ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಕರ್ನಾಟಕ ಪ್ರತ್ಯೇಕ ಬೇಡ

‘ಕಲ್ಯಾಣ ಕರ್ನಾಟಕ’ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚನ್ನಣ್ಣ ವಾಲಿಕಾರ ಆಕ್ಷೇಪ
Last Updated 9 ಜನವರಿ 2017, 5:48 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಪ್ರಾದೇಶಿಕ ಅಸಮಾನತೆಯ ನೆಪವೊಡ್ಡಿ ಕರ್ನಾಟಕವನ್ನು ಇಬ್ಭಾಗ ಮಾಡಲಾಗದು. ಹೈದರಾಬಾದ್ ಕರ್ನಾಟಕ ಪ್ರತ್ಯೇಕತೆಯ ಕೂಗು ಸರಿಯಲ್ಲ’ ಎಂದು ತಾಲ್ಲೂಕಿನ ಹುಲಸೂರನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿರುವ ಕಲಬುರ್ಗಿ ವಿಭಾಗ ಮಟ್ಟದ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಚನ್ನಣ್ಣ ವಾಲಿಕಾರ ಆಕ್ಷೇಪಿಸಿದರು.

ಹುಲಸೂರನ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಮೂರು ದಿನಗಳ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ರೂಪುತಾಳಿದೆ. ಇದನ್ನು ಒಡೆಯುವ ಹುನ್ನಾರ ಸಲ್ಲದು. ಈ ಭಾಗದ ಅಭಿವೃದ್ಧಿಗಾಗಿ 371 (ಜೆ) ಕಾಯ್ದೆ ಕಲಂ ಜಾರಿಗೊಳಿಸಲಾಗಿದೆ. ಆದರೆ ಕೆಲ ನ್ಯೂನ್ಯತೆಗಳ ಕಾರಣ ತೊಂದರೆಯಾಗಿದೆ. ಆದ್ದರಿಂದ ಈ ಕಾಯ್ದೆ ಕಲಂ ಅನ್ವಯ ಮೀಸಲಾತಿ ಪ್ರಮಾಣಪತ್ರ ನೀಡುವ ವಿಧಾನ ಸರಳೀಕರಿಸಬೇಕು. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಆರು ಜಿಲ್ಲೆಗಳನ್ನು ಹೊಂದಿರುವ ಈಗ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಬೇಕು ಎಂಬ ಕೂಗು ಎದ್ದಿರುವ ಈ ನೆಲ ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ನಾಡಾಗಿದೆ. ದಲಿತ, ಬಂಡಾಯ, ಸಮುದಾಯ ಚಳವಳಿಗಳು ಪ್ರಬಲವಾಗಿರುವ ಪ್ರದೇಶ. ಬ್ರಾಜಿಷ್ಣುವಿನ ವಡ್ಡಾರಾಧನೆ ರಚಿತವಾಗಿರುವುದು ಬೀದರನ ಹಳ್ಳಿಖೇಡದಲ್ಲಿ, ಕವಿರಾಜಮಾರ್ಗ ರಚನೆಯಾಗಿರುವುದು ಈ ನಾಡಲ್ಲಿ. ಜಗತ್ತಿನ ಬಹುತೇಕ ಭಾಷೆಗಳು ಅಳಿವಿನ ಅಂಚಿನಲ್ಲಿದ್ದರೂ ಕನ್ನಡ ಜೀವಂತವಾಗಿದೆ. ಪ್ರಾಚೀನ ಪರಂಪರೆ, ಸಮೃದ್ಧ ಸಾಹಿತ್ಯ, ವೈವಿಧ್ಯಮಯವಾದ ಚಿಂತನೆಗಳಿಂದ ಈ ಭಾಷೆ ಪ್ರಬಲವಾಗಿದೆ. ಬದಲಾಗುವ ಕಾಲದೊಂದಿಗೆ ಹೊಂದಿಕೊಳ್ಳುವ ಗುಣವೂ ಹೊಂದಿದ್ದರಿಂದ ಇದು ಅವಿನಾಶಿ ಎಂದರು.

ಹಿಂದೆ ನಾನಾ ರಾಜರುಗಳ ದಬ್ಬಾಳಿಕೆ ಮತ್ತು ಇಂದು ಅಧಿಕಾರಿಗಳ ಸ್ವಾರ್ಥ ಪರತೆ, ರಾಜಕಾರಣಿಗಳ ನಿರ್ಲಕ್ಷತನದಿಂದ ಈ ಭಾಗ ಎಲ್ಲ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿದೆ. ಆದ್ದರಿಂದ ಬಸವಣ್ಣನವರ ಸಮಾನತೆಯ ತತ್ವವನ್ನು ಪಾಲಿಸಿಕೊಂಡು ಸಮಾಜ ಸದೃಢಗೊಳಿಸಬೇಕು. ಕಠಿಣ ಸಾಧನೆಗೈದು ವಿವಿಧ ಕ್ಷೇತ್ರದಲ್ಲಿ ಅವಕಾಶ ಪಡೆಯಬೇಕು ಎಂದು ಬಿನ್ನವಿಸಿಕೊಂಡರು. ಕಲಬುರ್ಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಹಿರಿಯ ಮತ್ತು ಕಿರಿಯ ತಲೆಮಾರಿನ ಸಾಹಿತಿಗಳ ಕೊಡುಗೆ ಬಗ್ಗೆ ವಿಸ್ತಾರವಾಗಿ ಹೇಳಿದರು. ಪ್ರಸಿದ್ಧ ಸಾಹಿತಿ ಕುಂ.ವೀರಭದ್ರಪ್ಪ ಸಮ್ಮೇಳನ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹಾರಕೂಡ ಚನ್ನವೀರ ಶಿವಾಚಾರ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಪಾಲ್ಗೊಂಡಿದ್ದರು.

ವಚನತತ್ವ ಪಾಲಿಸಲು ಕುಂ.ವೀ ಸಲಹೆ
ಬಸವಕಲ್ಯಾಣ: ಬಸವಾದಿ ಶರಣರ ವಚನಗಳಂತೆ ಬದುಕು ಸಾಗಿಸಿದರೆ ದೇಶ ಅಮೆರಿಕಕ್ಕಿಂತ ಹೆಚ್ಚಿನ ಅಭಿವೃದ್ಧಿ ಸಾಧಿಸಬಲ್ಲದು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ತಾಲ್ಲೂಕಿನ ಹುಲಸೂರನಲ್ಲಿ ಭಾನುವಾರ ಮೂರು ದಿನಗಳ ನಡೆಯಲಿರುವ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ ಎಂಬ ತತ್ವದಂತೆ ರೈತರು ನಡೆಯುತ್ತಿದ್ದಾರೆ. ಆದರೆ ಅವರ ಪರಿಸ್ಥಿತಿ ತೀರ ಶೋಚನೀಯವಾಗಿದೆ. ಅವರ ಬಗ್ಗೆ ಎಲ್ಲರಿಗೂ ಕಾಳಜಿ ಇರಲಿ, ಅವರಂಥವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಯೂ ಮಾಡಿದರೆ ತಪ್ಪಿಲ್ಲ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಕಲ್ಯಣ ಕರ್ನಾಟಕ ಹಿಂದುಳಿದಿದೆ ಎಂದರು.

ಈ ಭಾಗದ ವಚನ ಸಾಹಿತ್ಯ ಮತ್ತು ರಾಷ್ಟ್ರಕೂಟರಾದಿಯಾಗಿ ಈ ಭಾಗವನ್ನಾಳಿದ ಅರಸರು ಕನ್ನಡಕ್ಕೆ ಶಕ್ತಿ ತುಂಬಿದರು. ಪರಧರ್ಮ ಸಹಿಷ್ಣುತೆಯೇ ಕನ್ನಡದ ಕುರುಹು ಎಂದು ಅವರು ನಂಬಿದ್ದರು ಎಂದರು. ಸಮ್ಮೇಳನಾಧ್ಯಕ್ಷ ಡಾ.ಚನ್ನಣ್ಣ ವಾಲಿಕಾರ ಉತ್ತಮ ಸಾಹಿತ್ಯ ರಚಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಸಮ್ಮೇಳನದ ಅಧ್ಯಕ್ಷ ಡಾ.ಚನ್ನಣ್ಣ ವಾಲಿಕಾರ ಮಾತನಾಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು, ಸಾಯಗಾಂವ ಶಿವಾನಂದ ದೇವರು, ಎಚ್.ಪಿ.ಸುಬ್ಬಾರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಡಾ.ಬಸವರಾಜ ಬಲ್ಲೂರ, ಟಿ.ಎಂ.ಮಚ್ಚೆ, ರುದ್ರಮಣಿ ಮಠಪತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ, ಎಂ.ಎಸ್.ಮನೋಹರ, ಶಿವಶಂಕರ ಟೋಕರೆ ಪಾಲ್ಗೊಂಡಿದ್ದರು. ರಾಜಕುಮಾರ ಹೂಗಾರ ಮದಕಟ್ಟಿ, ನವಲಿಂಗಕುಮಾರ ಪಾಟೀಲ ಸಂಗೀತ ಪ್ರಸ್ತುತಪಡಿಸಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರು.

ಸಮ್ಮೇಳನದಲ್ಲಿ ಇಂದು
ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಗೋಷ್ಠಿ: ವಿಶೇಷ ಉಪನ್ಯಾಸ– ಹೈದರಾಬಾದ್ ನ ಡಾ.ಲಿಂಗಪ್ಪ ಗೋನಾಳ, ಅತಿಥಿ– ಪ್ರಾಧ್ಯಾಪಕ ಡಾ.ವಿ.ನಾಗರಾಜ, ಅಧ್ಯಕ್ಷತೆ– ಜನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ, ಬೆಳಿಗ್ಗೆ 10.30,

ಪ್ರಾದೇಶಿಕ ಅಸಮಾನತೆ ಗೋಷ್ಠಿ: ಆಶಯ ನುಡಿ –ಕಸಾಪ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಅಧ್ಯಕ್ಷತೆ –ಅನಿಲಕುಮಾರ ಬೆಲ್ದಾರ, ಉಪನ್ಯಾಸ –ಡಾ.ರಝಾಕ್ ಉಸ್ತಾದ್, ಕಾಂತಿಶೆಟ್ಟಿ, ಸಿದ್ರಾಮ ಕಲ್ಮಠ ಬಳ್ಳಾರಿ, ಸಿದ್ದಪ್ಪ ಹೊಟ್ಟಿ ಯಾದಗಿರಿ, ರಾಜಶೇಖರ ಅಂಗಡಿ ಕೊಪ್ಪಳ, ಬೆಳಿಗ್ಗೆ 11.30

ಕವಿಗೋಷ್ಠಿ: ಆಶಯನುಡಿ –ಸಾಹಿತಿ ಡಾ.ಬಸವಪ್ರಭು ಬೆಟ್ಟದೂರು, ಅಧ್ಯಕ್ಷತೆ –ಎಂ.ಜಿ,ದೇಶಪಾಂಡೆ, ಅತಿಥಿಗಳು –ಶೇಖರಗೌಡ ಮಾಲಿಪಾಟೀಲ, ಎಸ್.ಎಂ.ಜನವಾಡಕರ್, ಚಂದ್ರಪ್ಪ ಹೆಬ್ಬಾಳಕರ್, ಎಂ.ಜಿ.ಗಂಗನಪಳ್ಳಿ, ಮಧ್ಯಾಹ್ನ 1.30.

ಕಲ್ಯಾಣ ಕರ್ನಾಟಕ ಸಾಹಿತ್ಯದ ಅನನ್ಯತೆ ಗೋಷ್ಠಿ: ಅಧ್ಯಕ್ಷತೆ– ಡಾ.ಗವಿಸಿದ್ದಪ್ಪ ಪಾಟೀಲ, ಉಪನ್ಯಾಸ –ಡಾ.ಈಶ್ವರಯ್ಯ ಕೊಡಂಬಲ್, ಡಾ.ಸುಂದರರಾಜ ಮೈಸೂರು, ಡಾ.ರಮೇಶ ಮೂಲಗೆ ಮಧ್ಯಾಹ್ನ 3.30.

ಕನ್ನಡ ಸಾಹಿತ್ಯ ಮತ್ತು ಧರ್ಮ ಸಮನ್ವಯತೆ ಗೋಷ್ಠಿ: ಸಾನಿಧ್ಯ –ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರು, ನೇತೃತ್ವ– ಬೆಲ್ದಾಳ ಸಿದ್ದರಾಮ ಶರಣರು, ಭರತನೂರ ಗುರುನಂಜೇಶ್ವರ ಸ್ವಾಮೀಜಿ, ಸೋಲಾಪುರ ಸ್ವಾಮಿನಾಥ ಸ್ವಾಮಿ, ಸಮ್ಮುಖ– ಮಲ್ಕಾಪುರ ಬಸವಾಂಜಲಿ ತಾಯಿ, ಡಾ.ಗಂಗಾಂಬಿಕಾ ಪಾಟೀಲ, ಬೇಲೂರ ಪಂಚಾಕ್ಷರಿ ಸ್ವಾಮೀಜಿ, ನಿಡವಂಚಾ ಮೈತ್ರಾದೇವಿತಾಯಿ, ಅಧ್ಯಕ್ಷತೆ– ಶಾಸಕ ರಾಜಶೇಖರ ಪಾಟೀಲ, ಸಂಜೆ 6, ಅಂಬಿಗರ ಚೌಡಯ್ಯ ನಾಟಕ ಪ್ರದರ್ಶನ: ರಾತ್ರಿ9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT