ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಪದಕದ ಹೆಗ್ಗುರಿ...

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಎಳವೆಯಲ್ಲಿಯೇ ಬ್ಯಾಡ್ಮಿಂಟನ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತಿದ್ದ ಸೌರಭ್‌ ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಅಪಾರ ಶ್ರದ್ಧೆ ಮತ್ತು ಅರ್ಪಣಾ ಭಾವದಿಂದ ಈ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸಿದ ಅವರು ಭಾರತದ ಬ್ಯಾಡ್ಮಿಂಟನ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಪ್ರಸಿದ್ಧ ಆಟಗಾರ ಪುಲ್ಲೇಲಾ ಗೋಪಿಚಂದ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಸೌರಭ್‌ 19ನೇ ವಯಸ್ಸಿನಲ್ಲೇ  ರಾಷ್ಟ್ರೀಯ ಚಾಂಪಿಯನ್‌ ಕಿರೀಟ ಮುಡಿಗೇರಿಕೊಂಡು ಎಲ್ಲರ ಗಮನ ಸೆಳೆದಿದ್ದವರು. ಅಂತರರಾಷ್ಟ್ರೀಯ ಟೂರ್ನಿಗಳಲ್ಲೂ ವಿಶ್ವದ ಘಟಾನುಘಟಿಗಳ ಎದುರು ಛಲದಿಂದ ಹೋರಾಡಿ ಪ್ರಶಸ್ತಿಗಳ ಬೇಟೆಯಾಡಿರುವ ಸೌರಭ್‌, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲೂ ಛಾಪು ಮೂಡಿಸುತ್ತಿದ್ದಾರೆ. ಈ ಬಾರಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡದಲ್ಲಿ ಆಡುತ್ತಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

* ಬ್ಯಾಡ್ಮಿಂಟನ್‌ ಲೋಕಕ್ಕೆ ಅಡಿ ಇಟ್ಟ ಬಗ್ಗೆ ಹೇಳಿ?
ಅಪ್ಪ ಸರ್ಕಾರಿ ನೌಕರರಾಗಿದ್ದರು. ಅವರು ಬಿಡುವಿನ ವೇಳೆಯಲ್ಲಿ  ಮನೆಯ ಸಮೀಪದಲ್ಲಿದ್ದ ಕ್ಲಬ್‌ಗೆ ಹೋಗುತ್ತಿದ್ದರು. ಆಗ ನಾನೂ ಅವರ ಜೊತೆಗಿರುತ್ತಿದ್ದೆ. ಕ್ಲಬ್‌ನಲ್ಲಿ ಅವರು ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್‌ ಆಡುತ್ತಿದ್ದರು. ಅವರ ಆಟ ನೋಡುತ್ತಾ  ಅದರೆಡೆಗೆ ಆಕರ್ಷಿತನಾದೆ.  ಮುಂದೊಂದು ದಿನ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಬೇಕು ಎಂಬ ಕನಸು ಆಗಲೇ ಚಿಗುರೊಡೆಯಿತು. ಎಂಟನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್‌ ಆಡಲು ಶುರುಮಾಡಿದೆ. ಕ್ರಮೇಣ ಇದರಲ್ಲಿ ನೈಪುಣ್ಯ ಸಾಧಿಸಿ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದೆ. 

* ಗೋಪಿಚಂದ್‌ ಅಕಾಡೆಮಿಗೆ ಸೇರಿದ್ದು ಯಾವಾಗ? ಅಲ್ಲಿ ಯಾವ ರೀತಿಯ ತರಬೇತಿ ಸಿಕ್ಕಿತು?
2008ರಲ್ಲಿ ಅಕಾಡೆಮಿಗೆ ಸೇರಿದೆ. ಅಲ್ಲಿ ರಾಷ್ಟ್ರೀಯ ಕೋಚ್‌ ಗೋಪಿಚಂದ್‌ ಅವರು ಹಲವು ಕೌಶಲಗಳನ್ನು ಕಲಿಸಿಕೊಟ್ಟರು. ಸೀನಿಯರ್‌ ವಿಭಾಗದಲ್ಲಿ ನಾನು ಶ್ರೇಷ್ಠ ಸಾಮರ್ಥ್ಯ ತೋರಲು  ಅವರೇ ಕಾರಣ. ಅವರು ಹೇಳಿಕೊಟ್ಟ ಪಾಠಗಳು ನನ್ನ ವೃತ್ತಿ ಬದುಕಿಗೆ ಹೊಸ ತಿರುವು ನೀಡಿದವು. 

* ಈಗಾಗಲೇ ವಿಶ್ವದ ಘಟಾನುಘಟಿ ಆಟಗಾರರ ವಿರುದ್ಧ ಸೆಣಸಿದ್ದೀರಿ. ಆ ಅನುಭವದ ಬಗ್ಗೆ ಹೇಳಿ?
ಮಲೇಷ್ಯಾದ ಲೀ ಚೊಂಗ್‌ ವೀ, ಡರೆನ್‌ ಲಿಯೆವ್‌, ಜಪಾನ್‌ನ ಕೆನಿಚಿ ಟ್ಯಾಗೊ ಹೀಗೆ ಅನೇಕರ ವಿರುದ್ಧ ಆಡಿದ್ದೇನೆ. ಅವೆಲ್ಲಾ ಮರೆಯಲಾಗದ ಕ್ಷಣಗಳು. ಆಟದಲ್ಲಿ ಸೋಲು ಮತ್ತು ಗೆಲುವು ಇದ್ದಿದ್ದೆ. ಅದರ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ಬದಲಾಗಿ ಎದುರಾಳಿಗಳಿಂದ ಹೊಸ ಹೊಸ ವಿಷಯಗಳನ್ನು ಕಲಿಯಲು ಹಾತೊರೆಯುತ್ತೇನೆ. 

* 2011ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಅನುಭವ ಹೇಗಿತ್ತು?
ಅಪಾರ ಖುಷಿಯಾಗಿತ್ತು. ಅದೇ ವರ್ಷ ನಡೆದಿದ್ದ ಸೈಯದ್‌ ಮೋದಿ ಗ್ರ್ಯಾನ್‌ ಪ್ರಿ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದೆ. ಹೀಗಾಗಿ ತುಂಬಾ ಬೇಸರವಾಗಿತ್ತು. ರಾಷ್ಟ್ರೀಯ ಚಾಂಪಿಯನ್‌ ಕಿರೀಟ ಹಿಂದಿನ ಎಲ್ಲಾ ನಿರಾಸೆಗಳನ್ನು ಮರೆಸಿತ್ತು.

* 2016ರಲ್ಲಿ ನೀವು ಮತ್ತೆ ಅನೇಕ ಟೂರ್ನಿಗಳಲ್ಲಿ ಶ್ರೇಷ್ಠ ಆಟ ಆಡಿ ಸದ್ದು ಮಾಡಿದಿರಲ್ಲ?
ಗಾಯದಿಂದಾಗಿ 2015ರಲ್ಲಿ ಅನೇಕ ಮಹತ್ವದ ಟೂರ್ನಿಗಳಲ್ಲಿ ಆಡಿರಲಿಲ್ಲ.ಗುಣಮುಖನಾದ ನಂತರ  ಕಠಿಣ ತಾಲೀಮು ನಡೆಸಿದ್ದೆ. ರ್‍ಯಾಂಕಿಂಗ್‌ನಲ್ಲಿ ಸ್ಥಾನ ಉತ್ತಮಪಡಿಸಿಕೊಳ್ಳುವುದು ಸೇರಿದಂತೆ ಹಲವು ಸವಾಲುಗಳು ನನ್ನ ಮುಂದಿ ದ್ದವು. ಹೀಗಾಗಿ 2016ರಲ್ಲಿ ಸಾಧ್ಯವಾದಷ್ಟು ಹೆಚ್ಚು  ಟೂರ್ನಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವುದು ಅನಿವಾರ್ಯವಾಗಿತ್ತು. ಸತತ ಪರಿಶ್ರಮ ಮತ್ತು ಅದೃಷ್ಟ ಎರಡೂ ನನ್ನ ಕೈಹಿಡಿದವು. ಹೀಗಾಗಿ ಚೀನಾ ತೈಪೆ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು. ಜೊತೆಗೆ ಮೂರು ಟೂರ್ನಿಗಳಲ್ಲಿ ರನ್ನರ್‌ ಅಪ್‌ ಆದೆ.

* ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಆಡುವ ಆಲೋಚನೆ ಇದೆಯಾ?
ಸದ್ಯಕ್ಕಂತೂ ಅಂತಹ ಯಾವ ಆಲೋಚನೆಯೂ ಇಲ್ಲ. ಈಗ ಸಿಂಗಲ್ಸ್‌ನತ್ತ ಮಾತ್ರ ಚಿತ್ತ ಹರಿಸಿದ್ದೇನೆ. ಮುಂದೆ ನೋಡೋಣ.

* ಪಿಬಿಎಲ್‌ ಬಗ್ಗೆ ಹೇಳಿ?
ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿದೆ. ಈ ಲೀಗ್‌ನಲ್ಲಿ ವಿಶ್ವದ ಘಟಾನುಘಟಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.ಹೀಗಾಗಿ ಇತರ ದೇಶಗಳಲ್ಲಿಯೂ ಲೀಗ್‌ನ ಕಂಪು ಪಸರಿಸಿದೆ. ಲೀಗ್‌ ಶುರುವಾದ ಬಳಿಕ ಆಟಗಾರರು ಆರ್ಥಿಕವಾಗಿ ಸಬಲರಾಗಿದ್ದು, ಕ್ರಿಕಟಿಗರಂತೆ ನಮ್ಮನ್ನು ಹೋದಲೆಲ್ಲಾ ಜನ ಗುರುತಿಸುತ್ತಾರೆ. ಆಗೆಲ್ಲಾ ತುಂಬಾ ಆನಂದವಾಗುತ್ತದೆ.

* ಲೀಗ್‌ನಿಂದ  ಪ್ರಯೋಜನವೇನು?
ಇದರಿಂದ ಸಾಕಷ್ಟು ಅನುಕೂಲಗಳಿವೆ. ಮೊದಲನೆಯದಾಗಿ ಪ್ರತಿಭಾನ್ವೇಷ ಣೆಗೆ ಲೀಗ್‌ ನಾಂದಿಯಾಗಿದೆ. ಲೀಗ್‌ನಲ್ಲಿ ವಿದೇಶಿ ಆಟಗಾರರು ಭಾಗವಹಿಸುತ್ತಿದ್ದು ಅವರಿಂದ ನಮ್ಮ ಆಟಗಾರರು ಅನೇಕ ಮಹತ್ವದ ವಿಷಯಗಳನ್ನು ಕಲಿಯಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಈ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸಲೂ ಲೀಗ್‌ ಪ್ರಯೋಜನಕಾರಿಯಾಗಿದೆ.

* ಹಿಂದಿನ ಆವೃತ್ತಿಗಳಲ್ಲಿ ನೀವು ಯಾವ ತಂಡಗಳಲ್ಲಿ ಆಡಿದ್ದಿರಿ?
ಮೊದಲ ಆವೃತ್ತಿಯಲ್ಲಿ  ಪುಣೆ ಹಾಗೂ ಹೋದ ಆವೃತ್ತಿಯಲ್ಲಿ ಲಖನೌ ತಂಡವನ್ನು ಪ್ರತಿನಿಧಿಸಿದ್ದೆ.

* ಈ ಸಲ ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಭಾಗವಾಗಿದ್ದೀರಿ. ಹೇಗನಿಸುತ್ತಿದೆ?
ತುಂಬಾ ಖುಷಿಯಾಗುತ್ತಿದೆ. ಬೆಂಗಳೂರು ಉದ್ಯಾನ ನಗರಿ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಜನ, ವಾತಾವರಣ ತುಂಬಾ ಇಷ್ಟ.  ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಆಟ ಆಡಿ ತಂಡದ ಗೆಲುವಿಗೆ ಶ್ರಮಿಸುತ್ತೇನೆ.

* ಬೆಂಗಳೂರು ತಂಡದ ಬಗ್ಗೆ ಹೇಳಿ?
ತಂಡ ಪ್ರತಿಭಾನ್ವಿತರ ಕಣಜದಂತಿದ್ದು, ಸಮತೋಲಿತವಾಗಿದೆ.

* ಈ ಬಾರಿ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆಯೇ?
ಲೀಗ್‌ನಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳು ಪ್ರಶಸ್ತಿ ಗೆಲ್ಲಬೇಕೆಂಬ ಮಹಾದಾಸೆ ಹೊತ್ತುಕೊಂಡೇ ಅಭಿಯಾನ ಆರಂಭಿಸಿವೆ. ನಾವು ಎಲ್ಲಾ ವಿಭಾಗಗಳಲ್ಲಿ ಶಕ್ತಿಯುತ ವಾಗಿದ್ದು ಟ್ರೋಫಿ ಎತ್ತಿಹಿಡಿಯಬೇಕೆಂಬ ಹಂಬಲ ಹೊತ್ತಿದ್ದೇವೆ. ಹೀಗಾಗಿ ಪ್ರತಿ ಪಂದ್ಯದಲ್ಲಿಯೂ ಗೆಲುವಿನ ತೋರಣ ಕಟ್ಟಲು ಶ್ರಮಿಸುತ್ತಿದ್ದೇವೆ.

* ಲೀಗ್‌ನಲ್ಲಿ ತುಂಬಾ ಬಲಿಷ್ಠವಾದ ತಂಡ ಯಾವುದಾದರೂ ಇದೆಯೇ?
ಎಲ್ಲಾ ತಂಡಗಳಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ನಿರ್ದಿಷ್ಟವಾಗಿ ಒಂದೆರಡು ತಂಡವನ್ನು ಬಲಿಷ್ಠ ಎಂದು ಬಿಂಬಿಸಿದರೆ ತಪ್ಪಾಗುತ್ತದೆ. ನನ್ನ ಪ್ರಕಾರ ಪಂದ್ಯದ ದಿನ ಯಾರು ಗುಣಮಟ್ಟದ ಆಟ ಆಡಿ ಗೆಲುವು ಒಲಿಸಿಕೊಳ್ಳುತ್ತಾರೊ ಅವರೇ ಬಲಿಷ್ಠರು.

* ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ನಿಮ್ಮ ತಂಡದ ಸಹ ಮಾಲೀಕರಾಗಿ ದ್ದಾರೆ. ಅವರು ಆಟಗಾರರಿಗೆ ಏನಾದರು ಸಲಹೆ ನೀಡಿದ್ದಾರೆಯೇ?
ಮುಂಬೈ ಲೆಗ್‌ನ ವೇಳೆ  ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ವೀಕ್ಷಿಸಿದ್ದು ಬಿಟ್ಟರೆ ಇದುವರೆಗೂ ಅವರು ನಮ್ಮನ್ನು ಭೇಟಿ ಮಾಡಿಲ್ಲ.

* 11 ಪಾಯಿಂಟ್‌ ಮಾದರಿಯಿಂದ ಆಟಗಾರರ ಮೇಲೆ ಒತ್ತಡ ಹೆಚ್ಚಿದೆಯಾ?
ಹೌದು, ಹೊಸ  ನಿಯಮದಿಂದ ಆಟದ ವೇಗ ಹೆಚ್ಚಿದೆ.  ಹೀಗಾಗಿ ಶುರುವಿ ನಿಂದಲೇ ಎಚ್ಚರಿಕೆ ವಹಿಸುವ ಜೊತೆಗೆ ಗುಣಮಟ್ಟಕ್ಕೆ ಒತ್ತು ನೀಡುಬೇಕಿರುವುದು ಅತ್ಯಗತ್ಯ. ಆದ್ದರಿಂದ ಆಟಗಾರರು ಒತ್ತಡಕ್ಕೆ ಒಳಗಾಗುವುದು ಸಹಜ.

*  ‘ಟ್ರಂಪ್‌ ಮ್ಯಾಚ್‌’ನ ಮಹತ್ವ ಏನು?
ತಂಡದ ಸೋಲು, ಗೆಲುವಿನಲ್ಲಿ ‘ಟ್ರಂಪ್‌ ಪಂದ್ಯ’ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಪಂದ್ಯವನ್ನು ಸೋತರೆ ತಂಡ ಒಂದು ಪಾಯಿಂಟ್‌ ಕಳೆದುಕೊಳ್ಳಲಿದೆ. ಹೀಗಾಗಿ ಈ ಪಂದ್ಯ ಗೆಲ್ಲುವುದು ಎಲ್ಲಾ ತಂಡಗಳಿಗೂ ಮಹತ್ವದ್ದೆನಿಸಿದೆ.

* ನಿಮ್ಮ ಬದುಕಿನ ಮಹತ್ವದ ಗುರಿ?
ಎಲ್ಲಾ ಕ್ರೀಡಾಪಟುಗಳಿಗೂ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲಬೇಕೆಂಬ ಮಹದಾಸೆ ಇರುತ್ತದೆ. ನಾನು ಕೂಡಾ ಇದರಿಂದ ಹೊರತಾಗಿಲ್ಲ. ಅದಕ್ಕೂ ಮುನ್ನ ಆಲ್‌ ಇಂಗ್ಲೆಂಡ್ ಓಪನ್‌, ವಿಶ್ವ ಚಾಂಪಿಯನ್‌ಷಿಪ್‌ನಂತಹ ಮಹತ್ವದ ಟೂರ್ನಿಗಳಲ್ಲಿ ಪದಕ ಗೆಲ್ಲಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ.                              

***
* 45 ವಿಶ್ವ ಕ್ರಮಾಂಕ ಪಟ್ಟಿಯಲ್ಲಿ  ಹೊಂದಿರುವ ಸ್ಥಾನ
* 30ಗರಿಷ್ಠ ವಿಶ್ವ ರ‍್ಯಾಂಕಿಂಗ್‌
 
                                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT