ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಸಿಗದ ಬೆಂಬಲ ಬೆಲೆ: ರೈತ ಕಂಗಾಲು

Last Updated 9 ಜನವರಿ 2017, 6:37 IST
ಅಕ್ಷರ ಗಾತ್ರ

ಹನುಮಸಾಗರ: ಹಿಂದಿನ ವರ್ಷ ತೊಗರಿಯ ಬೆಲೆ ಗಗನಕ್ಕೇರಿದ್ದನ್ನು ಕಂಡಿದ್ದ ರೈತರು ಈ ಬಾರಿ ಬಹುತೇಕ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದರೂ ಬೆಳೆ ವಾತಾವರಣದ ತೇವಾಂಶ ಬಳಸಿಕೊಂಡು ಬೆಳೆದಿದ್ದ ತೊಗರಿಗೆ ಈಗ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ.

ಮಾರುಕಟ್ಟೆಯಲ್ಲಿ ವಾರದಿಂದ ವಾರಕ್ಕೆ ಬೆಲೆ ಇಳಿ ಮುಖವಾಗಿದೆ. ಹಿಂದಿನ ವರ್ಷ ಇದೆ ಸಮಯದಲ್ಲಿ ಆರಂಭದಲ್ಲಿ ಕ್ವಿಂಟಲ್‌ಗೆ ₹9,400 ದರವಿತ್ತು. ಅಲ್ಲದೆ ಏಪ್ರಿಲ್‌- ತಿಂಗಳಲ್ಲಿ ₹13,400 ವರೆಗೂ ಏರಿಕೆಯಾಗಿತ್ತು. ಈ ಬೆಲೆ ಎಲ್ಲ ರೈತರು ನಾಟಿ ಮಾಡಲು ಮುಖ್ಯ ಕಾರಣವಾಗಿತ್ತು. ಆದರೆ ಸದ್ಯ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಕ್ವಿಂಟಲ್‌ಗೆ ₹4ಸಾವಿರ ಆಸು ಪಾಸಿಗೆ ನಿಂತಿದೆ. ಇನ್ನೂ ತೊಗರಿಯ ಬೆಲೆ ಇಳಿಮುಖವಾಗುವ ಸಾಧ್ಯತೆ ಇದೆ ಎಂದುವ್ಯಾಪಾರಸ್ಥರು ಹೇಳುತ್ತಾರೆ.

ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ತೊಗರಿಗೆ ಕೇಂದ್ರ ಸರ್ಕಾರ ಕ್ವಿಂಟಲ್‌ಗೆ  ₹500ರಿಂದ ₹700 ಪ್ರೋತ್ಸಾಹ ಧನವೆಂದು ಸೇರಿಸಿ ಕ್ವಿಂಟಲ್‌ಗೆ ₹6ಸಾವಿರದಂತೆ ಖರೀದಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ನಜೀರ್‌ಸಾಬ್ ಮೂಲಿಮನಿ ಒತ್ತಾಯಿಸಿದ್ದಾರೆ.

ಈ ಬಾರಿ ತೊಗರಿ ಬೆಳೆಯೂ ಇಲ್ಲ, ಇಳುವರಿಯೂ ಇಲ್ಲ, ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ದಾಸ್ತಾನು ಇಲ್ಲ, ಆದರೆ ಮಾರುಕಟ್ಟೆಯಲ್ಲಿ ಬೆಲೆ ಏಕೆ ಕುಸಿದಿದೆ ಎಂಬ ಗೊಂದಲದಲ್ಲಿ ರೈತರು ಮುಳುಗಿದ್ದಾರೆ.

‘ಸಾವಿರಾರು ರೂಪಾಯಿ ಖರ್ಚು ಮಾಡಿ 5 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದಿದ್ದೆ. ಮಾರುಕಟ್ಟೆಯಲ್ಲಿ ಏಕಾಏಕಿ ಬೆಲೆ ಕುಸಿತವಾಗಿದೆ. ಮಾರಾಟಕ್ಕೆ ತಂದಿರುವ ಬೆಳೆಯನ್ನು ಮರಳಿ ಊರಿಗೆ ಸಾಗಿಸಲು ಹಣವಿಲ್ಲ, ಮಾರಿದರೆ ನಿರೀಕ್ಷೆ ಮೀರಿ ನಷ್ಟದ ಭೀತಿ ಎದುರಾಗುತ್ತದೆ, ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ’ ಎಂದು ಹುಲಸಗೇರಿ ಗ್ರಾಮದ ರೈತ ಯಲ್ಲಪ್ಪ ಹೇಳಿದರು.

‘ತಳುವಗೇರಿಯ ಶಿವಪ್ಪ ಗೌಡ್ರ, 3 ಎಕರೆ ಪ್ರದೇಶದಲ್ಲಿ ಕೇವಲ ಐದು ಕ್ವಿಂಟಲ್‌ ತೊಗರಿ ಬೆಳೆದಿದ್ದಾರೆ. ಅಲ್ಲದೆ ನಾಲ್ಕು ಬಾರಿ ದುಬಾರಿ ಬೆಲೆಯ ಕ್ರಿಮಿನಾಶಕ ಸಿಂಪರಣೆ ಮಾಡಿದ್ದಾರೆ. ಬೆಲೆ ಕುಸಿತದ ಪರಿಣಾಮ ತೊಗರಿ ಬೆಳೆಗೆ ಮಾಡಿದ ಖರ್ಚು ಈಗ ದೊರಕದಂತಾಗಿದೆ, ಮುಂದೆ ಉತ್ತಮ ಬೆಲೆ ಬರುತ್ತದೆ ಎಂಬ ಭರವಸೆ ಇಲ್ಲ, ಈಗ ಮಾರದಿದ್ದರೆ ಬೆಳೆಗೆ ತಂದಿರುವ ಸಾಲ ತೀರಿಸುವುದು ಹೇಗೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘ಹಳೆಯ ನೋಟು ರದ್ದಾಗಿರುವುದು ಇದಕ್ಕೆ ಒಂದು ಕಾರಣ. ರೈತರಿಗೆ ಕೊಡಲು ವ್ಯಾಪಾರಸ್ಥರಲ್ಲಿ ಹಣವಿಲ್ಲ, ಆನ್‌ಲೈನ್‌ ಮೂಲಕ ವಿತರಿಸಲು ರೈತರು ಒಪ್ಪುತ್ತಿಲ್ಲ, ಮಿಗಿಲಾಗಿ ರೈತರು ನೇರವಾಗಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಎಲ್ಲ ಬಿಳಿ ವ್ಯವಹಾರ ನಡೆಸಬೇಕಾಗಿದೆ, ಹೊಸ ಹೊಸ ಕಾನೂನುಗಳು ಬಂದಿರುವುದರಿಂದ ದಲ್ಲಾಳಿಗಳಿಗೆ ಲಾಭವಿಲ್ಲದಂತಾಗಿದೆ. ಈ ಎಲ್ಲ ಕಾರಣದಿಂದ ಸಾಕಷ್ಟು ಬೇಡಿಕೆ ಇರುವ ತೊಗರಿಗೆ ಬೆಲೆ ಇಳಿಮುಖವಾಗಲು ಕಾರಣ’ ಎಂದು ಹೆಸರು ಹೇಳಲಿಚ್ಛಸದ ದಲ್ಲಾಳಿಯೊಬ್ಬರು ಹೇಳಿದರು.
- ಕಿಶನರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT