ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸಂದೇಶದ ಜಾಗೃತಿ

Last Updated 9 ಜನವರಿ 2017, 6:34 IST
ಅಕ್ಷರ ಗಾತ್ರ

ಗಂಗಾವತಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಸಾಧನೆ ಮಾಡಬೇಕು ಎಂದು ಗುರಿ ಇರಿಸಿಕೊಂಡಿರುವ ಶಿಕ್ಷಣ ಇಲಾಖೆ ತಾಲ್ಲೂಕಿನಲ್ಲಿ ಹಲವು ಪ್ರಯೋಗಕ್ಕೆ ಮುಂದಾಗಿದೆ.

ಶೈಕ್ಷಣಿವಾಗಿ ಅದರಲ್ಲೂ ಗಣಿತ, ಇಂಗ್ಲಿಷ್, ವಿಜ್ಞಾನದಂತಹ ವಿಷಯಗಳಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶಾಲಾ ಅವಧಿಗೂ ಮುನ್ನ ಹಾಗೂ ಬಳಿಕ ವಿಶೇಷ ತರಗತಿ ನೀಡುವುದು, ವಿಷಯವಾರು ಕಾರ್ಯಾಗಾರ ಏರ್ಪಡಿಸುವುದು, ರಸಪ್ರಶ್ನೆಯಂತ ಕಾರ್ಯಕ್ರಮ ಈಗಾಗಲೆ ಹಮ್ಮಿಕೊಂಡಿದೆ.

ಗಂಗಾವತಿ ತಾಲ್ಲೂಕಿನ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕ ಸಮುದಾಯ ಈಗಾಗಲೆ ಗುಂಪುಚರ್ಚೆ, ಘಟಕ ಪರೀಕ್ಷೆ, ಯೋಜನೆ ತಯಾರಿಯಲ್ಲೂ ಮಕ್ಕಳನ್ನು ತೊಡಗಿಸಿದೆ.  

ಇದರ ಜೊತೆಗೆ ಈಗ ತಾಲ್ಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಥವಾ ಅವರ ಪಾಲಕರ ಮೊಬೈಲ್ ಗಳಿಗೆ ಸಂದೇಶ (ಮೆಸೇಜ್) ಇಲ್ಲವೆ, ಕರೆ ಮಾಡುವ ಮೂಲಕ ಜಾಗೃತ ಗೊಳಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರೌಢಶಾಲೆಗಳಲ್ಲಿ ಹತ್ತನೇ ತರಗತಿ ಓದುತ್ತಿರುವ ಮಕ್ಕಳಿಗೆ ಅದರಲ್ಲೂ ಸರ್ಕಾರಿ ಶಾಲೆಯ ಮಕ್ಕಳನ್ನು ಬೆಳಗಿನ  ಐದು ಗಂಟೆಗೆ ಏದ್ದೇಳಿಸಿ ಅವರನ್ನು ಓದಲು ಹಚ್ಚುವಂತೆ ಪಾಲಕರನ್ನು ಪ್ರೇರೇಪಿಸಲು ಆಯಾ ಶಾಲೆಯ ಶಿಕ್ಷಕರು ಮೊಬೈಲ್ ಮೂಲಕ ಮೇಸೆಜ್ ಅಥವಾ ಕರೆ ಮಾಡುವ ಕೆಲಸ ಆರಂಭವಾಗಿದೆ.

‘ಮೊದಲಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಪಾಲಕರಿಗೆ ಮನವರಿಕೆ ಮಾಡಿಕೊಟ್ಟ ನಂತರ ಸ್ವತಃ ಪಾಲಕರು ಹಾಗೂ ಮಕ್ಕಳು ಆಸಕ್ತಿ ವಹಿಸುತ್ತಿದ್ದಾರೆ. ಬೆಳಿಗ್ಗೆ ನಾಲ್ಕರಿಂದ ಐದು ಗಂಟೆಯೊಳಗೆ ಮಕ್ಕಳನ್ನು ನಿದ್ರೆಯಿಂದಏಳಿಸುತ್ತಿದ್ದಾರೆ’ ಎಂದು ಶಿಕ್ಷಕ ಬಸವರಾಜ ಎನ್. ಹೇಳಿದರು.

‘ಮನೆಯಲ್ಲಿರುವ ಮಕ್ಕಳು ಸಹಜವಾಗಿ ಪಾಲಕರು ಹೇಳಿದರೆ ಬೆಳಿಗ್ಗೆ ಬೇಗ ಏಳುತ್ತಿರಲಿಲ್ಲ. ಈಗ ಸ್ವತಃ ಶಿಕ್ಷಕರೆ ಕರೆ ಮಾಡುತ್ತಿರುವುದರಿಂದ ಶಿಕ್ಷೆಯ ಭೀತಿಯಿಂದ ಬೇಗ ಎದ್ದು ಓದಿನತ್ತ ಗಮನ ಹರಿಸುತ್ತಿರುವುದು ಸಂತಸ ತಂದಿದೆ’ ಎಂದು ಪಾಲಕಿ ಸರೋಜಾ ನಿಜಗುಣಪ್ಪ ಹೇಳಿದರು.

ತಾಲ್ಲೂಕಿನಲ್ಲಿ ಈ ಬಾರಿ 6,338 ಮಕ್ಕಳು ಹತ್ತನೇ ತರಗತಿಯ ಪರೀಕ್ಷೆಗೆ ಕುಳಿತುಕೊಳ್ಳಲಿದ್ದು, ಫಲಿತಾಂಶ ಸುಧಾರಣೆಯ ಗುರಿ ಶಿಕ್ಷಕರಿಗೂ ಸವಾಲಾಗಿದೆ. ಕಡಿಮೆ ಫಲಿತಾಂಶ ದಾಖಲಾದಲ್ಲಿ ಕಾರಣ ಕೇಳಿ ಆಯಾ ವಿಷಯ ಶಿಕ್ಷರಿಗೆ ನೋಟೀಸ್, ಉತ್ತಮ ಫಲಿತಾಂಶ ದಾಖಲಿಸಿದ ಶಿಕ್ಷಕರಿಗೆ ಪ್ರಶಂಸಾಪತ್ರವೂ ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
- ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT