ಲಿ ನೀವು ಕಲಿಯಬೇಕಾದನ್ನು ಟೈಪ್‌ ಮಾಡಿ ಸಹಾಯ ತೋರಿಸುತ್ತದೆ. ತುಸು 'ಸಂಶೋಧನೆ ಮತ್ತು ಅಭಿವೃದ್ಧಿ’ (R & D) ಕಾರ್ಯ ಮಾಡಿ ಕಲಿಯಿರಿ! ಯಾರ ಗೊಡವೆಯೂ ಹಂಗೂ ಬೇಕಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT