ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟಾರ್ಕ್ಟಿಕಾದ ಬೃಹತ್‌ ಮಂಜುಗಡ್ಡೆ ಹೋಳು!

ಜಾಗತಿಕ ತಾಪಮಾನದ ಬಿಸಿ: ವೇಗವಾಗಿ ಕರಗುತ್ತಿರುವ ‘ಲಾರ್ಸೆನ್‌ ಸಿ’ ­­
Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಇ): ಜಾಗತಿಕ ತಾಪಮಾನದ ಬಿಸಿ ಈಗ ಅಂಟಾರ್ಕ್ಟಿಕಾ ಮಂಜುಗಡ್ಡೆಗೆ ಮತ್ತಷ್ಟು ತಟ್ಟಿದೆ. ತಾಪಮಾನ ತೀವ್ರತೆ ಪರಿಣಾಮ ಬೃಹತ್‌ ಮಂಜುಗಡ್ಡೆಯೇ ಹೋಳಾಗುವ ಸ್ಥಿತಿ ತಲುಪಿರುವುದು ಆತಂಕ ಮೂಡಿಸಿದೆ. ಇದರಿಂದ ಸಮುದ್ರದ ಮಟ್ಟ ಹೆಚ್ಚಿಸುವ ಮೂಲಕ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ವಿಷಯವನ್ನು ಪುಷ್ಟಿಕರಿಸುವಂತೆ ಕಳೆದ ವರ್ಷ ನವೆಂಬರ್‌ 10ರಂದು  ‘ಲಾರ್ಸೆನ್‌ ಸಿ’ ಹೆಸರಿನ ಮಂಜುಗಡ್ಡೆಯಲ್ಲಿ ಬಿರುಕು ಉಂಟಾಗಿರುವ ಚಿತ್ರಗಳನ್ನು ನಾಸಾ ವಿಜ್ಞಾನಿಗಳು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

ನ್ಯೂಯಾರ್ಕ್‌ನ ಮ್ಯಾನ್‌ಹಟ್ಟನ್‌ನ ಪ್ರದೇಶಕ್ಕಿಂತಲೂ 100 ಪಟ್ಟು ದೊಡ್ಡದಾಗಿರುವ  ‘ಲಾರ್ಸೆನ್‌ ಸಿ’ ಮಂಜುಗಡ್ಡೆ ಹೋಳಾಗಲಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಬಿರುಕು ದಿಢೀರನೆ ವೇಗ ಪಡೆದುಕೊಂಡಿದ್ದು, ಕಳೆದ ವರ್ಷದ ಡಿಸೆಂಬರ್‌ ವೇಳೆಗೆ 18 ಕಿಲೋಮೀಟರ್‌ದಷ್ಟು ವಿಸ್ತರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

2011ರಲ್ಲಿ  ಕೇವಲ 50 ಮೀಟರ್‌ಗಿಂತ ಕಡಿಮೆ ಬಿರುಕು ಕಾಣಿಸಿಕೊಂಡಿದ್ದರೆ, ಇದೀಗ  500ಮೀಟರ್‌ಗೂ ಹೆಚ್ಚು ಬಿರುಕು ಉಂಟಾಗಿದೆ. 2016ರ ಆರಂಭದಲ್ಲಿ ಈ ಮಂಜುಗಡ್ಡೆಯಲ್ಲಿ 110 ಕಿ.ಮೀ. ಉದ್ದ, 299 ಅಡಿ ಅಗಲ ಹಾಗೂ 500 ಮೀಟರ್ ಆಳದ ಬಿರುಕು ಪತ್ತೆಯಾಗಿತ್ತು.

ಮಂಜುಗಡ್ಡೆ ಹೋಳಾದರೆ ಸಮುದ್ರದ ಮಟ್ಟ 10 ಸೆಂಟಿಮೀಟರ್‌ಗಳಷ್ಟು ಹೆಚ್ಚಾಗಲಿದೆ. ಹವಾಮಾನ ಬದ ಲಾವಣೆಯೇ ಈ ಅವಘಡಕ್ಕೆ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ಮಂಜುಗಡ್ಡೆ ಹೋಳಾದರೆ ಸುಮಾರು 3218 ಕಿಲೋಮೀಟರ್‌ದಷ್ಟು ವ್ಯಾಪಿಸಿಕೊಳ್ಳಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

‘ಲಾರ್ಸೆನ್‌ ಸಿ ಮಂಜುಗಡ್ಡೆಯಲ್ಲಿ ಉಂಟಾಗಿರುವ ಬಿರುಕಿನಿಂದ ಈ ಬಾರಿ  ಆ ಪ್ರದೇಶದಲ್ಲಿ ನಾವು ಅಲ್ಲಿಗೆ ಅಧ್ಯಯನಕ್ಕಾಗಿ ಹೋಗುತ್ತಿಲ್ಲ’ ಎಂದು ಬ್ರಿಟಿಷ್‌ ಅಂಟಾರ್ಕ್ಟಿಕಾ ಸಮೀಕ್ಷಾ ನಿರ್ದೇಶಕ ಡೇವಿಡ್‌ ವೌಘಾನ್‌ ತಿಳಿಸಿದ್ದಾರೆ.

ತೇಲುತ್ತಿರುವ ಮಂಜುಗಡ್ಡೆ ನಿರ್ಗಲ್ಲುಗಳಿಂದ ಆವೃತವಾಗಿದೆ. ಮಂಜುಗಡ್ಡೆ ಕರಗಿದಂತೆ ನಿರ್ಗಲ್ಲುಗಳು ವೇಗವಾಗಿ ತೇಲಲಾರಂಭಿಸುತ್ತವೆ. ಈ ಮೂಲಕ ಸಮದ್ರದಮಟ್ಟ ಹೆಚ್ಚಿಸಲು ಕಾರಣವಾಗುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಲಾರ್ಸೆನ್‌ ‘ಸಿ’ ಬಳಿಯೇ ಇರುವ ಲಾರ್ಸೆನ್‌ ‘ಎ’ ಮತ್ತು ‘ಬಿ’ ಈಗಾಗಲೇ ಬಹುತೇಕ ವಿಭಜನೆಗೊಂಡಿವೆ. ಲಾರ್ಸೆನ್‌ ‘ಬಿ’ ಮಂಜುಗಡ್ಡೆ ಬಹುದಿನಗಳ ಕಾಲ ಉಳಿಯುವುದಿಲ್ಲ. ತೀವ್ರಗತಿಯಲ್ಲಿ ಕರಗುತ್ತದೆ. 2002ರಲ್ಲಿ ಈ ಮಂಜುಗಡ್ಡೆಯ ಬಹುತೇಕ ಭಾಗ ಕುಸಿದಿತ್ತು. ಇದರಿಂದ ನಿರ್ಗಲುಗಳು ಸಮುದ್ರ
ದತ್ತ ವೇಗವಾಗಿ ಸಾಗಿದ್ದವು. ಇದೇ ರೀತಿಯ ಸನ್ನಿವೇಶ ಮತ್ತೊಮ್ಮೆ ಎದುರಾಗಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT