ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರಣಿ ಕುತೂಹಲದ ಗಣಿ

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿರುವ ಮಹೇಂದ್ರಸಿಂಗ್ ದೋನಿ ಬ್ಯಾಟಿಂಗ್‌ನಲ್ಲಿ ಮಿಂಚುವರೆ? ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಟೆಸ್ಟ್ ಕ್ರಿಕೆಟ್‌ ಮಾದರಿಯಲ್ಲಿಯೇ ಏಕದಿನ ಮತ್ತು ಟ್ವೆಂಟಿ–20 ಟೂರ್ನಿಗಳಲ್ಲಿ ಮಿಂಚುವುದೇ? ಮೂರು ವರ್ಷಗಳ ನಂತರ ತಂಡಕ್ಕೆ ಮರಳಿರುವ ಆಲ್‌ರೌಂಡರ್ ಯುವರಾಜ್ ಸಿಂಗ್‌ಗೆ ಮರುಜನ್ಮ ಸಿಗುವುದೇ? 

ಭಾರತದ ಕ್ರಿಕೆಟ್‌ ಆಡಳಿತದಲ್ಲಿ ಅಮೂಲಾಗ್ರ ಸುಧಾರಣೆಗೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಆಟಗಾರರ ಮೇಲೆ ಏನಾದರೂ ಪರಿಣಾಮ ಬೀರಬಹುದೇ? ಅಧ್ಯಕ್ಷ ಮತ್ತು ಕಾರ್ಯದರ್ಶಿಗಳೇ ಇಲ್ಲದ ಬಿಸಿಸಿಐ, ಪದಾಧಿಕಾರಿಗಳು ನಿರ್ಗಮಿಸುತ್ತಿರುವ ರಾಜ್ಯ ಸಂಸ್ಥೆಗಳು ಯಾವ ರೀತಿ ಪಂದ್ಯಗಳನ್ನು ಆಯೋಜನೆ ಮಾಡಬಹುದು?

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಬಹುಶ: ಯಾವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಮುನ್ನ ಇಷ್ಟೊಂದು ಪ್ರಶ್ನೆಗಳು ಧುತ್ತೆಂದು ಎದುರಾಗಿರಲಿಲ್ಲ. ಆದರೆ, ಜನವರಿ 15 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಣ ಆರಂಭವಾಗಲಿರುವ ಏಕದಿನ ಸರಣಿಗೂ ಮುಂಚೆ ಈ ಎಲ್ಲ ಪ್ರಶ್ನೆಗಳೂ ಕ್ರಿಕೆಟ್‌ ಅಂಗಳದ ಸುತ್ತ ಗಿರಕಿ ಹೊಡೆಯುತ್ತಿವೆ. ಕಳೆದ ಒಂದು ವಾರದಲ್ಲಿ ಬಿಸಿಸಿಐನಲ್ಲಿ ನಡೆದ ಮಹತ್ವದ ಬೆಳವಣಿಗೆಗಳು  ಚರ್ಚೆಗೆ ಗ್ರಾಸವಾಗಿವೆ.

ಇದೆಲ್ಲದರ ನಡುವೆಯೂ ಇಂಗ್ಲೆಂಡ್ ಎದುರಿನ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ. ಹೋದ ತಿಂಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4–0ಯಿಂದ ಗೆದ್ದಿದ್ದ ಆತಿಥೇಯ ತಂಡವು ಜಯದ ಓಟ ಮುಂದುವರೆಸುವತ್ತ ಚಿತ್ತ ನೆಟ್ಟಿದೆ.

ಇನ್ನು ಕೊಹ್ಲಿ ಯುಗ
2014ರ ಡಿಸೆಂಬರ್‌ನಿಂದ ಟೆಸ್ಟ್ ತಂಡದ ನಾಯಕರಾಗಿದ್ದ ವಿರಾಟ್ ಈಗ ಸೀಮಿತ ಓವರ್‌ಗಳ ತಂಡವನ್ನೂ ಮುನ್ನಡೆಸಲಿದ್ದಾರೆ. ಸತತ ಐದು ಟೆಸ್ಟ್‌ ಸರಣಿಗಳಲ್ಲಿ ಗೆದ್ದ ಸಾಧನೆ ಮಾಡಿರುವ ಕೊಹ್ಲಿ ಬಳಗವು ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಏಕದಿನ ಮತ್ತು ಟ್ವೆಂಟಿ–20 ಟೂರ್ನಿಗಳಲ್ಲಿಯೂ ಅವರು ತಮ್ಮ ಸಾಧನೆ ತೋರುವ ಕಾಲ ಬಂದಿದೆ.

ಟೆಸ್ಟ್ ತಂಡದ ನಾಯಕತ್ವದ ಹೊಣೆ ನಿಭಾಯಿಸುವ ಭರದಲ್ಲಿ ಕೊಹ್ಲಿ ತಮ್ಮ ಬ್ಯಾಟಿಂಗ್‌ ಲಯವನ್ನು ಕಳೆದುಕೊಂಡಿಲ್ಲ. ಒಂದೇ ವರ್ಷದಲ್ಲಿ ಮೂರು ದ್ವಿಶತಕ ದಾಖಲಿಸಿ ರನ್‌ಗಳ ಹೊಳೆಯನ್ನೇ ಹರಿಸಿದ್ದಾರೆ. ಅಲ್ಲದೇ ಅವರ ಬ್ಯಾಟಿಂಗ್ ಕೌಶಲ್ಯಗಳು ಮತ್ತು ರನ್‌ ಹಸಿವು ದ್ವಿಗುಣಗೊಳ್ಳುತ್ತಲೇ ನಡೆದಿದೆ. ಅಕ್ರಮಣಕಾರಿ ಸ್ವಭಾವದಲ್ಲಿಯೂ ಸ್ವಲ್ಪ ರಾಜಿ ಮಾಡಿಕೊಂಡಿರುವ ಕೊಹ್ಲಿ ಸಮಾಧಾನಚಿತ್ತದಿಂದ ವ್ಯವಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆಟದ ಬೇರೆಲ್ಲ ದಾಖಲೆಗಳಲ್ಲಿ ದೋನಿಯನ್ನು ಮೀರಿಸುವ ಸಾಮರ್ಥ್ಯ ಅವರಿಗೆ ಇದೆ. ಆದರೆ ‘ಕೂಲ್ ಕ್ಯಾಪ್ಟನ್’ ಪಟ್ಟಕ್ಕೆ ಏರುವುದು ಮಾತ್ರ ಕಷ್ಟಸಾಧ್ಯವೇ ಸರಿ. ಅದು ಅವರ ಮುಂದಿರುವ ಪ್ರಮುಖ ಸವಾಲು ಕೂಡ.

ಯುವಪಡೆಗೆ ಅವಕಾಶ
ಸ್ಪರ್ಧಾತ್ಮಕತೆ ಹೆಚ್ಚಾಗಿರುವ ಇಂದಿನ ಕ್ರಿಕೆಟ್‌ನಲ್ಲಿ ಆಟಗಾರರು ಗಾಯದ ಸಮಸ್ಯೆಯನ್ನೂ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಇದರಿಂದಾಗಿ ಬೆಂಚ್‌ನಲ್ಲಿರುವ ಆಟಗಾರರು ಸದಾಕಾಲ ಸಿದ್ಧರಾಗಿ ಇರುವ ಪರಿಸ್ಥಿತಿ ಇದೆ. ಟೆಸ್ಟ್ ಸರಣಿಯಲ್ಲಿ ಎದುರಾಗಿದ್ದ ಗಾಯದ ಸಮಸ್ಯೆಯಿಂದ ತಂಡವು ಪಾರಾಗಲು ಕಾಯ್ದಿಟ್ಟ ಆಟಗಾರರು ನೆರವಿಗೆ ಬಂದರು.

ಅವರಿಗೆ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯು ಉತ್ತಮ ಅವಕಾಶವಾಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಸುರೇಶ್ ರೈನಾ ತಂಡಕ್ಕೆ ಮರಳಿದ್ದಾರೆ. ಬಹಳ ದಿನಗಳ ನಂತರ ಅವರ ಆಟವನ್ನು ನೋಡುವ ಅವಕಾಶ ಸಿಗಲಿದೆ.

ಕಿವೀಸ್ ಎದುರಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ಅವರಿಗೆ ಬೌಲಿಂಗ್ ವಿಭಾಗದ ಸಾರಥ್ಯದ ಹೊಣೆ ಬೀಳಬಹುದು. ಅನುಭವಿ ಉಮೇಶ್ ಯಾದವ್, ಇಶಾಂತ್ ಶರ್ಮಾ, ಡೆತ್ ಓವರ್ ಪರಿಣತ ಜಸ್‌ಪ್ರೀತ್ ಬೂಮ್ರಾ ತಂಡದಲ್ಲಿರುವುದು ಬೌಲಿಂಗ್‌ ವಿಭಾಗಕ್ಕೆ ಬಲ ಬಂದಿದೆ.

ಅಕ್ಷರ್ ಪಟೇಲ್, ರವೀಂದ್ರ ಜಡೇಜ ಮತ್ತು  ಅಶ್ವಿನ್ ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಅಮೂಲ್ಯ ಕಾಣಿಕೆ ನೀಡುವ ಸಮರ್ಥರು. ಆದರೆ, ತಂಡಕ್ಕೆ ಪ್ರಮುಖ ಚಿಂತೆ ಇರುವುದು ಆರಂಭಿಕ ಜೋಡಿಯದ್ದು. ರೋಹಿತ್ ಶರ್ಮಾ  ಗಾಯಗೊಂಡಿದ್ದಾರೆ. ಆದ್ದರಿಂದ ಶಿಖರ್ ಧವನ್ ಅವರಿಗೆ ಫಾರ್ಮ್‌ಗೆ ಮರಳಲು ಅವಕಾಶ ಲಭಿಸುವ ಸಾಧ್ಯತೆ ಇದೆ.  ಅವರು ಕೆ.ಎಲ್. ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. 

ಕಳೆದ ಸರಣಿಯಲ್ಲಿ ಹೆಚ್ಚು ರನ್ ಗಳಿಸದ ಕರ್ನಾಟಕದ ಮನೀಷ್ ಪಾಂಡೆ, ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದರು. ಈಗ ಎರಡೂ ಮಾದರಿಯ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಹೊಸ ಹುಡುಗ ರಿಷಭ್ ಪಂತ್ ಟ್ವೆಂಟಿ–20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಅಜಿಂಕ್ಯ  ಮತ್ತು ಧವನ್ ಚುಟುಕು ಕ್ರಿಕೆಟ್ ತಂಡದಲ್ಲಿ ಇಲ್ಲ.   ಐಪಿಎಲ್‌ನಲ್ಲಿ ಮಿಂಚಿದ್ದ ಮನದೀಪ್ ಸಿಂಗ್ ಮತ್ತು ಯುಜುವೇಂದ್ರ ಚಹಾಲ್ ತಂಡದಲ್ಲಿದ್ದಾರೆ.

ಕ್ರಿಸ್‌ಮಸ್ ಖುಷಿ
ಕ್ರಿಸ್‌ಮಸ್ ಹಬ್ಬದ ರಜಾ ಮುಗಿಸಿ ಬಂದಿರುವ ಇಂಗ್ಲೆಂಡ್ ತಂಡವು ಟೆಸ್ಟ್ ಸರಣಿ ಸೋಲಿನ ಕಹಿ ಮರೆಯುವ ಪ್ರಯತ್ನದಲ್ಲಿದೆ. ಏಕದಿನ ಸರಣಿಯಲ್ಲಿ ಗೆಲುವಿನ ಕೇಕ್ ಸವಿಯುವ ಛಲದಲ್ಲಿದೆ. ಭಾರತದಲ್ಲಿ 2001ರಲ್ಲಿ ಸರಣಿ ಸಮ ಮಾಡಿಕೊಂಡಿದ್ದ ಇಂಗ್ಲೆಂಡ್ ನಂತರ ಇಲ್ಲಿ ಆಡಿದ್ದ ಮೂರು ಸರಣಿಗಳಲ್ಲಿಯೂ ಸೋತಿತ್ತು. 2014ರಲ್ಲಿ ಇಂಗ್ಲೆಂಡ್‌ ತಂಡವನ್ನು ಅದರ ತವರಿನಲ್ಲಿಯೇ ಭಾರತವು ಮಣಿಸಿ ಬಂದಿತ್ತು.

ಆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಭಾರತದಲ್ಲಿ ಗೆಲುವಿನ ಛಾಪು ಒತ್ತುವ ತವಕದಲ್ಲಿ ಏಯಾನ್ ಮಾರ್ಗನ್ ನೇತೃತ್ವದ ಪಡೆ ಇದೆ. ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯಲ್ಲಿ ಒತ್ತಡಗಳ ನಡುವೆಯೂ ಭಾರತ ಗೆಲುವಿನ ಓಟ ಮುಂದುವರೆಸುವುದೋ, ಪ್ರವಾಸಿ ಬಳಗವು ಜಯದ ಸಿಹಿ ಸವಿಯಬಹುದೋ ಎಂಬ ಕುತೂಹಲ ಗರಿಗೆದರಿದೆ. 

       
ಕಾಲಚಕ್ರದ ವಿಸ್ಮಯ
ಭಾರತ ಕ್ರಿಕೆಟ್‌ ಅಭಿಮಾನಿಗಳ ಕಣ್ಮಣಿ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ನೋಡುತ್ತ ಬೆಳೆದವರು ಮಹೇಂದ್ರಸಿಂಗ್ ದೋನಿ. ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಆರಂಭಿಸಿ 13 ವರ್ಷಗಳ ನಂತರ ದೋನಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ರಾಂಚಿಯ ಮಹಿ 2004ರಲ್ಲಿ ತಂಡಕ್ಕೆ ಆಯ್ಕೆಯಾದಾಗ ಸಚಿನ್ ಸಾಧನೆಯ ಉತ್ತುಂಗದಲ್ಲಿದ್ದರು. ಅದಾಗಿ ಮೂರು ವರ್ಷಗಳ ನಂತರ ದೋನಿ ನಾಯಕತ್ವ ವಹಿಸಿಕೊಂಡರು.

ಆದರೆ, ಹಲವು ದಾಖಲೆಗಳ ಒಡೆಯ, ಅನುಭವಿ ಆಟಗಾರ ಸಚಿನ್ ತಂಡದಲ್ಲಿ ಒಬ್ಬ ಆಟಗಾರನಾಗಿ ಉಳಿದರು. 2012ರಲ್ಲಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವವರೆಗೂ ಮಹಿಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ಅಲ್ಲದೇ ತಂಡದ ಯಶಸ್ಸಿನಲ್ಲಿ ದೋನಿಗೆ ಬೆನ್ನೆಲುಬಾಗಿ ನಿಂತರು. ವಯಸ್ಸು, ಸಾಧನೆ. ಪ್ರತಿಷ್ಠೆಗಳು ಅಡ್ಡ ಬರಲಿಲ್ಲ. ಇದೀಗ ಕಾಲ ಮತ್ತೆ ಮಗ್ಗಲು ಬದಲಿಸಿದೆ.

ದೋನಿ ನಾಯಕತ್ವದ ಭಾರತ ತಂಡಕ್ಕೆ 2008ರಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಈಗ ನಾಯಕರಾಗಿದ್ದಾರೆ. 2011ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ದೆಹಲಿಯ ವಿರಾಟ್ 2014ರಲ್ಲಿ ದೋನಿ ನಿವೃತ್ತಿಯ ನಂತರ ನಾಯಕತ್ವ ವಹಿಸಿದ್ದರು. ಆದರೆ, ಈಗ ಸೀಮಿತ ಓವರ್‌ಗಳ ಜವಾಬ್ದಾರಿಯೂ ಅವರಿಗೆ ಸಿಕ್ಕಿದೆ.

‘ದೋನಿ ನನ್ನ ಸಾರ್ವಕಾಲಿಕ ನಾಯಕ. ಅವರಂತಹ ಮುಂದಾಳತ್ವದ ವ್ಯಕ್ತಿತ್ವ ಎಲ್ಲರಲ್ಲಿಯೂ ಇರುವುದು ಅಪರೂಪ. ಅವರಿಂದ ಕಲಿತದ್ದು ಬಹಳಷ್ಟು. ಇನ್ನು ಮುಂದೆಯೂ ಅವರ ಮಾರ್ಗದರ್ಶನ ಪಡೆಯುತ್ತಲೇ ತಂಡದ ಯಶಸ್ಸಿಗೆ ಶ್ರಮಿಸುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ.

ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ತಂಡಕ್ಕೆ ದೋನಿಯ ಮಾರ್ಗದರ್ಶನ ಲಭಿಸಲಿದ್ದು ಮತ್ತಷ್ಟು ನಾಯಕರು ಹೊರಹೊಮ್ಮಿದರೆ ಅಚ್ಚರಿಪಡಬೇಕಿಲ್ಲ. ಹಿರಿಯರು ಕಿರಿಯರಿಗೆ ಉನ್ನತ ಸ್ಥಾನವನ್ನು ವರ್ಗಾಯಿಸುತ್ತ ಹೋಗುವ ಇಂತಹ ರೂಢಿಯಿಂದಲೇ ಕ್ರಿಕೆಟ್‌ ಸೊಬಗು ಅರಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT