ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು ಮಾರಾಟಗಾರರಿಗೆ ಸೌಲಭ್ಯದ ಕೊರತೆ

ಅಕ್ಷರ ಗಾತ್ರ

ದಾವಣಗೆರೆ: ‘ಮೂಲಸೌಲಭ್ಯಗಳ ವ್ಯವಸ್ಥೆ ಮಾಡದೇ ನಮ್ಮನ್ನು ಇಲ್ಲಿಗೆ ಸ್ಥಳಾಂತರ ಮಾಡಿದ್ದಾರೆ. ಇಲ್ಲಿಗೆ ನಾವು ಬಂದು ನಾಲ್ಕು ದಿನಗಳಾಗಿವೆ. ಹೂವು ವ್ಯಾಪಾರವಾಗುತ್ತಿಲ್ಲ. ಶೇ 90ರಷ್ಟು ವ್ಯಾಪಾರ ಕುಸಿದಿದೆ. ಚಿಲ್ಲರೆ ವ್ಯಾಪಾರಿಗಳ ಬದುಕು ದುಸ್ತರವಾಗಿದೆ.’
***
‘ಎರಡು ಕಡೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಸಗಟು ಹಾಗೂ ಚಿಲ್ಲರೆ ಹೂವು ಮಾರಾಟಗಾರರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಒಂದೇ ಕಡೆ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಆದರೆ, ಇಲ್ಲಿ ಎಲ್ಲವೂ ಅವ್ಯವಸ್ಥಿತವಾಗಿದೆ...’

ನಗರದ ಹಳೆ ಬಸ್‌ ನಿಲ್ದಾಣದಿಂದ ಇಲ್ಲಿನ ಎಪಿಎಂಸಿಯ ಹೂವು ಮಾರಾಟ ಮಳಿಗೆಗಳಿಗೆ ಸ್ಥಳಾಂತರವಾಗಿರುವ ಸಗಟು ಹಾಗೂ ಚಿಲ್ಲರೆ ಹೂವು ವ್ಯಾಪಾರಿಗಳ ಅಳಲು ಇದು.
ಹಳೆ ಬಸ್‌ನಿಲ್ದಾಣದ ಬಳಿ ಹಲವು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ ಸಗಟು ಹಾಗೂ ಚಿಲ್ಲರೆ ಹೂವಿನ ವ್ಯಾಪಾರಿಗಳನ್ನು ಎಪಿಎಂಸಿಯಲ್ಲಿ ನಿರ್ಮಿಸಿರುವ 26 ಮಳಿಗೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಇಲ್ಲಿನ ಕೆಲ ಮಳಿಗೆಗಳಿಗೆ ಶೆಟರ್‌ಗಳಿಲ್ಲ.

ವ್ಯಾಪಾರಿಗಳೇ ಶೆಟರ್‌ಗಳನ್ನು ಅಳವಡಿಸಿಕೊಳ್ಳಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಇಲ್ಲ. ಇಂತಹ ಅವ್ಯವಸ್ಥೆಗಳ ಜೊತೆಯಲ್ಲಿಯೇ ವ್ಯಾಪಾರಿಗಳು ಮಳಿಗೆಗಳ ಎದುರು ಹಾಗೂ ಹೊರಭಾಗದಲ್ಲಿ ಹೂವು ಮಾರಾಟ ಮಾಡುತ್ತಿದ್ದಾರೆ.

₹ 20 ಲಕ್ಷ ವಹಿವಾಟು: ನಗರದ ಹಳೆ ಬಸ್‌ನಿಲ್ದಾಣದ ಬಳಿ ನಮಗೆ ಸಾರಿಗೆ ವ್ಯವಸ್ಥೆ ಉತ್ತಮವಾಗಿತ್ತು. ಹೀಗಾಗಿ ದಾವಣಗೆರೆ ಸುತ್ತಮುತ್ತ ಹಾಗೂ ಚಿತ್ರದುರ್ಗ ಮತ್ತು ಹಿರಿಯೂರು ಪಟ್ಟಣದಿಂದ ನಿತ್ಯ 3ಟನ್‌ಗೂ ಹೆಚ್ಚು ವಿವಿಧ ಬಗೆಯ ಹೂವು ಬರುತ್ತದೆ. ಹಬ್ಬ ಹರಿ ದಿನಗಳಲ್ಲಿ ನಿತ್ಯ ಸುಮಾರು ₹ 20ಲಕ್ಷ ವ್ಯಾಪಾರ ಆಗುತ್ತದೆ. ಸಾಮಾನ್ಯ ದಿನಗಳಲ್ಲಿ ನಿತ್ಯ ₹ 6 ಲಕ್ಷದವರೆಗೂ ವಹಿವಾಟು ನಡೆಯುತ್ತದೆ. ನಮ್ಮನ್ನು ಇಲ್ಲಿಗೆ ಸ್ಥಳಾಂತರ ಮಾಡಿ ನಾಲ್ಕು ದಿನ ಗಳಾಗಿವೆ. ಇಲ್ಲಿ ದಿನಕ್ಕೆ  ₹ 1 ಲಕ್ಷ ವ್ಯಾಪಾರ ಕೂಡ ಆಗುತ್ತಿಲ್ಲ’ ಎಂದು ಹೂವಿನ ಸಗಟು ವ್ಯಾಪಾರಿ ಶಿವಣ್ಣ  ಹೇಳಿದರು.

‘26 ಜನ ಸಗಟು ಹೂವು ವ್ಯಾಪಾರಿಗಳು ಹಾಗೂ 250 ಜನ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಪರವಾನಗಿ ಪಡೆದವರಿಗೆ ಮಳಿಗೆಗಳನ್ನು ನೀಡಲಾಗಿದೆ. ಆದರೆ, ಇಲ್ಲಿನ ಬಹುತೇಕ ಮಳಿಗೆಗಳಿಗೆ ಮೂಲಸೌಲಭ್ಯ ವ್ಯವಸ್ಥೆ ಇಲ್ಲ. ಇಲ್ಲಿನ ಮಳಿಗೆಗಳಲ್ಲಿ ನಾವು ವ್ಯಾಪಾರವನ್ನೇ ಮಾಡಿಲ್ಲ. ಬಾಡಿಗೆ ಕಟ್ಟಿ ಎಂದು ಎಪಿಎಂಸಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ನಿತ್ಯದ ಬದುಕಿಗೆ ಹಣವಿಲ್ಲ. ಇನ್ನು ಮಳಿಗೆಯ ಬಾಡಿಗೆ ಹಣ ಎಲ್ಲಿಂದ ಕಟ್ಟಬೇಕು’ ಎಂದು ಶಿವಣ್ಣ ಬೇಸರದಿಂದ ನುಡಿದರು.

ಪರೀಕ್ಷೆ ಶುಲ್ಕ ಕಟ್ಟಲು ಹಣವಿಲ್ಲ: ‘ಏಕಾಏಕಿ ನಮ್ಮನ್ನು ತೆರುವ ಮಾಡಲಾಗಿದೆ. ಪರವಾನಗಿ ಪಡೆದ ವ್ಯಾಪಾರಿಗಳನ್ನು ತೆರುವ ಮಾಡಲಿ. ಆದರೆ, ಚಿಲ್ಲರೆ ವ್ಯಾಪಾರಿಗಳನ್ನು ತೆರವು ಮಾಡಿದರೆ ಹೇಗೆ? ನಿತ್ಯ ಹೂವು ಮಾರಾಟ ಮಾಡಿಯೇ ಜೀವನ ನಡೆಸಬೇಕು. ಮಕ್ಕಳ ಪರೀಕ್ಷೆ ಶುಲ್ಕ ಕಟ್ಟಬೇಕು. ಉತ್ತಮ ವ್ಯಾಪಾರ ಕೂಡ ಆಗುತ್ತಿಲ್ಲ. ಮಕ್ಕಳ ಶಿಕ್ಷಣದ ಶುಲ್ಕ ಹಾಗೂ ನಿತ್ಯ ಊಟಕ್ಕೆ ಏನು ಮಾಡಬೇಕು? ಚಿಲ್ಲರೆ ವ್ಯಾಪಾರಿಗಳಿಗೆ ಹಳೆ ಬಸ್‌ನಿಲ್ದಾಣದ ಬಳಿಯ ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಜೀವನಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ’ ಎಂದು ಚಿಲ್ಲರೆ ವ್ಯಾಪಾರಿಗಳಾದ ನೂರು ಅಹಮ್ಮದ್‌, ಎಸ್‌.ಎಂ.ಕೊಟ್ರಯ್ಯ ಹಾಗೂ ಪ್ರಸನ್ನ ಅಳಲು ತೋಡಿಕೊಂಡರು.

ಸಾರಿಗೆ ಸೌಲಭ್ಯವಿಲ್ಲ: ಭಾರತ್‌ ಕಾಲೊನಿಯಲ್ಲಿ ತೋಟಗಾರಿಕೆ ಇಲಾಖೆ ಅಡಿಯಲ್ಲಿ ₹ 2.50 ಕೋಟಿ ವೆಚ್ಚದಲ್ಲಿ 16 ಪುಷ್ಪ ಹರಾಜು ಕೇಂದ್ರ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅಲ್ಲಿಗೆ ಸಾರಿಗೆ ಸೌಲಭ್ಯದ ವ್ಯವಸ್ಥೆ ಇಲ್ಲ. ರೈತರಿಗೆ, ಹೂವು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಎಪಿಎಂಸಿಯಲ್ಲಿ 26 ಹಾಗೂ ಭಾರತ್‌ ಕಾಲೊನಿಯಲ್ಲಿ 16 ಮಳಿಗೆಗಳನ್ನು ನಿರ್ಮಿಸಿದರೆ ಹೇಗೆ? ಒಂದೇ ಕಡೆ ಮಳಿಗೆಗಳನ್ನು ನಿರ್ಮಿಸಿ ಕೊಟ್ಟಿದ್ದರೆ ಅನುಕೂಲವಾಗು ತ್ತಿತ್ತು’ ಎಂದು ಸಗಟು ವ್ಯಾಪಾರಿ ಶಾಂತ ವೀರ ಹಾಗೂ ರಫೀಕ್‌  ಹೇಳಿದರು.

‘ಪುಷ್ಪ ಹರಾಜು ಕೇಂದ್ರದಲ್ಲಿ ಭದ್ರತೆ...’
‘ಹಳೆ ಬಸ್‌ನಿಲ್ದಾಣದ ಬಳಿ ಅನಧಿಕೃತವಾಗಿ ಹೂವು ಮಾರಾಟ ನಡೆಯುತ್ತಿತ್ತು. ಜನರಿಗೆ, ರೈತರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಆಗಬಾರದು ಎಂದು ಎಲ್ಲರನ್ನು ಎಪಿಎಂಸಿಯ ಮಳಿಗೆಗಳಿಗೆ ಸ್ಥಳಾಂತರಿಸಲಾಗಿದೆ. ಭಾರತ್‌ ಕಾಲೊನಿಯ ಪುಷ್ಪ ಹರಾಜು ಕೇಂದ್ರದಲ್ಲಿ ಪ್ರಸ್ತುತ 16 ಮಳಿಗೆಗಳಿವೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು. ಕೇಂದ್ರದಲ್ಲಿ ರೈತ ಭವನ, ಶುದ್ಧ ಕುಡಿಯುವ ನೀರಿನ ಘಟಕ, ಕ್ಯಾಂಟಿನ್‌ ಸೌಲಭ್ಯ, ಮಾಹಿತಿ ಕೇಂದ್ರ ಸೇರಿದಂತೆ ಮೂಲಸೌಲಭ್ಯಗಳ ವ್ಯವಸ್ಥೆ ಇದೆ. ಜೊತೆಗೆ ರೈತರಿಗೆ ಹಾಗೂ ಹೂವು ಮಾರಾಟಗಾರರಿಗೆ ಹೆಚ್ಚು ಭದ್ರತೆ ಇದೆ’ ಎಂದು ಎಪಿಎಂಸಿ ಜಂಟಿ ನಿರ್ದೇಶಕ ಆನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT