ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಕೋನ ಬದಲಾಗಲಿ

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದ ನಡುವೆಯೇ ಬೆಂಗಳೂರಿನಲ್ಲಿ ನಾಗರಿಕರು ಎಂದು ಕರೆಸಿಕೊಳ್ಳುವ ಎಲ್ಲರೂ ತಲೆತಗ್ಗಿಸುವಂತಹ ದುರ್ಘಟನೆಗಳು ಜರುಗಿವೆ. ನೂತನ ವರ್ಷದ ಆಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಹೆಣ್ಣುಮಕ್ಕಳು ಕಿಡಿಗೇಡಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ  ಕುರಿತು ನಮ್ಮ ರಾಜಕೀಯ ಮುಖಂಡರು ನೀಡಿರುವ ಹೇಳಿಕೆಗಳು ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿವೆ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕಿರುಕುಳಗಳಿಗೆ ಅವರ ಉಡುಗೆ ತೊಡುಗೆ, ಅವರ ವರ್ತನೆಯೇ ಕಾರಣ ಎಂದು ಅವರನ್ನೇ ದೂಷಿಸುವ ಸಂಕುಚಿತ ಮನೋಭಾವ ಇನ್ನೂ ಮುಂದುವರಿದಿದೆ. ಆದರೆ ನಿಜವಾಗಿಯೂ ಇಲ್ಲಿ ಕಾಡುವ ಪ್ರಶ್ನೆ ಎಂದರೆ ಹೆಣ್ಣನ್ನು ನೋಡುವ ದೃಷ್ಟಿ ಹೇಗಿರಬೇಕು ಎಂಬುದು.

ನಿಜವಾಗಿಯೂ ಸುಸಂಸ್ಕೃತನಾದ ವ್ಯಕ್ತಿ ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುತ್ತಾನೆಯೇ? ಕೇವಲ ಉಡುಗೆ ತೊಡುಗೆಗಳು ದೌರ್ಜನ್ಯ ಎಸಗಲು ಪ್ರೇರೇಪಿಸುವುದಾದರೆ ಅಂತಹ ಮನುಷ್ಯನ ಸಂಸ್ಕೃತಿ, ಮನೋಭಾವ, ಅಭಿರುಚಿ ಎಂತಹುದು? ಮತ್ತೊಂದು ವಾಸ್ತವವೆಂದರೆ, ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ಒಂದಲ್ಲ ಒಂದು ಹೆಣ್ಣಿನ ಮೇಲೆ ದೌರ್ಜನ್ಯ ಜರುಗುತ್ತಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ 2015ರಲ್ಲಿ  3,27,394 ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಅದರ ಪೈಕಿ ಲೈಂಗಿಕ ಕಿರುಕುಳದ ಪ್ರಕರಣಗಳು 82,422. ಹಾಗಾದರೆ, ದೌರ್ಜನ್ಯಕ್ಕೆ ಒಳಗಾದ ಎಲ್ಲಾ ಹೆಣ್ಣುಮಕ್ಕಳ ವರ್ತನೆಯನ್ನು ಪ್ರಶ್ನೆ ಮಾಡಲಾಗುತ್ತದೆಯೇ? ಅದು ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುವುದಿಲ್ಲವೇ?

ಇಂತಹ ದುರ್ಘಟನೆಗಳಿಗೆ ಪಾಶ್ಚಿಮಾತ್ಯ ಕೊಳೆತ ಸಂಸ್ಕೃತಿಯ ಪ್ರಭಾವವೇ ಕಾರಣವೆಂದು ಹೇಳುತ್ತಾರೆ. ಆದರೆ ಭಾರತದಲ್ಲಿ ಮರ್ಯಾದೆಗೇಡಿ ಹತ್ಯೆ, ವರದಕ್ಷಿಣೆ ಸಾವು, ಹೆಣ್ಣು  ಭ್ರೂಣ ಹತ್ಯೆ ನಡೆಯುವುದಿಲ್ಲವೇ? ಇದು ಯಾವ ಸಂಸ್ಕೃತಿ? ಪರಸ್ಪರರ ಮೇಲಿನ ಗೌರವವೇ ನಿಜವಾದ ಸಂಸ್ಕೃತಿ. ಅದಕ್ಕೆ ಗಡಿಗಳ ಅಥವಾ ದೇಶಗಳ ರೇಖೆ ಅಗತ್ಯವಿಲ್ಲ.

ಹೆಣ್ಣು ಭೋಗದ ವಸ್ತುವಲ್ಲ. ಇಂತಹ ಧೋರಣೆಗಳಿಗೆ ಮುಖ್ಯ ಕಾರಣ ಪುರುಷ ಪ್ರಧಾನ ಸಮಾಜ. ದೌರ್ಜನ್ಯ ಎಸಗುವವರನ್ನು ಶಿಕ್ಷಿಸಬೇಕೇ ಹೊರತು ಅನ್ಯಾಯಕ್ಕೆ ಒಳಗಾದವರನ್ನು ದೂಷಿಸುವುದಲ್ಲ. 

ನಮ್ಮ ಸಮಾಜದಲ್ಲಿ ಕುಸಿಯುತ್ತಿರುವ ನೀತಿ, ನೈತಿಕತೆ, ಉನ್ನತ ಸಂಸ್ಕೃತಿ ಮತ್ತು ಮೌಲ್ಯಗಳಿಂದಾಗಿ ಇಂದು ಇಂತಹ ಘಟನೆಗಳು ಹೆಚ್ಚುತ್ತಿವೆ.   ರಾಜಕಾರಣಿಗಳೇ ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದನ್ನು ಕಂಡಾಗ ನಿಜಕ್ಕೂ ವಿಷಾದವೆನಿಸಿತು. ಸರ್ಕಾರಕ್ಕೆ ನಿಜವಾಗಿಯೂ ಹೆಣ್ಣುಮಕ್ಕಳನ್ನು ರಕ್ಷಿಸುವ ಇಚ್ಛಾಶಕ್ತಿಯಿದ್ದಲ್ಲಿ, ಅಶ್ಲೀಲ ಸಿನಿಮಾ, ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಲಿ.
-ಸಿಂಧೂರ ಎಚ್.ಎಂ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT