ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವ–ನಾದಿನಿ ಹೆಣೆದ ‘ಮುತ್ತಿನ ಕತೆ’!

ಯುವತಿಯ ತುಟಿ ಕಚ್ಚಿದ ಆರೋಪ ಪ್ರಕರಣಕ್ಕೆ ತಿರುವು
Last Updated 8 ಜನವರಿ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ಯುವತಿಯ ತುಟಿ ಕಚ್ಚಿದ’ ಆರೋಪ ಪ್ರಕರಣಕ್ಕೀಗ ರೋಚಕ ತಿರುವು ಸಿಕ್ಕಿದೆ. ‘ಅದು ಲೈಂಗಿಕ ದೌರ್ಜನ್ಯವಲ್ಲ. ವಿವಾಹವಾಗಲು ಬಾವ–ನಾದಿನಿ ಸೇರಿ ಹೆಣೆದ ಕಟ್ಟುಕತೆ’ ಎಂಬುದು ತನಿಖೆಯಿಂದ ಬಯಲಾಗಿದೆ.

ಪ್ರಕರಣ ಸಂಬಂಧ ಕಾಡುಗೊಂಡನಹಳ್ಳಿ ಪೊಲೀಸರು ಇರ್ಷಾದ್ ಖಾನ್ (34) ಎಂಬಾತನನ್ನು ಬಂಧಿಸಿದ್ದಾರೆ. ಸುಳ್ಳು ದೂರು ಕೊಟ್ಟು ದಿಕ್ಕು ತಪ್ಪಿಸಿದ ಆತನ ನಾದಿನಿ ವಿರುದ್ಧ ಯಾವ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪೊಲೀಸರು  ತಜ್ಞರ ಅಭಿಪ್ರಾಯ ಕೇಳಿದ್ದಾರೆ.

‘ನಾದಿನಿ (ಪತ್ನಿಯ ತಂಗಿ) ಹಾಗೂ ನಾನು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೆವು. ಆಕೆಯನ್ನು ಮದುವೆ ಆಗಲು ಪತ್ನಿ ಹಾಗೂ ಕುಟುಂಬದ ಇತರ ಸದಸ್ಯರ ವಿರೋಧವಿತ್ತು. ನಾದಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದರೆ, ಆಕೆಯನ್ನು ವಿವಾಹವಾಗಲು ಯಾರೂ ಮುಂದೆ ಬರುವುದಿಲ್ಲ.

ಕೊನೆಗೆ ಮನೆಯವರನ್ನು ಒಪ್ಪಿಸಿ ನಾನೇ ಮದುವೆ ಆಗಬಹುದೆಂದು ಇಬ್ಬರೂ ಸಂಚು ರೂಪಿಸಿ ಹಾಗೆ ಮಾಡಿದ್ದೆವು’ ಎಂದು ಇರ್ಷಾದ್ ಹೇಳಿಕೆ ಕೊಟ್ಟಿದ್ದಾಗಿ ತನಿಖಾಧಿಕಾರಿಗಳು ಹೇಳಿದರು.

‘ಚಿತ್ತೂರು ಮೂಲದ ಇರ್ಷಾದ್, ನಗರದ ಖಾಸಗಿ ಕಂಪೆನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದಾನೆ. ಆರು ವರ್ಷಗಳ ಹಿಂದೆಯೇ ಆತ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆ ಆಗಿದ್ದು, ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಈ ಮಧ್ಯೆ ಆತನಿಗೆ ಪತ್ನಿಯ ತಂಗಿ ಮೇಲೂ ಕಣ್ಣು ಬಿದ್ದಿತ್ತು. ಕ್ರಮೇಣ ಇಬ್ಬರೂ ಪರಸ್ಪರ ಪ್ರೀತಿ ಮಾಡಲು ಆರಂಭಿಸಿದ್ದರು.’

‘ನಾದಿನಿಯು ತಾಯಿ ಜತೆ ಬಾಣಸವಾಡಿ ಸಮೀಪದ ವಿನೋಬನಗರದಲ್ಲಿ ನೆಲೆಸಿದ್ದಾರೆ. ಆಕೆಯ ಅಕ್ಕನ ಕುಟುಂಬ ಹತ್ತಿರದ ಎಚ್‌ಬಿಆರ್‌ ಲೇಔಟ್‌ನಲ್ಲಿ ವಾಸವಾಗಿದೆ. ಆಗಾಗ್ಗೆ ಆಕೆ ಅಕ್ಕನನ್ನು ನೋಡುವ ನೆಪದಲ್ಲಿ ಅವರ ಮನೆಗೆ ಹೋಗಿ ಬರುತ್ತಿದ್ದಳು. ಅಂತೆಯೇ ಆರೋಪಿ ಕೂಡ, ಅತ್ತೆಯನ್ನು ಮಾತನಾಡಿಸುವ ಸೋಗಿನಲ್ಲಿ ಈಕೆಯ ಮನೆಗೆ ಬಂದು ಹೋಗುತ್ತಿದ್ದ’ ಎಂದು ಮಾಹಿತಿ ನೀಡಿದರು.

ಮದುವೆಗೆ ಗಲಾಟೆ: ಹೇಗಾದರೂ ಮಾಡಿ ನಾದಿನಿಯನ್ನು ಕೊನೆವರೆಗೂ ತನ್ನ ಜತೆಗೇ ಉಳಿಸಿಕೊಳ್ಳಬೇಕು ಎಂಬುದು ಇರ್ಷಾದ್‌ನ ಬಯಕೆಯಾಗಿತ್ತು. ಇವರಿಬ್ಬರ ಪ್ರೀತಿ ವಿಚಾರವನ್ನು ಅರಿಯದ ಕುಟುಂಬ ಸದಸ್ಯರು, ಈಕೆಗೆ ಮದುವೆ ಮಾಡಲು ಹುಡುಗನ ಹುಡುಕಾಟದಲ್ಲಿದ್ದರು. ಈ ಬೆಳವಣಿಗೆಯಿಂದ ದಿಕ್ಕು ತೋಚದಂತಾದ ಇಬ್ಬರೂ, ಮನೆ ಬಿಟ್ಟು ಹೋಗಿ ಮದುವೆ ಆಗುವುದಕ್ಕೂ ನಿರ್ಧರಿಸಿದ್ದರು. ಕೊನೆಗೆ ಆ ಯೋಜನೆ ಕೈಬಿಟ್ಟಿದ್ದರು.

ಕಮ್ಮನಹಳ್ಳಿ ಪ್ರಕರಣದಿಂದ ಪ್ರೇರಣೆ: ಹೊಸ ವರ್ಷಾಚರಣೆಯ (ಡಿ.31) ರಾತ್ರಿ ಕಮ್ಮನಹಳ್ಳಿಯಲ್ಲಿ ನಾಗಲ್ಯಾಂಡ್ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆ ಘಟನೆಯ ದೃಶ್ಯಗಳನ್ನು ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡಿದ್ದವು. ಹೀಗಾಗಿ, ಆ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಅದರಿಂದ ಪ್ರೇರಣೆಗೊಂಡ ಬಾವ–ನಾದಿನಿ, ತಾವು ಸಹ ‘ಲೈಂಗಿಕ ದೌರ್ಜನ್ಯ’ದ ಕತೆ ಹೆಣೆದರು.

ಅದರಂತೆ ಇರ್ಷಾದ್, ಗುರುವಾರ (ಜ.5) ಸಂಜೆ ಬೈಕ್‌ನಲ್ಲಿ ವಿನೋಬನಗರಕ್ಕೆ ಹೋಗಿ ನಾದಿನಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಪತ್ನಿ–ಮಗು ಮಲಗಿದ ಬಳಿಕ, ರಾತ್ರಿ 1 ಗಂಟೆವರೆಗೂ ಸಂಚಿನ ಬಗ್ಗೆ ಆಕೆ ಜತೆ ಮಾತುಕತೆ ನಡೆಸಿದ್ದ. ಅಲ್ಲದೆ, ಎರಡು ದಿನ ಮೊದಲೇ ಆ ರಸ್ತೆಯಲ್ಲಿ ಓಡಾಡಿ ಎಲ್ಲೆಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ ಹಾಗೂ ನಾವಿಬ್ಬರೂ ಯಾವ ಸ್ಥಳದಲ್ಲಿ ನಿಲ್ಲಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿದ್ದ.

ಮೊದಲೇ ಎದ್ದು ಹೋದ: ‘ಬೆಳಗಿನ ಪಾಳಿ ಕೆಲಸಕ್ಕೆ ಹೋಗುತ್ತಿದ್ದ ನಾದಿನಿಗೆ ದುಷ್ಕರ್ಮಿಯೊಬ್ಬ ಮುತ್ತಿಕ್ಕಿ, ಲೈಂಗಿಕ ದೌರ್ಜನ್ಯ ನಡೆಸಿದ’ ಎಂಬ ಸನ್ನಿವೇಶ ಸೃಷ್ಟಿಸುವುದು ಇರ್ಷಾದ್‌ನ ಉಪಾಯವಾಗಿತ್ತು. ಹೀಗಾಗಿ ಶುಕ್ರವಾರ ಬೆಳಗಿನ ಜಾವ 4.30ಕ್ಕೇ ಎದ್ದ ಆತ, ನಾದಿನಿಯನ್ನೂ ಎಬ್ಬಿಸಿದ್ದ.

‘ರಸ್ತೆಯಲ್ಲಿ ಜನರ ಓಡಾಟ ಹೇಗಿದೆ ಎಂಬುದನ್ನು ನೋಡಿ ಕರೆ ಮಾಡುತ್ತೇನೆ. ಆ ನಂತರ ನೀನು ಕೆಲಸಕ್ಕೆ ಹೋಗುವವಳಂತೆ ಹೊರಟು ಬಾ’ ಎಂದ ಇರ್ಷಾದ್, ಜರ್ಕಿನ್ ಹಾಕಿ ಕೊಂಡು ಮೊದಲೇ ಮನೆಯಿಂದ ಹೊರ ಬಂದಿದ್ದ. ಬೇಕಂತಲೇ ಸಿ.ಸಿ ಟಿ.ವಿ ಕ್ಯಾಮೆರಾದ ಎದುರು ಅನುಮಾನಾಸ್ಪದ ರೀತಿಯಲ್ಲಿ ಕೆಲ ಕಾಲ ಓಡಾಡಿದ ಆತ, ನಂತರ 5 ಗಂಟೆ 9 ನಿಮಿಷಕ್ಕೆ ನಾದಿನಿಗೆ ಕರೆ ಮಾಡಿ ಹೊರಟು ಬರುವಂತೆ ಸೂಚಿಸಿದ್ದ.

ನಾದಿನಿ ಗೋವಿಂದಪುರ ಬಸ್ ನಿಲ್ದಾಣದ ಕಡೆಗೆ ನಡೆದು ಹೋಗುತ್ತಿದ್ದಂತೆಯೇ, ಇರ್ಷಾದ್ ದುಷ್ಕರ್ಮಿಯಂತೆ ಆಕೆಯನ್ನು ಹಿಂಬಾಲಿಸಿದ್ದ. ಬಳಿಕ ಇಬ್ಬರೂ ಸ್ವಲ್ಪ ಮುಂದೆ ಹೋಗಿ ಕತ್ತಲಿರುವ ಸ್ಥಳದಲ್ಲಿ ನಿಂತು ಎರಡು ನಿಮಿಷ ಮಾತನಾಡಿದ್ದರು.

ಪಿನ್‌ನಿಂದ ಚುಚ್ಚಿಕೊಂಡಳು:  ‘ಬಾವನ ಮಾತಿನಂತೆ ರಕ್ತ ಬರುವ ಹಾಗೆ ನಾಲಿಗೆ ಹಾಗೂ ತುಟಿಯನ್ನು ಕಚ್ಚಿ ಕೊಂಡ ಆಕೆ, ಪಿನ್‌ನಿಂದ ಮೂರ್ನಾಲ್ಕು ಬಾರಿ ಹೆಬ್ಬೆರಳು ಚುಚ್ಚಿಕೊಂಡಿದ್ದಾಳೆ. ಕಾಲಿನ ಮೇಲೂ ಪಿನ್‌ನಿಂದ ಗೀರಿಕೊಂಡಿ ದ್ದಾಳೆ. ಅಲ್ಲದೆ, ಕಲ್ಲಿನಿಂದ ಮಂಡಿ ಉಜ್ಜಿಕೊಂಡು ತರಚಿದ  ಗಾಯ ಗಳನ್ನು ಮಾಡಿಕೊಂಡಿದ್ದಾಳೆ’ ಎಂದು ತನಿಖಾಧಿಕಾರಿಗಳು ವಿವರಿಸಿದರು.

ನಂತರ ಸಂಚಿನಂತೆಯೇ ಜರ್ಕಿನ್‌ನ ಟೋಪಿಯಿಂದ ಮುಖ ಮುಚ್ಚಿಕೊಂಡು ಸಿ.ಸಿ ಟಿ.ವಿ ಕ್ಯಾಮೆರಾದ ಎದುರು ಓಡುವ ಇರ್ಷಾದ್, ಕೆಲ ಸಂಘಟನೆಗಳ ಸದಸ್ಯರಿಗೆ ಕರೆ ಮಾಡಿದ್ದ.  ‘ನನ್ನ ನಾದಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮೊನ್ನೆ ಕಮ್ಮನಹಳ್ಳಿಯಲ್ಲೂ ಹೀಗೆ ಆಗಿದೆ. ಈ ಬಗ್ಗೆ ಹೋರಾಟ ಮಾಡ ಬೇಕು’ ಎಂದು ಪ್ರಚೋದಿಸಿದ್ದ.

ಬಳಿಕ ಪತ್ನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿರುವ ಆತ, ನಾದಿನಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊ ಯ್ದಿದ್ದ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಸದಸ್ಯರು, ವಾಸ್ತವ ಅರಿಯದೆ ಕೆಲ ಕಾಲ ಪ್ರತಿಭಟನೆಯನ್ನೂ ಮಾಡಿದ್ದರು.
ವಿಡಿಯೊ ಎಡಿಟ್ ಮಾಡಿದ:  ‘ಬಳಿಕ ಸಿ.ಸಿ ಟಿ.ವಿ ಹಾಕಿರುವ ಅಂಗಡಿ ಬಳಿ ತೆರಳಿದ ಇರ್ಷಾದ್, ‘ನಾದಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ನಿಮ್ಮ ಕಟ್ಟಡಕ್ಕೆ ಅಳವಡಿಸಿರುವ ಕ್ಯಾಮೆರಾದಲ್ಲಿ ಅದರ ದೃಶ್ಯ ಸೆರೆಯಾಗಿರಬಹುದು’ ಎಂದು ಹೇಳಿ ಅಂಗಡಿ ಮಾಲೀಕರಿಂದ ಡಿವಿಆರ್ ಪೆಟ್ಟಿಗೆ ಪಡೆದುಕೊಂಡಿದ್ದ. ನಂತರ ತನಗೆ ಬೇಕಾದಂತೆ ಆ ದೃಶ್ಯವನ್ನು ಎಡಿಟ್ ಮಾಡಿ, ಅದನ್ನು ಮೊಬೈಲ್‌ಗೆ ಹಾಕಿಕೊಂಡಿದ್ದ.’
ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆ ಬಳಿ ಹೋಗುತ್ತಿದ್ದಂತೆಯೇ, ಎಡಿಟ್ ಮಾಡಿದ ವಿಡಿಯೊವನ್ನು ಅವರಿಗೆ ಕೊಟ್ಟಿದ್ದ. ಅಲ್ಲದೆ, ‘ಪೊಲೀಸರು ಸರಿಯಾಗಿ ಗಸ್ತು ತಿರುಗುವುದಿಲ್ಲ.

ಇದರಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ. ನಡುರಸ್ತೆಯಲ್ಲೇ ನಾದಿನಿಯ ಮಾನಭಂಗಕ್ಕೆ ಯತ್ನಿಸಲಾಗಿದೆ. ಆರೋಪಿಯನ್ನು ಎರಡು ದಿನಗಳೊಳಗೆ ಪತ್ತೆ ಮಾಡದಿದ್ದರೆ, ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದು ಆಕ್ರೋಶದಿಂದ ಕೂಗಾಡಿದ್ದ. ಯುವತಿ ಕೂಡ ಅದೇ ರೀತಿ ದೂರು ಕೊಟ್ಟಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT