ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಐಟಿಯಿಂದ ರಾಜ್ಯಕ್ಕೆ ಲಾಭ ಇಲ್ಲ’

Last Updated 9 ಜನವರಿ 2017, 6:31 IST
ಅಕ್ಷರ ಗಾತ್ರ

ಕೊಪ್ಪಳ: ‘ಧಾರವಾಡದಲ್ಲಿ ಐಐಟಿ ಪ್ರಾರಂಭಿಸಿರುವುದು ಸ್ವಾಗತಾರ್ಹ. ಆದರೆ ಸ್ಥಳೀಯ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ನೀಡದಿರುವುದರಿಂದ ರಾಜ್ಯಕ್ಕೆ ಲಾಭ ಇಲ್ಲದಂತಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಉದಾರವಾಗಿ ಸುಮಾರು ₹500 ಕೋಟಿ ಬೆಲೆಬಾಳುವ 470 ಎಕರೆ ಜಮೀನನ್ನು ಐಐಟಿಗಾಗಿ ಉಚಿತವಾಗಿ ನೀಡಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೇ 25 ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಪತ್ರ ಮೂಲಕ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಅಸಮ್ಮತಿ ಸೂಚಿಸಿರುವುದು ಬೇಸರ ಮೂಡಿಸಿದೆ.

ಐಐಟಿಯ ಕೇವಲ 120 ಸೀಟುಗಳಿಗೆ 30 ರಾಜ್ಯಗಳ ಜನತೆ ಪೈಪೋಟಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇದರಿಂದ ರಾಜ್ಯಕ್ಕೆ ಯಾವುದೇ ಲಾಭವಾಗುವುದಿಲ್ಲ’ ಎಂದು ಹೇಳಿದರು.

‘ರಾಜ್ಯಕ್ಕೆ ಲಾಭವಾಗುವ ನಿಟ್ಟಿನಲ್ಲಿ ಶೇ 25 ರಷ್ಟು ಮೀಸಲಾತಿ ನೀಡಲೇ ಬೇಕು. ಈ ಬಗ್ಗೆ ಮತ್ತೊಮ್ಮೆ ಕೇಂದ್ರವನ್ನು ಒತ್ತಾಯಿಸಲಾಗುವುದು. ರಾಯಚೂರಿನ ಐಐಟಿ ಸ್ಥಾಪನೆಗೂ ಸಹ ರಾಜ್ಯ ಸರ್ಕಾರದಿಂದ ಭೂಮಿ, ಹಣ ನೀಡಲಾಗುತ್ತದೆ. ರಾಜ್ಯದ ಜನತೆಗೆ ಲಾಭ ಇಲ್ಲವಾದರೆ ಇಂತಹ ಸಂಸ್ಥೆಗಳಿಂದ ಏನು ಪ್ರಯೋಜನ’ ಎಂದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒಂದು ಕಾಲೇಜು ನಡೆಸಲು ಬೇಕಾದ ಅನುದಾನವನ್ನು ನೀಡಿಲ್ಲ ಎಂದು ಕುಲಪತಿ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲೂ ಹಣದ ಕೊರತೆ ಇಲ್ಲ. ಯಾವ ವಿವಿಯಲ್ಲೂ ₹200 ಕೋಟಿಗಿಂತ ಕಡಿಮೆ ಡಿಪಾಸಿಟ್‌ ಇಲ್ಲ. ಇನ್ನೂ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಬೆಳಗಾವಿ ವಿಶ್ವವಿದ್ಯಾಲಯಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಸ್ವಂತ ಕಟ್ಟಡಕ್ಕೆ ₹150 ಕೋಟಿ ಬಿಡುಗಡೆ ಮಾಡಲಾಗುವುದು. 175 ಎಕರೆ ಜಮೀನು ನೀಡಲಾಗುವುದು. ಇಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಅಂಬೇಡ್ಕರ್‌ ಎಂಬ ಮೂರು ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆ ಕಾರಣ ರಾಜಧಾನಿಯಲ್ಲಿ ಹೆಚ್ಚಿನ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT